ವಾರೆನ್ ಬಫೆಟ್ ಎನ್ನುತ್ತಿದ್ದಂತೆ ಯಶಸ್ಸಿನ ಉತ್ತುಂಗದಲ್ಲಿ ರಾರಾಜಿಸುವ, ಶ್ರೀಮಂತ ಹಿರಿಯ ವ್ಯಕ್ತಿಯೊಬ್ಬರ ಭಿತ್ತಿ ನಮ್ಮ ಕಣ್ಮುಂದೆ ಬರುತ್ತದೆ. ಬಿಲಿಯನ್ ಗಟ್ಟಲೆ ದುಡ್ಡಿನ, ಯಾವುದಕ್ಕೂ ಹಿಂಜರಿಯದ, ಯಾವುದಕ್ಕೂ ಕೊರತೆಯಿಲ್ಲದ ಈತ, ಅಭಿಮಾನಿಗಳೂ ಅಸೂಯೆಯ ಕಣ್ಣುಗಳಲ್ಲಿ ನೋಡಿ, ಪ್ರತಿಸ್ಪರ್ಧಿಗಳೂ ಮೆಚ್ಚುಗೆಯ ದೃಷ್ಟಿ ಬೀರುವಂಥ ವ್ಯಕ್ತಿತ್ವ ಉಳ್ಳವರು. ಅವರ ಪ್ರಕಾರ ʻಯಶಸ್ಸುʼ ಎನ್ನುವುದರ ವ್ಯಾಖ್ಯೆ ಏನು?
ʻʻನಿಮ್ಮ ಬದುಕಿನ ಅಂತ್ಯದ ದಿನಗಳಲ್ಲಿ ನಿಮ್ಮನ್ನು ಯಾರೆಲ್ಲಾ ಪ್ರೀತಿಸಬೇಕೆಂದು ನೀವು ಬಯಸುತ್ತೀರೋ, ಅವರಲ್ಲಿ ಎಷ್ಟು ಮಂದಿ ನಿಮ್ಮನ್ನು ಪ್ರೀತಿಸುತ್ತಾರೆ ಎಂಬುದೇ ನಿಮ್ಮ ಯಶಸ್ಸಿನ ಗುರುತುʼ ಎಂದು ಜಾರ್ಜಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನೀಡಿದ ಉತ್ತರದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. “ತುಂಬಾ ದುಡ್ಡಿರುವ ಬಹಳಷ್ಟು ವ್ಯಕ್ತಿಗಳನ್ನು ನಾನು ಬಲ್ಲೆ. ಅವರ ಗೌರವಕ್ಕೆ ಔತಣಕೂಟಗಳು, ಅವರ ಹೆಸರಿನಲ್ಲಿ ಆಸ್ಪತ್ರೆಗಳು ಎಲ್ಲವೂ ಸಲ್ಲುತ್ತವೆ. ಆದರೆ ಸತ್ಯವೇನೆಂದರೆ, ಅವರನ್ನು ಯಾರೂ ಪ್ರೀತಿಸುವುದಿಲ್ಲ. ನೀವು ನನ್ನ ವಯಸ್ಸಿಗೆ ಬಂದಾಗ ನಿಮ್ಮನ್ನು ಪ್ರೀತಿಸುವವರು ಯಾರೂ ಇಲ್ಲವೆಂದಾದರೆ, ನಿಮ್ಮ ಬ್ಯಾಂಕ್ ಖಾತೆ ಎಷ್ಟೇ ದೊಡ್ಡದಿರಲಿ, ನಿಮ್ಮ ಬದುಕೊಂದು ದುರಂತವೇ” ಎಂದು ಬಫೆ ಹೇಳಿದ್ದಾರೆ. ನೀವೆಷ್ಟು ಯಶಸ್ವಿ ಎಂಬುದು ನಿರ್ಧಾರವಾಗುವುದು ನೀವು ಗಳಿಸುವ ಸಂಪತ್ತಿನ ಮೇಲಲ್ಲ, ನೀವು ಗಳಿಸಿದ ಪ್ರೀತಿಯ ಮೇಲೆ ಎಂಬುದು ಅವರ ಸ್ಪಷ್ಟ ನುಡಿಗಳು.
“ಇಲ್ಲಿರುವ ಸಮಸ್ಯೆಯೆಂದರೆ, ಪ್ರೀತಿ ಖರೀದಿಗೆ ದೊರೆಯುವುದಿಲ್ಲ ಎಂಬುದು. ಪ್ರೀತಿಯನ್ನು ನೀಡಿಯೇ ನೀವದನ್ನು ಮರಳಿ ಗಳಿಸಿಕೊಳ್ಳಬೇಕು. ನನ್ನಲ್ಲಿ ಎಷ್ಟೊಂದು ಹಣವಿದೆಲ್ಲಾ, ಒಂದು ಮಿಲಿಯನ್ ಡಾಲರ್‌ಗೆ ಪ್ರೀತಿ ಖರೀದಿಸುತ್ತೇನೆ ಎಂದರೆ ಆಗುವುದಿಲ್ಲ” ಎಂದಿರುವ ಅವರು, ಸಂತೋಷದಿಂದ ಬದುಕುವುದಕ್ಕೆ, ಪ್ರೀತಿಯನ್ನು ಗಳಿಸುವುದಕ್ಕೆ ಕೆಲವು ದಾರಿಗಳನ್ನೂ ತೋರಿಸಿದ್ದಾರೆ.
ಇದನ್ನೂ ಓದಿ | Jeff bezos ಬಿಚ್ಚುನುಡಿ | ಜಗತ್ತಿನ ಅತಿ ಶ್ರೀಮಂತನನ್ನು ಕಾಡುವ ಸಂಗತಿಯಿದು
ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿ: ಯಾರದ್ದಾದರೂ ವಿಷಯದಲ್ಲಿ ನಾವು ಪ್ರತಿಫಲದ ಅಪೇಕ್ಷೆಯಿಲ್ಲದೆ, ಬೇಷರತ್ತಾಗಿ ಪ್ರೀತಿ ತೋರಿಸಿದರೆ, ಅದು ಪೂರ್ಣ ಪ್ರಮಾಣದಲ್ಲಿ ನಮ್ಮೆಡೆಗೇ ಮರಳಿ ಬರುತ್ತದೆ. ಗೌರವ, ನಂಬಿಕೆ, ಅಭಿಮಾನ ಮತ್ತು ವಿಶ್ವಾಸದ ರೂಪಗಳಲ್ಲಿ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
ಸಹಾನುಭೂತಿ ಇರಲಿ: ಬಹಳಷ್ಟು ಜನರಿಗೆ ಅಗತ್ಯವಾಗಿ ಬೇಕಾಗಿರುವುದಿದು. ಇನ್ನೊಬ್ಬರೇನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಂಡಾಗಲೇ, ಅವರ ಮಾತುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮಗ ಸಾಧ್ಯ. ನಮ್ಮ ಮಾತುಗಳನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕೆಂದರೆ, ಅವರಿಗೆ ನಾವು ಕಿವಿಯಾಗಬೇಡವೆ?
ಕೆಲಸವನ್ನು ಆಸ್ವಾದಿಸಿ: ಆಗ ಬದುಕನ್ನು ಆಸ್ವಾದಿಸಲು ನಿಮಗೆ ಸಾಧ್ಯವಾಗುತ್ತದೆ. ಧನಾತ್ಮಕ ವಾತಾವರಣದಲ್ಲಿ, ಅದೇ ರೀತಿಯ ನಂಬಿಕೆ ಮತ್ತು ಮೌಲ್ಯಗಳನ್ನು ಹೊಂದಿರುವ ಸಹೋದ್ಯೋಗಿಗಳು ನಮಗೆ ದೊರೆಯುತ್ತಾರೆ.
ಚನ್ನಾಗಿ ನಡೆಸಿಕೊಳ್ಳಿ: ನಿಮ್ಮನ್ನು ಉಳಿದವರು ಹೇಗೆ ನಡೆಸಿಕೊಳ್ಳಬೇಕೊ ನೀವೂ ಅವರನ್ನು ಹಾಗೆಯೇ ನಡೆಸಿಕೊಳ್ಳಿ- ಈ ನಿಯಮ ಮಕ್ಕಳಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸುತ್ತದೆ. ಇದಿಷ್ಟೇ ಅಲ್ಲ, ಅವರಿಗೆ ಹೇಗೆ ಬೇಕೊ ಹಾಗೆ ನಡೆಸಿಕೊಳ್ಳುವುದು ಮತ್ತೂ ಪರಿಣಾಮಕಾರಿ.
ನಿಮಗೇನಿಷ್ಟ… ಅದನ್ನು ಮಾಡಿ: ಉದ್ಯೋಗ, ವೇತನ, ಜೀವನದ ಭದ್ರತೆ ಇತ್ಯಾದಿಗಳಲ್ಲೇ ಹೆಚ್ಚಿನ ಸಾರಿ ಮುಳುಗಿ ಹೋಗಿರುತ್ತೇವೆ. ನಮಗೇನು ಮಾಡುವುದಿಷ್ಟ ಎನ್ನುವುದನ್ನು ಮರೆತೇ ಬಿಟ್ಟಿರುತ್ತೇವೆ. ನಮ್ಮ ನಿಜವಾದ ಸಂತೋಷ ಇರುವುದು ಅದರಲ್ಲೇ ಅಲ್ಲವೇ? ನಿಮಗೇನಿಷ್ಟವೋ ಅದನ್ನೇ ಮಾಡಿ.
ಇದನ್ನೂ ಓದಿ | ವೈರಲ್ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು?