ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೇವಲ ಯುವತಿಯರಿಗೆ ಸೀಮಿತವಾಗಿದ್ದ ಐಬ್ರೋ ಶೇಪ್ ಕಾನ್ಸೆಪ್ಟ್ ಇದೀಗ ಯುವಕರನ್ನು ಸೆಳೆದಿದ್ದು, ಐಬ್ರೋ ಶೇಪ್ ಮಾಡಿಸುವ ಟ್ರೆಂಡ್‌ನಿಂದ ಒಂದು ಹೆಜ್ಜೆ ಮುಂದೆ ಹೋಗಿದೆ. ಮುಖಕ್ಕೆ ಡಿಫರೆಂಟ್ ಲುಕ್ ನೀಡುವ ಐಬ್ರೋ ಸ್ಲಿಟ್ ಕಟ್ ಕಾನ್ಸೆಪ್ಟ್‌ಗೆ ನಾಂದಿ ಹಾಡಿದೆ.
ಅದರಲ್ಲೂ ಇದು ಕಾಲೇಜು ಹಾಗೂ ಫಂಕಿ ಫ್ಯಾಷನ್ ಇಷ್ಟಪಡುವ ಯುವಕರನ್ನು ಆಕರ್ಷಿಸತೊಡಗಿದೆ. ಅಂದ ಹಾಗೆ, ಇದಕ್ಕೆ ಯುವ ಜನಾಂಗ ಆಕರ್ಷಿತರಾಗಲು ಪ್ರಮುಖ ಕಾರಣ, ಇದು ಪಕ್ಕಾ ಮಾಡೆಲ್ ಲುಕ್ ನೀಡುವುದು ಹಾಗೂ ಅತಿ ಸುಲಭವಾಗಿ ಹೆಚ್ಚು ಖರ್ಚಿಲ್ಲದೇ ಪಾಶ್ ಲುಕ್ ತಮ್ಮದಾಗಿಸಿಕೊಳ್ಳಬಹುದಾದ ಸ್ಟೈಲ್ ಸ್ಟೇಟ್‌ಮೆಂಟ್ ಇದು.
ಪಾಪ್ಯುಲರ್ ಐಬ್ರೋ ಸ್ಲಿಟ್‌ಗಳು
ಫ್ಯಾಷನ್ ಕೊರಿಯಾಗ್ರಾಫರ್ ಸನ್ನಿದ್ ಪೂಜಾರಿ ಹೇಳುವಂತೆ: ಸ್ಲಿಟ್ ವಿತ್ ಹೇರ್‌ಕಟ್, ಡಬಲ್ ಐಬ್ರೋ ಸ್ಲಿಟ್, ಸಿಂಗಲ್ ಐಬ್ರೋ ಸ್ಲಿಟ್, ಐಬ್ರೋ ಸ್ಲಿಟ್ ಜತೆಗೆ ಮಿನಿ ಜುವೆಲರಿ ಸೇರಿದಂತೆ ನಾನಾ ಬಗೆಯ ಐಬ್ರೋ ಸ್ಲಿಟ್ ಸ್ಟೈಲ್‌ಗಳು ಈಗಾಗಲೇ ಪಾಪ್ಯುಲರ್ ಆಗಿವೆ. ಐಬ್ರೋ ಸ್ಲಿಟ್ ಸ್ಟೈಲ್ ಹೇರ್‌ಕಟ್‌ನೊಂದಿಗೆ ಮ್ಯಾಚ್ ಆಗುವುದು ಕಡ್ಡಾಯ. ಇಲ್ಲವಾದಲ್ಲಿ ಒಂದಕ್ಕೊಂದು ಸೂಟ್ ಆಗದೇ ನೋಡುಗರಿಗೆ ಆಭಾಸ ಉಂಟು ಮಾಡಬಹುದು.
ಏನಿದು ಐಬ್ರೋ ಸ್ಲಿಟ್ ಸ್ಟೈಲ್?
ಹಾಲಿವುಡ್ ನಟರಿಗೆಂದೇ ಸೀಮಿತವಾಗಿದ್ದ ಐಬ್ರೋ ಸ್ಲಿಟ್ ಫ್ಯಾಷನ್ ಇದೀಗ ಮಾಡರ್ನ್ ಹುಡುಗರ ಮನ ಗೆದ್ದಿದೆ. ಗುಂಪಲ್ಲೂ ವಿಭಿನ್ನವಾಗಿ ಕಾಣಿಸಬೇಕು. ತಮ್ಮದೇ ಆದ ಇಮೇಜನ್ನು ಸೃಷ್ಟಿಸಿಕೊಳ್ಳಬೇಕು ಎಂದು ಕೊಳ್ಳುವ ಯುವಕರಿಗೆ ಹೇಳಿ ಮಾಡಿಸಿದಂತಿದೆ. ಮುಖದ ಲುಕ್ಕನ್ನೇ ಬದಲಿಸುವ ತಾಕತ್ತು ಇದಕ್ಕಿದೆ. ಯುವಕರ ಹೊಸ ಇಮೇಜ್ ಸೃಷ್ಟಿಸುವ ಸ್ಟೈಲ್ ಇದು ಎನ್ನುತ್ತಾರೆ ಇಂಟರ್‌ನ್ಯಾಷನಲ್ ಸ್ಟೈಲಿಸ್ಟ್ ರೋಮಿ, ಅವರ ಪ್ರಕಾರ, 90ರ ದಶಕದಲ್ಲಿ ಹಾಲಿವುಡ್‌ನ ಗ್ಯಾಂಗ್‌ಸ್ಟರ್ ಸಿನಿಮಾಗಳ ಹೀರೋಗಳು ಈ ಸ್ಟೈಲನ್ನು ಹುಟ್ಟುಹಾಕಿದರು.
ಅಲ್ಲದೇ ಕೆಲವು ಹಾಲಿವುಡ್ ನಟರು ನ್ಯಾಚುರಲ್ ಆಗಿ ಐಬ್ರೋ ಸ್ಕಾರ್ ಹೊಂದಿದ್ದರು. ಉದಾಹರಣೆಗೆ ನಟ ಜಾಸನ್ ಮೊಮೊವಾ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಾಗ ಅವರ ಹುಬ್ಬಿನ ಮೇಲೆ ಕಲೆ ಆಗಿತ್ತು. ಇದು ಸ್ಟಾರ್ ನಟನ ಬ್ಯೂಟಿ ಸ್ಪಾಟ್ ಆಗಿ ಪ್ರೇಕ್ಷಕರ ಮನ ಸೆಳೆದು ಡಿಫರೆಂಟ್ ಇಮೇಜ್ ಸೃಷ್ಟಿಸಿತು.
ದಶಕಗಳ ಹಿಂದೆ ಇದು ಬ್ಯೂಟಿ ಬ್ಲಾಗರ್ಸ್‌ಗಳ ವಿಯರ್ಡ್ ಸ್ಟೈಲ್ ಸೇರಿತು. ನಂತರ ಇದು ಅತಿ ಹೆಚ್ಚಾಗಿ ಹಿಟ್ ಆಗಿ, ಪಾಪ್, ರಾಕ್, ಹಿಪ್-ಹಾಪ್ ಮ್ಯೂಸಿಕ್ ಸ್ಟಾರ್‌ಗಳ ಮೂಲಕ ಟ್ರೆಂಡಿಯಾಯಿತು. ಇದೀಗ ಮಾಡೆಲ್‌ಗಳು, ನಿರೂಪಕರು, ಎಂಟರ್‌ಟೈನ್‌ಮೆಂಟ್ ಕ್ಷೇತ್ರದಲ್ಲಿರುವವರು ಇದರ ಮೋಹಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಫಂಕಿ ಲುಕ್ ಪ್ರಿಯರನ್ನು ಈ ಸ್ಟೈಲ್ ಆವರಿಸಿಕೊಂಡಿದೆ ಎನ್ನಬಹುದು.
ಸ್ಟೈಲಿಸ್ಟ್ ಸಲಹೆ
ಮಾನ್ಯತೆ ಇರುವ ಸಲೂನ್‌ನಲ್ಲಿ ಮಾತ್ರ ಐಬ್ರೋ ಸ್ಲಿಟ್ ಮಾಡಿಸಿ. ಇಲ್ಲವಾದಲ್ಲಿ ಮುಖದ ಅಂದ ಕೆಡಬಹುದು. ಪರ್ಮನೆಂಟ್ ಸ್ಲಿಟ್ ಕಟ್ ಮಾಡಿಸುವ ಮುನ್ನ ಇಡೀ ಜೀವನ ಇದೇ ಲುಕ್‌ನಲ್ಲಿ ಇರಬಲ್ಲಿರಾ ಎಂಬುದನ್ನು ಯೋಚಿಸಿ. ಟೆಂಪರರಿ ಐಬ್ರೋ ಸ್ಲಿಟ್ ಕಟ್ ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಯಾಕೆಂದರೆ, 2 ವಾರದಲ್ಲಿ ಮುಂಗುರುಳು ಮತ್ತೊಮ್ಮೆ ಬೆಳೆಯುತ್ತದೆ. ಹೆಚ್ಚು ದಿನಗಳ ಕಾಲ ಮುಂಗುರುಳ ಕೂದಲು ಬೆಳೆಯಬಾರದು ಎಂದಾದಲ್ಲಿ ಥ್ರೆಂಡ್ಡಿಂಗ್ ಮಾಡಿಸಿ. ಐಬ್ರೋ ಕಟ್‌ಗೆಂದೇ ಲಭ್ಯವಿರುವ ಮಿನಿ ರೇಜರ್‌ನಲ್ಲಿ ತೆಗೆಸಿದಲ್ಲಿ ಐಬ್ರೋ ಬೇಗ ಬೆಳೆಯುತ್ತದೆ ಎಂಬುದು ನೆನಪಿರಲಿ.
(ಲೇಖಕರು ಫ್ಯಾಷನ್ ಪತ್ರಕರ್ತೆ)
ಮಾಡೆಲ್: ಸನ್ನಿದ್ ಪೂಜಾರಿ
ಇದನ್ನೂ ಓದಿ| ಆಕರ್ಷಕ ತ್ವಚೆಗಾಗಿ ಸೀಸನ್ ಮ್ಯಾಂಗೋ ಫೇಸ್‌ಪ್ಯಾಕ್