ನಿತ್ಯವೂ ಬರ್ಗರ್ (eat burgers), ಪಿಜ್ಜಾ ತಿನ್ನಬಾರದು ಎಂದು ನಾವು ಹೇಳುತ್ತೇವೆ. ಆರೋಗ್ಯಕರ ಆಹಾರವನ್ನೇ ತಿನ್ನಿ ಎಂದು ವೈದ್ಯರೂ ಹೇಳುತ್ತಾರೆ. ಇದು ಎಲ್ಲರಿಗೂ ತಿಳಿದ ಸತ್ಯವೇ. ಆಗಾಗ ವಾರಾಂತ್ಯದಲ್ಲಿ ಅನಾರೋಗ್ಯಕರ ಆಹಾರ ಸೇವನೆ, ಬದಲಾದ ಜೀವನ ಶೈಲಿ ಇತ್ಯಾದಿಗಳಿಂದ ಈಗಾಗಲೇ ನಮ್ಮ ಆರೋಗ್ಯದಲ್ಲಾದ ಪರಿಣಾಮವನ್ನು ನಾವು ಇತ್ತೀಚೆಗಿನ ವರ್ಷಗಳಲ್ಲಿ ಗಮನಿಸುತ್ತಿದ್ದೇವೆ. ಇವೆಲ್ಲ ನಿಜವಾದರೂ, ಇಂದು ಜಂಕ್ ಆಹಾರಗಳ ಅಡ್ಡಾಗಳು, ರೆಸ್ಟೋರೆಂಟ್‌ಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಇಷ್ಟೆಲ್ಲ ಇದ್ದರೂ, ವಿಶೇಷ ಎಂದರೆ, ಕೇವಲ, ಜಂಕ್ ತಿಂದೇ ಬದುಕುವ ಮಂದಿಯೂ ಆಗಾಗ ಸುದ್ದಿ ಮಾಡುತ್ತಿರುತ್ತಾರೆ! ಇಂಥವರ ಪೈಕಿ ಈಗ ಸುದ್ದಿ ಮಾಡಿರುವಾತ ವಿಸ್‌ಕಾನ್‌ಸಿನ್‌ನ ಡೊನಾಲ್ಡ್ ಗೋರ್ಸ್ಕೆ ಎಂಬಾತ. ಈತ 1972ರಿಂದ ನಿತ್ಯವೂ ಬರ್ಗರ್ ತಿನ್ನುತ್ತಾನಂತೆ! ದಿನವೂ ನಾವು ಹಾಲು ಕುಡಿದಂತೆ, ಮೊಸರನ್ನ ತಿಂದಂತೆ ಈತ ಬರ್ಗರ್ ತಿನ್ನುತ್ತಾನೆ. ಈವರೆಗೆ 52 ವರ್ಷಗಳಿಂದ ಈತ ತಿಂದ ಬರ್ಗರ್‌ಗಳ ಸಂಖ್ಯೆ 33,400!
ಹೌದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈತ 1972ರಿಂದ ನಿತ್ಯವೂ ಬರ್ಗರ್ ತಿನ್ನುತ್ತಿದ್ದಾರಂತೆ. ಜನವರಿ 1, 2023ರವರೆಗೆ 33,400 ಬರ್ಗರ್‌ಗಳನ್ನು ತಿಂದಿದ್ದಾರಂತೆ. ಇಷ್ಟು ಬರ್ಗರ್ ತಿಂದವರು ಈ ಜಗತ್ತಿನಲ್ಲೇ ಈವರೆಗೆ ಹುಟ್ಟಿಲ್ಲವಾದ್ದರಿಂದ ಈತನೇ ಇದೀಗ ವಿಶವದಲ್ಲಿ ಅತ್ಯಂತ ಹೆಚ್ಚು ಬರ್ಗರ್ ಸೇವಿಸಿದಾತ ಎಂಬ ಹೆಗ್ಗಳಿಕೆಗೆ ಗಿನ್ನಿಸ್ ದಾಖಲೆಯಲ್ಲಿ ತನ್ನ ಹೆಸರು ಬರೆದಿದ್ದಾರಂತೆ!
ಈತ ನಿತ್ಯವೂ ತಿನ್ನುವ ಬರ್ಗರ್ ಮೆಕ್ ಡೊನಾಲ್ಡ್ಸ್‌ನ ಬಿಗ್ ಮ್ಯಾಕ್ ಬರ್ಗರ್ ಆಗಿದ್ದು ಇದರಲ್ಲಿ ಎರಡು ದೊಡ್ಡ ಬೀಫ್ ಪ್ಯಾಟಿಗಳಿದ್ದು ಅಮೆರಿಕನ್ ಚೀಸ್, ಉಪ್ಪಿನಕಾಯಿ, ತುರಿದ ಕ್ಯಾಬೇಜ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಎಳ್ಳು ಹಾಕಿದ ಬನ್ ಹಾಗೂ ಕೊಂಚ ಕೆಚಪ್ ಇರುತ್ತದೆ. ಈತ ಪ್ರತಿದಿನ ಇಂತಹ ಎರಡು ಬರ್ಗರ್‌ಗಳನ್ನು ಹೊಟ್ಟೆಗಿಳಿಸುತ್ತಾರಂತೆ!
1984ರಲ್ಲಿ ವಿಶ್ವದ ಬೆಸ್ಟ್ ಸ್ಯಾಂಡ್‌ವಿಚ್ ಎಂಬ ಹೆಗ್ಗಳಿಕೆ ಪಾತ್ರವಾದ ಬರ್ಗರ್ ಕಿಂಗ್ ಹಾಪರ್ ಬರ್ಗರ್ ಅನ್ನು ತಿನ್ನಲು ಆರಂಭಿಸಿದರೂ, ಕೊನೆಗೆ ಅದು ಅಷ್ಟಾಗಿ ರುಚಿಸಲಿಲ್ಲವಾದ್ದರಿಂದ ಬಿಗ್ ಮ್ಯಾಕ್ ಬರ್ಗರ್‌ಗೇ ಮರಳಿದರಂತೆ. ಅಂದಿನಿಂದ ಇಂದಿನವರೆಗೆ ಮತ್ಯಾವತ್ತೂ ಬೇರೆ ಯಾವುದೇ ಬರ್ಗರ್ ಕಡೆಗೆ ತಿರುಗಿಯೂ ನೋಡದ ಇವರು ಇಂದಿಗೂ ಅದೇ ಬರ್ಗರ್ ಅನ್ನು ದಿನಕ್ಕೆರಡು ಬಾರಿ ತಿನ್ನುತ್ತಾರಂತೆ. ಬರ್ಗರ್ ಇಲ್ಲದೆ ಬದುಕುವುದೇ ಸಾಧ್ಯವಿಲ್ಲ ಎಂಬಷ್ಟು ಇವರಿಗೆ ಬರ್ಗರ್ ಪ್ರಿಯವಂತೆ!
1970ರಲ್ಲಿಯೇ ಗಿನ್ನಿಸ್ ದಾಖಲೆ ಬರೆದ ಈತ ಆಗ ಹೇಳಿದ್ದು, ನಾನು ನನ್ನ ಹೆಸರಿನಲ್ಲಿ ಇನ್ನೂ ಒಂದು ವಿಶ್ವದಾಖಲೆ ಬರೆಯುವೆ. ಅದು ನಿತ್ಯವೂ ಹ್ಯಾಂಬರ್ಗರ್ ತಿನ್ನುವುದು ಎಂದಿದ್ದರಂತೆ.
ಗೋರ್ಸ್ಕೆ ಅವರು, ಬರ್ಗರ್ ನನ್ನ ಅತ್ಯಂತ ಪ್ರಿಯವಾದ ಆಹಾರ. ಹಾಗೂ ನಿತ್ಯವೂ ಬಿಗ್ ಮ್ಯಾಖ್ ಬರ್ಗರ್ ತಿನ್ನದೇ ಇರುವುದು ನನಗೆ ಅತ್ಯಂತ ಕಷ್ಟದ ಕೆಲಸ ಎಂದಿದ್ದಾರೆ. ಇಷ್ಟೇ ಅಲ್ಲ, ತಾನು ಈವರೆಗೆ ಇಷ್ಟು ಬರ್ಗರ್ ತಿಂದಿದ್ದಕ್ಕೆ ಆತ ತನ್ನ ಬಳಿ ದಾಖಲೆಗಳನ್ನೂ ಇಟ್ಟುಕೊಂಡಿದ್ದು, ಈವರೆಗೆ ಬರ್ಗರ್ ಖರೀದಿಸಿದ್ದಕ್ಕೆ ಸಾಕ್ಷಿಯಾಗಿ ಅಷ್ಟೂ ಬಿಲ್‌ಗಳನ್ನು ಜೋಪಾನವಾಗಿ ಇರಿಸಿಕೊಂಡಿದ್ದಾರೆ. ಆ ಮೂಲಕ ತಾನು ಈವರೆಗೆ ತಿಂದಿರುವ ಅಷ್ಟೂ ಬರ್ಗರ್‌ಗಳಿಗೆ ಸಾಕ್ಷಿಯನ್ನೂ ಇವರು ಒದಗಿಸುತ್ತಾರೆ.
ಮೇ 17, 1972ರಿಂದ ಈವರೆಗೆ ತಿಂದಿರುವ ಅಷ್ಟೂ ಬರ್ಗರ್‌ಗಳ ಬಿಲ್ ಇವರ ಬಳಿ ಇವೆ. ಇವರ ಬಳಿ ದಾಖಲೆ ಎಷ್ಟಿದೆ ಎಂದೆ, 1972ರಿಂದ ಈವರೆಗೆ ಯಾವ ದಿನ ಯಾವ ಬಿಗ್ ಮ್ಯಾಕ್ ಬರ್ಗರ್ ತಿಂದಿದ್ದಾರೆ ಎಂಬುದನ್ನು ಹೇಳಬಹುದು. 1997ರಲ್ಲಿ ಮೊದಲ ಬಾರಿಗೆ ಇವರು ಅತೀ ಹೆಚ್ಚು ಬರ್ಗರ್ ತಿಂದಾತ ಎಂಬ ದಾಖಲೆ ಬರೆಯುವ ಸಂದರ್ಭ ಈತ 15,000 ಬಿಗ್ ಮ್ಯಾಕ್ ಬರ್ಗರ್ ಅನ್ನು ತಿಂದಿದ್ದರಂತೆ. 2001ರಲ್ಲಿ ಇದರ ಸಂಖ್ಯೆ 30,000ಕ್ಕೇರಿತು. ಕಳೆದ 52 ವರ್ಷಗಳಿಂದ ನಿತ್ಯವೂ ಬರ್ಗರ್ ತಿನ್ನುತ್ತಿರುವ ಇವರ ಆರೋಗ್ಯ ಚೆನ್ನಾಗಿದೆಯಂತೆ. ಇನ್ನು ಮುಂದೆಯೂ ಬರ್ಗರ್ ಬಿಡುವ ಯಾವ ಆಸೆಯೂ ಇವರಿಗೆ ಇಲ್ಲವಂತೆ. ಬರ್ಗರ್ ನನ್ನ ಜೀವನ ಎಂಬ ವಾದ ಇವರದ್ದು.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು