Site icon Vistara News

ರೇಷ್ಮೆಯಂಥಾ ಕೂದಲು ಬೇಕೆಂದು ಕೋಕಾ-ಕೋಲಾ ಬಳಕೆ ಮಾಡ್ತಿದ್ದೀರಾ?; ಟ್ರೆಂಡ್ ಆಗ್ತಿದೆ ಅಂತ ನೀವಿದನ್ನು ಪ್ರಯೋಗ ಮಾಡೋ ಮುನ್ನ ಯೋಚಿಸಿ!

Think Before Washing Hair With Coca Cola

#image_title

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಷಯಗಳು ಟ್ರೆಂಡ್ ಆಗುತ್ತಿರುತ್ತವೆ. ಹೊಸಹೊಸ ಚಾಲೆಂಜ್​ಗಳು ಉದ್ಭವ ಆಗುತ್ತವೆ. ಯಾರೊ ಒಬ್ಬರು ನೀಡುವ ಸೌಂದರ್ಯಕ್ಕೆ, ಆರೋಗ್ಯಕ್ಕೆ ಸಂಬಂಧಪಟ್ಟ ಟಿಪ್ಸ್​ಗಳೆಲ್ಲ ಭರ್ಜರಿ ಹವಾ ಸೃಷ್ಟಿಸುತ್ತವೆ. ಹೀಗೆ ವೈರಲ್ ಆಗುವುದನ್ನೆಲ್ಲ ವೈಜ್ಞಾನಿಕವಾಗಿ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲವು ಖಂಡಿತ ಉಪಯೋಗ ಕೊಡುತ್ತದೆ. ಈಗ ಇಂಟರ್​ನೆಟ್​​ನಲ್ಲಿ ಟ್ರೆಂಡ್ ಆಗುತ್ತಿರುವುದು ‘ಕೋಕಾ ಕೋಲಾ’ (Coca-Cola)ದಿಂದ ಕೂದಲು ತೊಳೆಯುವ ವಿಷಯ..! ಈ ಚಾಲೆಂಜ್​ ಭರ್ಜರಿ ಹವಾ ಸೃಷ್ಟಿಸಿದೆ. ಕೋಕಾಕೋಲಾ ಚಾಲೆಂಜ್​ (#COCACOLACHALLENGE) ಹ್ಯಾಷ್​ಟ್ಯಾಗ್​ನಡಿ ಅನೇಕರು, ತಾವು ಕೂದಲನ್ನು ಕೋಕಾ ಕೋಲಾದಿಂದ ತೊಳೆಯುತ್ತಿರುವ ಫೋಟೋ, ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಅನುಭವ ಹೇಳಿಕೊಳ್ಳುತ್ತಿದ್ದಾರೆ.

ಏನು ಕೋಕಾ ಕೋಲಾದಿಂದ ಕೂದಲು ತೊಳೆಯುವುದಾ? ಇದರಿಂದೇನು ಪ್ರಯೋಜನ? ಎನ್ನುತ್ತಿದ್ದೀರಾ. ಈ ಹಿಂದೆ ಒಮ್ಮೆ ಆಲಿಸ್ ಸುಕಿ ವಾಟರ್‌ಹೌಸ್ ಎಂಬ ಬ್ರಿಟನ್​ ಮಾಡೆಲ್​ ತಮ್ಮ ಕೂದಲಿನ ಆರೈಕೆ ಬಗ್ಗೆ ಮಾತನಾಡುತ್ತ, ತಾವು ನಿಯಮಿತವಾಗಿ ಕೋಕಾ ಕೋಲಾದಿಂದ ಕೂದಲು ತೊಳೆಯುತ್ತಿರುವುದಾಗಿ ತಿಳಿಸಿದ್ದರು. 2015ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಕೆ ‘ನಾನು ನನ್ನ ಕೂದಲನ್ನು ಕೋಕಾ ಕೋಲಾದಲ್ಲಿ ನೆನೆಸಿ, ತೊಳೆಯುತ್ತೇನೆ ಇದರಿಂದ ನನಗೆ ಅನುಕೂಲವಾಗಿದೆ ಎಂದು ಹೇಳಿದ್ದರು. ಆದರೆ ವಿಚಿತ್ರವೆಂಬಂತೆ 2022ರಲ್ಲಿ ಆಕೆ ಇನ್ನೊಂದು ಸಂದರ್ಶನದಲ್ಲಿ ಮಾತನಾಡಿ ‘ಕೋಕಾ ಕೋಲಾದಲ್ಲಿ ನಾನು ನನ್ನ ತಲೆಕೂದಲು ತೊಳೆಯುತ್ತೇನೆ ಎಂದು ಈ ಹಿಂದೆ ಸುಳ್ಳು ಹೇಳಿದ್ದೇನೆ. ನಾನು ಯಾವತ್ತೂ ಅದನ್ನು ಮಾಡಿಲ್ಲ’ ಎಂದಿದ್ದರು.

ಆದರೆ ಹಲವು ವ್ಲಾಗರ್​ಗಳು, ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್​ಗಳು ಮಾತ್ರ ಇದನ್ನು ಬಿಟ್ಟಿಲ್ಲ. ಕೋಕಾ ಕೋಲಾದಿಂದ ಕೂದಲು ತೊಳೆಯುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಲೇ ಇದೆ. ಈಗ ಮತ್ತೊಮ್ಮೆ ಟ್ರೆಂಡ್​ ಶುರುವಾಗಿದೆ. ಹಲವರು ತಾವು ಹೀಗೆ ಕೋಕಾ ಕೋಲಾದಿಂದ ಹೇರ್​ ವಾಶ್​ ಮಾಡಿಕೊಳ್ಳಲು ಪ್ರಾರಂಭ ಮಾಡಿದ ಮೇಲೆ, ಕೂದಲು ಚೆಂದವಾಗಿದೆ ಎನ್ನುತ್ತಾರೆ. ‘ಕೋಕಾ ಕೋಲಾದಲ್ಲಿ ಅತ್ಯಂತ ಕಡಿಮೆ ಪಿಎಚ್​ ಅಂಶವಿರುವ ಫಾಸ್ಪರಿಕ್ ಆಮ್ಲ ಇರುತ್ತದೆ. ಹೀಗಾಗಿ ಇದು ಕೂದಲಿನ ಎಳೆಗಳನ್ನು ಬಿಗಿಗೊಳಿಸುತ್ತದೆ. ಮೃದುವಾಗಿಸುವ ಜತೆಗೆ ಹೊಳಪು ನೀಡುತ್ತದೆ ಎಂದೂ ಹಲವರು ಪ್ರತಿಪಾದಿಸಿದ್ದಾರೆ.

ಇದು ಸಾಧ್ಯವಾ?
ಕೂದಲ ಆರೈಕೆಗೆ ಏನೇನೆಲ್ಲ ಮಾಡುವ ಯುವತಿಯರು ಇಂಥ ಹೊಸ ಐಡಿಯಾವನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಪ್ರಯತ್ನಿಸುತ್ತಾರೆ. ಆದರೆ ಲಕ್ಷಾಂತರ ಜನ ಅನುಯಾಯಿಗಳನ್ನು ಹೊಂದಿರುವ, ಫೇಮಸ್​ ವ್ಲಾಗರ್​ಗಳು, ಯೂಟ್ಯೂಬರ್​ಗಳು ಹೇಳಿದ ಮಾತು ಕೇಳಿ ಕೋಕಾ-ಕೋಲಾದಿಂದ ಹೇರ್​ ವಾಶ್​ ಮಾಡಿಕೊಳ್ಳುವ ಮೊದಲು ಸ್ವಲ್ಪ ಯೋಚಿಸಿ. ನಿಜಕ್ಕೂ ಕೋಕಾ-ಕೋಲಾ ಕೂದಲ ಆರೋಗ್ಯಕ್ಕೆ ಒಳ್ಳೆಯದಾ?

ಇದನ್ನೂ ಓದಿ: Coca Cola | ಮನಸ್ಸುಗಳ ಬೆಸೆಯಲು ಕೋಕಾ ಕೋಲಾ ಬ್ಲ್ಯೂಟೂತ್‌ ತಂತ್ರಜ್ಞಾನ, ದೀಪಾವಳಿ ವೇಳೆ ಏನಿದು ಅಭಿಯಾನ?

ಇಲ್ಲ ಎನ್ನುತ್ತಾರೆ ತಜ್ಞರು. ಕೋಕಾ ಕೋಲಾವನ್ನು ಕೂದಲಿಗೆ ಹಾಕಿದಾಗ ಆ ಕ್ಷಣಕ್ಕೆ ನಿಮ್ಮ ಕೂದಲು ಹೊಳೆದಂತೆ, ಮೃದುವಾದಂತೆ ಭಾಸವಾಗಬಹುದು. ಆದರೆ ಇದು ನಿಮ್ಮ ತಲೆ ಕೂದಲನ್ನು ಸ್ವಚ್ಛಗೊಳಿಸುವುದಿಲ್ಲ. ಇದರಲ್ಲಿ ಶುಚಿಕಾರಕ ರಾಸಾಯನಿಕ ಇರುವುದಿಲ್ಲ. ತಲೆಯಲ್ಲಿ ತುರಿಕೆ, ಜಿಡ್ಡುತನ, ಹೊಟ್ಟಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಕೂದಲು ಉದುರುವಿಕೆಗೂ ಕಾರಣವಾಗಬಹುದು. ದೀರ್ಘಕಾಲ ನೀವು ಕೋಕಾ ಕೋಲಾ ಬಳಕೆ ಮಾಡಿದರೆ, ಖಂಡಿತ ನಿಮ್ಮ ಕೂದಲಿಗೆ ಹಾನಿ ಕಟ್ಟಿಟ್ಟ ಬುತ್ತಿ…ನೀವೇನಾದ್ರೂ ಕೋಕಾ ಕೋಲಾ ಬಳೆಕ ಮಾಡ್ತಿದ್ರೆ, ಅದನ್ನು ಬಿಡೋದು ಒಳ್ಳೇದು.

Exit mobile version