ಆರೋಗ್ಯ
ರೇಷ್ಮೆಯಂಥಾ ಕೂದಲು ಬೇಕೆಂದು ಕೋಕಾ-ಕೋಲಾ ಬಳಕೆ ಮಾಡ್ತಿದ್ದೀರಾ?; ಟ್ರೆಂಡ್ ಆಗ್ತಿದೆ ಅಂತ ನೀವಿದನ್ನು ಪ್ರಯೋಗ ಮಾಡೋ ಮುನ್ನ ಯೋಚಿಸಿ!
ಹಲವು ವ್ಲಾಗರ್ಗಳು, ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ಗಳು ಮಾತ್ರ ಇದನ್ನು ಬಿಟ್ಟಿಲ್ಲ. ಕೋಕಾ ಕೋಲಾದಿಂದ ಕೂದಲು ತೊಳೆಯುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಲೇ ಇದೆ. ಈಗ ಮತ್ತೊಮ್ಮೆ ಟ್ರೆಂಡ್ ಶುರುವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಷಯಗಳು ಟ್ರೆಂಡ್ ಆಗುತ್ತಿರುತ್ತವೆ. ಹೊಸಹೊಸ ಚಾಲೆಂಜ್ಗಳು ಉದ್ಭವ ಆಗುತ್ತವೆ. ಯಾರೊ ಒಬ್ಬರು ನೀಡುವ ಸೌಂದರ್ಯಕ್ಕೆ, ಆರೋಗ್ಯಕ್ಕೆ ಸಂಬಂಧಪಟ್ಟ ಟಿಪ್ಸ್ಗಳೆಲ್ಲ ಭರ್ಜರಿ ಹವಾ ಸೃಷ್ಟಿಸುತ್ತವೆ. ಹೀಗೆ ವೈರಲ್ ಆಗುವುದನ್ನೆಲ್ಲ ವೈಜ್ಞಾನಿಕವಾಗಿ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲವು ಖಂಡಿತ ಉಪಯೋಗ ಕೊಡುತ್ತದೆ. ಈಗ ಇಂಟರ್ನೆಟ್ನಲ್ಲಿ ಟ್ರೆಂಡ್ ಆಗುತ್ತಿರುವುದು ‘ಕೋಕಾ ಕೋಲಾ’ (Coca-Cola)ದಿಂದ ಕೂದಲು ತೊಳೆಯುವ ವಿಷಯ..! ಈ ಚಾಲೆಂಜ್ ಭರ್ಜರಿ ಹವಾ ಸೃಷ್ಟಿಸಿದೆ. ಕೋಕಾಕೋಲಾ ಚಾಲೆಂಜ್ (#COCACOLACHALLENGE) ಹ್ಯಾಷ್ಟ್ಯಾಗ್ನಡಿ ಅನೇಕರು, ತಾವು ಕೂದಲನ್ನು ಕೋಕಾ ಕೋಲಾದಿಂದ ತೊಳೆಯುತ್ತಿರುವ ಫೋಟೋ, ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಅನುಭವ ಹೇಳಿಕೊಳ್ಳುತ್ತಿದ್ದಾರೆ.
ಏನು ಕೋಕಾ ಕೋಲಾದಿಂದ ಕೂದಲು ತೊಳೆಯುವುದಾ? ಇದರಿಂದೇನು ಪ್ರಯೋಜನ? ಎನ್ನುತ್ತಿದ್ದೀರಾ. ಈ ಹಿಂದೆ ಒಮ್ಮೆ ಆಲಿಸ್ ಸುಕಿ ವಾಟರ್‌ಹೌಸ್ ಎಂಬ ಬ್ರಿಟನ್ ಮಾಡೆಲ್ ತಮ್ಮ ಕೂದಲಿನ ಆರೈಕೆ ಬಗ್ಗೆ ಮಾತನಾಡುತ್ತ, ತಾವು ನಿಯಮಿತವಾಗಿ ಕೋಕಾ ಕೋಲಾದಿಂದ ಕೂದಲು ತೊಳೆಯುತ್ತಿರುವುದಾಗಿ ತಿಳಿಸಿದ್ದರು. 2015ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಕೆ ‘ನಾನು ನನ್ನ ಕೂದಲನ್ನು ಕೋಕಾ ಕೋಲಾದಲ್ಲಿ ನೆನೆಸಿ, ತೊಳೆಯುತ್ತೇನೆ ಇದರಿಂದ ನನಗೆ ಅನುಕೂಲವಾಗಿದೆ ಎಂದು ಹೇಳಿದ್ದರು. ಆದರೆ ವಿಚಿತ್ರವೆಂಬಂತೆ 2022ರಲ್ಲಿ ಆಕೆ ಇನ್ನೊಂದು ಸಂದರ್ಶನದಲ್ಲಿ ಮಾತನಾಡಿ ‘ಕೋಕಾ ಕೋಲಾದಲ್ಲಿ ನಾನು ನನ್ನ ತಲೆಕೂದಲು ತೊಳೆಯುತ್ತೇನೆ ಎಂದು ಈ ಹಿಂದೆ ಸುಳ್ಳು ಹೇಳಿದ್ದೇನೆ. ನಾನು ಯಾವತ್ತೂ ಅದನ್ನು ಮಾಡಿಲ್ಲ’ ಎಂದಿದ್ದರು.
ಆದರೆ ಹಲವು ವ್ಲಾಗರ್ಗಳು, ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ಗಳು ಮಾತ್ರ ಇದನ್ನು ಬಿಟ್ಟಿಲ್ಲ. ಕೋಕಾ ಕೋಲಾದಿಂದ ಕೂದಲು ತೊಳೆಯುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಲೇ ಇದೆ. ಈಗ ಮತ್ತೊಮ್ಮೆ ಟ್ರೆಂಡ್ ಶುರುವಾಗಿದೆ. ಹಲವರು ತಾವು ಹೀಗೆ ಕೋಕಾ ಕೋಲಾದಿಂದ ಹೇರ್ ವಾಶ್ ಮಾಡಿಕೊಳ್ಳಲು ಪ್ರಾರಂಭ ಮಾಡಿದ ಮೇಲೆ, ಕೂದಲು ಚೆಂದವಾಗಿದೆ ಎನ್ನುತ್ತಾರೆ. ‘ಕೋಕಾ ಕೋಲಾದಲ್ಲಿ ಅತ್ಯಂತ ಕಡಿಮೆ ಪಿಎಚ್ ಅಂಶವಿರುವ ಫಾಸ್ಪರಿಕ್ ಆಮ್ಲ ಇರುತ್ತದೆ. ಹೀಗಾಗಿ ಇದು ಕೂದಲಿನ ಎಳೆಗಳನ್ನು ಬಿಗಿಗೊಳಿಸುತ್ತದೆ. ಮೃದುವಾಗಿಸುವ ಜತೆಗೆ ಹೊಳಪು ನೀಡುತ್ತದೆ ಎಂದೂ ಹಲವರು ಪ್ರತಿಪಾದಿಸಿದ್ದಾರೆ.
ಇದು ಸಾಧ್ಯವಾ?
ಕೂದಲ ಆರೈಕೆಗೆ ಏನೇನೆಲ್ಲ ಮಾಡುವ ಯುವತಿಯರು ಇಂಥ ಹೊಸ ಐಡಿಯಾವನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಪ್ರಯತ್ನಿಸುತ್ತಾರೆ. ಆದರೆ ಲಕ್ಷಾಂತರ ಜನ ಅನುಯಾಯಿಗಳನ್ನು ಹೊಂದಿರುವ, ಫೇಮಸ್ ವ್ಲಾಗರ್ಗಳು, ಯೂಟ್ಯೂಬರ್ಗಳು ಹೇಳಿದ ಮಾತು ಕೇಳಿ ಕೋಕಾ-ಕೋಲಾದಿಂದ ಹೇರ್ ವಾಶ್ ಮಾಡಿಕೊಳ್ಳುವ ಮೊದಲು ಸ್ವಲ್ಪ ಯೋಚಿಸಿ. ನಿಜಕ್ಕೂ ಕೋಕಾ-ಕೋಲಾ ಕೂದಲ ಆರೋಗ್ಯಕ್ಕೆ ಒಳ್ಳೆಯದಾ?
ಇದನ್ನೂ ಓದಿ: Coca Cola | ಮನಸ್ಸುಗಳ ಬೆಸೆಯಲು ಕೋಕಾ ಕೋಲಾ ಬ್ಲ್ಯೂಟೂತ್ ತಂತ್ರಜ್ಞಾನ, ದೀಪಾವಳಿ ವೇಳೆ ಏನಿದು ಅಭಿಯಾನ?
ಇಲ್ಲ ಎನ್ನುತ್ತಾರೆ ತಜ್ಞರು. ಕೋಕಾ ಕೋಲಾವನ್ನು ಕೂದಲಿಗೆ ಹಾಕಿದಾಗ ಆ ಕ್ಷಣಕ್ಕೆ ನಿಮ್ಮ ಕೂದಲು ಹೊಳೆದಂತೆ, ಮೃದುವಾದಂತೆ ಭಾಸವಾಗಬಹುದು. ಆದರೆ ಇದು ನಿಮ್ಮ ತಲೆ ಕೂದಲನ್ನು ಸ್ವಚ್ಛಗೊಳಿಸುವುದಿಲ್ಲ. ಇದರಲ್ಲಿ ಶುಚಿಕಾರಕ ರಾಸಾಯನಿಕ ಇರುವುದಿಲ್ಲ. ತಲೆಯಲ್ಲಿ ತುರಿಕೆ, ಜಿಡ್ಡುತನ, ಹೊಟ್ಟಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಕೂದಲು ಉದುರುವಿಕೆಗೂ ಕಾರಣವಾಗಬಹುದು. ದೀರ್ಘಕಾಲ ನೀವು ಕೋಕಾ ಕೋಲಾ ಬಳಕೆ ಮಾಡಿದರೆ, ಖಂಡಿತ ನಿಮ್ಮ ಕೂದಲಿಗೆ ಹಾನಿ ಕಟ್ಟಿಟ್ಟ ಬುತ್ತಿ…ನೀವೇನಾದ್ರೂ ಕೋಕಾ ಕೋಲಾ ಬಳೆಕ ಮಾಡ್ತಿದ್ರೆ, ಅದನ್ನು ಬಿಡೋದು ಒಳ್ಳೇದು.
ಆರೋಗ್ಯ
Sugar Cane Juice Benefits: ರಸಭರಿತ ಕಬ್ಬಿನ ಹಾಲು, ಏನೇನಿವೆ ಇದರ ಲಾಭಗಳು?
ಶುದ್ಧ ಕಬ್ಬಿನ ಹಾಲು (sugar cane juice benefits) ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಇದರಿಂದ ಇನ್ನೂ ಏನೇನು ಲಾಭಗಳಿವೆ?
ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ಒಳ್ಳೆಯ ಪೇಯಗಳ ಬಗ್ಗೆ ಹೇಳಿದರೂ ಬಾಯಾರಿಕೆ ಹೆಚ್ಚುತ್ತದೆ, ಅಂಥ ಬಿಸಿಲು ಹೊರಗೆ! ಅದರಲ್ಲೂ ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ…? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು (sugar cane juice benefits) ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ.
ಪ್ರತಿರೋಧ ಶಕ್ತಿ ಹೆಚ್ಚಳ
ಹೆಚ್ಚೇನು ಫ್ಯಾನ್ಸಿ ಮಾಡದ ಶುದ್ಧ ಕಬ್ಬಿನ ಹಾಲು ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಅದರಲ್ಲೂ ಈ ರಸದಲ್ಲಿರುವ ಎಲೆಕ್ಟ್ರೋಲೈಟ್‌ಗಳಿಂದಾಗಿ ದಣಿದ, ಆಯಾಸಗೊಂಡ ದೇಹಕ್ಕೆ ಸಂಜೀವಿನಿ ಎನಿಸಬಲ್ಲದು. ಕಬ್ಬಿನ ರಸದಲ್ಲಿರುವ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂ ಮತ್ತು ಇತೆ ಸೂಕ್ಷ್ಮ ಪೋಷಕಾಂಶಗಳಿಂದಾಗಿ, ದೇಹದ ಪ್ರೊಟೀನ್ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿ, ಸಾಮಾನ್ಯ ಶೀತ-ಜ್ವರಗಳ ಬಾಧೆ ಕಡಿಮೆಯಾಗುತ್ತದೆ.
ಪಚನಕಾರಿ
ನಮ್ಮ ಜೀರ್ಣಾಂಗಗಳ ಹಿತ ಕಾಪಾಡುವಲ್ಲೂ ಕಬ್ಬಿನ ರಸದ್ದು ಶ್ಲಾಘನೀಯ ಕೆಲಸ. ಹೊಟ್ಟೆಯ ಪಿಎಚ್ ಮಟ್ಟವನ್ನು ಕಾಪಾಡಿಕೊಂಡು, ಆಹಾರ ಪಚನವಾಗುವುದಕ್ಕೆ ಬೇಕಾದ ಜೀರ್ಣ ರಸಗಳ ಬಿಡುಗಡೆಗೆ ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯನ್ನು ಆಗಾಗ ಕಾಡುವ ಅಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳು ದೂರ ಉಳಿಯುತ್ತವೆ.
ಮಧುಮೇಹ ನಿಯಂತ್ರಣ
ಹೌದೇಹೌದು! ಇಷ್ಟೊಂದು ಸಿಹಿಯಾದ ಪೇಯವನ್ನು ಮಧುಮೇಹಿಗಳು ಕುಡಿಯಬಹುದೇ, ಕುಡಿದರೆ ಆರೋಗ್ಯ ಏನಾದೀತು ಎಂಬ ಅನುಮಾನ ಬರುವುದು ಸಹಜವೇ. ಆದರೆ ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆ ಅಂಶ ಏರುವಂತೆ ಮಾಡುವುದಿಲ್ಲ. ಹಾಗಾಗಿ ಮಧುಮೇಹಿಗಳೂ ಇದನ್ನು ಮಿತ ಪ್ರಮಾಣದಲ್ಲಿ ಕುಡಿಯಬಹುದು.
ಹಲ್ಲು ಮತ್ತು ಮೂಳೆಗಳ ಬಲವರ್ಧನೆ
ತನ್ನಲ್ಲಿ ವಿಫುಲವಾಗಿರುವ ಪ್ರೊಟೀನ್ ಸತ್ವದಿಂದಾಗಿ ಮೂಳೆಗಳನ್ನು ಸದೃಢ ಮಾಡುವ ಸಾಧ್ಯತೆ ಕಬ್ಬಿನ ಹಾಲಿಗಿದೆ. ಜೊತೆಗೆ, ಹಲ್ಲುಗಳು ಹುಳುಕಾಗದಂತೆ ಕಾಪಾಡುವುದರೊಂದಿಗೆ, ದಂತಗಳ ಬೇರನ್ನೂ ಬಲಗೊಳಿಸು ಸಾಮರ್ಥ್ಯ ಇದರಲ್ಲಿರುವ ಫಾಸ್ಫರಸ್ ಅಂಶಕ್ಕಿದೆ. ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯದೆ ಇದ್ದಾಗ ಉಂಟಾಗುವ ಬಾಯಿಯ ದುರ್ಗಂಧ ತಡೆಯಲೂ ಇದು ಸಹಕಾರಿ.
ನೋವು ಉಪಶಮನಕ್ಕೆ
ಕಬ್ಬಿನ ರಸವನ್ನು ಎಳನೀರು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿದಾಗ ಇನ್ನಷ್ಟು ಲಾಭಗಳು ದೇಹಕ್ಕೆ ದೊರೆಯುತ್ತವೆ. ಮೂತ್ರನಾಳದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಹಲವಾರು ಸಮಸ್ಯೆಗಳಿಂದ ಕಾಡುವ ನೋವುಗಳ ನಿವಾರಣೆಗೆ ಈ ಮಿಶ್ರಣ ಉಪಯೋಗಿ ಎನಿಸಿದೆ. ದೇಹದಲ್ಲಿ ಉರಿಯೂತವನ್ನು ನಿವಾರಿಸುವ ಇದರ ಗುಣವೇ ಈ ನೋವು ಉಪಶಮನಕ್ಕೂ ಕಾರಣವಾಗಿದೆ.
ಸೌಂದರ್ಯವರ್ಧಕ
ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಯಂಥ ಸಮಸ್ಯೆಗಳಿಗೂ ಕಬ್ಬಿನ ರಸ ಮದ್ದಾಗಬಲ್ಲದು. ಇದರಲ್ಲಿರುವ ಗ್ಲೈಕೋಲಿಲಕ್ ಆಮ್ಲವು ತ್ವಚೆಯ ಮೇಲಿನ ನಿರ್ಜೀವ ಕೋಶಗಳನ್ನು ತೆಗೆದು, ಹೊಳಪು ಮೂಡಿಸಲು ಉಪಯುಕ್ತ. ಮುಲ್ತಾನಿ ಮಿಟ್ಟಿಯ ಜೊತೆಗೆ ಕಬ್ಬಿನ ರಸವನ್ನು ಮಿಶ್ರ ಮಾಡಿ, ಫೇಸ್‌ಪ್ಯಾಕ್ ಮಾಡುವುದರಿಂದ ಚರ್ಮದ ಹೊಳಪು, ನುಣುಪು ವೃದ್ಧಿಸುತ್ತದೆ.
ಇದನ್ನೂ ಓದಿ: Healthy Drink: ಹೋಳಿಯ ನಂತರ ಚರ್ಮ ಸರಿಯಾಗಬೇಕಾದರೆ ಕುಡಿಯಲೇ ಬೇಕಾದ ಪೇಯಗಳಿವು!
ಆರೋಗ್ಯ
Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು
ಎಷ್ಟು ಲೀಟರುಗಟ್ಟಲೆ ನೀರು ಕುಡಿದರೂ ಬಾಯಾರಿಕೆಗೆ ಕೊನೆಯೇ ಇರುವುದಿಲ್ಲ. ಇಂಥ ಹೊತ್ತಿನಲ್ಲಿ ನೆರವಿಗೆ ಬರುವುದು ಜಲ್‌ಜೀರಾ. ಇದರ (Jal Jeera Benefits) ಪ್ರಯೋಜನಗಳೇನು?
ಬೇಸಿಗೆಯಲ್ಲಿ ಬಗೆಬಗೆ ತಿನ್ನುವುದಕ್ಕಿಂತ, ತಂಪಾಗಿ ದಾಹ ತಣಿಸುವಂಥ ಪೇಯಗಳದ್ದೇ ಭರಾಟೆ. ಎಷ್ಟು ಲೀಟರುಗಟ್ಟಲೆ ನೀರು ಕುಡಿದರೂ ಬಾಯಾರಿಕೆಗೆ ಕೊನೆಯೇ ಇರುವುದಿಲ್ಲ. ಇಂಥ ಹೊತ್ತಿನಲ್ಲಿ ನೆರವಿಗೆ ಬರುವುದು (Jal Jeera Benefits) ಜಲ್‌ಜೀರಾ. ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಯನ್ನು ನೀರಿಗೆ ಬೆರೆಸಿ ಕುಡಿಯುವುದು ಒಂದು ರೀತಿ. ಈ ನೀರಿಗೆ ಪುದೀನಾ ಅಥವಾ ಕೊತ್ತಂಬರಿ ಸೊಪ್ಪುಗಳನ್ನು ಬೆರೆಸಿ ಕುಡಿಯುವುದು ಇನ್ನೊಂದು ರೀತಿ. ಹಾಗೆ ನೋಡಿದರೆ, ಜಲ್‌ಜೀರಾ ಪುಡಿಯಲ್ಲೇ ಹಲವು ರೀತಿಯ ಮಸಾಲೆಗಳು ಸೇರಿರುತ್ತವೆ. ಜೀರಿಗೆ, ಶುಂಠಿ ಮತ್ತು ಕಾಳುಮೆಣಸಿನ ಪುಡಿ, ಸೈಂಧವ ಲವಣ, ಒಣಮಾವಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಎಲೆಗಳ ಪುಡಿಗಳು ಇದರಲ್ಲಿ ಸೇರಿರುತ್ತವೆ. ಹಾಗೆಂದೇ ಇದನ್ನು ಕುಡಿದಾಕ್ಷಣ ದಣಿವಾರಿದ ಅನುಭವ ನೀಡುತ್ತದೆ. ಇದನ್ನು ಕುಡಿಯುವುದರಿಂದ ಇನ್ನೂ ಕೆಲವು ಲಾಭಗಳಿವೆ. ಅದೇನೆಂದು ನೋಡೋಣ
ಬೇಸಿಗೆಗೆ ಸೂಕ್ತ
ದೇಹವನ್ನು ತಣಿಸುವುದಕ್ಕೆ ಅಗತ್ಯವಾದ ವಸ್ತುಗಳು ಜಲ್‌ಜೀರಾದಲ್ಲಿ ಅಡಕವಾಗಿವೆ. ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಈ ಪಾನೀಯ ಪೂರೈಸುತ್ತದೆ. ಜೊತೆಗೆ ನೀರಿನ ಅಂಶವೂ ದೇಹಕ್ಕೆ ದೊರೆಯುತ್ತದೆ. ಬೇಸಿಗೆಯಲ್ಲಿ ಬೆವರಿ, ಬಳಲಿ , ಬೆಂಡಾಗುವ ಸಂದರ್ಭದಲ್ಲಿ ಒಂದು ಲೋಟ ಜಲ್‌ಜೀರಾ ಬೆರೆಸಿದ ನೀರು ಚೇತೋಹಾರಿ ಅನುಭವವನ್ನು ನೀಡಬಲ್ಲದು.
ಜೀರ್ಣಕಾರಿ
ಜಲ್‌ಜೀರಾದಲ್ಲಿರುವ ಶುಂಠಿ, ಪುದೀನಾ ಇತ್ಯಾದಿಗಳು ಪಚನಕಾರಿ ಗುಣವನ್ನು ಹೊಂದಿವೆ. ಜೀರಿಗೆಯ ಅಂಶದಿಂದಾಗಿ ಹೊಟ್ಟೆಯುಬ್ಬರ, ಅಸಿಡಿಟಿಯಂಥ ತೊಂದರೆಗಳು ಕಡಿಮೆಯಾಗುತ್ತವೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅಥವಾ ಮದುವೆ ಮನೆಯ ಊಟ ಹೆಚ್ಚಾಗಿ ಹೊಟ್ಟೆ ಭಾರವಾದರೆ, ಊಟದ ಸ್ವಲ್ಪ ಹೊತ್ತಿನ ನಂತರ ಜಲ್‌ಜೀರಾ ಸೇವನೆ ಅನುಕೂಲ ಎನಿಸುತ್ತದೆ.
ಹೊಟ್ಟೆಯ ತಳಮಳ ಶಮನ
ಹೊಟ್ಟೆಯಲ್ಲಿ ತಳಮಳ ಆಗುವುದಕ್ಕೆ ಬಹಳಷ್ಟು ಕಾರಣಗಳು ಇರುತ್ತವೆ- ಅಜೀರ್ಣ, ಆಸಿಡಿಟಿ, ಹೊಟ್ಟೆ ಉಬ್ಬರ, ನೋವು, ಹೊಟ್ಟೆ ತೊಳೆಸುವುದು ಇತ್ಯಾದಿ. ಶುಂಠಿಯಿಂದ ಹೊಟ್ಟೆ ತೊಳೆಸುವುದು, ಕಿಬ್ಬೊಟ್ಟೆಯ ನೋವು ಕಡಿಮೆಯಾದರೆ, ಜೀರಿಗೆ ಮತ್ತು ಕಾಳುಮೆಣಸಿನ ಅಂಶಗಳಿಂದ ಹೊಟ್ಟೆ ಉಬ್ಬರ, ಅಜೀರ್ಣ ಕಡಿಮೆಯಾಗುತ್ತದೆ. ಆದರೆ ರಕ್ತದೊತ್ತಡ ಹೆಚ್ಚಿರುವವರು ಜಲ್‌ಜೀರಾವನ್ನು ಮಿತಿಯಲ್ಲಿ ಸೇವಿಸುವುದು ಸೂಕ್ತ.
ಹಸಿವು ಹೆಚ್ಚಿಸುತ್ತದೆ
ಬೇಸಿಗೆಯಲ್ಲಿ ಹಸಿವೆ ಕೆಲವೊಮ್ಮೆ ಕಡಿಮೆ ಎನಿಸುತ್ತದೆ. ತಿನ್ನುವುದೇ ಬೇಡ, ತಂಪಾಗಿ ಪಾನೀಯಗಳಿದ್ದರೆ ದಿನ ಕಳೆಯಬಹುದು ಎಂದೆನಿಸಿದರೂ, ಹಸಿವಿಲ್ಲವೆಂದು ತಿನ್ನದೇ ಕುಳಿತ ಪರಿಣಾಮವಾಗಿ ಒಂದೆರಡು ದಿನಗಳಲ್ಲಿ ಸುಸ್ತು, ಆಯಾಸ, ನಿಶ್ಶಕ್ತಿ ಮುಂತಾದವೆಲ್ಲಾ ಆರಂಭವಾಗುತ್ತವೆ. ಜಲ್‌ಜೀರಾದಲ್ಲಿರುವ ಮಸಾಲೆಗಳ ಮಿಶ್ರಣವು, ಜೀರ್ಣಾಂಗವನ್ನು ಚುರುಕುಗೊಳಿಸಿ, ಹಸಿವೆ ಹೆಚ್ಚಿಸುತ್ತದೆ. ಒಂದೊಮ್ಮೆ ಅಜೀರ್ಣದಿಂದ ಹಸಿವಾಗದಿದ್ದರೆ, ಅದನ್ನೂ ಸರಿಪಡಿಸುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಗಳು ಬೇಡ ಎನಿಸಿದರೆ, ಬೇಕಾದ ರೀತಿಯಲ್ಲಿ ಮನೆಯಲ್ಲೂ ಮಾಡಿಕೊಳ್ಳಬಹುದು. ಕೆಲವು ಮಸಾಲೆಪ್ರಿಯರು ಜಲ್‌ಜೀರಾ ಪುಡಿಗಳಿಗೆ ಕೊಂಚ ಗರಂ ಮಸಾಲೆ ಸೇರಿಸಿಕೊಳ್ಳುವವರಿದ್ದಾರೆ. ಇದಕ್ಕೆ ಕೊಂಚ ಬೆಲ್ಲ ಸೇರಿಸಿ, ಪಾನಕದಂತೆ ಕುಡಿದು ಸುಖಿಸುವವರಿದ್ದಾರೆ. ಒಣ ಮಾವಿನ ಪುಡಿ ದೊರೆಯದಿದ್ದರೆ, ನಿಂಬೆ ರಸ ಹಾಕಿಕೊಂಡರೂ ಸರಿ- ಬಾಯಿ, ದೇಹ ಎರಡಕ್ಕೂ ಹಿತ. ಬಿಸಿಲಿನಲ್ಲಿ ಬಂದಾಗ ತಂಪಾದ ಜಲ್‌ಜೀರಾ ನೀರು ನಿಜಕ್ಕೂ ಚೈತನ್ಯಕ್ಕೆ ತಂಪೆರೆಯಬಲ್ಲದು.
ಇದನ್ನೂ ಓದಿ: Drumstick Tea Health Benefits: ನುಗ್ಗೆ ಸೊಪ್ಪಿನ ಚಹಾದ ಸ್ಪೆಷಲ್ ಇವು!
ಆರೋಗ್ಯ
Vitamin C Benefits: ವಿಟಮಿನ್ ಸಿ ನಮಗೇಕೆ ಬೇಕು? ಇಲ್ಲಿವೆ ಕಾರಣಗಳು
ಬೇಸಿಗೆಯಲ್ಲಿ ನಮ್ಮನ್ನು ಅತಿ ಉಷ್ಣದಿಂದ ಕಾಪಾಡುವುದಕ್ಕೆ ವಿಟಮಿನ್ ಸಿ (Vitamin C Benefits) ಪ್ರಧಾನವಾಗಿ ಬೇಕಾಗುತ್ತದೆ. ಇದರ ಉಪಯೋಗ ಇನ್ನೂ ಏನೇನು? ಇಲ್ಲಿದೆ ಮಾಹಿತಿ.
ದೇಹಕ್ಕೆ ಅಗತ್ಯವಾಗಿ ಬೇಕಿರುವ ಪೋಷಕಾಂಶಗಳ ಪಟ್ಟಿಯಲ್ಲಿ ವಿಟಮಿನ್ ಸಿ (Vitamin C Benefits) ಮುಂಚೂಣಿಯಲ್ಲಿ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಜೀವಸತ್ವ ಬೇಕು ಎಂಬುದನ್ನು ಪದೇಪದೆ ಕೇಳಿರುತ್ತೇವೆ. ಹಾಗಾದರೆ ಅದೊಂದೇ ಕಾರಣಕ್ಕೆ ನಮಗೆ ಸಿ ಜೀವಸತ್ವ ಅಗತ್ಯವೇ? ಇದಲ್ಲದೆ ಇನ್ನೂ ಯಾವೆಲ್ಲಾ ಕಾರಣಗಳಿಗಾಗಿ ವಿಟಮಿನ್ ಸಿ ಬೇಕು? ಇನ್ನೇನೇನು ಕೆಲಸವಿದೆ ಇದಕ್ಕೆ ನಮ್ಮ ದೇಹದಲ್ಲಿ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯಿದು.
ಬೇಸಿಗೆಯಲ್ಲಿ ನಮ್ಮನ್ನು ಅತಿ ಉಷ್ಣದಿಂದ ಕಾಪಾಡುವುದಕ್ಕೆ ವಿಟಮಿನ್ ಸಿ (Vitamin C) ಪ್ರಧಾನವಾಗಿ ಬೇಕು. ಮಾತ್ರವಲ್ಲ, ವಾತಾವರಣದಲ್ಲಿರುವ ಅತಿಯಾದ ಹೊಗೆ, ಮಾಲಿನ್ಯದಿಂದ ನಮ್ಮನ್ನು ರಕ್ಷಿಸಲು, ಬಿಸಿಲಿಗೆ ದೇಹ ಸೊರಗದೆ ಇರಲು, ಶರೀರಕ್ಕೆ ಅಗತ್ಯವಾದ ಕೊಲಾಜಿನ್ ಮತ್ತು ಎಲಾಸ್ಟಿನ್ ಉತ್ಪಾದನೆಗೆ ಈ ಪೋಷಕತತ್ವ ಆವಶ್ಯಕ. ಇದಲ್ಲದೆ, ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ಅನುಕೂಲ ಮಾಡಿಕೊಡುವ ಪಾತ್ರವೂ ಇದೇ ಜೀವಸತ್ವದ್ದು. ಹಾಗಾಗಿ, ನಮ್ಮ ಚರ್ಮ, ಕೂದಲು, ಶ್ವಾಸಕೋಶಗಳನ್ನು ರಕ್ಷಿಸುವುದೇ ಅಲ್ಲದೆ, ಅನೀಮಿಯದಿಂದ ದೂರವಿರಿಸಿ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಮಲ್ಟಿಟಾಸ್ಕಿಂಗ್ ಕೆಲಸ ಇದರದ್ದು. ಇವಿಷ್ಟು ವಿಟಮಿನ್ ಸಿ ಮಾಡುವ ಕೆಲಸದ ಸ್ಥೂಲ ಪರಿಚಯವಾದರೆ, ಇವುಗಳ ವಿವರಗಳು ಇಲ್ಲಿವೆ.
ಸೂರ್ಯನ ಪ್ರಕೋಪದಿಂದ ರಕ್ಷಿಸುತ್ತದೆ
ಸೂರ್ಯ ಸ್ನಾನ ಮಾಡುವವರ ಸಂಖ್ಯೆ ಪಶ್ಚಿಮ ದೇಶಗಳಲ್ಲಿ ಬಹಳ ಹೆಚ್ಚು. ವರ್ಷದ ಆರೆಂಟು ತಿಂಗಳು ಚಳಿ ಅಥವಾ ಹಿಮದಲ್ಲೇ ಹುಗಿದುಕೊಂಡಿರುವ ಭೂಭಾಗಗಳ ಜನರಿಗೆ ಬೇಸಿಗೆಯಲ್ಲಿ ಬಿಸಿಲಿಗೆ ಮೊಸಳೆಯಂತೆ ಒಡ್ಡಿಕೊಳ್ಳುವುದು ಬಲುಪ್ರಿಯವಾದ ಸಂಗತಿ. ಆದರೆ ಓಝೋನ್ ಪದರಕ್ಕೆ ಹಾನಿಯಾಗಿ, ಭೂಮಿಗೆ ಅತಿನೇರಳೆ ಕಿರಣಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗೆ ಸೂರ್ಯ ಸ್ನಾನ ಮಾಡಿದವರಲ್ಲಿ ಅಪರೂಪಕ್ಕೆ ಚರ್ಮದ ಕ್ಯಾನ್ಸರ್ ಕಾಣಿಸಿಕೊಳ್ಳುವುದಿದೆ. ಸೂರ್ಯನ ಬಿಸಿಲಿಗೆ ಹಾನಿಯಾದ ಕೋಶಗಳನ್ನು ಚುರುಕಾಗಿ ಸರಿಪಡಿಸಿ, ಕ್ಯಾನ್ಸರ್ ತಡೆಗಟ್ಟಲು ವಿಟಮಿನ್ ಸಿ (Vitamin C) ಅವಶ್ಯವಾಗಿ ಬೇಕು.
ಗುಣಪಡಿಸಲು
ಯಾವುದೇ ಗಾಯಗಳು ಗುಣವಾಗುವುದಕ್ಕೆ, ಗಾಯಗೊಂಡ ಕೋಶಗಳನ್ನು ರಿಪೇರಿ ಮಾಡಲು ಸಿ ಜೀವಸತ್ವ ಅಗತ್ಯ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಹಾನಿ ಸರಿಪಡಿಸಲು ನೆರವಾಗುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಸುತ್ತುವ ಮುಕ್ತ ಕಣಗಳನ್ನು ನಿರ್ಬಂಧಿಸುತ್ತವೆ. ಇದರಿಂದ ಮಾರಕ ರೋಗಗಳ ದಾಳಿಯ ಸಾಧ್ಯತೆ ಕ್ಷೀಣಿಸುತ್ತದೆ.
ಜೊತೆಗೆ, ಚರ್ಮದ ಆರೋಗ್ಯ ಕಾಪಾಡುವಂಥ ಕೊಲಾಜಿನ್ ಉತ್ಪತ್ತಿಗೆ ಈ ಪೋಷಕಾಂಶ ಪೂರಕ. ಹಾಗಾಗಿ, ಕೂದಲು ಮತ್ತು ಚರ್ಮದ ತೊಂದರೆಗಳು ಶೀಘ್ರವೇ ಗುಣವಾಗುತ್ತವೆ. ಮೂಳೆಗಳು ಮತ್ತು ಕೀಲುಗಳ ನಡುವಿನ ಕೋಶಗಳು- ಇವೆಲ್ಲವುಗಳು ಆರೋಗ್ಯಕರವಾಗಿ ಇರುವುದಕ್ಕೆ ದೇಹದಲ್ಲಿ ಸಾಕಷ್ಟು ಎಲಾಸ್ಟಿನ್ ಮತ್ತು ಕೊಲಾಜಿನ್ ತಯಾರಾಗಲೇ ಬೇಕು. ಕೊಲಾಜಿನ್ ಕಡಿಮೆಯಾದರೆ ಮಂಡಿ ಕೀಲುಗಳ ಸವೆತ, ಚರ್ಮ ಸುಕ್ಕಾಗುವುದು, ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಗಂಟಾಗುತ್ತವೆ.
ಬೇಸಿಗೆಯಲ್ಲಿ ಅನುಕೂಲ
ಸೆಖೆಗಾಲದಲ್ಲಿ ತೀಕ್ಷ್ಣವಾಗಿ ಏರುವ ತಾಪಮಾನವನ್ನು ಸಹಿಸಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುವಲ್ಲಿ ವಿಟಮಿನ್ ಸಿ ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ. ಬೆವರು ಹರಿಸುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೆವರುಸಾಲೆಯಂಥ ಚರ್ಮದ ಕಿರಿಕಿರಿಗಳನ್ನು ದೂರವಿರಿಸುತ್ತದೆ.
ಹೇಗೆ ದೊರೆಯುತ್ತದೆ?
ವಿಟಮಿನ್ ಸಿ (Vitamin C) ಬೇಕು ಎನ್ನುವುದು ನಿಜ. ಆದರೆ ದೇಹಕ್ಕೆ ಹೇಗೆ ದೊರೆಯುತ್ತದೆ? ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳಲ್ಲೇ ಸಿ ಜೀವಸತ್ವ ಹೇರಳವಾಗಿರುತ್ತದೆ. ಉದಾ, ಕಿತ್ತಳೆ, ದ್ರಾಕ್ಷಿಯಂಥ ಹುಳಿ ಹಣ್ಣುಗಳಲ್ಲಿ, ಸೇಬು, ಕಿವಿ, ಅನಾನಸ್, ಪಪ್ಪಾಯಿ, ದಪ್ಪ ಮೆಣಸಿನ ಕಾಯಿ ಇತ್ಯಾದಿಗಳನ್ನು ಸೇವಿಸುವುದರಿಂದ ವಿಟಮಿನ್ ಸಿ ಪಡೆಯಬಹುದು. ಪೂರಕಗಳ ಮೂಲಕವೂ ವಿಟಮಿನ್ ಸಿ ಸೇವಿಸಬಹುದು. ಅದನ್ನು ಸೇವಿಸುವ ಪ್ರಮಾಣವೆಷ್ಟು ಎಂಬುದಕ್ಕೆ ತಜ್ಞರ ಮಾರ್ಗದರ್ಶನ ಸೂಕ್ತ.
ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!
ಆರೋಗ್ಯ
Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!
ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಕೆಲವರ ಸಮಸ್ಯೆಯಾದರೆ, ಇನ್ನೂ ಕೆಲವರದ್ದು ಹೊಟ್ಟೆನೋವಿನ ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಕೊಂಚ ಆರಾಮದಾಯಕವೆನಿಸುವ ಸರಳ ಉಪಾಯವೊಂದಿದೆ. ಮನೆಯಲ್ಲೇ ನಾವು ನಿತ್ಯ ಪಾಲಿಸಬಹುದಾದ ಸರಳ ಉಪಾಯ. ಅದೂ ಕೇವಲ ನೀರಿನಿಂದ!
ಪ್ರತಿ ತಿಂಗಳ ಮುಟ್ಟಿನ ನೋವು (Menstruation) ಯಾತನಾಮಯ. ಎಲ್ಲರಿಗೂ ಒಂದೇ ತೆರನಾಗಿ ಆಗಬೇಕೆಂದೇನೂ ಇಲ್ಲವಾದರೂ, ಬಹುತೇಕರಿಗೆ ಋತುಚಕ್ರದ ದಿನಗಳೆಂದರೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹೊಟ್ಟೆಯುಬ್ಬರ, ಕಾಲು ನೋವು, ಸೊಂಟ ನೋವು, ಮಾಂಸಖಂಡಗಳ ಸೆಳೆತ, ನರಸೆಳೆತ, ಶಕ್ತಿಹೀನತೆ, ಉದಾಸೀನತೆ, ಕೆಟ್ಟ ಮೂಡು, ವಿಪರೀತ ಸಿಟ್ಟು ಬರುವುದು ಇತ್ಯಾದಿ ಇತ್ಯಾದಿ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಅತಿಯಾದ ರಕ್ತಸ್ರಾವ ಕೆಲವರ ಸಮಸ್ಯೆಯಾದರೆ, ಇನ್ನೂ ಕೆಲವರದ್ದು ಹೊಟ್ಟೆನೋವಿನ ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಕೊಂಚ ಆರಾಮದಾಯಕವೆನಿಸುವ ಸರಳ ಉಪಾಯವೊಂದಿದೆ. ಮನೆಯಲ್ಲೇ ನಾವು ನಿತ್ಯ ಪಾಲಿಸಬಹುದಾದ ಸರಳ ಉಪಾಯ. ಅದೂ ಕೇವಲ ನೀರಿನಿಂದ!
ಹೌದು. ಋತುಚಕ್ರದ ಸಂಬಂಧ ಆಗುವ ಹೊಟ್ಟೆಯುಬ್ಬರ, ಮಾಂಸಖಂಡಗಳ ಸೆಳೆತ ಇತ್ಯಾದಿಗಳಿಗೆಲ್ಲ ಕೊಂಚ ಆರಾಮವೆನಿಸುವ ಮದ್ದೊಂದಿದೆ. ಮನೆಯಲ್ಲೇ ಸುಲಭವಾಗಿ ನಿಮಿಷದಲ್ಲಿ ಮಾಡಬಹುದಾದ ಈ ನೀರು ಕೇವಲ ಋತುಚಕ್ರದ ಹೊಟ್ಟೆನೋವಿಗೆ ಮಾತ್ರ ಮುಕ್ತಿ ನೀಡುವುದಿಲ್ಲ, ಬದಲಾಗಿ ಹೊಟ್ಟೆಯ ಬೊಜ್ಜು ಕರಗಿಸಿ ತೂಕ ಇಳಿಸಲೂ ಕೂಡಾ ಸಹಾಯ ಮಾಡುತ್ತದೆ.
ಜೀರಿಗೆ, ಓಂಕಾಳು ಹಾಗೂ ಮೆಂತ್ಯಕಾಳಿನ ನೀರನ್ನು ನಿತ್ಯವೂ ಕುಡಿಯುವುದರಿಂದ ದೇಹದ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ಬದಲಾವಣೆ ಕಾಣಬಹುದಂತೆ,
ನಿತ್ಯವೂ ಜೀರಿಗೆಯ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ನಿಧಾನವಾಗಿ ಚುರುಕಾಗುತ್ತದೆಯಂತೆ. ಒಳ್ಳೆಯ ಜೀರ್ಣವ್ಯವಸ್ಥೆಯಿದ್ದರೆ ನಮ್ಮ ಹತ್ತು ಹಲವು ಸಣ್ಣಸಣ್ಣ ಸಮಸ್ಯೆಗಳು ಸರಿಯಾಗುವುದರೊಂದಿಗೆ ಹೊಟ್ಟೆಯುಬ್ಬರದಂತಹ ಆಗಾಗ ಕಾಡುವ ಸಮಸ್ಯೆಗಳೂ ದೂರಾಗುತ್ತವೆ. ಜೀರಿಗೆಯಲ್ಲಿರುವ ಥೈಮಾಲ್ ಎಂಬ ಅಂಶವು ಗ್ಯಾಸ್ಟ್ರಿಕ್ ಗ್ರಂಥಿಗಳಿಗೆ ಚುರುಕು ಮುಟ್ಟಿಸಿ ಪಚನಕ್ರಿಯೆಯನ್ನು ವೇಗವಾಗಿಸುತ್ತದೆ. ಮುಟ್ಟಿನ ಸಮಯದ ಹೊಟ್ಟೆಯುಬ್ಬರವನ್ನೂ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದಲ್ಲಿನ ವಿಷಕಾರಿ ಕಲ್ಮಶಗಳನ್ನು ಹೊರಕ್ಕೆ ಹಾಕಿ, ಕೆಟ್ಟ ಕೊಲೆಸ್ಟೆರಾಲ್ ಕರಗಿಸುವಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: Period problems | ಚಳಿಗಾಲದಲ್ಲೇ ಮುಟ್ಟಿನ ತೊಂದರೆಗಳು ಉಲ್ಬಣಿಸುವುದ್ಯಾಕೆ? ಇಲ್ಲಿವೆ ಪರಿಹಾರಗಳು!
ಜೀರಿಗೆ ಹಾಗೂ ಓಂಕಾಳಿನ ನೀರು ನಿತ್ಯವೂ ಕುಡಿಯುವುದರಿಂದ ಕೇವಲ ಇಷ್ಟೇ ಉಪಯೋಗಗಳಲ್ಲ. ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಹಾಗಾದರೆ ಬನ್ನಿ, ಈ ಬೆಳಗಿನ ಡಿಟಾಕ್ಸ್ ಫೇಯವನ್ನು ಮಾಡುವುದು ಹೇಗೆ ಎಂದು ನೋಡೋಣ.
ಕಾಲು ಚಮಚ ಜೀರಿಗೆ, ಕಾಲು ಚಮಚ ಮೆಂತ್ಯಕಾಳು ಹಾಗೂ ಕಾಲು ಚಮಚ ಓಂಕಾಳುನ್ನು ನೀರಿಗೆ ಹಾಕಿ ರಾತ್ರಿ ನೆನೆಸಿಡಿ. ರಾತ್ರಿ ಪೂರ ಅವು ನೆನೆಯಲಿ. ನಂತರ ಬೆಳಗ್ಗೆ ಎದ್ದು ಇದನ್ನು ಸೋಸಿಕೊಳ್ಳಿ. ನಂತರ ಈ ನೀರನ್ನು ಕುಡಿಯಿರಿ. ದಿನವೂ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಸಾಕಷ್ಟು ಬದಲಾವಣೆ ನಿಮಗೆ ಕಾಣಬಹುದು. ನೀವು ಚಹಾ ಪ್ರೇಮಿಗಳಾಗಿದ್ದರೆ, ಇದೇ ಮೂರಿ ವಸ್ತುಗಳನ್ನು ಹಾಕಿ ಚಹಾ ಮಾಡಿಕೊಳ್ಳಬಹುದು. ಜೀರಿಗೆ, ಮೆಂತ್ಯಕಾಳು ಹಾಗೂ ಓಂಕಾಳನ್ನು ನೀರಿಗೆ ಹಾಕಿ ಕುದಿಸಿ ಸೋಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆಹಣ್ಣು ಹಿಂಡಿ ಕುಡಿಯಬಹುದು. ಇದಕ್ಕೆ ಒಂದು ಚಮಚ ಜೇನುತುಪ್ಪ ಅಥವಾ ಒಂದು ಚಮಚ ಬೆಲ್ಲದ ಹುಡಿಯನ್ನು ಹಾಕಿ ರುಚಿ ಹೆಚ್ಚಿಸಬಹುದು. ಆ ಮೂಲಕ ಋತುಚಕ್ರದ ದಿನಗಳಲ್ಲಿ ಹೊಟ್ಟೆಯುಬ್ಬರಕ್ಕೆ ಹಾಗೂ ಹೊಟ್ಟೆಯಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?