ಹಬ್ಬಗಳು ಬಂದರೆ ಸಾಕು ಎಲ್ಲಿಲ್ಲದ ಸಡಗರ. ಹಬ್ಬಗಳ ಆಚರಣೆಗಳ ಜೊತೆಗೆ ಎಲ್ಲವ ಪ್ರಮುಖ ಆಕರ್ಷಣೆಯೆಂದರೆ ಅದು ಸಿಹಿತಿನಿಸು. ಎಲ್ಲರ ಮನೆಗಳಲ್ಲೂ ರಾಶಿ ರಾಶಿ ತಿಂಡಿ ಡಬ್ಬಗಳು, ಸಿಹಿತಿಂಡಿಗಳು ಇದ್ದೇ ಇರುತ್ತವೆ. ಮಂಗನ ಉಪವಾಸದ ಹಾಗೆ ನಮ್ಮೆಲ್ಲ ಡಯಟ್ ಯೋಜನೆಗಳು, ಯೋಚನೆಗಳು ಹಳ್ಳ ಹಿಡಿಯುತ್ತವೆ. ಇನ್ನೆರಡು ತಿಂಗಳಲ್ಲಿ ಇಂತಿಷ್ಟು ಕೆಜಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ನಮಗೆ ನಾವೇ ಹಾಕಿಕೊಂಡಿದ್ದ ಗುರಿಗಳು ಮರೆತುಹೋಗುತ್ತವೆ. ʻಹಬ್ಬ ಬರುವಾಗ ತಿನ್ನದೆ ಕೂರುವುದಾದರೂ ಹೇಗೆ? ಅಷ್ಟಕ್ಕೂ ಹಬ್ಬ ಇರುವುದಾದರೂ ಏತಕ್ಕೆ?ʼ ಎಂದು ನಮಗೆ ನಾವೇ ಸಮಜಾಯಿಶಿ ಕೊಟ್ಟುಕೊಂಡು ʻಈಗ ತಿನ್ನದೆ ಇನ್ಯಾವತ್ತು ತಿನ್ನುವುದು, ಇರುವುದೊಂದೇ ಜೀವನ ಎಂದುಕೊಂಡು ಬಾಯಿಗಿಟ್ಟು ಚಪ್ಪರಿಸುತ್ತೇವೆ. ಇನ್ನೂ ಬಹಳಷ್ಟು ಮನೆಗಳಲ್ಲಿ ಹಬ್ಬಕ್ಕೆಂದು ನೆಂಟರಿಷ್ಟರ, ಗೆಳೆಯರ ಮನೆಗಳಿಂದ ಬರುವ ಸಿಹಿತಿನಿಸಿನ ಡಬ್ಬಗಳು ಮನೆಯಲ್ಲಿ ಕಣ್ಣಮುಂದೆ ಕಾಣಿಸಿದಾಗಲೆಲ್ಲ ತಿನ್ನುವ ಬಯಕೆಯಾಗುತ್ತದೆ. ಕೈ ನಿರಾಯಾಸವಾಗಿ ತಿಂಡಿಡಬ್ಬವನ್ನು ಹುಡುಕುತ್ತದೆ. ಕೊನೆಗೆ ಕಷ್ಟಪಟ್ಟು ತಿಂಗಳಿಂದ ಇಳಿಸಿಕೊಂಡ ತೂಕ ದಿಢೀರ್ ಏರಿಕೆಯಾಗಿ, ತಿಂಗಳ ಹಿಂದಿಂದ ಪಾಲಿಸಿಕೊಂಡು ಬಂದ ಶ್ರಮ, ಗುರಿ ಎಲ್ಲವೂ ವ್ಯರ್ಥವಾಗುತ್ತದೆ. ಇದು ಬಹುತೇಕರ ಸಮಸ್ಯೆ!
ಒಂದು ನಿಗದಿತ ತೂಕಕ್ಕಿಂತ ಹೆಚ್ಚು ತೂಕವನ್ನು ಪಡೆಯಲು ಆರಂಭಿಸಿದಾಗಿನಿಂದಲೇ ಆರೋಗ್ಯ ಸಂಬಂಧೀ ತೊಂದರೆಗಳು ಒಂದೊಂದಾಗಿ ಆರಂಭವಾಗಲು ತೊಡಗುತ್ತವೆ. ಹೆಚ್ಚು ತಿನ್ನುವುದರಿಂದ ಎದೆಯುರಿ, ಹೊಟ್ಟೆಯುಬ್ಬರದಂತಹ ತಾತ್ಕಾಲಿಕ ತೊಂದರೆಗಳು ಕಾಣಿಸಿಕೊಳ್ಳುವುದಷ್ಟೇ ಅಲ್ಲ. ಬೊಜ್ಜು, ಕೊಲೆಸ್ಟೆರಾಲ್ ಸಮಸ್ಯೆಗಳೂ ತಲೆದೋರಲು ಆರಂಭವಾಗಿ ಒಂದರ ಹಿಂದೆ ಒಂದರಂತೆ ಆರೋಗ್ಯ ಸಮಸ್ಯೆಗಳೂ ಹಿಂಬಾಲಿಸುತ್ತವೆ.
ಹಾಗಾದರೆ, ಹಬ್ಬಗಳನ್ನು ಆಚರಿಸಿಕೊಂಡೂ, ಹೆಚ್ಚುವರಿ ತಿನಿಸುಗಳ ಕಡೆಗೆ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ಹೇಗೆ? ಕಣ್ಣಮುಂದೆ ಹಲವಾರು ಸಿಹಿತಿನಿಸುಗಳಿದ್ದರೂ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಹೇಗೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿದರೂ, ನಿಜವಾಗಿ ಪ್ರಯತ್ನಪಟ್ಟರೆ, ಸ್ವಲ್ಪ ಮಟ್ಟಿಗಾದರೂ ನಿಗ್ರಹ ಸಾಧ್ಯವಿದೆ. ಪ್ರಯತ್ನಿಸಿ ನೋಡಿ.
1 ನಿಧಾನವಾಗಿ ತಿನ್ನಿ: ಹಬ್ಬದಡುಗೆ ರುಚಿಯಾಗಿದೆಯೆಂದು, ಬಕಬಕನೆ ಉಣ್ಣಲು ತೊಡಗಬೇಡಿ. ಊಟ ನಿಧಾನವಾಗಿ ಸಾಗಲಿ. ಬೇಡವೆಂದು ಖಡಾಖಂಡಿತವಾಗಿ ನಿರಾಕರಿಸಿದರೆ, ಮತ್ತಷ್ಟು ಬೇಕೆನಿಸುವ ಬಯಕೆ ಹೆಚ್ಚಾಗಿ ಹೆಚ್ಚು ತಿನ್ನುವ ಮೂಲಕ ಅಡ್ಡ ಪರಿಣಾಮಗಳೇ ಹೆಚ್ಚಾಗುವ ಸಂಭವ ಇದೆ. ಅದಕ್ಕಾಗಿ, ತಿನ್ನಬೇಕೆನಿಸಿದಾಗ ತಿನ್ನಿ. ಆದರೆ ಮಿತವಾಗಿರಲಿ. ನಿಧಾನವಾಗಿ ತಿನ್ನುವ ಮೂಲಕ ಮಿದುಳಿಗೆ ನಾವು ತಿನ್ನುವ ಪದಾರ್ಥದ ಬಗೆಗೆ ಜಾಗೃತಿಯೂ ಮೂಡುವುದಲ್ಲದೆ, ರುಚಿಯೂ ಸರಿಯಾಗಿ ಪ್ರಾಪ್ತವಾಗಿ ಸಂತೃಪ್ತಿಯ ಭಾವ ಬರುತ್ತದೆ. ನಮ್ಮ ದೇಹಕ್ಕೆ ನಿಜವಾಗಿ ಅಗತ್ಯವಿದ್ದಷ್ಟೇ ತಿನ್ನಲು ಸಹಾಯವಾಗುತ್ತದೆ.
2. ಹಬ್ಬದ ರಜೆಯಾಗಿದ್ದರೂ ಒಂದು ಶಿಸ್ತನ್ನು ರೂಢಿಸಿಕೊಳ್ಳಿ. ತಿನ್ನುವ ಸಮಯ, ವ್ಯಾಯಾಮ, ಇತರ ಕೆಲಸಗಳು ಹೀಗೆ ಪ್ರತಿಯೊಂದೂ ಆಯಾ ಸಮಯಕ್ಕೆ ಸರಿಯಾಗಿ ಆಗಲಿ. ಹಬ್ಬದ ರಜೆಯೆಂದು ಬೆಳಗ್ಗೆ ಎಷ್ಟೋ ಹೊತ್ತಿಗೆ ಎದ್ದು ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸಿಗದಿದ್ದಾಗ, ಹೆಚ್ಚು ತಿನ್ನುವ ಚಾಳಿಗೆ ಬಲಿ ಬೀಳುತ್ತೇವೆ. ಇಂಥ ಸಂದರ್ಭವೇ ಅನಗತ್ಯ ಸಿಹಿ, ಕುರುಕಲು ತಿಂಡಿಗಳು ಹೊಟ್ಟೆಗೆ ಸೇರುವ ಸಂಭವ ಹೆಚ್ಚಿದೆ.
ಇದನ್ನೂ ಓದಿ: PM Modi: ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ; ಕನ್ನಡಿಗರಿಗಾಗಿ ಕನ್ನಡದಲ್ಲೇ ಟ್ವೀಟ್
3. ಯಾವುದು ಬೇಕೋ ಅದನ್ನು ಮಾತ್ರ ತಿನ್ನಿ. ಪಕ್ಕದ ಮನೆಯವರು ಕೊಟ್ಟರು, ನೆಂಟರು ತಂದರು, ಮುಗಿಸಬೇಕು ಎಂಬ ಕಾರಣಕ್ಕೆ ಹೆಚ್ಚುವರಿ ತಿನ್ನಬೇಡಿ. ಯಾಕೆ ಬೇಕು, ಎಷ್ಟು ಬೇಕು ಎಂಬುದು ನಿಮಗೆ ಸರಿಯಾಗಿ ಗೊತ್ತಿರುವುದರಿಂದ ಅಷ್ನ್ನು ಮಾತ್ರ ಹೊಟ್ಟೆಗಿಳಿಸಿ. ಮುಗಿಸಬೇಕು ಎಂಬ ಒತ್ತಡಕ್ಕೆ ಕಟ್ಟುಬೀಳುವುದನ್ನು ಮಾಡಬೇಡಿ.
4. ಆರೋಗ್ಯಕರವಲ್ಲದ ತಿನಿಸುಗಳನ್ನು ಕಣ್ಣಿಗೆ ಮೊದಲು ಕಾಣುವಂತೆ ಇಡಬೇಡಿ. ಕಣ್ಣಿಗೆ ಕಾಣುವ ತಿಂಡಿಗಳು ಎಷ್ಟು ಆಕರ್ಷಿಸುತ್ತವೆಯೆಂದರೆ, ಅಗತ್ಯವಿಲ್ಲದಿದ್ದರೂ, ಮನೆಯೊಳಗೆ ಅತ್ತಿಂದಿತ್ತ, ಇತ್ತಿದತ್ತ ಸಂಚರಿಸುವಾಗಲೂ ಸುಮ್ಮನೆ ತಿನ್ನಲು ತೊಡಗುತ್ತೇವೆ. ಇದರಿಂದ ಅಗತ್ಯವಿಲ್ಲದಿದ್ದರೂ ಹಾಳುಮೂಳು ತಿಂಡಿ ಹೊಟ್ಟೆ ಸೇರುತ್ತದೆ. ಹಾಗಾಗಿ ಈ ಬಗ್ಗೆ ಜಾಗ್ರತೆಯಿರಲಿ.
5. ಹಬ್ಬ ಮುಗಿದ ಮೇಲೆ ಸರಿ ಮಾಡಿಕೊಂಡರಾಯಿತು ಎಂಬ ಯೋಚನೆಯಿಂದ ತಿನ್ನಬೇಡಿ. ಹಬ್ಬ ಮುಗಿದ ಮೇಲೆ ಕಡಿಮೆ ತಿನ್ನುತ್ತೇನೆ, ಡಯಟ್ ಮಾಡುತ್ತೇನೆ ಎಂದುಕೊಂಡರೆ ಅದು ಆಗದ ಕೆಲಸ. ಅದಕ್ಕಾಗಿ ಮೊದಲೇ ನಿಮ್ಮ ಮೇಲೆ ಕಡಿವಾಣವಿಡಿ. ಹಬ್ಬವೆಂದು ಕೇವಲ ಜಂಕ್, ಸಿಹಿತಿನಿಸನ್ನು ತಿನ್ನುವ ಮೊದಲು ಯೋಚಿಸಿ. ಇವುಗಳ ಜೊತೆಗೆ ಆರೋಗ್ಯಕರ ಶಿಸ್ತಿನ ಊಟದ ಅಭ್ಯಾಸವನ್ನೂ ಇಟ್ಟುಕೊಳ್ಳಿ. ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿ. ಸ್ವಪ್ರಯತ್ನವಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ನೆನಪಿಡಿ.
ಇದನ್ನೂ ಓದಿ: Ugadi 2023: ಯುಗಾದಿಯಂದು ಬೆಲ್ಲ ಮಾತ್ರವಲ್ಲ, ಬೇವನ್ನೂ ತಿನ್ನಲೇಬೇಕು. ಯಾಕೆಂದರೆ..