ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬದ ಸಡಗರ- ಸಂಭ್ರಮ ಹೆಚ್ಚಿಸುವ ನಾನಾ ಬಗೆಯ ಚಿಣ್ಣರ ಫ್ಯಾಷನ್‌ವೇರ್‌ಗಳು (Ugadi Kids Ethnicwear Fashion) ಟ್ರೆಡಿಷನಲ್ ಹಾಗೂ ಎಥ್ನಿಕ್ ಲುಕ್ ನೀಡುವ ಉಡುಗೆಗಳು ಫ್ಯಾಷನ್‌ಲೋಕ್ಕಕೆ ಲಗ್ಗೆ ಇಟ್ಟಿವೆ.
ಯಾವ್ಯಾವ ಟ್ರೆಡಿಷನಲ್‌ವೇರ್‌ಗಳು ಟ್ರೆಂಡ್‌ನಲ್ಲಿವೆ?
ಪುಟ್ಟ ಹುಡುಗಿಯರಿಗೆ ಮಿನಿ ಲಂಗ-ದಾವಣಿ, ರೆಡಿ ಸೀರೆ, ಉದ್ದ ಲಂಗ, ಲೆಹೆಂಗಾ, ಸ್ಕರ್ಟ್, ಎಥ್ನಿಕ್ ಲುಕ್ ನೀಡುವ ರೇಷ್ಮೆ ಫ್ರಾಕ್ ಹಾಗೂ ಮಿನಿ ಗೌನ್ ಆಗಮಿಸಿವೆ. ಇನ್ನು ಪುಟ್ಟ ಹುಡುಗರಿಗೆ ರೇಷ್ಮೆಯ ಶೆರ್ವಾನಿ, ಕುರ್ತಾ-ಪೈಜಾಮ, ಬಂದಗಾಲ ಕೋಟ್ ಸೆಟ್, ಪಂಚೆ-ಶರ್ಟ್ ಸೆಟ್ ಸೇರಿದಂತೆ ನಾನಾ ಬಗೆಯ ಎಥ್ನಿಕ್‌ವೇರ್‌ಗಳು ಟ್ರೆಂಡ್‌ನಲ್ಲಿವೆ ಹಾಗೂ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
“ಮಕ್ಕಳಿಗೆ ದೊಡ್ಡವರು ಧರಿಸುವಂತಹ ಮಿನಿ ಸೈಝ್‌ನ ಟ್ರೆಡಿಷನಲ್ ಉಡುಗೆಗಳು ಫ್ಯಾಷನ್ ಲೋಕದಲ್ಲಿ ಎಂಟ್ರಿ ನೀಡಿರುವುದು ಮಕ್ಕಳನ್ನು ಅಲಂಕರಿಸಲು ಸಹಕಾರಿಯಾಗಿದೆ. ಅದರಲ್ಲೂ ರೆಡಿಮೇಡ್ ಉಡುಗೆಗಳಲ್ಲಿ ಇವು ಬಂದಿರುವುದು ಡ್ರೆಸ್ ಸ್ಟಿಚ್ಚಿಂಗ್ ಮಾಡಿಸುವ ತಲೆಬಿಸಿ ಪೋಷಕರಿಗೆ ತಪ್ಪಿದೆ. ಮಕ್ಕಳಿಗೆ ಇವನ್ನು ಹಾಕಿದಾಗ ಮುದ್ದುಮುದ್ದಾಗಿ ಕಾಣಿಸುತ್ತವೆ. ಸಂತಸದ ವಿಚಾರ ಎಂದರೇ, ಎಲ್ಲಾ ವಯಸ್ಸಿನ ಮಕ್ಕಳಿಗೂ ಎಲ್ಲ ಸೈಝಿನಲ್ಲೂ ಇವು ದೊರೆಯುತ್ತವೆ” ಎನ್ನುತ್ತಾರೆ ಮಕ್ಕಳ ಉಡುಪುಗಳನ್ನು ಮಾರಾಟ ಮಾಡುವ ಶಾಪಿಂಗ್ ಸೆಂಟರ್‌ವೊಂದರ ಮ್ಯಾನೇಜರ್ ರಾಘವ್. ಅವರ ಪ್ರಕಾರ, ಯುಗಾದಿ ಹಬ್ಬಕ್ಕೆಂದೇ ಸಾಕಷ್ಟು ಡಿಸೈನ್‌ಗಳು ಮಕ್ಕಳ ಎಥ್ನಿಕ್‌ವೇರ್‌ಗಳು ಬಂದಿವೆ. ಊಹೆಗೂ ಮೀರಿದ ವಿನ್ಯಾಸದವು ಲಗ್ಗೆ ಇಟ್ಟಿವೆ ಎನ್ನುತ್ತಾರೆ.
ಚಿಣ್ಣರ ಎಥ್ನಿಕ್‌ವೇರ್ ಆಯ್ಕೆ ಹೀಗಿರಲಿ
ಚಿಣ್ಣರಿಗೆ ಉಡುಪುಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ದೊಡ್ಡದಿರಲಿ ಎಂದು ತೀರಾ ದೊಗಲೆಯಾಗುವಂತಹ ಡ್ರೆಸ್ ಖರೀದಿಸಬಾರದು. ನೋಡಲು ಆಕರ್ಷಕವಾಗಿದೆ ಎಂದು ದೇಹಕ್ಕೆ ಚುಚ್ಚುವ ಹಾಗೂ ಕಂಫರ್ಟಬಲ್ ಆಗದ ಔಟ್‌ಫಿಟ್ ಖರೀದಿಸಬಾರದು. ಸಾಫ್ಟ್ ಹಾಗೂ ಚರ್ಮಕ್ಕೆ ಹಿತವೆನಿಸುವ ಉಡುಪುಗಳ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಮಕ್ಕಳು ಧರಿಸದೇ ಹೋಗಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ.
ವೆರೈಟಿ ಚಿಣ್ಣರ ಎಥ್ನಿಕ್‌ವೇರ್ ಕೊಳ್ಳುವ ಮುನ್ನ
- ಬೀಡ್ಸ್ ಹಾಗೂ ಮಣಿಗಳಿರುವ ತೀರಾ ಗ್ರ್ಯಾಂಡ್ ಇರುವಂತಹ ವಾಶ್ ಮಾಡಲಾಗದಂತಹ ಎಥ್ನಿಕ್ ಡಿಸೈನರ್ವೇರ್ ಕೊಳ್ಳಬೇಡಿ.
- ನಿರ್ವಹಣೆ ಸುಲಭವಿರುವಂತಹ ಡಿಸೈನರ್ವೇರ್ ಆಯ್ಕೆ ಮಾಡಿ.
- ಮಕ್ಕಳಿಗೆ ನಡೆದಾಡಲು ಹಾಗೂ ಆಟವಾಡಲು ಕಂಫರ್ಟಬಲ್ ಆಗಿರುವಂತದ್ದನ್ನು ಕೊಳ್ಳಿ..
- ಟ್ರೆಂಡ್ ಹೆಸರಲ್ಲಿ ಮಕ್ಕಳಿಗೆ ಕಿರಿಕಿರಿಯೆನಿಸುವಂತಹ ಉಡುಪನ್ನು ಖರೀದಿಸಬೇಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Saree Fashion: ಯುಗಾದಿ ಸಂಭ್ರಮಕ್ಕೆ ಬಂತು ಪ್ರಿಂಟೆಡ್ ಶೈನಿಂಗ್ ರೇಷ್ಮೆ ಸೀರೆಗಳು