ಶಾಲಾ ಜೀವನ ಎಲ್ಲರ ಬದುಕಿನಲ್ಲಿ ಬಂದುಹೋಗುವ ಬೆಳವಣಿಗೆಯ ಅಧ್ಯಾಯ. ನಮ್ಮ ಬದುಕಿಗೆ ಹಾಕುವ ತಳಪಾಯ ಅದು. ಅದು ಗಟ್ಟಿಯಾದರೆ, ಬದುಕೆಂಬ ಕಟ್ಟಡ ಅಲ್ಲಾಡದೆ ಸದೃಢವಾಗಿ ನಿಲ್ಲುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವುದೇ. ಆದರೂ ಶಾಲಾ ಶಿಕ್ಷಣದ ಸಂದರ್ಭ ಬದುಕಿಗೆ ನಿಜವಾಗಿ ಬೇಕಾದ ಎಲ್ಲ ಅಂಶಗಳೂ ಸಿಗುವುದಿಲ್ಲ. ಬಹಳಷ್ಟನ್ನು ನಂತರ ನಾವು ಕಲಿತುಕೊಳ್ಳಬೇಕಾಗುತ್ತದೆ. ಶಾಲೆಯಲ್ಲಿ ಡಿಸ್ಟಿಂಕ್ಷನ್ ಪಡೆದವರು ಬದುಕಿನಲ್ಲಿ ಫೇಲ್ ಕೂಡಾ ಆಗುವುದುಂಟು. ಹಾಗೆಯೇ ಉತ್ತಮ ಅಂಕ ಗಳಿಸದವರು ಬದುಕಿನಲ್ಲಿ ಯಾರೂ ಮಾಡದ ಸಾಧನೆಯನ್ನೂ ಮಾಡುವುದುಂಟು. ಹಾಗಾದರೆ, ಈ ಶಾಲಾ ಶಿಕ್ಷಣದ ನಿಜವಾದ ಮರ್ಮ ಏನು? ಪುಸ್ತಕದ ಬದನೆಕಾಯಿಯಿಂದ ಬದುಕಿನಲ್ಲಿ ಸಾಂಬಾರ್ ಮಾಡಲಿಕ್ಕೆ ಸಾಧ್ಯವಿಲ್ಲ ಎಂಬ ವಾದಗಳು ಇದ್ದರೂ ಶಿಕ್ಷಣವೆಂಬುದು ಬದುಕಿಗೆ ಬೇಕೇ ಬೇಕು ಎಂಬುದು ಅಪ್ಪಟ ಸತ್ಯ. ಹಾಗೆಯೇ ಶಿಕ್ಷಣದ ಕ್ರಮವೂ ಕಾಲಕಾಲಕ್ಕೆ ಅಪ್‌ಗ್ರೇಡ್ ಆಗಲೇಬೇಕಾಗಿರುವುದೂ ಅಷ್ಟೇ ನಿಜ.
ಈ ಸತ್ಯಕ್ಕೆ ಪೂರಕವಾಗಿ ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಈಗ ಒಂದು ಪ್ರಶ್ನೆಯನ್ನು ಟ್ವಿಟರಿನಲ್ಲಿ ಎಲ್ಲರ ಮುಂದಿಟ್ಟಿದ್ದಾರೆ. ಯಾವ ಒಂದು ಶಿಕ್ಷಣ ನಿಮಗೆ ಶಾಲೆಯಲ್ಲಿ ಇರಬೇಕಾಗಿತ್ತು ಎಂದೆನಿಸುತ್ತದೆ ಎಂಬ ಪ್ರಶ್ನೆಯನ್ನು ಇವರು ಪೋಸ್ಟ್ ಮಾಡಿದ್ದು, ಇದಕ್ಕೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಎಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಂಡು ಶಾಲೆಗಳಲ್ಲಿ ಎಂಥ ಶಿಕ್ಷಣ ನಮಗೆ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂಬ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ವಿಶೇಷವೆಂದರೆ, ಹಲವರು ಒಂದೇ ಬಗೆಯ ಉತ್ತರಗಳನ್ನು ಕೊಟ್ಟಿರುವುದು.
ಬಹಳಷ್ಟು ಮಂದಿಗೆ ಹಣಕಾಸಿನ ವಿಚಾರವೇ ಹೆಚ್ಚು ಪ್ರಮುಖವೆಂದು ಅನಿಸಿದೆ. ʻಆರ್ಥಿಕ ವಿಷಯಗಳು ಶಾಲಾ ಪಠ್ಯದಲ್ಲಿಲ್ಲ. ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಸಣ್ಣವರಿದ್ದಾಗಿಂದಲೇ ಅಗತ್ಯವಿತ್ತುʼ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರೂ ಕೂಡಾ, ಇದೇ ವಿಚಾರವನ್ನು ಎತ್ತಿ ಹಿಡಿದಿದ್ದಾರೆ. ʻಹಣಕಾಸಿನ ವಿಚಾರಗಳು ಶಾಲೆಯಲ್ಲಿ ಪಠ್ಯವಾಗಿ ಯಾಕೆ ಇಂದಿಗೂ ಪರಿಗಣಿಸುತ್ತಿಲ್ಲ ಎಂಬುದೇ ದೊಡ್ಡ ಆಶ್ಚರ್ಯ. ನಿಜವಾಗಿ ಜೀವನಕ್ಕೆ ಬೇಕಾದ ಶಿಕ್ಷಣಗಳಲ್ಲಿ ಇದು ಪ್ರಮುಖವಾದದ್ದುʼ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ʻಚಿಕ್ಕ ವಯಸ್ಸಿನಲ್ಲಿಯೇ ಉಳಿತಾಯ ಹೇಗೆ ಮಾಡುವುದು ಎಂಬ ವಿಚಾರದಲ್ಲಿ ಶಿಕ್ಷಣ ಬೇಕಿತ್ತುʼ ಎಂದೂ ಮತ್ತೊಬ್ಬರು ಉತ್ತರಿಸಿದ್ದಾರೆ. ʻಹಣಕಾಸಿನ ಮಹತ್ವ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಅಗತ್ಯವಾಗಿ ತಿಳುವಳಿಕೆಯನ್ನು ಎಳವೆಯಲ್ಲಿಯೇ ನೀಡಬೇಕಿತ್ತುʼ ಎಂದಿದ್ದಾರೆ.
ʻಹಣಕಾಸು ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲು ಶಿಕ್ಷಣದ ಅಗತ್ಯವಿದೆ. ಪ್ರತಿಯೊಬ್ಬರ ಭವ್ಯ ಭವಿಷ್ಯ ಹಾಗೂ ವೃತ್ತಿ ಇವೆರಡಕ್ಕೂ ಅಗತ್ಯವಾಗಿ ಬೇಕಾಗಿರುವುದು ಹಣಕಾಸು ನಿರ್ವಹಣೆ. ಹಾಗಾಗಿ ಇವುಗಳ ಶಿಕ್ಷಣ ಶಾಲಾ ವ್ಯವಸ್ಥೆಯಲ್ಲಿ ಮೊದಲೇ ನಮಗೆ ಸಿಕ್ಕಿರಬೇಕಿತ್ತು ಅನಿಸುತ್ತಿದೆʼ ಎಂದೂ ಕಮೆಂಟಿಸಿದ್ದಾರೆ.
ಇನ್ನೂ ಕೆಲವರಿಗೆ ತಮಗೆ ಇಂಗ್ಲೀಷ್ ಸಂವಹನಕ್ಕೆ ಹೆಚ್ಚಿನ ಒತ್ತು ನೀಡಿದರೆ ಒಳ್ಳೆಯದಿತ್ತೆಂದು ಅನಿಸಿದೆ. ಮತ್ತೊಂದಿಷ್ಟು ಮಂದಿ, ಮಾನಸಿಕ ಆರೋಗ್ಯದ ಬಗ್ಗೆ ಶಾಲೆಯಲ್ಲಿ ಶಿಕ್ಷಣ ಸಿಗಲಿಲ್ಲ ಅನಿಸಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿರುವ ವೃತ್ತಿ ಸಂಬಂಧೀ ಒತ್ತಡಗಳು ಹಾಗೂ ಕೌಟುಂಬಿಕ ಒತ್ತಡಗಳಿಂದ ಹೊರಬರಲು, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಶಿಕ್ಷಣ ನೀಡಬೇಕಾಗಿತ್ತು ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲೀಷ್‌ಗಳಂತೆಯೇ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಬಹು ಅಗತ್ಯವಾದ ವಿಷಯ. ಈ ಶಿಕ್ಷಣ ಎಲ್ಲರಿಗೂ ಸಿಕ್ಕಿದ್ದಿದ್ದರೆ ಒಳ್ಳೆಯದಿತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ.
ಕೆಲವರಂತೂ ಇಡೀ ಲಿಸ್ಟನ್ನೇ ಪೋಸ್ಟ್ ಮಾಡಿದ್ದಾರೆ. ಆರ್ಥಿಕ ಸ್ವಾವಲಂಬನೆಯಿಂದ ಹಿಡಿದು ಕಂಪ್ಯೂಟರ್ ಕೌಶಲ್ಯದವರೆಗೆ ತನಗೆ ಸಿಗಬೇಕಾಗಿತ್ತದೆಂದು ಬಯಸುವ ಎಲ್ಲ ಶಿಕ್ಷಣಗಳ ಲಿಸ್ಟನ್ನು ಇವರು ಬರೆದುಕೊಂಡಿದ್ದಾರೆ. ಕೆಲವರು, ʻತಮಗೆ ಶಾಲಾ ಪಠ್ಯದಲ್ಲಿ ಕೊಟ್ಟ ಜ್ಞಾನದಿಂದ ಜೀವನಕ್ಕೇನೂ ಉಪಯೋಗವಾಗಿಲ್ಲʼ ಎಂದೂ ಹೇಳಿದ್ದಾರೆ.
ʻಶಾಲೆಯ ಪಠ್ಯದಲ್ಲಿ ಇಂಥದ್ದನ್ನೇ ಓದು ಎಂದು ಹೇಳುವ ಬದಲು ನನ್ನ ನಿಜವಾದ ಆಸಕ್ತಿಗಳಿಗಾದರೂ ನೀರೆರೆಯುತ್ತಿದ್ದರೆ!ʼ ಎಂದು ಒಬ್ಬರು ಚಿಂತನಾರ್ಹ ಮಾತುಗಳನ್ನೂ ಹೇಳಿದ್ದಾರೆ. ಒಟ್ಟಾರೆಯಾಗಿ, ಪಠ್ಯ ಪರಿಷ್ಕರಣೆಯ ಸಂದರ್ಭ ಸಾರ್ವಜನಿಕರ ಈ ಅಮೂಲ್ಯ ಸಲಹೆಗಳು ಉಪಯೋಗಕ್ಕೆ ಬರಬಹುದು!