ಬೆಂಗಳೂರು: ʻʻನಮ್ಮ ಪರಿಸರದಲ್ಲೇ ವೈದ್ಯರಿದ್ದಾರೆ, ಸೂರ್ಯನ ಬೆಳಕು, ಹಿತಮಿತ ಆಹಾರ, ವ್ಯಾಯಾಮ, ಆತ್ಮವಿಶ್ವಾಸ, ನಗು. ಈಗ ಈ ಸಾಲಿಗೆ ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಕೂಡ ಸೇರಿಸಬಹುದು,”- ಹೀಗೆಂದರು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹೊಸ ಯೂ ಟ್ಯೂಬ್ ಚಾನೆಲ್ ವಿಸ್ತಾರ ಹೆಲ್ತ್ (Vistara Health) ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ತಮ್ಮ ಮಾತಿನದುದ್ದಕ್ಕೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಲೇ ವಿಸ್ತಾರ ಹೆಲ್ತ್ ಚಾನೆಲ್ ಯಾವ ರೀತಿಯಲ್ಲಿದ್ದರೆ ಚೆನ್ನ, ಏನೆಲ್ಲ ಕಾರ್ಯಕ್ರಮಗಳು ಇರಬೇಕು, ಯಾವೆಲ್ಲ ಮಾಹಿತಿಯನ್ನು ನೀಡಬಹುದು ಎಂದು ತಮ್ಮ ಅನುಭವದ ಮೂಲಕ ಕಂಡುಕೊಂಡ ಸಲಹೆಗಳು, ಸೂಚನೆಗಳನ್ನು ನೀಡಿದರು.
“ವಿಸ್ತಾರ ಮೀಡಿಯಾ ಸಂಸ್ಥೆಯು ಹೆಲ್ತ್ ಯುಟ್ಯೂಬ್ ಚಾನೆಲ್ ಆರಂಭಿಸಿರುವುದು ಉತ್ತಮ ನಿರ್ಧಾರವಾಗಿದೆ. ನಾವು-ನೀವು ಸಾರ್ವಜನಿಕವಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇವೆ. ಹಾಗಾಗಿ, ನಮ್ಮ ಸಂಸ್ಥೆಯಿಂದ ಯಾವುದೇ ರೀತಿಯ ಸಹಾಯ ಮತ್ತು ಸಹಕಾರ ನೀಡಲು ಸಿದ್ಧ” ಎಂದು ತಿಳಿಸಿದರು.
ಆರೋಗ್ಯದ ಗುಟ್ಟು ರಟ್ಟು
ನಾವೆಲ್ಲರೂ ನಗು ನಗುತ್ತ ಇರಬೇಕು. ನಗು ಕೂಡ ಔಷಧ. ಉತ್ತಮ ಗೆಳೆತನವೂ ನಮ್ಮನ್ನು ಆರೋಗ್ಯದಿಂದ ಇಡಬಲ್ಲದು. ನಡೆಯುವುದು, ನಗುವುದು, ಉತ್ತಮ ನಿದ್ದೆ, ತರಕಾರಿ, ಹಣ್ಣು, ಸಂತೃಪ್ತಿ ಭಾವಗಳೆಲ್ಲವೂ ನಮ್ಮ ಆರೋಗ್ಯವನ್ನು ಹೆಚ್ಚಿಸುವ ಗುಟ್ಟುಗಳು ಎಂದು ಹೇಳಿದರು.
ಗೋಡೆ ಕಟ್ಟದಿರಲಿ
“ನಾವೆಲ್ಲರೂ ಸೋಷಿಯಲ್ ಮೀಡಿಯಾದ ಯುಗದಲ್ಲಿದ್ದೇವೆ. ಬಹಳಷ್ಟು ಜನರು ತಲುಪಲು ಈ ಮೀಡಿಯಾ ನೆರವು ನೀಡುತ್ತಿದೆ ಎನ್ನುವುದು ನಿಜ. ಸೋಷಿಯಲ್ ಮೀಡಿಯಾಗಳು ಜನರನ್ನು ಬೆಸೆಯುವ ಸೇತುವೆಗಳಾಗಬೇಕು. ಆದರೆ, ಗೋಡೆಗಳನ್ನು ನಿರ್ಮಿಸುತ್ತಿರುವುದು ವಿಪರ್ಯಾಸ. ಇವುಗಳಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ, ವಿಸ್ತಾರ ಹೆಲ್ತ್ ಚಾನೆಲ್ ನಿಖರವಾದ ಮತ್ತು ವೈಜ್ಞಾನಿಕವಾದ ಆರೋಗ್ಯ ಮಾಹಿತಿಯನ್ನು ನೀಡಲಿ” ಎಂದು ಮಂಜನಾಥ್ ಅವರು ಆಶಿಸಿದರು.
ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಏಕೆ?
ಆರೋಗ್ಯವೇ ಸಂಪತ್ತು. ಆರೋಗ್ಯವೇ ಭಾಗ್ಯ ಅನ್ನುವ ಮಾತಿದೆ. ಅದೇ ರೀತಿ ಯಾರೇ ಆಗಲಿ, ಆರೋಗ್ಯವಾಗಿ ಇದ್ದರೆ ಮಾತ್ರವೇ ಜೀವನ. ಆದರೆ, ಬ್ಯುಸಿ ಲೈಫ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನೇ ಜನ ಮರೆತು ಬಿಡುತ್ತಾರೆ. ಆ ಸಣ್ಣ ನಿರ್ಲಕ್ಷ್ಯವೇ ಮುಂದೆ ಪ್ರಾಣಕ್ಕೆ ಕುತ್ತು ತಂದು ಬಿಡುತ್ತದೆ. ಹೀಗಾಗಿ, ಪ್ರತಿಯೊಬ್ಬರ ಆರೋಗ್ಯಕ್ಕೂ ಅನುಕೂಲವಾಗಲೆಂದು, ಆರೋಗ್ಯದಿಂದಿರಲು ದಾರಿ ತೋರಿಸಲೆಂದು ವಿಸ್ತಾರ ಮೀಡಿಯಾದ ಹೆಲ್ತ್ ಯುಟ್ಯೂಬ್ ಚಾನೆಲ್ ರೂಪಿಸಲಾಗಿದೆ. ಸ್ವಲ್ಪ ನಿರ್ಲಕ್ಷಿಸಿದರೂ ಎಂಥ ದೊಡ್ದ ಸಮಸ್ಯೆ ಅನುಭವಿಸಬೇಕಾಗುತ್ತದೆ ಹಾಗೂ ಆರೋಗ್ಯದ ಕಾಳಜಿಯ ಅಗತ್ಯವೇನು ಎಂಬ ಈ ಚಾನೆಲ್‌ನಲ್ಲಿ ನಾವು ನಿಯಮಿತವಾಗಿ ಮಾಹಿತಿ ನೀಡುತ್ತೇವೆ.
ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಅವರು ಮಹತ್ವದ ಸಲಹೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ. ಕೇವಲ ಮಾಹಿತಿ ಮಾತ್ರವಲ್ಲದೇ ವೀಕ್ಷಕರನ್ನು ಸರ್ವರೀತಿಯಲ್ಲೂ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್‌ನ ಮುಖ್ಯ ಧ್ಯೇಯವಾಗಿದೆ.
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗಿನವರಿಗೆ ಅಗತ್ಯವಾಗಿರುವ ಆರೋಗ್ಯ ಕಾಳಜಿಗಳು, ಔಷಧೋಪಚಾರಗಳು, ಟಿಪ್ಸ್ ಇತ್ಯಾದಿ ಮಾಹಿತಿಯನ್ನು ನೀವು ಚಾನೆಲ್‌ನಿಂದ ಪಡೆದುಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಆಯಾ ಋತುಗಳಿಗೆ ಅನುಗುಣವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಂಗತಿಗಳನ್ನು ತಿಳಿಸಲಾಗುತ್ತದೆ. ಒಟ್ಟಿನಲ್ಲಿ ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ನಿಮ್ಮ ಆರೋಗ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಆರೋಗ್ಯ ಕ್ಷೇತ್ರದಲ್ಲಾಗುತ್ತಿರುವ ಹೊಸ ಸಂಶೋಧನೆಗಳು, ಕಾಡುವ ಬಾಧೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಅಂಗೈನಲ್ಲಿ ಒದಗಿಸಲಿದೆ. ನಿಜಾರ್ಥದಲ್ಲಿ ವಿಸ್ತಾರ ಹೆಲ್ತ್ ಚಾನೆಲ್ ನಿಮ್ಮ ಡಾಕ್ಟರ್ ಆಗಿರಲಿದೆ!
ಇದನ್ನೂ ಓದಿ | ವಿಶ್ವಾಸಾರ್ಹ ಆರೋಗ್ಯ ಜಾಗೃತಿಗಾಗಿ ವಿಸ್ತಾರ ಹೆಲ್ತ್ ಚಾನೆಲ್: ಹರಿಪ್ರಕಾಶ್ ಕೋಣೆಮನೆ