Site icon Vistara News

Valentine’s Day 2024 : ಫೆಬ್ರುವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಯಾಕೆ? ಅದರ ಮಹತ್ವವೇನು?

Valentine's Day

ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಅಥವಾ ಸೇಂಟ್ ವ್ಯಾಲೆಂಟೈನ್ ಹಬ್ಬ ಎಂದೂ ಕರೆಯಲ್ಪಡುವ ಪ್ರೇಮಿಗಳ ದಿನವನ್ನು ಪ್ರತಿವರ್ಷ ಫೆಬ್ರವರಿ 14ರಂದು (Valentine’s Day 2024 ) ಆಚರಿಸಲಾಗುತ್ತದೆ. ಆದರೆ ಪ್ರೀತಿಯ ಹಬ್ಬ ಫೆಬ್ರವರಿ 7ಕ್ಕೆ ಅಂದರೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಈ ಎಲ್ಲ ದಿನಗಳಂದು ಪ್ರೇಮಿಗಳು ಶುಭಾಶಯ ಗ್ರೀಟಿಂಗ್ಸ್​​ ಕಾರ್ಡ್ ಗಳು (Greeting Cards) ಮತ್ತು ಗುಲಾಬಿ ಹೂವುಗಳನ್ನು (Roses) ಪರಸ್ಪರ ಹಂಚಿಕೊಳ್ಳುತ್ತಾರೆ. ಅಲ್ಲದೆ, ಪರಸ್ಪರ ಪ್ರೀತಿಯನ್ನು ಅಭಿವ್ಯಕ್ತಿಸಲು ವಿಶೇಷ ಸಮಯವನ್ನು ಮೀಸಲಿಡುತ್ತಾರೆ.

ಪ್ರಸ್ತಕ ವರ್ಷ ಪ್ರೇಮಿಗಳ ದಿನ ಫೆಬ್ರವರಿ 14ರ ಪ್ರೇಮಿಗಳ ದಿನ ಬುಧವಾರದಂದು ಬರುತ್ತದೆ. ಆದಾಗ್ಯೂ, ಪ್ರೇಮಿಗಳ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. “ವ್ಯಾಲೆಂಟೈನ್ಸ್ ಡೇ ವೀಕ್” (Valentine’s Day week) ಎಂದು ಇಡೀ ವಾರದವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, “ಲವ್ ವೀಕ್” ಅಥವಾ ” ರೊಮ್ಯಾನ್ಸ್​ ವೀಕ್​” ಎಂದೂ ಕರೆಯಲ್ಪಡುವ ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7ರಂದು ಪ್ರಾರಂಭಗೊಂಡಿದೆ. ಇದನ್ನು ಫೆಬ್ರವರಿ 14 ರ ಕೊನೆಯ ವ್ಯಾಲೆಂಟೈನ್ ಡೇ ತನಕ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಅನ್ನು ಆಚರಿಸಿದ್ದಾರೆ.

ಫೆಬ್ರವರಿ 14ರಂದೇ ಪ್ರೇಮಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ?

ಪ್ರತಿ ವರ್ಷ ಪ್ರೇಮಿಗಳ ದಿನವನ್ನು ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನವು ವ್ಯಕ್ತಿಯಿಂದ ವ್ಯಕ್ತಿಗೆ ಹಂಚಿಕೊಳ್ಳುವ ಅತ್ಯಂತ ಸುಂದರವಾದ ಭಾವನೆಯಾದ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅನುಭವಿಸಲು ಮೀಸಲಾಗಿದೆ. ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ಇದೇ ದಿನ ಯಾಕೆ ಎಂಬುದು ಎಲ್ಲರ ಪ್ರಶ್ನೆ. ಆದರೆ ಅದಕ್ಕೊಂದು ಹಿನ್ನೆಲೆಯಿದೆ. ಆದರೆ, ಈ ಬಗ್ಗೆ ಹಲವಾರು ಕತೆಗಳನ್ನು ಹೇಳಲಾಗುತ್ತದೆ.

ಕ್ರಿ.ಶ. 14, 270 ರಂದು ನಿಧನರಾದ ಮೂರನೇ ಶತಮಾನದ ರೋಮನ್ ಕ್ಯಾಥೊಲಿಕ್ ಪಾದ್ರಿ ಸೇಂಟ್ ವ್ಯಾಲೆಂಟೈನ್ ಅವರ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆ ಪ್ರಕಾರ ರೋಮ್​ನಲ್ಲಿ ಲುಪರ್ಕಾಲಿಯಾ ಎಂಬ ಆಚರಣೆಯೊಂದಿತ್ತು. ಇಲ್ಲಿ ಪುರುಷ ಮತ್ತು ಮಹಿಳೆಯನ್ನು ಲಾಟರಿ ಎತ್ತುವ ಮೂಲಕ ಜೋಡಿ ಮಾಡಲಾಗುತ್ತಿತ್ತು. ಇವುಗಳಲ್ಲಿ ಕೆಲವು ಮದುವೆಯಲ್ಲಿ ಕೊನೆಗೊಳ್ಳುತ್ತಿತ್ತು. ಪೋಪ್‌ ಗೆಲಾಸಿಯಸ್‌ 1 ಈ ಹಬ್ಬವನ್ನು ವ್ಯಾಲೆಂಟೈನ್ಸ್‌ ಆಗಿ ಬದಲಿಸಿದರು ಎಂದು ಹೇಳಲಾಗುತ್ತದೆ. ಈ ಕಥೆಯ ಪ್ರಕಾರ 14ನೇ ಶತಮಾನದ ಅವಧಿಯಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆ ಶುರುವಾಯಿತು.

ಇನ್ನೊಂದು ಕತೆಯ ಪ್ರಕಾರ ರೋಮ್‌ ದೇಶದ ದೊರೆ ಕ್ಲಾಡಿಯಸ್ II ತನ್ನ ಸೈನಿಕರು ಯಾರೂ ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದ. ಅಂತಹ ಸಮಯದಲ್ಲಿ ರಾಜನನ್ನೇ ಎದುರು ಹಾಕಿಕೊಂಡ ಸೇಂಟ್‌ ವ್ಯಾಲೆಂಟೈನ್‌ ಗುಟ್ಟಾಗಿ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದರು. ಸೈನಿಕರ ಬದುಕಿನಲ್ಲೂ ಪ್ರೇಮ ಮೂಡುವಂತೆ ಮಾಡುತ್ತಿದ್ದರು. ಇದನ್ನು ತಿಳಿದ ರಾಜ ಕ್ಲಾಡಿಯಸ್‌ ವಾಲೈಂಟೈನ್‌ ಅವರನ್ನು ಫೆ. 14 ರಂದು ಗಲ್ಲಿಗೇರಿಸುತ್ತಾನೆ. ಆ ದಿನದಿಂದ ಪ್ರೇಮಿಗಳ ದಿನ ಆಚರಣೆಗೆ ಬಂತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Valentines Day: ಕೇಳಿ ಪ್ರೇಮಿಗಳೇ, ಇಲ್ಲಿದೆ ಗುಡ್‌ನ್ಯೂಸ್! ಈ ವಾರ ಪ್ರತಿದಿನವೂ ಪ್ರೇಮಿಗಳ ಹಬ್ಬವೇ!

ವ್ಯಾಲೆಂಟೈನ್ಸ್‌ ಡೇ ಎಂಬುದು ಪ್ರೀತಿಯ ದೇವತೆ ಕ್ಯುಪಿಡ್‌ನಿಂದಲೂ ಬಂದಿದೆ ಎನ್ನಲಾಗುತ್ತದೆ. ರೋಮನ್‌ ಪುರಾಣದ ಪ್ರಕಾರ ಕ್ಯುಪಿಡ್‌ ಶುಕ್ರನ ಮಗ. ಇವನು ಪ್ರೀತಿ ಹಾಗೂ ಸೌಂದರ್ಯದ ದೇವತೆ . ಕ್ಯುಪಿಡ್‌ ಬಿಡುವ ಬಾಣ ಹೃದಯಕ್ಕೆ ನಾಟಿದರೆ ಪ್ರೀತಿ ಬಿತ್ತುತ್ತದೆಹೀಗಾಗಿ ಈ ದೇವತೆಯ ಹೆಸರಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ.

ಟೀಕೆಯೂ ಎದುರಾಗುತ್ತದೆ

ಕೃಷಿಯ ದೇವರಾದ ಫೌನಸ್, ರೋಮುಲಸ್ ಮತ್ತು ರೋಮ್​​ನ ಸ್ಥಾಪಕರಾದ ರೆಮಸ್​​ಗೆ ಸಮರ್ಪಿತವಾದ ರೋಮನ್ ಹಬ್ಬವಾದ ಲುಪರ್ಕಾಲಿಯಾ ರಜಾದಿನವನ್ನು ‘ಕ್ರಿಶ್ಚಿಯನೀಕರಣ’ ಮಾಡುವ ಚರ್ಚ್​​ನ ಪ್ರಯತ್ನವಾಗಿ ಈ ಆಚರಣೆ ಹುಟ್ಟಿಕೊಂಡವು ಎಂಬ ವಾದವೂ ಇದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ ಎಂದೂ ಆರೋಪಿಸುತ್ತಾರೆ.

ಪ್ರೇಮಿಗಳ ದಿನ ಯುವ ಜೋಡಿಗೆ ಮಾತ್ರ ಸೀಮಿತವೇ?

ಜನಪ್ರಿಯ ಸಂಸ್ಕೃತಿಯು ಪ್ರೇಮಿಗಳ ದಿನವು ಪ್ರೀತಿಯಲ್ಲಿ ಬಿದ್ದಿರುವ ಯುವ ಜೋಡಿಗೆ ಮಾತ್ರ ಎಂದು ನಂಬುವಂತೆ ಮಾಡುತ್ತದೆ. ಇದು ಪ್ರೀತಿಯ ದಿನ ಮತ್ತು ಆ ಪ್ರೀತಿ ಯಾರೊಂದಿಗ ಇದ್ದರೂ ವ್ಯಕ್ತಪಡಿಸಬಹುದು. ಎಲ್ಲಾ ರೀತಿಯ ಪ್ರೀತಿಯನ್ನು ಆಚರಿಸಬೇಕು; ಅದು ನಿಮ್ಮ ಹೆತ್ತವರು, ನಿಮ್ಮ ಒಡಹುಟ್ಟಿದವರು ಅಥವಾ ನಿಮ್ಮ ಮಕ್ಕಳು ಯಾರೂ ಇರಬಹುದು ಎಂದು ಹೇಳಲಾಗುತ್ತದೆ.

ಪ್ರೇಮಿಗಳ ವಾರದ ವಿವರ ಇಲ್ಲಿದೆ

ದಿನ 1: ರೋಸ್ ಡೇ, ಫೆಬ್ರವರಿ 7
ರೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೊದಲ ದಿನವಾಗಿದ್ದು ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ದಿನ ಇಬ್ಬರು ಪ್ರೇಮಿಗಳು ಪರಸ್ಪರ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ದಿನ 2: ಪ್ರಪೋಸ್ ಡೇ, ಫೆಬ್ರವರಿ 8
ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಎರಡನೇ ದಿನವಾಗಿದೆ. ಇದನ್ನು ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಪ್ರೇಮಿಗಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಪ್ರೀತಿಯನ್ನು ನಿವೇದಿಸುತ್ತಾರೆ.

ದಿನ 3: ಚಾಕೊಲೇಟ್ ಡೇ, ಫೆಬ್ರವರಿ 9
ಚಾಕೊಲೇಟ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೂರನೇ ದಿನ. ಪ್ರೀತಿ ನಿವೇದನೆಯಲ್ಲಿ ಯಶಸ್ವಿ ಆದರೂ ಆಗದಿದ್ದರೂ ಪ್ರೇಮಿಗಳು ಚಾಕೊಲೆಟ್ ಪೆಟ್ಟಿಯೊಂದಿಗೆ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾರೆ.

ದಿನ 4: ಟೆಡ್ಡಿ ಡೇ, ಫೆಬ್ರವರಿ 10
ಟೆಡ್ಡಿ ಡೇ ವ್ಯಾಲೆಂಟೈನ್ಸ್ ಡೇ ವಾರದ ನಾಲ್ಕನೇ ದಿನ; ಇದನ್ನು ಫೆಬ್ರವರಿ 10ರಂದು ಆಚರಿಸಲಾಗುತ್ತದೆ. ಪ್ರಿಯತಮ ಟೆಡ್ಡಿಯನ್ನು (ಬೊಂಬೆಯನ್ನು) ಪ್ರಿಯತಮೆಗೆ ನೀಡುವ ದಿನ. ಅದನ್ನು ಆಕೆ ಜೀವನಪರ್ಯಂತ ಇಟ್ಟುಕೊಳ್ಳುವಂತೆ ಕೇಳಿಕೊಳ್ಳಬಹುದು.

ದಿನ 5: ಪ್ರಾಮಿಸ್ ಡೇ, ಫೆಬ್ರವರಿ 11
ಫೆಬ್ರವರಿ 11ರಂದು, ಪ್ರೇಮಿಗಳು ಕಷ್ಟ ಮತ್ತು ಸುಖದ ಕಾಲದಲ್ಲಿ ಜತೆಯಾಗಿಯೇ ಇರುತ್ತೇವೆ ಎಂಬುದನ್ನು ಪರಸ್ಪರ ಪ್ರಮಾಣ ಮಾಡುತ್ತಾರೆ.

ದಿನ 6: ಅಪ್ಪುಗೆ ದಿನ, ಫೆಬ್ರವರಿ 12
ವ್ಯಾಲೆಂಟೈನ್ಸ್ ವೀಕ್ ನ ಆರನೇ ದಿನ ಅಪ್ಪುಗೆ ದಿನ. ಈ ದಿನ, ಜನರು ತಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಪ್ರೀತಿಸುವವರನ್ನು ತಬ್ಬಿಕೊಳ್ಳುವುದು ತುಂಬಾ ಸಂತೋಷದ ಕ್ಷಣವೆಂದು ಹೇಳಲಾಗುತ್ತದೆ.

ದಿನ 7: ಕಿಸ್ ಡೇ, ಫೆಬ್ರವರಿ 13
ವ್ಯಾಲೆಂಟೈನ್ಸ್ ವೀಕ್ ನ ಏಳನೇ ದಿನವನ್ನು “ಕಿಸ್ ಡೇ” ಎಂದು ಆಚರಿಸಲಾಗುತ್ತದೆ. ಕಿಸ್ ಡೇ ದಿನ ಪ್ರೀಮಿಗಳು ಪರಸ್ಪರ ಚುಂಬಿಸುತ್ತಾರೆ.

Exit mobile version