ಈ ಕೊರೋನಾ ಬಂದ ಮೇಲೆ ಪ್ರಪಂಚ ಸಾಕಷ್ಟು ಬದಲಾಗಿದೆ. ಲಾಕ್‌ಡೌನ್ ಅಂತ ಘೋಷಿಸಿದ್ದೇ ತಡ, ಪ್ರಪಂಚವಿಡೀ ವರ್ಕ್ ಫ್ರಂ ಹೋಂ ಆಗಿ ಬದಲಾಗಿದ್ದು ಗೊತ್ತೇ ಇದೆ. ಪರಿಸ್ಥಿತಿ ನಿಧಾನವಾಗಿ ಬದಲಾಗಿ ಮರಳಿ ವಾಸ್ತವಕ್ಕೆ ಬರುತ್ತಿದೆ. ಆದರೂ ಕೊರೋನಾ ಕಾಲಘಟ್ಟದಲ್ಲಿ ವರ್ಕ್ ಫ್ರಂ ಹೋಂಗೆ ಒಗ್ಗಿಹೋದ ಹಲವಾರು ಸಂಸ್ಥೆಗಳು ಇಂದಿಗೂ ಅದೇ ಮಾದರಿಯನ್ನೇ ಮುಂದುವರಿಸಿವೆ. ಇನೂ ಕೆಲವೆಡೆ, ವರ್ಕ್ ಫ್ರಂ ಹೋಂಗೆ ಒಗ್ಗಿ ಹೋದ ಮಂದಿ, ಮತ್ತೆ ಆರಂಭವಾದ ಕಚೇರಿ ಸಮಯಕ್ಕೆ ಮರಳಲಾಗದೆ, ಅದನ್ನು ಬಿಟ್ಟು ವರ್ಕ್ ಫ್ರಂ ಹೋಂ ಇರುವ ಕೆಲಸಗಳಿಗೆ ಬದಲಾಯಿಸಿಕೊಂಡಿದ್ದಾರೆ. ಕಾರಣ ಮನೆ ಎಂಬ ಕಂಫರ್ಟ್‌ಗೆ ಹೊಂದಿಕೊಂಡು, ಬೇಕಾದ ರೀತಿಯಲ್ಲಿ ಬೇಕಾದ ಹಾಗೆ ಕೆಲಸ ಮಾಡುವ ಸ್ವಾತಂತ್ರ್ಯಕ್ಕೆ ಒಗ್ಗಿಕೊಂಡು ಅದರಿಂದ ಹೊರಬರಲಾಗದೆ ಇರುವ ಮಂದಿಯೂ ಈಗ ಬಹಳ.
ಆದರೆ, ಇಂಥ ಕಂಫರ್ಟ್‌ಗಳು ಮಾರಕವೂ ಹೌದು. ಗಂಟೆಗಟ್ಟಲೆ ಮನೆಯಲ್ಲಿ ಕುಳಿತೇ ಕೆಲಸ ಮಾಡುವುದು, ಅಥವಾ ತನಗೆ ಬೇಕಾದ ಭಂಗಿಯಲ್ಲಿ ಹಾಸಿಗೆಯಲ್ಲಿ ಮಲಗಿಕೊಂಡೇ ಲ್ಯಾಪ್‌ಟಾಪ್ ಕುಟ್ಟುತ್ತಿರುವುದು, ತಡವಾಗಿ ಎದ್ದು, ಹಲ್ಲುಜ್ಜಿ ವಿಡಿಯೋ ಕಾನ್ಫರೆನ್ಸ್‌ಗೆ ಕೂತುಬಿಡುವುದು ಮಾಡುತ್ತಿರುವುದೇ ಇಂದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಒಂದು ಸರಿಯಾದ ಸಮಯ ಪಾಲನೆ ಮಾಡದಿರುವುದು, ಸರಿಯಾದ ಭಂಗಿಯಲ್ಲಿ ಕೂರದೆ ಇರುವುದು, ಅಥವಾ ಒಂದೇ ಭಂಗಿಯಲ್ಲೇ ದಿನವಿಡೀ ಕೂರುವುದು, ಮನೆಯೊಳಗೇ ಇರುವುದು, ಹೊರ ಪ್ರಪಂಚದ ಸಂಪರ್ಕವೇ ಕಡಿಮೆಯಾಗುವುದು, ಜನರ ಮುಖತಃ ಭೇಟಿ ಇಲ್ಲದಿರುವುದು ಎಲ್ಲವೂ ಅಭ್ಯಾಸವಾಗಿ ಇಂದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎಲ್ಲರನ್ನೂ ಅವರಿಗೆ ಅರಿವೇ ಇಲ್ಲದಂತೆ ದುರ್ಬಲರನ್ನಾಗಿಸುತ್ತದೆ.
ಯಾಕೆಂದರೆ, ಕಚೇರಿಯಲ್ಲಿ ಎಂಟು ಗಂಟೆಗಳ ಕಾಲ ಕೆಲಸ ಮಾಡುವುದೆಂದರೆ, ಎಂಟು ಗಂಟೆಗಳಷ್ಟೂ ಕಾಲ ಒಂದೇ ಜಾಗದಲ್ಲಿ ಕೂತಿರುವುದಿಲ್ಲ. ಆಗಾಗ ಎದ್ದು, ಕಾಫಿ ಕುಡಿಯಲೋ, ಸ್ನೇಹಿತರ ಜೊತೆ ಹರಟೆ ಹೊಡೆಯಲೋ ಅಥವಾ ಬೇರೆ ಕೊಠಡಿಯಲ್ಲಿ ಮೀಟಿಂಗ್‌ಗೆಂದೋ ಎದ್ದು ನಡೆಯುತ್ತಿರುತ್ತೇವೆ. ಅಲ್ಲಿ, ಕೆಲಸದ ಜೊತೆಜೊತೆಗೆ ಒಂದು ಗುಂಪಿನ ಜೊತೆಗೆ ಮಾತು, ನಗು, ತಮಾಷೆ ಎಲ್ಲವೂ ಇರುತ್ತದೆ. ಜೊತೆಗೆ ಅಲ್ಲಿ ಕೂರಲು ಸರಿಯಾದ ಕೆಲಸ ಮಾಡಲು ಬೇಕಾದ ಬಗೆಯ ಕುರ್ಚಿ ಮೇಜುಗಳ ವ್ಯವಸ್ಥೆಯಿರುತ್ತದೆ. ಅದಕ್ಕೇ ಮನೆಯ ಕೆಲಸದ ವಾತಾವರಣಕ್ಕೂ ವ್ಯತ್ಯಾಸವಿದ್ದೇ ಇದೆ. ಅವೆಲ್ಲವೂ ಮನುಷ್ಯನನ್ನು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಆರೋಗ್ಯವಾಗಿರಿಸುತ್ತದೆ. ಜೊತೆಗೆ, ಗಂಟೆಗಟ್ಟಲೆ ಕೂತೇ ಕೆಲಸ ಮಾಡುತ್ತಿದ್ದರೆ ಖಂಡಿತವಾಗಿಯೂ ತೂಕ ಹೆಚ್ಚಾಗುತ್ತದೆ. ಮುಖ್ಯವಾಗಿ ದೇಹದ ಕೆಳಭಾಗಕ್ಕೆ ಕೆಲಸವೇ ಇಲ್ಲದಂತಾಗಿ ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾಗಲು ಶುರುವಾಗುತ್ತದೆ. ಈ ಭಾಗದಲ್ಲಿ ಕೊಬ್ಬು ಸಂಗ್ರಹವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕೇವಲ ಕೊಬ್ಬು ಸಂಗ್ರಹವಾಗುವುದಷ್ಟೇ ಅಲ್ಲ, ಇದರಿಂದ ಬೆನ್ನುನೋವು ಸೊಂಟನೋವಿನಂಥ ಸಮಸ್ಯೆಯೂ ಬರುತ್ತದೆ. ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳ ಅಪಾಯವೂ ಇದೆ.
ಹಾಗಾದರೆ, ಮನೆಯಿಂದಲೇ ಕೆಲಸ ಮಾಡುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಏನು ಮಾಡಬಹುದು? ಯಾವ ಬಗೆಯಲ್ಲಿ ದೇಹವನ್ನೂ ಮನಸ್ಸನ್ನೂ ಕ್ರಿಯಾಶೀಲತೆಯಿಂದ ಇರಿಸಿಕೊಳ್ಳಬಹುದು ಅಥವಾ ಆಲಸಿತನವನ್ನು ಹೊಡೆದೋಡಿಸಬಹುದು ಎಂಬುದನ್ನು ನೋಡೋಣ.
ಇದನ್ನೂ ಓದಿ | Back Pain | ವರ್ಕ್ ಫ್ರಂ ಹೋಂ ತಂದಿಟ್ಟ ಬೆನ್ನುನೋವಿಗೆ ಪರಿಹಾರಗಳೇನು?
೧. ಮನುಷ್ಯನ ದೇಹರಚನೆಯೇ ಅವನನ್ನು ಗಂಟೆಗಟ್ಟಲೆ ನಿಂತು ಕೆಲಸ ಮಾಡುವ ಕ್ಷಮತೆಯನ್ನು ನೀಡಿದೆ. ಹಾಗಾಗಿ ಮನೆಯಿಂದ ಕೆಲಸ ಮಾಡುವ ಮಂದಿ ಗಂಟೆಗಟ್ಟಲೆ ಕೂತೇ ಕೆಲಸ ಮಾಡಬೇಕಾಗಿಲ್ಲ. ಆಗಾಗ ಭಂಗಿ ಬದಲಾವಣೆಗೆ ನಿಂತೂ ಕೆಲಸ ಮಾಡಬಹುದು. ನಿಂತು ಮಾಡುವ ಕೆಲಸದಿಂದ ದೇಹ ಸುಸ್ತಾಗುತ್ತದೆ. ದೇಹಕ್ಕೆ ಸುಸ್ತಾಗುವುದು ಒಳ್ಳೆಯದು. ಆದರೆ ಇಡೀ ದಿನ ನಿಲ್ಲುವುದು ಒಳ್ಳೆಯದಲ್ಲ, ಇದು ಬೆನ್ನುನೋವನ್ನು ಹೆಚ್ಚಿಸಬಹುದು. ಜೊತೆಗೆ, ಮನೆಯಿಂದ ಕೆಲಸ ಮಾಡುವುದು ಪಕ್ಕಾ ಎಂದಾದಲ್ಲಿ, ಮನೆಯಲ್ಲೊಂದು ಕಚೇರಿಯ ವಾತಾವರಣ ನಿರ್ಮಾಣ ಮಾಡಿ. ನಿಮ್ಮ ಕಂಫರ್ಟ್‌ಗೆ ಬೇಕಾದಂತೆ ಕೂರಲು, ನಿಲ್ಲಲು ಒಂದು ಕೋಣೆಯ ಮೂಲೆಯನ್ನು ಮೀಸಲಿಡಿ.
೨. ಒಂದು ಸಮಯವನ್ನು ಪಾಲನೆ ಮಾಡಿ. ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ನಡಿಗೆ ಮತ್ತಿತರ ಎಲ್ಲ ಕ್ರಿಯಾಶೀಲ ಚಟುವಟಿಕೆಗಳನ್ನೂ ಮಾಡಿ. ಇದರಿಂದ ಬೆಳಗು ಉಲ್ಲಾಸದಾಯಕವಾಗಿ ಆರಂಭವಾಗುತ್ತದೆ.
೩. ಕೆಲಸದ ಮಧ್ಯೆ ಗಂಟೆಗೊಮ್ಮೆ ಬ್ರೇಕ್ ತೆಗೆದುಕೊಳ್ಳಿ. ಮನೆಯಲ್ಲೇ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡಿ. ಕೈಕಾಲು ಸ್ಟ್ರೆಚ್ ಮಾಡಿ. ಕೂತಲ್ಲೇ ಕೈಕಾಲು ಆಡಿಸುವ ಚಿಕ್ಕಪುಟ್ಟ ವ್ಯಾಯಾಮ ಮಾಡಿಕೊಳ್ಳಿ. ಅಥವಾ ಅಡುಗೆ ಕೋಣೆಗೆ ಬಂದು ಒಂದು ಚಹಾ ಮಾಡಿ ಕುಡಿಯಬಹುದು.
೪. ಕೆಲಸ ಮುಗಿದ ಮೇಲೂ ಒಂದು ವಾಕ್ ಅಥವಾ ನಿಮ್ಮಿಷ್ಟದ ಕೆಲಸಕ್ಕೆ ಕೊಂಚ ಸಮಯ ಮೀಸಲಿಡಿ. ಹೊತ್ತು ಗೊತ್ತಿಲ್ಲದಂತೆ ಕೆಲಸದಲ್ಲಿ ಮುಳುಗಬೇಡಿ.
೫. ಒಂದು ನಿಗದಿತ ಸಮಯಕ್ಕೆ ನಿದ್ದೆಗೆಂದು ಸಮಯ ಇಡಿ. ರಾತ್ರಿ ಬಹಳ ಹೊತ್ತಿನ ತನಕ ಎದ್ದಿರುವುದು, ಮೊಬೈಲಿನಲ್ಲಿ ಸಿನಿಮಾ ವೀಕ್ಷಣೆ ಇತ್ಯಾದಿಗಳನ್ನು ಮುಂದುವರಿಸಬೇಡಿ. ನಿದ್ದೆಗೆ ಸರಿಯಾದ ಸಮಯ ಮೀಸಲಿಡಿ. ನಿದ್ದೆ ಸರಿಯಾಗಿ ಆಗದಿದ್ದರೆ ಮರುದಿನದ ಕೆಲಸವೂ ಹಾಳು. ಆರೋಗ್ಯವೂ ಹಾಳು.
ಇದನ್ನೂ ಓದಿ | ಗ್ಲೋಕಲ್ ಲೋಕ ಅಂಕಣ | ವರ್ಕ್ ಫ್ರಮ್ ಹೋಮ್- ಭವಿಷ್ಯದ ಕತೆ ಏನು?