ಬ್ರಿಟನ್ ದೇಶದ ಲೇಖಕ ರೊವಾಲ್ಡ್ ಡಹ್ಲ್, 1964ರಲ್ಲಿ ಬರೆದ ಮಕ್ಕಳ ಕಾದಂಬರಿಯೊಂದರ ಹೆಸರು- ಚಾರ್ಲಿ ಎಂಡ್ ದ ಚಾಕಲೇಟ್ ಫ್ಯಾಕ್ಟರಿ. ಇಡೀ ಕಾದಂಬರಿಯಲ್ಲಿ ಬರುವ ಉಳಿದೆಲ್ಲ ವರ್ಣನೆಗಳ ಜೊತೆಗೆ ಚಾಕಲೇಟ್‌ಗಳ ವಿವರಗಳು ಒಂದು ಕಾಲದ ಮಕ್ಕಳ ಬಾಯಲ್ಲಿ ಮಾತ್ರವಲ್ಲ, ಓದಿದ ದೊಡ್ಡವರ ಬಾಯಲ್ಲೂ ನೀರೂರಿಸುತ್ತಿದ್ದವು. ಆ ಕಾದಂಬರಿಯು ಮುಂದೆ ಸಿನೆಮಾ ಆಗಿ ಹೆಸರು ಮಾಡಿದ್ದು ಇತಿಹಾಸ. ಆದರೆ ಚಾಕಲೇಟ್ ಎಂಬ ಸಿಹಿಯ ಬಗ್ಗೆ ಎಲ್ಲರಿಗೂ ಇರುವ ಪ್ರೀತಿಯನ್ನು, ಹುಚ್ಚನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇಂಥವು ಸಾಕಾಗುತ್ತವೆ. ಎಲ್ಲ ಬಿಟ್ಟು ಈಗೇಕೆ ಬಂತು ಚಾಕಲೇಟ್ ವಿಷಯ? ಇಂದು ವಿಶ್ವ ಚಾಕಲೇಟ್ ದಿನ (World Chocolate Day). ವರ್ಷವಿಡೀ ಚಾಕಲೇಟ್ ಮೆಲ್ಲುವ ಈ ಜಗತ್ತು, ಜುಲೈ ತಿಂಗಳ 7ನೇ ದಿನವನ್ನು ಚಾಕಲೇಟ್‌ಗಾಗಿ ಮೀಸಲಿರಿಸಿದೆ! ಆದರೆ ಇಂದೇ ಏಕೆ? ಕಾರಣವೇನೆಂದರೆ, ಕ್ರಿ.ಶ. 1550ನೇ ಇಸವಿಯ ಇದೇ ದಿನದಂದು ಈ ಸಿಹಿ ಐರೋಪ್ಯ ಖಂಡವನ್ನು ಪ್ರವೇಶಿಸಿತಂತೆ. ಜುಲೈ ತಿಂಗಳ 7ನೇ ತಾರೀಖಿಗೆ ಹೀಗೊಂದು ಇತಿಹಾಸ ಇರುವುದರಿಂದ, 1009ರಿಂದ ಈ ದಿನದ ಆಚರಣೆ ರೂಢಿಗೆ ಬಂದಿದೆ.
ಇದರ ಮೂಲ ಇದ್ದಿದ್ದು, ಮೆಕ್ಸಿಕೊ, ದಕ್ಷಿಣ ಮತ್ತು ಮಧ್ಯ ಅಮೇರಿಕ ಖಂಡಗಳಲ್ಲಿ. ಕೊಕೊ ಮರಗಳ ಹಣ್ಣಿನಿಂದ ತಯಾರಾಗುವ ತಿನಿಸು ಇದು. ಹಣ್ಣುಗಳ ಒಳಗಿರುವ, ಸ್ವಲ್ಪ ಕಹಿ ಎನ್ನಬಹುದಾದ ರುಚಿಯ ಕೊಕೊ ಬೀಜಗಳನ್ನು ಒಣಗಿಸಿ, ಹುದುಗು ಬರಿಸಿ, ಅದರಿಂದ ಪೇಯ ತಯಾರಿಸುತ್ತಿದ್ದ ಮಾಹಿತಿ ಮೆಕ್ಸಿಕೊದ ಅಜ್‌ಟೆಕ್ ನಾಗರಿಕತೆಯ ಕಾಲದಲ್ಲೇ ದೊರೆಯುತ್ತದೆ. ಆದರೆ ಕೊಕೊ ಬಳಸಿದ್ದು ಆ ನಾಗರಿಕತೆಯಲ್ಲೇ ಮೊದಲೇನಲ್ಲ. ಕ್ರಿಸ್ತಪೂರ್ವ ೧೧೦೦ ಕಾಲದಲ್ಲೇ ಮಧ್ಯ ಅಮೆರಿಕದಲ್ಲಿ ಕೊಕೊ ಬಳಕೆಯಲ್ಲಿದ್ದ ಮಾಹಿತಿಯಿದೆ. ತೀರಾ ನಂತರದ ಕಾಲದಲ್ಲಿ ಅದು ಯುರೋಪ್ ಖಂಡದ ದಿಕ್ಕಿಗೆ ಪಸರಿಸಿ, ಚಾಕಲೇಟ್ ರೂಪದಲ್ಲಿ ಜನಪ್ರಿಯವಾಯಿತು. ಮೊದಲಿಗೆ ಕಪ್ಪು ಚಾಕಲೇಟ್ ಮಾತ್ರವೇ ಬಳಕೆಗೆ ಬಂದಿದ್ದು. ಹಾಲಿನ ಚಾಕಲೇಟ್, ಬೀಜಗಳನ್ನು, ಒಣ ಹಣ್ಣುಗಳನ್ನು, ಇನ್ನೂ ಏನೇನೋ ಆಸಕ್ತಿಕರ ವಸ್ತುಗಳನ್ನು ಸೇರಿಸಿ ಮಾಡಿದ ಚಾಕಲೇಟ್‌ಗಳು ಬಳಕೆಗೆ ಬಂದಿದ್ದು ನಂತರದ ದಿನಗಳಲ್ಲಿ. ಕೊಕೊ ಸೇವನೆ ಮಿತಿಯಲ್ಲಿದ್ದರೆ, ಆರೋಗ್ಯಕ್ಕೆ ಲಾಭ ತರುತ್ತದೆ. ಆದರೆ ಸಿಹಿ ಮತ್ತು ಹಾಲು ಬೆರೆಸಿದ ಚಾಕಲೇಟ್‌ಗಳ ಸೇವನೆ ಅತಿಯಾದರೆ ಸಮಸ್ಯೆಗಳು ಬರಬಹುದು. ಏನು ಲಾಭಗಳಿವೆ ಚಾಕಲೇಟ್ ತಿನ್ನುವುದರಿಂದ?
ಉತ್ಕರ್ಷಣ ನಿರೋಧಕಗಳು
ಕೊಕೊ ನಮಗೆ ಬೇಕಾಗುವುದು ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಿಗಾಗಿ. ಇದರಲ್ಲಿರುವ ಪಾಲಿಫೆನೋಲ್‌ಗಳು ಮತ್ತು ಫ್ಲೆವನಾಯ್ಡ್‌ಗಳು ಉರಿಯೂತ ತಗ್ಗಿಸುತ್ತವೆ. ಆದರೆ ಸಿಹಿ ಸೇರಿದ ಚಾಕಲೇಟ್‌ಗಿಂತ ಸಿಹಿ ಇಲ್ಲದ ಅಥವಾ ಕಡಿಮೆ ಇರುವ ಕಪ್ಪು ಚಾಕಲೇಟ್‌ಗಳು ಈ ನಿಟ್ಟಿನಲ್ಲಿ ಹೆಚ್ಚಿನ ಲಾಭ ತರಬಲ್ಲವು. ಕಾರಣ ಸಕ್ಕರೆಯಂಶ ಉರಿಯೂತವನ್ನು ಹೆಚ್ಚಿಸುತ್ತದೆಯೇ ಹೊರತು ತಗ್ಗಿಸುವುದಿಲ್ಲ. ಆಗ ಕೊಕೊದಲ್ಲಿರುವ ಉಳಿದ ಒಳ್ಳೆಯ ಅಂಶಗಳು ಗೌಣವಾಗಬಹುದು.
ಹೃದಯಕ್ಕೆ ಪೂರಕ
ಹೃದಯದ ಆರೋಗ್ಯ ರಕ್ಷಣೆಯಲ್ಲಿ ಡಾರ್ಕ್ ಚಾಕಲೇಟ್‌ಗಳು ಪೂರಕವಾಗಿ ಕೆಲಸ ಮಾಡಬಲ್ಲವು ಎನ್ನುತ್ತವೆ ಹಲವು ಅಧ್ಯಯನಗಳು. ಕೊಕೊದಲ್ಲಿರುವ ಫ್ಲೆವನಾಯ್ಡ್‌ಗಳು ಹೃದಯದ ಕ್ಷಮತೆಯನ್ನು ಹೆಚ್ಚಿಸಬಲ್ಲವು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಬಲ್ಲವು. ರಕ್ತದೊತ್ತಡ ಹೆಚ್ಚದಂತೆ ಕಾಪಾಡಿ, ರಕ್ತ ಪರಿಚಲನೆಯನ್ನು ಸುಧಾರಿಸಬಲ್ಲವು. ಈ ಕಾರಣಗಳಿಂದಾಗಿ ಸಕ್ಕರೆ ರಹಿತವಾದ, ಡಾರ್ಕ್ ಚಾಕಲೇಟನ್ನು ಆಗೀಗ ಮೆಲ್ಲಬಹುದು ಎನ್ನುತ್ತವೆ ಅಧ್ಯಯನಗಳು.
ಮೂಡ್ ಸುಧಾರಣೆ
ʻಹ್ಯಾಪಿ ಹಾರ್ಮೋನ್ʼ ಎಂದೇ ಕರೆಯಲಾಗುವ ಸೆರೊಟೋನಿನ್ ಮತ್ತು ಎಂಡಾರ್ಫಿನ್ ಚೋದಕಗಳ ಉತ್ಪಾದನೆಯನ್ನು ದೇಹದಲ್ಲಿ ಪ್ರಚೋದಿಸುವಂಥ ಸಾಮರ್ಥ್ಯ ಕೊಕೊದಲ್ಲಿದೆ. ಉತ್ತಮ ಗುಣಮಟ್ಟದ ಕೊಕೊ ಹೊಂದಿರುವ ಡಾರ್ಕ್ ಚಾಕಲೇಟ್‌ಗಳು ಮೂಡ್ ಸುಧಾರಿಸಿ, ಸಂತೋಷದ ಭಾವಗಳನ್ನು ಹೆಚ್ಚಿಸಬಲ್ಲವು. ಮನಸ್ಸನ್ನು ಉಲ್ಲಾಸವಾಗಿರಿಸಬಲ್ಲವು.
ಖನಿಜಗಳು ಭರಪೂರ
ಹಲವು ರೀತಿಯ ಖನಿಜಗಳು ಕೊಕೊದಲ್ಲಿ ಸಾಂದ್ರವಾಗಿವೆ. ಅದರಲ್ಲೂ ಮೆಗ್ನೀಶಿಯಂ, ಕಬ್ಬಿಣ ಮತ್ತು ಪೊಟಾಶಿಯಂ ಸತ್ವಗಳು ಭರಪೂರ ಇವೆ. ನರ ಮತ್ತು ಸ್ನಾಯುಗಳ ಕ್ಷಮತೆಗೆ ಮೆಗ್ನೀಶಿಯಂ ಖನಿಜ ಅಗತ್ಯ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವಲ್ಲಿ ಕಬ್ಬಿಣ ಮಹತ್ವದ ಕೆಲಸ ಮಾಡಿದರೆ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಪೊಟಾಶಿಯಂ ಸಹಕಾರಿ. ಹಾಗಾಗಿ ರುಚಿಗಾಗಿ ಒಮ್ಮೊಮ್ಮೆ ಕೊಕೊವನ್ನು ಬಾಯಲ್ಲಿಟ್ಟು ಕರಗಿಸುವುದರಲ್ಲಿ ತಪ್ಪಿಲ್ಲವೇನೊ.
ಇದನ್ನೂ ಓದಿ: Hot Corn Recipe: ಮಳೆಗಾಲದಲ್ಲಿ ಬಿಸಿಬಿಸಿಯಾದ ಜೋಳವನ್ನು ಮನೆಯಲ್ಲೇ ಮಾಡುವುದು ಹೇಗೆ?
ಮೆದುಳು ಚುರುಕು
ಇದರ ಫ್ಲೆವನಾಯ್ಡ್‌ಗಳು ಮೆದುಳಿನ ಚುರುಕುತನ ಹೆಚ್ಚಿಸುವಲ್ಲಿ ಉಪಯುಕ್ತ ಕೆಲಸವನ್ನು ಮಾಡುತ್ತವೆ. ನೆನಪು ಹೆಚ್ಚಿಸುವಲ್ಲಿ ಮತ್ತು ಕಲಿಯುವಿಕೆಯನ್ನು ಉತ್ತೇಜಿಸುವಲ್ಲಿ ಇವು ನೆರವಾಗುತ್ತವೆ. ಕೊಕೊ ಸೇವನೆಯ ಅನುಕೂಲಗಳ ಬಗ್ಗೆ ಇಷ್ಟೆಲ್ಲ ತಿಳಿದ ಮೇಲೆ ಒಂದೂ ಚಾಕಲೇಟ್ ಮೆಲ್ಲದಿದ್ದರೆ ಹೇಗೆ?