Site icon Vistara News

World Kidney Day 2023 : ಮೂತ್ರಪಿಂಡ ಹಾಳಾಗುವುದಕ್ಕೆ ಇವೇ ಕಾರಣಗಳು; ಈ ತಪ್ಪುಗಳನ್ನು ನೀವು ಮಾಡದಿರಿ

Kidney problem in people infected with coronavirus, risk guaranteed if ignored

ಬೆಂಗಳೂರು: ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯ ಮಾನಸಿಕ ಮತ್ತು ದೈಹಿಕ ಆರೋಗ್ಯ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವಂತೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮೂತ್ರಪಿಂಡಗಳನ್ನು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ ಅರಿವು ಮೂಡಿಸಲೆಂದೇ ಪ್ರತಿ ವರ್ಷ ಮಾರ್ಚ್‌ ತಿಂಗಳ ಎರಡನೇ ಗುರುವಾರದಂದು ವಿಶ್ವ ಮೂತ್ರಪಿಂಡ ದಿನವನ್ನು (World Kidney Day 2023) ಆಚರಿಸಲಾಗುತ್ತದೆ. ಈ ವರ್ಷ ಮಾ.9ರಂದು ಮೂತ್ರಪಿಂಡ ದಿನ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಮೂತ್ರಪಿಂಡ ಸಮಸ್ಯೆ ಬರುವುದಕ್ಕೆ ಕಾರಣವೇನು? ಅದರ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದಕ್ಕ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Viral News : 75 ವರ್ಷದ ವೃದ್ಧನ ಕಿಡ್ನಿಯಿಂದ 300 ಕಲ್ಲುಗಳನ್ನು ತೆಗೆದ ವೈದ್ಯರು!

ಸರಿಯಾಗಿ ನೀರು ಕುಡಿಯದಿರುವುದು:

ಮೂತ್ರಪಿಂಡ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಅದು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು. ದೇಹದಲ್ಲಿ ಸಾಕಷ್ಟು ನೀರಿದ್ದಾಗ ಮೂತ್ರಪಿಂಡವು ದೇಹದಲ್ಲಿನ ವಿಷವನ್ನು ಹೊರಹಾಕುವ ಕೆಲಸ ಮಾಡಡುತ್ತದೆ. ನೀರು ಕಡಿಮೆಯಾದಾಗ ವಿಷ ಹೊರಹಾಕಲಾಗದೆ ಸಮಸ್ಯೆ ಉಂಟಾಗುತ್ತದೆ.

ಅತಿಯಾಗಿ ಉಪ್ಪು ಸೇವನೆ:

ಉಪ್ಪಿನ ರೂಪದಲ್ಲಿ ಅಥವಾ ಬೇರಾವುದೇ ರೂಪದಲ್ಲಿ ಅಧಿಕ ಸೋಡಿಯಂ ನಿಮ್ಮ ದೇಹದೊಳಗೆ ಹೋದರೆ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡದಿಂದ ಬಳಲುವವರಿಗೆ ಸೋಡಿಯಂ ಹೆಚ್ಚಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಈಗಿನ ಪ್ಯಾಕಡ್‌ ಸ್ನ್ಯಾಕ್‌ಗಳು ಮತ್ತು ಜಂಕ್‌ ಫುಡ್‌ನಲ್ಲಿ ಹೆಚ್ಚಿನ ಸೋಡಿಯಂ ಇರುವುದರಿಂದ ಆ ತಿನಿಸನ್ನು ತಿನ್ನುವುದರಿಂದ ಸಮಸ್ಯೆ ಹೆಚ್ಚುತ್ತದೆ.


ಸಂಸ್ಕರಿಸಿದ ಆಹಾರ:

ಸಂಸ್ಕರಿಸಿದ ಆಹಾರ ಸೇವನೆ ಅಪಾಯಕಾರಿ. ಅದರಲ್ಲಿ ಹೆಚ್ಚು ಸೋಡಿಯಂ ಮತ್ತು ರಂಜಕವಿರುತ್ತದೆ. ಮೂತ್ರಪಿಂಡ ಸಮಸ್ಯೆ ಇರುವವರು ಸಂಸ್ಕರಿಸಿದ ಆಹಾರದಿಂದ ದೂರವಿರಬೇಕು. ಹೆಚ್ಚಿನ ರಂಜಕ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ ಮೂತ್ರಪಿಂಡಗಳು ಮತ್ತು ಮೂಳೆಗಳಿಗೆ ಹಾನಿಯಾಗುತ್ತದೆ.

ನಿಯಮಿತ ವ್ಯಾಯಾಮ ಮಾಡದಿರುವುದು:

ದೀರ್ಘಕಾಲ ಕುಳಿತುಕೊಳ್ಳುವುದು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು. ದೇಹಕ್ಕೆ ವ್ಯಾಯಾಮ ಆಗುವಂತ ಕೆಲಸ ಮಾಡದೆ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿಯಮಿತ ದೈಹಿಕ ಚಟುವಟಿಕೆಯು ರಕ್ತದೊತ್ತಡವನ್ನು ಸುಧಾರಿಸುತ್ತದೆ. ಇದು ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು. ಒಂದು ವೇಳೆ ನೀವು ಅಧಿಕ ತೂಕ ಹೊಂದಿದ್ದರೆ, ತೂಕವನ್ನು ಕಡಿಮೆ ಮಾಡುವುದು ಮೂತ್ರಪಿಂಡಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಕನಿಷ್ಠ 4 ಬಾರಿ 40 ನಿಮಿಷಗಳ ನಡಿಗೆಯೊಂದಿಗೆ ನಿಯಮಿತ ವ್ಯಾಯಾಮಗಳನ್ನು ಮಾಡಿ.


ಅತಿಯಾದ ಮದ್ಯಪಾನ:

ನೀವು ಅತಿಯಾಗಿ ಮದ್ಯಪಾನ ಸೇವಿಸುವವರಾಗಿದ್ದರೆ ನಿಮ್ಮ ಮೂತ್ರಪಿಂಡದಲ್ಲಿ ಸಮಸ್ಯೆ ಸಾಮಾನ್ಯವಾಗಬಹುದು. ಮದ್ಯಪಾನ ಮಾಡದವರೊಂದಿಗೆ ಹೋಲಿಕೆ ಮಾಡಿದರೆ ಅತಿಯಾಗಿ ಮದ್ಯಪಾನ ಮಾಡುವವರು ಎರಡು ಪಟ್ಟು ಹೆಚ್ಚಾಗಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಾರೆ ಎಂದು ವರದಿಯಿದೆ.

ಸಲಹೆಯಿಲ್ಲದೆ ಔಷಧ ಸೇವಿಸುವುದು:

ಇತ್ತೀಚಿನ ದಿನಗಳಲ್ಲಿ ಎಲ್ಲರೂ ವೈದ್ಯರೇ ಆಗಿಬಿಟ್ಟಿದ್ದಾರೆ. ತಲೆ ನೋವು, ಮೈ ಕೈ ನೋವು, ಸೊಂಟ ನೋವು ಎಂದಾಕ್ಷಣ ಮೆಡಿಕಲ್‌ಗೆ ಹೋಗಿ ನೋವು ನಿವಾರಕ ಖರೀದಿಸಿ ನುಂಗಿಬಿಡುತ್ತಾರೆ. ಆದರೆ ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡ ಕ್ಯಾನ್ಸರ್‌ ಉಂಟಾಗಬಹುದು. ಆರೋಗ್ಯ ಸಮಸ್ಯೆ ಇದ್ದಾಗ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯ ಮೇರೆಗೇ ಔಷಧಿ ತೆಗೆದುಕೊಳ್ಳಿ.

ಇದನ್ನೂ ಓದಿ: Kidney Stones: ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯೇ? ಈ ಪಥ್ಯ ಅನುಕೂಲವಾಗಬಹುದು

Exit mobile version