ಚಂಡಿಗಢ: ಪ್ರಮುಖ ಬೆಳವಣಿಗೆಯೊಂದರಲ್ಲಿ ಜೈಲಿನಲ್ಲಿರುವ ಖಲಿಸ್ತಾನಿ ಪರ ಬೋಧಕ (Pro-Khalistani preacher) ಅಮೃತ್‌ಪಾಲ್ ಸಿಂಗ್ (Amritpal Singh) ಲೋಕಸಭಾ ಚುನಾವಣೆ (Lok Sabha Election 2024)ಯಲ್ಲಿ ಪಂಜಾಬ್‌ನ ಖದೂರ್ ಸಾಹಿಬ್ (Khadoor Sahib) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾನೆ ಎಂದು ಆತನ ಕಾನೂನು ಸಲಹೆಗಾರ ಬುಧವಾರ ತಿಳಿಸಿದ್ದಾರೆ.
ʼʼಅಮೃತ್‌ಪಾಲ್ ಸಿಂಗ್ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ನಾನು ಇಂದು ದಿಬ್ರುಗಢದಲ್ಲಿ ಅಮೃತಪಾಲ್ ಸಿಂಗ್‌ನನ್ನು ಭೇಟಿಯಾದೆ. ಖದೂರ್ ಸಾಹಿಬ್‌ನಿಂದ ಚುನಾವಣೆಗೆ ಸ್ಪರ್ಧಿಸುವುದನ್ನು ಅವರು ಖಚಿತಪಡಿಸಿದ್ದಾರೆ” ಎಂದು ಕಾನೂನು ಸಲಹೆಗಾರ ರಾಜ್‌ದೇವ್ ಸಿಂಗ್ ಖಾಲ್ಸಾ ಹೇಳಿದ್ದಾರೆ. ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾನೆ. ಮೂಲಗಳ ಪ್ರಕಾರ, ಮುಖ್ಯವಾಹಿನಿಯ ಪಕ್ಷವೊಂದು ಅಮೃತಪಾಲ್ ಸಿಂಗ್‌ಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆ ಇದೆ.
Breaking : Amritpal Singh, founder of Waris Punjab De, who is lodged in Dibrugarh jail under the NSA, has agreed to contest the election from Khadoor Sahib as an independent candidate. pic.twitter.com/EjMMsA5KBJ
— Gagandeep Singh (@Gagan4344) April 24, 2024
ಅಮೃತ್‌ಪಾಲ್ ಸಿಂಗ್‌ನ ಹಿನ್ನೆಲೆ
ಅಮೃತಸರದ ಜಲ್ಲುಪುರ್ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಆರು ತಿಂಗಳ ಹಿಂದೆ- ʼವಾರಿಸ್ ಪಂಜಾಬ್ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ.
ಅಮೃತ್‌ಪಾಲ್ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.
2022ರ ಸೆಪ್ಟೆಂಬರ್ 25ರಂದು ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಸಿಖ್ ಧರ್ಮದ ಸಾಂಪ್ರದಾಯಿಕ ಬ್ಯಾಪ್ಟಿಸಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ್‌ಪಾಲ್, ʼಅಮೃತಧಾರಿ ಸಿಖ್ʼ ಎನಿಸಿದ. ಈ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ ನೋಡಿ ಪಂಜಾಬ್ ಅವಾಕ್ಕಾಯಿತು. ಇದಾದ ನಾಲ್ಕು ದಿನಗಳ ನಂತರ ಸೆ. 29ರಂದು ʼದಸ್ತರ್ ಬಂದಿʼ ಕಾರ್ಯಕ್ರಮ ನಡೆಯಿತು. ಇದಕ್ಕೂ ದಾಖಲೆ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಇದು ನಡೆದುದು ರೋಡೆ ಗ್ರಾಮದಲ್ಲಿ. ಅದು ಖಲಿಸ್ತಾನ್ ಚಳವಳಿಯ ರಾಕ್ಷಸ ಭಯೋತ್ಪಾದಕನಾಗಿದ್ದ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆಯ ಜನ್ಮಸ್ಥಳ.
ಇದನ್ನೂ ಓದಿ: ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್ ಸಿಂಗ್?
ಹಲವು ಸಮಯದಿಂದ ಆತ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಹಿಂದು ರಾಷ್ಟ್ರ ವಾದ ಸರಿ ಎಂದಾದರೆ ಖಲಿಸ್ತಾನ್ ಯಾಕೆ ತಪ್ಪು ಎಂದು ಪ್ರಶ್ನಿಸುತ್ತಾನೆ. ಇವನು ಪಾರಂಪರಿಕ ಧಾರ್ಮಿಕ ತರಬೇತಿ ಪಡೆದು ಮುಖ್ಯಸ್ಥನಾಗಿಲ್ಲ. ರಾಜಕೀಯ ವಿಚಾರದಿಂದ ಆರಂಭಿಸಿ ಮತೀಯ ಗುರು ಎನಿಸಿಕೊಂಡವನು. ಧಾರ್ಮಿಕ ವಿಷಯಗಳನ್ನು ಉಲ್ಲೇಖಿಸುವಾಗ ಈತನ ತಿಳಿವಳಿಕೆಯ ಪೊಳ್ಳುತನ ಎದ್ದು ಕಾಣಿಸುತ್ತದೆ. ಆದರೂ ಈತನ ಕಠೋರ ರಾಜಕೀಯ ನಿಲುವುಗಳಿಂದಾಗಿ ಅಭಿಮಾನಿಗಳು ಈತನನ್ನು ಸುತ್ತುವರಿಯುತ್ತಾರೆ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 2022ರಲ್ಲಿ ಈತನನ್ನು ಅರೆಸ್ಟ್ ಮಾಡಲಾಗಿತ್ತು.