Site icon Vistara News

Lok Sabha Election 2024: ಕಾಂಗ್ರೆಸ್‌ನ 21 ಅಭ್ಯರ್ಥಿಗಳ ಪಟ್ಟಿ ಇಂದೇ ಫೈನಲ್;‌ 8 ಸಚಿವರು ಕಣಕ್ಕೆ?

Complaint by BJP delegation to Election Commission office against Mallikarjuna Kharge statement

ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಆಯಾ ರಾಜಕೀಯ ಪಕ್ಷಗಳು (Political Parties) ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಕಾಂಗ್ರೆಸ್‌ ಈಗಾಗಲೇ ಬಿಡುಗಡೆ ಮಾಡಿರುವ ತನ್ನ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಇಂದು ಅಥವಾ ನಾಳೆ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಮುಂದಾಗಲಿದ್ದು, ಅದರಲ್ಲಿ ಕರ್ನಾಟಕದವರ ಹೆಸರು ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್‌ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಕಸರತ್ತು ಮಾಡುತ್ತಿದ್ದು, ಕೆಲವು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕೆ ಈಗ ಸಚಿವರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Dr G Parameshwar) ಪ್ರತಿಕ್ರಿಯೆ ನೀಡಿದ್ದು, ಇಂದು ಬಾಕಿ 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುತ್ತದೆ. 7-8 ಸಚಿವರಿಗೆ ಸ್ಪರ್ಧೆ ಮಾಡಲು ಹೈಕಮಾಂಡ್‌ ಹೇಳಿದೆ. ಆದರೆ, ಯಾವ ಸಚಿವರು ಒಪ್ಪಿಕೊಳ್ಳುತ್ತಾರೆ ಎಂಬುದು ಇಂದು (ಮಂಗಳವಾರ – ಮಾ. 12) ಸಂಜೆ ವೇಳೆಗೆ ಗೊತ್ತಾಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ್‌, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸಚಿವರು ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಳೆಂಟು ಸಚಿವರು ಸ್ಪರ್ಧಿಸಬೇಕು ಎಂದು ಹೇಳಲಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಯಾರು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಸಂಜೆ ವೇಳೆಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.

28 ಕ್ಷೇತ್ರಕ್ಕೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹಾಕಲಿದೆ. ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ನನಗೆ ಬೇಡ, ಮಗನಿಗೆ ಕೊಡಿ ಅಂದಿದ್ದಾರೆ. ಬೇಡ ಅಂತ ಮೇಲೆ ಒತ್ತಾಯ ಮಾಡಿಕೊಡಲು ಆಗೋದಿಲ್ಲ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪರಮೇಶ್ವರ್‌ ಹೇಳಿದರು.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುದ್ದಹನುಮೇಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಸ್ಥಳೀಯ ನಾಯಕರಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ಅಸಮಾಧಾನವನ್ನು ಸರಿಪಡಿಸುವ ಕೆಲಸ ಆಗುತ್ತಿದೆ. ಚುನಾವಣೆ ಅಂದಾಗ ಇದೆಲ್ಲ ಸಹಜ ಎಂದು ಹೇಳಿದರು.

ಬಾಕಿ 21 ಕ್ಷೇತ್ರದ ಅಭ್ಯರ್ಥಿಗಳು ಇಂದೇ ಫೈನಲ್

ಇಂದು‌ ನವದೆಹಲಿಯಲ್ಲಿ ನಡೆಯುವ ಕಾಂಗ್ರೆಸ್‌ ಸಿಇಸಿ ಸಭೆಯಲ್ಲಿ ಕರ್ನಾಟಕದ ಬಾಕಿ 21 ಕ್ಷೇತ್ರಕ್ಕೆ ಕೂಡ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಸ್ಕ್ರೀನಿಂಗ್‌ ಕಮಿಟಿ ಆದ ಮೇಲೆ ಚುನಾವಣಾ ಸಮಿತಿಗೆ ಪಟ್ಟಿಯನ್ನು ತೆಗೆದುಕೊಂಡು ಹೋಗಬೇಕು. ಫೋನ್‌ ಮುಖಾಂತರ ಕ್ಲಿಯರೆನ್ಸ್ ಕೊಟ್ಟರೆ ಈ ಹಂತದಲ್ಲೇ ಅಂತಿಮ ಆಗುತ್ತದೆ. ಇಂದು ಸಂಜೆ ಹೊತ್ತಿಗೆ ಅಂತಿಮವಾಗಿ ಎಲ್ಲವೂ ಗೊತ್ತಾಗುತ್ತದೆ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಸಂವಿಧಾನವನ್ನು ಬದಲಾವಣೆ ಮಾಡುವ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್‌, ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ನಮ್ಮ ದೇಶಕ್ಕೆ ಸಂವಿಧಾನ ‌ಕೊಟ್ಟಿದ್ದನ್ನು ಶ್ಲಾಘನೆ ಮಾಡಿದ್ದಾರೆ. ಸಂವಿಧಾನವನ್ನು ‌ಕೊಡದೇ ಹೋಗಿದ್ದರೆ ತಾವು ಪ್ರಧಾನಿಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದರು. ಆದರೆ, ಅವರ ಪಕ್ಷದ ಸಂಸದರೊಬ್ಬರು ಈಗ ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇಂಥ ಹೇಳಿಕೆ ಇದೇ ಮೊದಲಲ್ಲ. ಹಲವು ಭಾರಿ ಹೇಳಿದ್ದಾರೆ. ಅವರ ಪಕ್ಷದವರು ಇದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕು. ಇಂಥ ಪ್ರಕರಣಗಳು ಮರುಕಳಿಸಿದಾಗಲೆಲ್ಲ, ಆ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದರೆ ಸಾಲದು. ಆಗ ಅಂಥವರು ಮತ್ತೆ ಮತ್ತೆ ಹೇಳುತ್ತಾರೆ. ಭಾರತದ ಸಂವಿಧಾನವನ್ನು ‌ಬದಲಿಸುತ್ತೇವೆ ಎಂದು ಹೇಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾಗಿ ಅನಂತ್‌ ಕುಮಾರ್‌ ಹೆಗಡೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Irfan Pathan: ರಾಜಕೀಯ ಪ್ರವೇಶ ಮಾಡಿದ ಯೂಸುಫ್: ಭಾವುಕ ಪೋಸ್ಟ್​ ಮಾಡಿದ ಸಹೋದರ ಇರ್ಫಾನ್

ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಲೀಡ್‌ ಸಿಕ್ಕಿದೆ

ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ಗೆ ಸಂಬಂಧಪಟ್ಟಂತೆ ಒಳ್ಳೆಯ ಲೀಡ್‌ ಸಿಕ್ಕಿದೆ. ಆರೋಪಿಗಳ ಬಗ್ಗೆ ಒಂದು ಹಂತಕ್ಕೆ ಗುರುತು ಪತ್ತೆ ಹಚ್ಚಲಾಗಿದೆ. ನಾವೀಗ ಈ ಪ್ರಕರಣದಲ್ಲಿ ಬಹಳ ಹತ್ತಿರದಲ್ಲಿದ್ದೇವೆ. ಕೆಲವೊಂದು ವಿಚಾರಗಳು ದೃಢವಾಗಬೇಕು. ಅದನ್ನು ಸಿಸಿಬಿ, ಎನ್‌ಐಎ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

Exit mobile version