ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ (BJP JDS Alliance) ಇನ್ನೂ ನಿಗದಿಯಾದ ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಈ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha constituency) ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಉಳಿದಿದೆ. ಇಲ್ಲಿ ಈ ಮೊದಲು ಸಿ.ಎಸ್. ಪುಟ್ಟರಾಜು (CS Puttaraju) ಕಣಕ್ಕಿಳಿಯುತ್ತಾರೆ ಎಂದೇ ಇತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಅಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಣಕ್ಕಿಳಿದರೆ ಮಾತ್ರ ಗೆಲುವು ಸುಲಭ ಎನ್ನುವ ವಾತಾವರಣ ಇದೆ. ಅಲ್ಲದೆ, ಕಾರ್ಯಕರ್ತರು ಸಹ ಎಚ್‌ಡಿಕೆ ಇಲ್ಲವೇ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿ ಎಂದು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ. ಮಂಡ್ಯವಾ? ಇಲ್ಲವೇ ರಾಮನಗರವಾ? ಎಂಬ ಧರ್ಮಸಂಕಟ ಅವರಿಗೆ ಶುರುವಾಗಿದೆ. ಈ ಮೂಲಕ ಅವರು ಮತ್ತೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಸಕ್ಕರೆ ನಾಡಾದ ಮಂಡ್ಯದ ಜೆಡಿಎಸ್ ಕಾರ್ಯಕರ್ತರ ಪ್ರೀತಿಗೆ ಮಣಿಯಬೇಕಾ ಅಥವಾ ರಾಜಕೀಯ ಜನ್ಮ ಕೊಟ್ಟ ರಾಮನಗರ ಜಿಲ್ಲೆಯನ್ನು ಕೈಬಿಡಬೇಕಾ? ಎಂಬ ಜಿಜ್ಞಾಸೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಇದ್ದಾರೆ. ಈ ಹಿನ್ನೆಲೆಯಲ್ಲಿ ತೀವ್ರ ಗೊಂದಲಕ್ಕೆ ಎಚ್‌ಡಿಕೆ ಸಿಲುಕಿದ್ದಾರೆ. ಈ ಮೊದಲು ಸಿ.ಎಸ್. ಪುಟ್ಟರಾಜು ಅವರನ್ನೇ ಕಣಕ್ಕಿಳಿಸುವ ನಿರ್ಧಾರವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪುಟ್ಟರಾಜು ಅವರಿಗೆ ಸೂಚನೆಯನ್ನೂ ಕೊಟ್ಟಿದ್ದರು. ಅವರೂ ಸಹ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಆದರೆ, ಅಲ್ಲಿನ ಚಿತ್ರಣವೇ ಬದಲಾಯಿತು.
ಕಾಂಗ್ರೆಸ್‌ನಿಂದ ಗುತ್ತಿಗೆದಾರ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಕಣಕ್ಕಿಳಿದರು. ಇತ್ತ ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರಾದರೂ ಅವರಿಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಅವರ ಮುಂದಿನ ನಡೆ ಏನು ಎಂಬುದು ಗೊತ್ತಾಗಿಲ್ಲ. ಅವರನ್ನು ಎರಡು ದಿನಗಳ ಹಿಂದೆ ಬಿಜೆಪಿ ವರಿಷ್ಠರು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರಾದರೂ ಮುಂದಿನ ನಿರ್ಧಾರ ಏನು ಎಂಬುದನ್ನು ಸುಮಲತಾ ಸ್ಪಷ್ಟಪಡಿಸಿಲ್ಲ. ಈ ಮಧ್ಯೆ ಸಿ.ಎಸ್. ಪುಟ್ಟರಾಜು ಸಹ ಎಚ್.ಡಿ. ಕುಮಾರಸ್ವಾಮಿ ಅವರೇ ಇಲ್ಲಿನ ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ, ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮತದಾರರು ಕ್ಷೇತ್ರವನ್ನು ಬಿಡಬೇಡಿ ಎಂದು ಪಟ್ಟುಹಿಡಿದಿದ್ದಾರೆ.
ಮಂಡ್ಯದಿಂದ ಸ್ಪರ್ಧೆ ಮಾಡುವ ಚಿಂತನೆ ಏಕೆ?
ಇನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಏನು ಕಾರಣ ಎಂಬುದನ್ನು ನೋಡುವುದಾದರೆ, ಜೆಡಿಎಸ್‌ಗೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಜತೆ ಮೈತ್ರಿಯನ್ನು ಮಾಡಿಕೊಳ್ಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಕೊಚ್ಚಿ ಹೋಗಿರುವ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಿದೆ. ಈ ಕಾರಣಕ್ಕೆ ಈಗ ಜೆಡಿಎಸ್ ಪಾಲಾಗಿರುವ ಮೂರೂ ಕ್ಷೇತ್ರವನ್ನು ಗೆಲ್ಲಬೇಕು. ಇದೇ ಕಾರಣಕ್ಕೆ ತಾವು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಜನರು ಮತ ಹಾಕಿ ಜೆಡಿಎಸ್ ಅನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಎಚ್‌ಡಿಕೆ ಹೊಂದಿದ್ದಾರೆ. ಇದರ ಜತೆಗೆ ಎನ್‌ಡಿಎ ಸರ್ಕಾರ ರಚನೆ ಬಳಿಕ ಕೇಂದ್ರದಲ್ಲಿ ಮಂತ್ರಿ ಸ್ಥಾನವೂ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ರಾಜಕೀಯವಾಗಿ ಮತ್ತಷ್ಟು ಶಕ್ತಿಯನ್ನು ಪಡೆಯಬಹುದಾಗಿದೆ.
ಸ್ಪರ್ಧೆ ಬಗ್ಗೆ ಜಿಜ್ಞಾಸೆ ಏಕೆ?
ಈಗಾಗಲೇ ಮಂಡ್ಯ ಸ್ಪರ್ಧೆ ಬಗ್ಗೆ ಕೂಗೆದ್ದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮತದಾರರು ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕ್ಷೇತ್ರ ಬಿಡದಂತೆ ಮನವಿ ಮಾಡಿದ್ದಾರೆ. ನಮ್ಮನ್ನು ಬಿಟ್ಟು ಹೋಗಬೇಡಿ. ನಮ್ಮನ್ನು ಅನಾಥರಾನ್ನಾಗಿ ಮಾಡಬೇಡಿ ಎಂದು ಒತ್ತಾಯ ಮಾಡಿದ್ದಾರೆ. ಹೀಗಾಗಿ ರಾಜಕೀಯವಾಗಿ ಜನ್ಮ ಕೊಟ್ಟ ರಾಮನಗರ ಜಿಲ್ಲೆ ಬಿಟ್ಟುಕೊಡಬೇಕಾ ಎಂಬ ಜಿಜ್ಞಾಸೆಯಲ್ಲಿ ಎಚ್‌ಡಿಕೆ ಇದ್ದಾರೆ.
ಇದನ್ನೂ ಓದಿ: Lok Sabha Election 2024: ರೆಸಾರ್ಟ್‌ನಲ್ಲೇ ಆಪರೇಷನ್ ಹಸ್ತ ಶುರು ಮಾಡಿದ ಸಿಎಂ; ಬಿಎಸ್‌ವೈ ಆಪ್ತರೇ ಟಾರ್ಗೆಟ್!
ಸ್ಪರ್ಧೆ ಬಗ್ಗೆ ಇಂದೇ ನಿರ್ಧಾರ
ರಾಮನಗರ ಜನತೆಯ ಆಶೀರ್ವಾದದಿಂದ ಗೆದ್ದು ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದ ಕುಮಾರಸ್ವಾಮಿ ಅವರಿಗೆ ಈಗ ಮಂಡ್ಯದ ಪ್ರತಿಷ್ಠೆಗೆ ಮಣಿಯಬೇಕಾ? ಎಂಬ ಪ್ರಶ್ನೆ ಎದುರಾಗಿದೆ. ರಾಜಕೀಯವಾಗಿ ದೇವೇಗೌಡರಿಗೂ ಜನ್ಮಕೊಟ್ಟದ್ದು ಇದೇ ರಾಮನಗರ ಜನತೆಯಾಗಿದ್ದಾರೆ. ಹೀಗಾಗಿ ಗೊಂದಲದಲ್ಲಿ ಎಚ್‌ಡಿಕೆ ಇದ್ದಾರೆ. ಈ ಬಗ್ಗೆ ಇಂದು (ಮಂಗಳವಾರ) ತಮ್ಮ ಜೆ.ಪಿ. ನಗರ ನಿವಾಸದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ಕರೆದಿರುವ ಎಚ್‌ಡಿಕೆ ಅಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ.