ಮೈಸೂರು: ಲೋಕಸಭೆ ಚುನಾವಣೆ (Lok Sabha Election 2024) ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ (Mysore BJP candidate) ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರ ರೇಡಿಯೋ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕಾಂಗ್ರೆಸ್ ದೂರು ನೀಡಿದೆ.
ಕರ್ನಾಟಕ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ದೂರು ನೀಡಿದ್ದಾರೆ. 104.8 ರೇಡಿಯೋ ಮಿರ್ಚಿ ಚಾನೆಲ್‌ನಲ್ಲಿ ಯದುವೀರ್ ಅವರ ʼರಾಜರ ಬಾಯಿಂದ ರಾಜರ ಕಥೆಗಳುʼ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದರಲ್ಲಿ ಮೈಸೂರಿನ ಹಿಂದಿನ ಮಹಾರಾಜರು ಸೇರಿದಂತೆ ಹಲವು ರಾಜರ ಬಗ್ಗೆ ಯದುವೀರ್ ಮಾತನಾಡುತ್ತಾರೆ.
ಯದುವೀರ್ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಬೇಕು. ಅವರು ರೇಡಿಯೋದಲ್ಲಿ ಮಾತನಾಡುವ ಬಗ್ಗೆ ಕ್ಷಣ ಕ್ಷಣಕ್ಕೂ ರೇಡಿಯೋದಲ್ಲಿ ಜಾಹೀರಾತು ಬರುತ್ತಿದೆ. ಒಬ್ಬ ವ್ಯಕ್ತಿಯಾಗಿ ರಾಜರ ಬಗ್ಗೆ ಮಾತನಾಡುವುದರಲ್ಲಿ ತಪ್ಪಿಲ್ಲ. ಆದರೆ ದಿನಾಂಕ 26.04.2024ರ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಯದುವೀರ್ ಅವರ ಮಾತುಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಈ ಕೂಡಲೇ ರೇಡಿಯೋದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನಿರ್ಬಂಧ ವಿಧಿಸಬೇಕು- ಎಂದು ಚುನಾವಣಾ ಆಯುಕ್ತರಿಗೆ ಕೆಪಿಸಿಸಿ ವಕ್ತಾರರು ಮನವಿ ಮಾಡಿದ್ದಾರೆ.
ಚುನಾವಣೆ ನೀತಿ ಸಂಹಿತೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ರೇಡಿಯೋ- ಟಿವಿ ಸೇರಿದಂತೆ ಸಾರ್ವಜನಿಕ ಮಾಧ್ಯಮದಲ್ಲಿ ನೀಡುವ ಕಾರ್ಯಕ್ರಮಗಳನ್ನು ಜಾಹೀರಾತು ಎಂದು ಪರಿಗಣಿಸಬೇಕೇ ಬೇಡವೇ ಎಂಬ ಕುರಿತು ಚುನಾವಣಾ ಆಯೋಗ ನಿರ್ಧರಿಸಬೇಕಿದೆ. ಅಭ್ಯರ್ಥಿಗಳು ನೀಡುವ ಸಂದರ್ಶನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ಅರಸರಿಂದ ಅಭಿವೃದ್ಧಿ ಕಾರ್ಯ
ಮೈಸೂರಿನ ಆಳರಸರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇದೆಲ್ಲವನ್ನೂ ಪರಿಗಣಿಸಿ ರಾಜಮನೆತನದ ಯದುವೀರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದೇವೆ. ಈ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ (Lok Sabha Election 2024) ಸಂಸದ ಪ್ರತಾಪ್ ಸಿಂಹಗಿಂತಲೂ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.
ಕಾಂಗ್ರೆಸ್‌ನವರು ಮಹಾರಾಜ ಹಾಗೂ ಸಾಮಾನ್ಯ ಅಭ್ಯರ್ಥಿ ನಡುವಿನ ಚುನಾವಣೆ ಎನ್ನುತ್ತಿರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ನಮ್ಮ ಅಭ್ಯರ್ಥಿ ಕೂಡ ಜನಸಾಮಾನ್ಯ. ನಮ್ಮ ಅಭ್ಯರ್ಥಿ ಜನಸಾಮಾನ್ಯರ ಜೊತೆಯೇ ಇದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಹಾರಾಜರು. ಆ ಮಹಾರಾಜರ ವಿರುದ್ಧ ನಮ್ಮ ಸಾಮಾನ್ಯ ಅಭ್ಯರ್ಥಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: ಪ್ರತಾಪ್ ಸಿಂಹಗಿಂತಲೂ ಯದುವೀರ್ ಉತ್ತಮ ಅಭ್ಯರ್ಥಿ ಎಂದ ರಾಧಾಮೋಹನ್ ದಾಸ್