Site icon Vistara News

Lok Sabha Election 2024: ಏ. 14ರಂದು ಮೋದಿ ಬೆಂಗಳೂರು ಕಾರ್ಯಕ್ರಮ ರದ್ದು; ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ ರೋಡ್‌ ಶೋ

Lok Sabha Election 2024 Pm Modi Bengaluru event cancelled on April 14 Rally in Mysuru and roadshow in Mangaluru

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್ 14ರಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಅವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರೋಡ್ ಶೋ (Modi Road Show) ನಡೆಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಬೆಂಗಳೂರಿನ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಲಾಗಿದ್ದು, ಅಂದು ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ಪ್ಲ್ಯಾನ್‌ ಮಾಡಲಾಗಿದೆ. ಜತೆಗೆ ಮಂಗಳೂರಿನಲ್ಲಿ ರೋಡ್‌ ಶೋ ನಡೆಸಲು ಪ್ರಧಾನಿ ಕಾರ್ಯಾಲಯದಿಂದ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಚುನಾವಣೆ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಏ. 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮೈಸೂರು ಮಹಾರಾಜ ಮೈದಾನದಲ್ಲಿ ಬೃಹತ್‌ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಕೊಡಗು – ಮೈಸೂರು, ಚಾಮರಾಜನಗರ, ಮಂಡ್ಯ ಲೋಕಸಭಾ ಕ್ಷೇತ್ರಗಳ ಜನರನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.

ಮಂಗಳೂರು ರೋಡ್‌ ಶೋಗೆ ರೂಟ್‌ ಮ್ಯಾಪ್‌ ಸಿದ್ಧ

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ಮೆಗಾ ರೋಡ್ ಶೋವನ್ನು ಆಯೋಜನೆ ಮಾಡಲಾಗಿದೆ. ಅಂದು ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಲಿದೆ. ನಾರಾಯಣ ಗುರು ಸರ್ಕಲ್ ಬಳಿ ಮೋದಿ ಆಗಮಿಸಿ, ಅಲ್ಲಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ರೋಡ್ ಶೋವನ್ನು ಆರಂಭಿಸಲಿದ್ದಾರೆ.

ಲೇಡಿಹಿಲ್ ನಾರಾಯಣ ಗುರು ಸರ್ಕಲ್‌ನಿಂದ ಲಾಲ್‌ಬಾಗ್‌ನ ಮಂಗಳೂರು ಪಾಲಿಕೆ ಕಚೇರಿ ಎದುರು ತಲುಪಲಿರುವ ರೋಡ್ ಶೋ, ಅಲ್ಲಿಂದ ಬಳ್ಳಾಲ್‌ಬಾಗ್ ದಾಟಿ ಎಂ.ಜಿ. ರಸ್ತೆ ಮೂಲಕ ಸಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ ತಲುಪಲಿದೆ. ಬಳಿಕ ಕೆ.ಎಸ್. ರಾವ್ ರಸ್ತೆ ಮೂಲಕ ಸಾಗಿ ಹಂಪನಕಟ್ಟೆ ಸಿಗ್ನಲ್ ಬಳಿ ರೋಡ್ ಶೋ ಅಂತ್ಯವಾಗಲಿದೆ. ಸುಮಾರು 2.5 ಕಿ.ಮೀ. ರೋಡ್‌ ಶೋ ಸಾಗಲಿದೆ.

ಈ ಮೊದಲು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಸಮಾವೇಶ ರದ್ದುಪಡಿಸಿ ರೋಡ್ ಶೋ ನಡೆಸಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: LoK Sabha Election 2024: ಮೇಕೆದಾಟು ಪಾದಯಾತ್ರೆಯಲ್ಲಿ ನಾನು ತೂರಾಡಿದ್ನಾ? ಎಚ್‌ಡಿಕೆ ಹೀಗೆ ಹೇಳಿದ್ದು ಯಾರಿಗೆ?

ಮೈಸೂರಲ್ಲಿ ಸಮಾವೇಶ

ಹಳೇ ಮೈಸೂರು, ಕರಾವಳಿ ಮೇಲೆ ಬಿಜೆಪಿ ಕಣ್ಣಿಟ್ಟಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೋಡಿ ಮಾಡಿಸಲು ಮುಂದಾಗಿದೆ. ಹೀಗಾಗಿ ಮೈಸೂರಿ‌ನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು- ಕೊಡಗು ಸೇರಿದಂತೆ ಕ್ಲಸ್ಟರ್ ಹಂತದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸಲಾಗಿದೆ.

ಏಪ್ರಿಲ್ 19ರಂದು ಬೆಂಗಳೂರಿಗೆ ಮೋದಿ?

ಇನ್ನು ಏಪ್ರಿಲ್‌ 14ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಬೆಂಗಳೂರು ಕಾರ್ಯಕ್ರಮವನ್ನು ಪ್ರಧಾನಿ ಕಾರ್ಯಾಲಯದಿಂದ ರದ್ದು ಮಾಡಲಾಗಿದೆ. ಆದರೆ, ಇದೇ ಏಪ್ರಿಲ್‌ 19ರಂದು ಬೆಂಗಳೂರಿಗೆ ಮೋದಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಅಂದು ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version