ಬೆಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಇಂದು (ಜೂನ್ 9) ಸಂಜೆ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ (Modi 3.0 Cabinet). ಈ ಮಧ್ಯೆ ಮೋದಿ ಅವರೊಂದಿಗೆ ಸಚಿವರಾಗಿ ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ರಾಜ್ಯದ ಐವರು ಸಂಪುಟ ಸಭೆ ಸೇರಲಿದ್ದಾರೆ ಎನ್ನಲಾಗುತ್ತಿದ್ದು, ಅಚ್ಚರಿ ಎನ್ನುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ.ಸೋಮಣ್ಣ (V. Somanna) ಅವರಿಗೆ ಮಣೆ ಹಾಕಲಾಗಿದೆ.
ರಾಜ್ಯದಿಂದ ಯಾರೆಲ್ಲ?
ರಾಜ್ಯದಿಂದ ಕ್ಯಾಬಿನೆಟ್ ಖಾತೆ ಸಚಿವರಾಗಿ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್ ಮತ್ತು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಇನ್ನು ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಿಗಲಿದೆ ಎನ್ನಲಾಗುತ್ತಿದೆ.
ಸೋಮಣ್ಣ ಅಚ್ಚರಿಯ ಆಯ್ಕೆ
ವಿಶೇಷ ಎಂದರೆ ಸೋಮಣ್ಣ ಅವರದ್ದು ಅಚ್ಚರಿಯ ಆಯ್ಕೆ. ಉಳಿದ ನಾಲ್ವರ ನಾಲ್ವರ ಹೆಸರು ಮೊದಲೇ ಚಾಲ್ತಿಯಲ್ಲಿದ್ದರೂ ಸೋಮಣ್ಣ ಅವರ ಬಗ್ಗೆ ಹೆಚ್ಚು ಚರ್ಚೆ ನಡೆದಿರಲಿಲ್ಲ. ಇದೀಗ ಅವರು ಅಚ್ಚರಿ ಎಂಬಂತೆ ಆಯ್ಕೆಯಾಗಿದ್ದಾರೆ. ವಿ. ಸೋಮಣ್ಣ ಅವರು ಈ ಹಿಂದೆ ಗೋವಿಂದ ರಾಜ ನಗರ ಕ್ಷೇತ್ರದ ಶಾಸಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ಸೂಚನೆ ಮೇರೆಗೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಮತ್ತು ಚಾಮರಾಜ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ತಮ್ಮನ್ನು ಅತಂತ್ರಗೊಳಿಸಿದ ವಿಚಾರದಲ್ಲಿ ಅವರು ಸಿಟ್ಟಾಗಿದ್ದು, ಬಿಜೆಪಿ ಬಿಡುವ ಬಗ್ಗೆ ಮಾತನಾಡಿದ್ದರು. ಬಳಿಕ ಹೈಕಮಾಂಡ್ ಅವರನ್ನು ಸಮಾಧಾನ ಮಾಡಿತ್ತು.
ಒಂದು ಹಂತದಲ್ಲಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಸುದ್ದಿ ಹರಡಿತ್ತಾದರೂ ಅದು ನಾರಾಯಣ ಭಾಂಡಗೆ ಅವರಿಗೆ ಒಲಿದ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಮತ್ತೆ ನಿರಾಸೆ ಅನುಭವಿಸಿದ್ದರು. ಇದೀಗ ಅವರು ಬಯಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಸ್ಪರ್ಧಿಸಿ ಜಯ ಗಳಿಸಿದ್ದು, ಸಚಿವ ಸ್ಥಾನ ಒಲಿಯುತ್ತಿದೆ.
ದಲಿತ, ಒಬಿಸಿ ಕೋಟಾದ ಸಂಸದರಿಗೆ ನಿರಾಸೆ
ದಲಿತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನಿಸಿದ್ದ ಗೋವಿಂದ ಕಾರಜೋಳ ಮತ್ತು ರಮೇಶ್ ಜಿಗಜಿಣಿಗೆ ಅವರಿಗೆ ನಿರಾಸೆಯಾಗಿದೆ. ಒಬಿಸಿ ಕೋಟಾದಲ್ಲಿ ಸಚಿವ ಸ್ಥಾನದ ಆಸೆಯಲ್ಲಿ ಇದ್ದ ಕೋಟಾ ಶ್ರೀನಿವಾಸ ಪ್ರಸಾದ್ ಮತ್ತು ಪಿ.ಸಿ. ಮೋಹನ್ ಅವರಿಗೂ ಅದೃಷ್ಟ ಒಲಿದಿಲ್ಲ. ಇನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಕೂಡ ನಿರಾಸೆಗೆ ಒಳಗಾಗಿದ್ದಾರೆ. ಲಿಂಗಾಯತ ಕೋಟಾದಲ್ಲಿ ತಮ್ಮ ಪುತ್ರ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನಿಸಿದ್ದರು. ಇದು ಕೂಡ ಕೈಗೂಡಿಲ್ಲ. ಇತ್ತ ಲಿಂಗಾಯತ ಕೋಟಾದಲ್ಲಿ ಸೋಮಣ್ಣ ಅವರಿಗೆ ಜಾಕ್‌ಪಾಟ್ ಹೊಡೆದಿದೆ.
ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ