Site icon Vistara News

Parliament Flashback: ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್‌ ಮಧ್ಯೆ ನಡೆದಿತ್ತು ಐತಿಹಾಸಿಕ ಕದನ!

Parliament Flashback

Parliament Flashback

ಬೆಂಗಳೂರು: 1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ (Sonia Gandhi) ಮತ್ತು ಬಿಜೆಪಿಯ ಫೈರ್‌ ಬ್ರಾಂಡ್‌ ನಾಯಕಿ, ದಿಲ್ಲಿಯ ಮುಖ್ಯಮಂತ್ರಿಯೂ ಆಗಿದ್ದ ಸುಷ್ಮಾ ಸ್ವರಾಜ್‌ (Sushma Swaraj) ನಡುವಿನ ಮುಖಾಮುಖಿ (Parliament Flashback).

ಆಗಷ್ಟೇ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೆ ಏರಿಸಲಾಗಿತ್ತು. ಅವರನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನವಾಗಿತ್ತು. ತಮ್ಮ ಪತಿ ರಾಜೀವ್‌ ಗಾಂಧಿ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಅಮೇಠಿ ಲೋಕಸಭೆ ಕ್ಷೇತ್ರ ಸೋನಿಯಾ ಅವರ ಮೊದಲ ಆಯ್ಕೆಯಾಗಿತ್ತು. ಅಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಆದರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ 1998ರ ಲೋಕಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿ ಕಾಂಗ್ರೆಸ್‌ಗೆ ಸೋಲಾಗಿತ್ತು. ರಾಜೀವ್‌ ಗಾಂಧಿ ಅವರ ಪರಮಾಪ್ತರಾಗಿದ್ದ ಕ್ಯಾಪ್ಟನ್‌ ಸತೀಶ್‌ ಶರ್ಮಾ ಅವರನ್ನು ಬಿಜೆಪಿ ಅಭ್ಯರ್ಥಿ ಡಾ. ಸಂಜಯ್‌ ಸಿಂಗ್‌ ಸೋಲಿಸಿದ್ದರು. ಹಾಗಾಗಿ ಅಲ್ಲಿ ಸುಲಭವಾಗಿ ಗೆಲ್ಲುವ ವಿಶ್ವಾಸ ಸೋನಿಯಾಗಿರಲಿಲ್ಲ. ಹಾಗಾಗಿ ಸೋನಿಯಾ ಗಾಂಧಿ ಹಿತೈಷಿಗಳೆಲ್ಲ ಸೇರಿ ಲೆಕ್ಕಾಚಾರ ಹಾಕಿ ಆರಿಸಿದ ಮತ್ತೊಂದು ಕ್ಷೇತ್ರವೇ ಬಳ್ಳಾರಿ.

ಏಕೆಂದರೆ 1952ರಿಂದ 1999ರವರೆಗೆ ನಡೆದ 12 ಚುನಾವಣೆಗಳಲ್ಲೂ ಕಾಂಗ್ರೆಸ್‌ ಬಳ್ಳಾರಿಯಲ್ಲಿ ಜಯ ಸಾಧಿಸಿತ್ತು.
ಹೈದರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿಗೆ ಬಂದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು. ಸೋನಿಯಾ ನಾಮಪತ್ರದ ಬೆನ್ನಿಗೇ ಸುಷ್ಮಾ ಸ್ವರಾಜ್‌ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಬಿಜೆಪಿ ನಡುಕ ಹುಟ್ಟಿಸಿತು. ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್‌ ಅವರ ಚುನಾವಣಾ ಪ್ರಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ವಿದೇಶಿ ಸೊಸೆ ಮತ್ತು ಸ್ವದೇಶಿ ಮಗಳ ನಡುವಿನ ಸ್ಪರ್ಧೆ ಎಂದೇ ಮಾಧ್ಯಮಗಳು ಬಣ್ಣಿಸಿದವು. ಸುಷ್ಮಾ ಸ್ವರಾಜ್‌ ಅವರು ಕನ್ನಡದಲ್ಲೇ ಭಾಷಣ ಮಾಡಿ ಅಚ್ಚರಿ ಮೂಡಿಸಿದರು. ಕಾಂಗ್ರೆಸ್‌ ಮತ್ತು ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರು ಇಲ್ಲಿಗೆ ಬಂದು ಪ್ರಚಾರ ಮಾಡಿದರು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿ ಅವರು 56,100 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಅತ್ತ ಅಮೇಠಿಯಲ್ಲಿ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರ ತೊರೆದರು. ಸುಷ್ಮಾ ಸ್ವರಾಜ್‌ ಇಲ್ಲಿ ಸೋತರು. ಆದರೆ ಪ್ರತಿವರ್ಷ ವರ ಮಹಾಲಕ್ಷ್ಮೀ ಹಬ್ಬದ ದಿನ ಬಳ್ಳಾರಿಗೆ ಬಂದು ಪೂಜೆಯಲ್ಲಿ ಭಾಗಿಯಾಗುತ್ತಿದ್ದರು. ಅವರ ಸ್ಪರ್ಧೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಿತು. ಮುಂದೆ 2004, 2009, 20014 ಮತ್ತು 20019ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಜಯ ದಾಖಲಿಸಿದ್ದೇ ಇದಕ್ಕೆ ಸಾಕ್ಷಿ.

ಗುರುವಿಗೇ ಸೋಲಿನ ರುಚಿ ತೋರಿಸಿದ ಆಸ್ಕರ್‌ ಫೆರ್ನಾಂಡಿಸ್‌!

ಡಾ. ಟಿ.ಎ.ಪೈ ಅವರು ಖ್ಯಾತ ವೈದ್ಯ, ಶಿಕ್ಷಣ ತಜ್ಞ ಮತ್ತು ಅರ್ಥ ಶಾಸ್ತ್ರಜ್ಞರೆಂದು ಖ್ಯಾತಿ ಪಡೆದವರು. ಆಧುನಿಕ ಮಣಿಪಾಲದ ನಿರ್ಮಾತೃರು. ಇಂದು ಮಣಿಪಾಲ ಆರೋಗ್ಯ ಮತ್ತು ಶಿಕ್ಷಣದಲ್ಲಿ ವಿಶ್ವ ಪ್ರಸಿದ್ಧಿ ಪಡೆಯಲು ಡಾ. ಟಿ.ಎ. ಪೈ ಅವರೇ ಕಾರಣರು. ಇಂಥ ಶ್ರೇಯಸ್ಸಿನ ಪೈ ಅವರು 1977ರಲ್ಲಿ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಚಂಡ ಜಯ ದಾಖಲಿಸಿದರು. ಆದರೆ ಇವರ ಬಗ್ಗೆ ವೈಯಕ್ತಿಕ ಕಾರಣಕ್ಕೆ ಮುನಿಸು ಹೊಂದಿದ್ದ ಇಂದಿರಾ ಗಾಂಧಿ ಅವರು 1980ರ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದರು. ಅಷ್ಟೇ ಅಲ್ಲ ಇವರ ಶಿಷ್ಯರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ಟಿಕೆಟ್‌ ನೀಡಿ ಅಚ್ಚರಿ ಮೂಡಿಸಿದರು.

ಪುರಸಭೆ ಸದಸ್ಯರಾಗಿ ಉಡುಪಿಗೆ ಸೀಮಿತರಾಗಿ ಓಡಾಡಿಕೊಂಡಿದ್ದ, ಲೋಕಸಭೆಯ ಕನಸೂ ಕಾಣದಿದ್ದ ಯುವಕ ಆಸ್ಕರ್‌ ಫೆರ್ನಾಂಡಿಸ್‌ ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್‌ ಆಗಿ ಬಿಟ್ಟರು. ಟಿ.ಎ. ಪೈ ಅವರು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ (ಯು) ಪಕ್ಷದಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಅಂದ ಹಾಗೆ ಈ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ (ಯು) ಎನ್ನುವುದು ಇಂದಿರಾ ಗಾಂಧಿ ಅವರ ವಿರುದ್ಧ ಬಂಡೆದ್ದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸ್ಥಾಪಿಸಿದ ಪಕ್ಷವಾಗಿತ್ತು.

ಅಂದಿನ ಚುನಾವಣೆಯಲ್ಲಿ ಟಿ.ಎ.ಪೈ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು! ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಎಸ್‌. ಆಚಾರ್ಯ ಎರಡನೇ ಸ್ಥಾನ ಪಡೆದರು. ಆಸ್ಕರ್‌ ಫೆರ್ನಾಂಡಿಸ್‌ ಸಂಸದರಾಗಿ ಆಯ್ಕೆಯಾದರು.
ಮುಂದಿನ 1984ರ ಚುನಾವಣೆಯಲ್ಲಿ ಆಸ್ಕರ್‌ ಫರ್ನಾಂಡಿಸ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನ್ಯಾ. ಕೆ.ಎಸ್‌. ಹೆಗ್ಡೆ ಅವರನ್ನೇ ಸೋಲಿಸಿದರು. ನ್ಯಾ. ಹೆಗ್ಡೆ ಅವರು 1977ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜನತಾ ಪರಿವಾರದ ಅಭ್ಯರ್ಥಿಯಾಗಿ ಗೆದ್ದಿದ್ದರು. ಹೀಗೆ ಆಸ್ಕರ್‌ ಫರ್ನಾಂಡಿಸ್‌ ನಿರಂತರ ನಾಲ್ಕು ಬಾರಿ ಉಡುಪಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

ಇದನ್ನೂ ಓದಿ: Parliament Flashback: ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಕಾಂಗ್ರೆಸ್‌ ಕಿರುಕುಳದಿಂದಾಗಿ ಪ್ರಧಾನಿ ಹುದ್ದೆ ತೊರೆದಿದ್ದ ದೇವೇಗೌಡರು!

ಆದರೆ 1998ರಲ್ಲಿ ಬಿಜೆಪಿಯ ಐ.ಎಂ. ಜಯರಾಂ ಶೆಟ್ಟಿ ಅವರೆದುರು ಆಸ್ಕರ್‌ ಫೆರ್ನಾಂಡಿಸ್‌ ಸೋತು ಹೋದರು. ಮತ್ತೆಂದೂ ಅವರು ಲೋಕಸಭೆಗೆ ಸ್ಪರ್ಧಿಸಲು ಹೋಗಲಿಲ್ಲ. ಬದಲಿಗೆ ನಾಲ್ಕು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಆಪ್ತರಾಗಿದ್ದ ಆಸ್ಕರ್‌, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಯನ್ನು ನಿರ್ವಹಿಸಿದ್ದರು. 2021ರಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದರು.

Exit mobile version