Site icon Vistara News

Money Guide: ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ತಿಳಿದಿರಲೇಬೇಕಾದ ಅಂಶಗಳಿವು

Money Guide

ಬೆಂಗಳೂರು: ಭಾರತ ಕೃಷಿ ಪ್ರಧಾನ ದೇಶ. ಕೃಷಿಯೇ ಇಲ್ಲಿನ ಜೀವನಾಡಿ. ಇದು ದೇಶದ ಜಿಡಿಪಿಗೆ ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುವುದಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ. ಅದಾಗ್ಯೂ ಕೃಷಿಕರು ಅನೇಕ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ಅನಿರೀಕ್ಷಿತ ಹವಾಮಾನ, ಗೊಬ್ಬರ, ಕೀಟ ನಾಶಕ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಡಿಮೆ ಬಂಡವಾಳ ಹೀಗೆ ನಾನಾ ರೀತಿಯ ಸವಾಲು ಅವರ ಮುಂದಿರುತ್ತದೆ. ಇದೇ ಕಾರಣಕ್ಕೆ ಕೃಷಿಕರಿಗೆ ನೆರವಾಗಲು ಸರ್ಕಾರಗಳು ಮತ್ತು ಬ್ಯಾಂಕ್‌ನಂತಹ ಹಣಕಾಸು ಸಂಸ್ಥೆಗಳು (Agriculture Loan) ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಒದಗಿಸುತ್ತವೆ. ಕೃಷಿ ಸಾಲ ಪಡೆದುಕೊಳ್ಳುವುದು ಹೇಗೆ? ಎಷ್ಟು ಬಡ್ಡಿ ವಿಧಿಸಲಾಗುತ್ತದೆ? ಅರ್ಹತೆಗಳೇನು? ಯಾವೆಲ್ಲ ದಾಖಲೆಗಳು ಅಗತ್ಯ? ಮುಂತಾದ ಪ್ರಶ್ನೆಗಳಿಗೆ ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಬಡ್ಡಿದರ

ದೇಶದಲ್ಲಿನ ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳಿಗೆ ಹೊಂದಿಕೊಂಡು ಕೃಷಿ ಸಾಲಕ್ಕೆ ವಿಧಿಸುವ ಬಡ್ಡಿ ದರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮಾತ್ರವಲ್ಲ ಸಾಲ ಪಡೆದುಕೊಳ್ಳುವವರ ಪ್ರೊಫೈಲ್‌, ಅರ್ಹತೆ ಮತ್ತು ಉದ್ದೇಶಗಳು ಕೂಡ ಬಡ್ಡದರದ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank of India) ಕೃಷಿ ಸಾಲಗಳ ಮೇಲೆ ವಿಧಿಸಬಹುದಾದ ಬಡ್ಡಿದರಗಳ ಬಗ್ಗೆ ಬ್ಯಾಂಕುಗಳಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಈ ದರಗಳು ಸಾಮಾನ್ಯವಾಗಿ ಕಡಿಮೆಯಿರುತ್ತವೆ. ರೈತರಿಗೆ ಸುಲಭವಾಗಿ ಆರ್ಥಿಕ ಸಹಾಯ ಒದಗಿಸುವ ಗುರಿಯನ್ನು ಇದು ಹೊಂದಿದೆ. ಸಾಮಾನ್ಯವಾಗಿ ಮರುಪಾವತಿ ಅವಧಿಯನ್ನು ಅವಲಂಬಿಸಿ ವರ್ಷಕ್ಕೆ ಶೇ. 4ರಿಂದ ಶೇ. 14ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಕೆಲವೊಮ್ಮೆ ಸರ್ಕಾರ ಶೂನ್ಯ ಬಡ್ಡಿದರದಲ್ಲಿಯೂ ಕೃಷಿ ಸಾಲ ಒದಗಿಸುತ್ತದೆ.

ಅರ್ಹತೆ

ಕೃಷಿ ಸಾಲ ಹೊಂದಲು ಅಗತ್ಯವಾದ ಕೆಲವು ಸಾಮಾನ್ಯ ಅರ್ಹತೆಗಳು:

ಭೂ ಮಾಲೀಕತ್ವ: ಇದು ಮೊದಲ ಅರ್ಹತೆ. ರೈತರು ಕೃಷಿ ಭೂಮಿಯ ಸ್ಪಷ್ಟ ಮಾಲೀಕತ್ವವನ್ನು ಹೊಂದಿರಬೇಕು ಅಥವಾ ಸಾಲ ನೀಡುವ ಸಂಸ್ಥೆ ನಿರ್ದಿಷ್ಟಪಡಿಸಿದ ಕನಿಷ್ಠ ಅವಧಿಗೆ ಗುತ್ತಿಗೆ ಹಕ್ಕುಗಳನ್ನು ಹೊಂದಿರಬೇಕು. ಭೂಮಿಯನ್ನು ಹೆಚ್ಚಾಗಿ ಸಾಲದ ಆಧಾರವಾಗಿ ಬಳಸಲಾಗುತ್ತದೆ. ಭೂ ಮಾಲೀಕತ್ವ ಲಭ್ಯವಿಲ್ಲದ ಸಂದರ್ಭದಲ್ಲಿ, ಜಾಯಿಂಟ್‌ ಲಿಯಾಬಲಿಟಿ ಗ್ರೂಪ್‌ (Joint Liability Group) ಮತ್ತು ಸ್ವಸಹಾಯ ಗುಂಪುಗಳನ್ನು ರಚಿಸುವ ಮೂಲಕ ಗುಂಪು ಸಾಲ ನೀಡಲಾಗುತ್ತದೆ.
ವಯೋಮಿತಿ: ಸಾಮಾನ್ಯವಾಗಿ ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಸಾಲದ ಇತಿಹಾಸ: ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ಅರ್ಜಿದಾರರ ಕ್ರೆಡಿಟ್ ಇತಿಹಾಸ (Credit History)ವನ್ನು ಗಮನಿಸುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಅನುಮೋದನೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಕೃಷಿಯಲ್ಲಿ ಅನುಭವ: ಕೆಲವೊಂದು ಬ್ಯಾಂಕ್‌ಗಳು ಸಾಲ ಅನುಮೋದನೆಗೆ ಕೃಷಿಯಲ್ಲಿ ಕನಿಷ್ಠ ವರ್ಷಗಳ ಅನುಭವವನ್ನು ಹೊಂದಿರಬೇಕು ಎಂಬ ಷರತ್ತು ವಿಧಿಸುತ್ತವೆ. ಸಾಲದ ಪ್ರಕಾರ ಮತ್ತು ಸಂಸ್ಥೆಯನ್ನು ಅವಲಂಬಿಸಿ ಈ ಮಾನದಂಡವು ಬದಲಾಗುತ್ತದೆ.
ಮರುಪಾವತಿ ಸಾಮರ್ಥ್ಯ: ಉದ್ದೇಶಿತ ಕೃಷಿಯಿಂದ ಲಭಿಸಬಹುದಾದ ಆದಾಯ ಮತ್ತು ಸಾಲಗಾರನ ಇತರ ಆದಾಯದ ಮೂಲ ಲೆಕ್ಕ ಹಾಕಿ ಬ್ಯಾಂಕುಗಳು ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸುತ್ತವೆ.
ಆಧಾರ: ಸಾಮಾನ್ಯವಾಗಿ ಬ್ಯಾಂಕುಗಳು ನಿರ್ದಿಷ್ಟ ಮಿತಿ ಅಂದರೆ 1.6 ಲಕ್ಷ ರೂ.ವರೆಗಿನ ಸಾಲಗಳಿಗೆ ಭೂಮಿಯ ಆಧಾರ ಸಲ್ಲಿಸುವಂತೆ ಒತ್ತಾಯಿಸುವುದಿಲ್ಲ. ಆದಾಗ್ಯೂ, ಈ ಮೊತ್ತಕ್ಕಿಂತ ಹೆಚ್ಚಿನ ಸಾಲಗಳಿಗೆ ಕೃಷಿ ಭೂಮಿಯನ್ನು ಅಡಮಾನ ಇಡಲು ಕೇಳಲಾಗುತ್ತದೆ.
ದಾಖಲೆಗಳು: ಸಾಲದ ಅರ್ಜಿಯ ಜತೆಗೆ ಗುರುತಿನ ಪುರಾವೆ, ವಿಳಾಸ ಪುರಾವೆ, ಭೂ ಮಾಲೀಕತ್ವದ ದಾಖಲೆಗಳು, ಆದಾಯ ಪ್ರಮಾಣಪತ್ರಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ ಮತ್ತು ಉದ್ದೇಶಿತ ಕೃಷಿ ಚಟುವಟಿಕೆಗಳಂತಹ ಸಂಬಂಧಿತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ನಿಮ್ಮ ಹಣಕಾಸಿನ ಆವಶ್ಯಕತೆಗಳನ್ನು ಗುರುತಿಸಿ: ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಚಟುವಟಿಕೆಗಳಿಗೆ ಎಷ್ಟು ಹಣ ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ. ಉಪಕರಣ, ಬಿತ್ತನೆ ಬೀಜ, ಗೊಬ್ಬರ, ಜಾನುವಾರುಗಳು ಅಥವಾ ಭೂಮಿಯನ್ನು ಖರೀದಿಸಲು ಅಗತ್ಯವಿರುವ ಮೊತ್ತವನ್ನು ಮತ್ತು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ನಿರ್ಣಯಿಸಿ. ನಿಮ್ಮ ಹಣಕಾಸಿನ ಅವಶ್ಯಕತೆಗಳ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಸರಿಯಾದ ಸಾಲದ ಮೊತ್ತ ಆಯ್ಕೆ ಮಾಡಲು ನೆರವಾಗುತ್ತದೆ.

ವಿವಿಧ ಸಾಲ ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ ಕಲೆ ಹಾಕಿ: ರೈತರಿಗೆ ಹಲವು ರೀತಿಯ ಸಾಲ ದೊರೆಯುತ್ತದೆ. ಪ್ರತಿಯೊಂದೂ ತನ್ನದೇ ಆದ ಅರ್ಹತಾ ಮಾನದಂಡಗಳು, ಬಡ್ಡಿದರಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಇವುಗಳ ಪೈಕಿ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಸಾಲದ ಯೋಜನೆಗಳನ್ನು ಆಯ್ಕೆ ಮಾಡಿ. ಭಾರತದ ಜನಪ್ರಿಯ ಸಾಲ ಯೋಜನೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (KC), ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY), ಚಿನ್ನದ ಸಾಲ, ಸೌರ ಪಂಪ್ ಸಾಲಗಳು, ಡೈರಿ ಸಾಲಗಳು, ಎಸ್‌ಎಚ್‌ಜಿ ಸಾಲಗಳು ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೀಡುವ ವಿವಿಧ ಲೋನ್‌ಗಳು ಸೇರಿವೆ. ಹೆಚ್ಚುವರಿಯಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನೂ ಸಾಲಕ್ಕಾಗಿ ಪರಿಗಣಿಸಿ.

ಬಡ್ಡದರ ಹೋಲಿಸಿ: ವಿವಿಧ ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ವಿಧಿಸಲಾಗುವ ಬಡ್ಡಿದರಗಳನ್ನು ಹೋಲಿಕೆ ಮಾಡಿ ನೋಡಿ. ಕಡಿಮೆ ಬಡ್ಡಿದರ ಇರುವ, ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಕಾಲಾವಧಿ ನೀಡುವ ಸಾಲವನ್ನು ಆಯ್ಕೆ ಮಾಡಿ.

ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ: ಕೃಷಿಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಇದರಿಂದ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು. ಅಗತ್ಯ ದಾಖಲೆಗಳೆಂದರೆ ಮೊದಲೇ ಹೇಳಿದಂತೆ ಗುರುತಿನ ಚೀಟಿ (ಆಧಾರ್‌, ಪ್ಯಾನ್‌ ಕಾರ್ಡ್‌, ವೋಟರ್‌ ಐಡಿ ಇತ್ಯಾದಿ), ವಿಳಾಸದ ಪುರಾವೆ (ವಿದ್ಯುತ್‌ ಬಿಲ್‌, ರೇಷನ್‌ ಕಾರ್ಡ್‌, ಪಾಸ್‌ಪೋರ್ಟ್‌ ಇತ್ಯಾದಿ), ಭೂ ದಾಖಲೆಗಳು, ಆದಾಯದ ಪುರಾವೆ (ಬ್ಯಾಂಕ್‌ ಸ್ಟೇಟ್‌ಮೆಂಟ್‌, ಆದಾಯ ತೆರಿಗೆ ಸಲ್ಲಿಕ ಇತ್ಯಾದಿ), ಕೃಷಿ ಉತ್ಪನ್ನಗಳು, ಕೃಷಿ ಯೋಜನೆಗಳು ಇತ್ಯಾದಿ.

ಗಮನಿಸಿ; ನಿಮ್ಮ ಆದಾಯಕ್ಕೆ ಹೊಂದಿಕೆಯಾಗುವ ಸಾಲ ಮರುಪಾವತಿಯ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಸಲ್ಲಿಸಿರುವ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಬ್ಯಾಂಕುಗಳು ಸಾಲ ಮಂಜೂರು ಮಾಡುತ್ತವೆ.

ಇದನ್ನೂ ಓದಿ: Money Guide: ಕಾರು ಚಲಾಯಿಸಿದಷ್ಟೇ ವಿಮೆ ಪ್ರೀಮಿಯಂ ಪಾವತಿಸಿ; ಏನಿದು ಹೊಸ ಯೋಜನೆ? ಅನುಕೂಲಗಳೇನು?

Exit mobile version