Site icon Vistara News

Money Guide: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪ್ರಕಟ; ಚೆಕ್‌ ಮಾಡಿಕೊಳ್ಳಿ

piggy bank

piggy bank

ನವದೆಹಲಿ: ಏಪ್ರಿಲ್ 1, 2024ರಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿ ದರಗಳನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಈ ಸಂಬಂಧ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪಿಪಿಎಫ್‌ (PPF), ಎನ್‌ಎಸ್‌ಸಿ (NSC), ಕೆವಿಪಿ (KVP), ಪೋಸ್ಟ್‌ ಆಫೀಸ್‌ (Post office) ಮುಂತಾದ ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆ ಮೇಲಿನ ಬಡ್ಡಿದರ ಯಥಾ ಸ್ಥಿತಿ ಮುಂದುವರಿಯಲಿದೆ (Money Guide).

ʼʼಏಪ್ರಿಲ್ 1, 2024ರಿಂದ ಪ್ರಾರಂಭವಾಗಿ ಜೂನ್ 30, 2024ಕ್ಕೆ ಕೊನೆಗೊಳ್ಳುವ 2024-25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಬದಲಾಗುವುದಿಲ್ಲʼʼ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗೆ ಶೇ. 8.2ರಷ್ಟು ಬಡ್ಡಿದರ ಇದ್ದರೆ, ಮೂರು ವರ್ಷಗಳ ಅವಧಿಯ ಠೇವಣಿಯ ಮೇಲಿನ ಬಡ್ಡಿದರವು ಶೇ. 7.1 ರಷ್ಟಿದೆ. ಜನಪ್ರಿಯ ಪಿಪಿಎಫ್ ಮತ್ತು ಸೇವಿಂಗ್‌ ಡೆಪಾಸಿಟ್‌ನ ಬಡ್ಡಿದರವನ್ನು ಕ್ರಮವಾಗಿ ಶೇ. 7.1 ಮತ್ತು ಶೇ. 4ರಷ್ಟು ಉಳಿಸಿಕೊಳ್ಳಲಾಗಿದೆ. ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿದರವು ಶೇಕಡಾ 7.5ರಷ್ಟಿರುತ್ತದೆ ಮತ್ತು ಹೂಡಿಕೆಗಳು 115 ತಿಂಗಳಲ್ಲಿ ಕೊನೆಗೊಳ್ಳುತ್ತವೆ.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ಎಸ್‌ಸಿ) ಮೇಲಿನ ಬಡ್ಡಿದರವು ಶೇ. 7.7ರಷ್ಟಿರಲಿದೆ. ಮಾಸಿಕ ಆದಾಯ ಯೋಜನೆಗೆ ಈಗಿನಂತೆ ಶೇ. 7.4ರಷ್ಟು ಬಡ್ಡಿ ಲಭಿಸಲಿದೆ.

ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರ

ಸಣ್ಣ ಉಳಿತಾಯ ಯೋಜನೆಗಳ 2024ರ ಏಪ್ರಿಲ್‌-ಜೂನ್‌ ತ್ರೈಮಾಸಿಕದ ಬಡ್ಡಿ ದರ ಇಂತಿದೆ.

ಸೇವಿಂಗ್‌ ಡೆಪಾಸಿಟ್‌: ಶೇ. 4
1 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌: ಶೇ. 6.9
2 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌: ಶೇ. 7.0
3 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌: ಶೇ. 7.1
5 ವರ್ಷದ ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌: ಶೇ. 7.5
5 ವರ್ಷದ ರೆಕರಿಂಗ್‌ ಡೆಪಾಸಿಟ್‌: ಶೇ. 6.7
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು(NSC): ಶೇ. 7.7
ಕಿಸಾನ್‌ ವಿಕಾಸ್‌ ಪತ್ರ: ಶೇ. 7.5
ಸಾರ್ವಜನಿಕ ಭವಿಷ್ಯ ನಿಧಿ: ಶೇ. 7.1
ಸುಕನ್ಯಾ ಸಮೃದ್ಧಿ ಅಕೌಂಟ್‌: ಶೇ. 8.2
ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 8.2
ಮಾಸಿಕ ಆದಾಯ ಯೋಜನೆ: ಶೇ. 7.4

ಕೆಲವು ಸಣ್ಣ ಉಳಿತಾಯ ಯೋಜನೆಗಳು ಮತ್ತು ಅಂಚೆ ಕಚೇರಿ ಯೋಜನೆಗಳ ಬಡ್ಡಿದರವನ್ನು ಕೊನೆಯ ಬಾರಿಗೆ 2023ರ ಡಿಸೆಂಬರ್ 31ರಂದು ಹೆಚ್ಚಿಸಲಾಗಿತ್ತು.

ಸಣ್ಣ ಉಳಿತಾಯ ಯೋಜನೆ ಎಂದರೇನು?

ನಿಯಮಿತವಾಗಿ ಉಳಿತಾಯ ಮಾಡುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಸರ್ಕಾರ ಇದನ್ನು ಜಾರಿಗೆ ತಂದಿದೆ. ಸಣ್ಣ ಉಳಿತಾಯ ಯೋಜನೆ ಮೂರು ವಿಭಾಗಗಳನ್ನು ಹೊಂದಿದೆ-ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಮಾಸಿಕ ಆದಾಯ ಯೋಜನೆಗಳು. ಉಳಿತಾಯ ಠೇವಣಿಗಳಲ್ಲಿ 1-3 ವರ್ಷಗಳ ಟೈಮ್ ಡೆಪಾಸಿಟ್ ಮತ್ತು 5 ವರ್ಷಗಳ ರೆಕರಿಂಗ್ ಡಿಪಾಸಿಟ್‌ಗಳಿವೆ. ಜತೆಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಮತ್ತು ಕಿಸಾನ್ ವಿಕಾಸ್ ಪತ್ರದಂತಹ ಉಳಿತಾಯ ಪ್ರಮಾಣಪತ್ರಗಳಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಮಾಸಿಕ ಆದಾಯ ಯೋಜನೆ ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿದೆ.

ಇದನ್ನೂ ಓದಿ: Money Guide: ಹೆಲ್ತ್‌ ಇನ್ಶೂರೆನ್ಸ್‌ ಕ್ಲೈಮ್‌ ಆಗುತ್ತಿಲ್ಲವೆ?; ಈ ಸಮಸ್ಯೆ ಇರಬಹುದು ಗಮನಿಸಿ

Exit mobile version