Site icon Vistara News

ವಿಸ್ತಾರ Money Guide : ನಿಮ್ಮ ಹಣವನ್ನು ತಪ್ಪಾಗಿ ಬೇರೆಯವರ ಖಾತೆಗೆ ಹಾಕಿದ್ದೀರಾ? ಮರಳಿ ಪಡೆಯುವುದು ಹೇಗೆ?

cash

ನೀವು ನಿಮ್ಮ ಹಣವನ್ನು ಪ್ರಮಾದವಶಾತ್‌ ಬೇರೆಯವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದೀರಿ ಎಂದು ಇಟ್ಟುಕೊಳ್ಳೋಣ. ಅಂಥ ಸಂದರ್ಭದಲ್ಲಿ ಹಣವನ್ನು ಮರಳಿ ಪಡೆಯುವುದು ಹೇಗೆ? ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಈ ಬಗ್ಗೆ ವಿವರವಾಗಿ ತಿಳಿಸಿದೆ. ಈಗ ವಿವರಗಳನ್ನು ನೋಡೋಣ. (ವಿಸ್ತಾರ Money Guide) ಎಸ್‌ಬಿಐನ ಗ್ರಾಹಕರೊಬ್ಬರು ಇಂಥ ಪ್ರಸಂಗವನ್ನು ಎದುರಿಸಿದ್ದರು. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೂರಿದ್ದರು.

ಎಸ್‌ಬಿಐ ಗ್ರಾಹಕರು ದೂರಿದ್ದೇನು? ನಾನು ಪ್ರಮಾದವಶಾತ್‌ ಬೇರೆಯವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದೇನೆ. ವಿವರಗಳನ್ನು ಬ್ಯಾಂಕ್‌ ಶಾಖೆಗೆ ಹೆಲ್ಪ್‌ ಲೈನ್‌ ಮೂಲಕ ಸಲ್ಲಿಸಿದ್ದರೂ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಹಕರು ಟ್ವಿಟರ್‌ನಲ್ಲಿ ದೂರಿದ್ದರು. ಇದಕ್ಕೆ ಎಸ್‌ಬಿಐ ಕೂಡ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ನೀವು ತಪ್ಪಾಗಿ ಬೇರೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಿದ್ದರೆ, ಬ್ಯಾಂಕಿನ ಹೋಮ್‌ ಬ್ರ್ಯಾಂಚ್‌ ಅನ್ನು ಸಂಪರ್ಕಿಸಬೇಕು. ಹೋಮ್‌ ಬ್ರ್ಯಾಂಚ್‌ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಗ್ರಾಹಕರು ತಪ್ಪಾಗಿ ಕಳುಹಿಸಿದ ಹಣಕ್ಕೆ ಬ್ಯಾಂಕ್‌ ಹೊಣೆ ವಹಿಸುವುದಿಲ್ಲ. ಹೀಗಿದ್ದರೂ, ಪ್ರಕರಣ ಇತ್ಯರ್ಥವಾಗದಿದ್ದರೆ ಗ್ರಾಹಕರು ಬ್ಯಾಂಕ್‌ಗೆ ದೂರು ನೀಡಬಹುದು. ಆರ್‌ಬಿಐ ಒಂಬುಡ್ಸ್‌ಮನ್‌ಗೆ ಕೂಡ ದೂರು ಸಲ್ಲಿಸಬಹುದು.

ಹಣ ವರ್ಗಾಯಿಸುವಾಗ ಫಲಾನುಭವಿಯ ಅಕೌಂಟ್‌ ವಿವರ ಪರಿಶೀಲಿಸಿ:

ಗ್ರಾಹಕರು ತಮ್ಮ ಖಾತೆಯಿಂದ ಬೇರೊಂದು ಖಾತೆಗೆ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸುವಾಗ ಫಲಾನುಭವಿಯ ಬ್ಯಾಂಕ್‌ ಅಕೌಂಟ್ ವಿವರಗಳನ್ನು ನಿಖರವಾಗಿ ಪರಿಶೀಲಿಸಬೇಕು. ಹಣಕಾಸು ವರ್ಗಾವಣೆಗಳಲ್ಲಿ ಸರಿಯಾದ ವಿವರಗಳನ್ನು ನಮೂದಿಸುವುದು ಗ್ರಾಹಕರ ಜವಾಬ್ದಾರಿಯಾಗಿದೆ. ಫಲಾನುಭವಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಇದನ್ನೇ ಹೇಳಿದೆ. ಅಕೌಂಟ್‌ ನಂಬರ್‌ ಇದರಲ್ಲಿ ನಿರ್ಣಾಯಕ ಭಾಗ ಆಗಿರುವುದರಿಂದ ಸಮರ್ಪಕವಾಗಿ ಉಲ್ಲೇಖಿಸುವುದು ಮುಖ್ಯ. ಆನ್‌ಲೈನ್/‌ ಇಂಟರ್‌ನೆಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಅರಿತುಕೊಂಡು ಜಾಗರೂಕತೆಯಿಂದ ಹಣವನ್ನು ವರ್ಗಾಯಿಸಬೇಕು.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2021-22ರ ವರದಿಯಲ್ಲಿ, ಡಿಜಿಟಲ್‌ ಪೇಮೆಂಟ್‌ ಮತ್ತು ವರ್ಗಾವಣೆಗಳಿಗೆ ಸಂಬಂಧಿಸಿದ ದೂರುಗಳನ್ನು ಗಣನೀಯ ಸಂಖ್ಯೆಯಲ್ಲಿ ಸ್ವೀಕರಿಸಿರುವುದಾಗಿ ತಿಳಿಸಿದೆ. ಹೀಗಿದ್ದರೂ, ಇಂಥ ಪ್ರಕರಣಗಳಲ್ಲಿ ಗ್ರಾಹಕರಿಗೆ ಹಣ ಮರಳಿ ಬರದಿರುವ ಪ್ರಕರಣಗಳು 6.01% ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Milage Scooters in India : ಪೆಟ್ರೋಲ್​ ಉಳಿತಾಯ ಮಾಡುವ ಕೆಲವು ಸ್ಕೂಟರ್​​ಗಳು

ಬ್ಯಾಂಕ್‌ ಆಫ್‌ ಬರೋಡಾ ನೀಡಿರುವ ಹೇಳಿಕೆ ಪ್ರಕಾರ ಒಂದು ವೇಳೆ ಗ್ರಾಹಕರು ತಪ್ಪಾಗಿ ಬೇರೆ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾಯಿಸಿದರೆ, ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕ್‌ ಆಫ್‌ ಬರೋಡಾ ವಿವರಗಳನ್ನು ತಿಳಿಸಿ, ಹಣವನ್ನು ಮತ್ತೆ ಹಿಂತಿರುಗಿಸಲು ಮನವಿ ಮಾಡುತ್ತದೆ. ಬೇರೆ ಬ್ಯಾಂಕ್‌ ಆಗಿದ್ದರೆ ಪ್ರಕ್ರಿಯೆಗೆ ಸಹಕರಿಸುತ್ತದೆ. ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ಖುದ್ದಾಗಿ ಹೋಗಿ ಮ್ಯಾನೇಜರ್‌ರನ್ನು ಸಂಪರ್ಕಿಸಿ ಮನವಿ ಸಲ್ಲಿಸಬಹುದು.

Exit mobile version