Site icon Vistara News

Ganesh chaturthi 2022 | ನೀವು ಒಳ್ಳೆಯ ನಾಯಕನಾಗಬೇಕಾ? ವಿನಾಯಕನಿಗಿಂತ ದೊಡ್ಡ ಮಾರ್ಗದರ್ಶಕ ಬೇಕಾ?

Ganesha wooden

ಕೃಷ್ಣ ಭಟ್‌ ಅಳದಂಗಡಿ- Motivational story
ಡೊಳ್ಳು ಹೊಟ್ಟೆಯವನೇ (ಲಂಬೋದರ), ಆನೆ ಮುಖದವನೇ (ಗಜವದನ), ಮುರಿದ ಹಲ್ಲಿನವನೇ (ವಕ್ರತುಂಡ).. ಹೀಗೆ ಗೇಲಿ ಮಾಡುವ ಪದಗಳಿಂದಲೇ ಕರೆದರೂ ಪ್ರೀತಿಯಿಂದ ಆಶೀರ್ವದಿಸುವವ ಈ ಬ್ರಹ್ಮಾಂಡದಲ್ಲಿ ಒಬ್ಬನಿದ್ದರೆ ಅವನು ಗಣೇಶನೆ. ಗಣೇಶನ ಸ್ತುತಿ ಎಂದರೆ ಪಕ್ಕಾ ನಿಂದನೆಯೇ! ಆದರೂ ಅವನು ಯಾವತ್ತೂ ಮುನಿಸಿಕೊಳ್ಳಲಿಲ್ಲ, ಬೇಜಾರು ಮಾಡಿಕೊಳ್ಳಲಿಲ್ಲ, ಖಿನ್ನನಾಗಲಿಲ್ಲ.

ಜಗತ್ತಿನಲ್ಲಿ ಕೃಷ್ಣನಂಥ ಮಗು ಬೇಕು ಎಂದು ಹಾರೈಸೋರು ಕೋಟ್ಯಂತರ ಜನ. ಆದರೆ, ಒಬ್ಬೇ ಒಬ್ಬ ತಾಯಿ, ಒಬ್ಬೇ ಒಬ್ಬ ತಂದೆ ಗಣಪತಿಯಂಥ ಮಗು ಬೇಕು ಎಂದು ಬಯಸಿರುವ ಸಾಧ್ಯತೆ ಇಲ್ಲ. ಜಗತ್ತಿನ ಯಾವೆಲ್ಲ ದೈಹಿಕ ನ್ಯೂನತೆಗಳಿವೆಯೋ ಅವೆಲ್ಲವನ್ನೂ ಹೊತ್ತುಕೊಂಡು ತಿರುಗಾಡೋನು ಈ ಗಣಪ. ಹಾಗಂತ, ಗಣಪ ಯಾರಿಗೂ ಬೇಡದವನಲ್ಲ. ಎಲ್ಲರಿಗೂ ಬೇಕಾದ ಪ್ರಥಮ ಪೂಜಿತ ಇವನು.

ಹಾಗಿದ್ದರೆ, ಸೌಂದರ್ಯವನ್ನೇ ಆರಾಧಿಸುವ, ಬೆಂಬಲಿಸುವ ಈ ಜಗತ್ತಿನಲ್ಲಿ ಆನೆ ಮುಖದ ಗಣಪ ಎಲ್ಲರ ಪ್ರೀತಿಪಾತ್ರ ದೇವರಾಗಿದ್ದು ಹೇಗೆ?

ನಿಜವೆಂದರೆ, ಬಾಹ್ಯ ಸೌಂದರ್ಯ ಮುಖ್ಯವಲ್ಲ. ಒಳಗಿನ ಶಕ್ತಿಯೇ ಪ್ರಧಾನ ಎನ್ನುವುದನ್ನು ಜಗತ್ತಿಗೆ ಮೊದಲು ತೋರಿಸಿಕೊಟ್ಟವನೇ ಈಶ್ವರ-ಪಾರ್ವತಿ ತನಯ ಶ್ರೀ ಗಣೇಶ. ಅದರಲ್ಲೂ ದೇಹದಲ್ಲಿರುವ ವೈಕಲ್ಯಗಳ ಮೂಲಕ ಒಬ್ಬ ವ್ಯಕ್ತಿಯ ಸಾಮರ‍್ಥ್ಯವನ್ನು ಅಳೆಯಬೇಡಿ, ಅಥವಾ ನನಗೆ ದೈಹಿಕ ಸಮಸ್ಯೆಗಳಿವೆ ಎಂದು ಕುಗ್ಗಬೇಡಿ ಎಂದು ಎರಡೂ ವರ್ಗಕ್ಕೆ ಪಾಠ ಕಲಿಸಿದ್ದು ಈ ಗಣೇಶ.

ಬಹುಶಃ ಬೇರೆ ಯಾರೇ ಆಗಿದ್ದರೂ ಇಂಥ ವಿಶೇಷವಾದ ಹುಟ್ಟು, ಅದಕ್ಕೆ ಸರ್ಜರಿ ಮಾಡಲಾದ ಆನೆಯ ತಲೆ, ಅಷ್ಟೊಂದು ವ್ಯತ್ಯಸ್ತ ಅಂಗಗಳನ್ನು ಹೊಂದಿದ್ದರೆ ಖಿನ್ನರಾಗಿಬಿಡುತ್ತಿದ್ದರು. ಆದರೆ, ಪ್ರತಿಯೊಂದು ನ್ಯೂನತೆಯನ್ನೂ ಶಕ್ತಿಯಾಗಿ ಪರಿವರ್ತಿಸಿಕೊಂಡಿದ್ದು ಗಣಪತಿಯ ಹೆಚ್ಚುಗಾರಿಕೆ.

ಗಣಪತಿಯ ದೇಹದ ಅಂಗಗಳು, ಅವನ ಪ್ರತಿಯೊಂದು ನಡೆಯೂ ವಿಶಿಷ್ಟ ಎಂಬಂತೆ ದಾಖಲಾಗಿದ್ದು, ಸಂಕೇತ ರೂಪಗಳನ್ನು ಪಡೆದಿದೆ. ಇದರಲ್ಲಿ ನಾವು ಒಬ್ಬ ವ್ಯಕ್ತಿಯ ಬದುಕಿಗೆ ಮಾರ್ಗದರ್ಶನವನ್ನು ಪಡೆಯಬಹುದು. ನಾಯಕತ್ವದ ಗುಣಗಳನ್ನು ಹುಡುಕಬಹುದು. ಅಷ್ಟೇ ಅಲ್ಲ, ನಮ್ಮ ಹಣಕಾಸಿನ ವಿಚಾರದಲ್ಲೂ ಹಲವು ಟಿಪ್ಸ್‍ಗಳನ್ನು ಪಡೆಯಬಹುದು. ಹಾಗೆ ಎಲ್ಲದಕ್ಕೂ ಹೊಂದಾಣಿಕೆ ಆಗಬಲ್ಲ ಪ್ರತಿಮೆ ಗಣೇಶನದ್ದು.

ನಾಯಕ ವಿನಾಯಕನಂತಿರಬೇಕು!
ಲೀಡರ್‌ಶಿಪ್ ಎನ್ನುವುದು ಈ ಕಾಲದ ಪ್ರಮುಖ ಅಗತ್ಯಗಳಲ್ಲಿ ಒಂದು. ಗೆಲುವಿನ ಸೂತ್ರವೂ ಇದರಲ್ಲಿ ಅಡಕವಾಗಿದೆ. ಹಾಗಿದ್ದರೆ ಗಣೇಶನಲ್ಲಿ ನಾವು ಗುರುತಿಸಬಹುದಾದ ಗೆಲುವಿನ ಸಂಕೇತಗಳು ಯಾವುದು?

ವಿಶಾಲವಾದ ಯೋಚನೆ
ಗಣೇಶನ ದೊಡ್ಡ ತಲೆ ಎನ್ನುವುದು ನಾವು ಸಂಕುಚಿತವಾಗಿರದೆ ವಿಶಾಲವಾಗಿ ಯೋಚಿಸಬೇಕು ಎನ್ನುವುದರ ರೂಪಕ. ಇದು ಜ್ಞಾನ ಮತ್ತು ವಿವೇಕದ ಸಂಕೇತವೂ ಹೌದು. ಒಬ್ಬ ನಾಯಕನಾದವನು ಎಲ್ಲ ವಿಚಾರಗಳನ್ನು ಸ್ವೀಕರಿಸುವಷ್ಟು ವಿಶಾಲ ಮನಸು ಹೊಂದಿರಬೇಕು. ಯಾವುದೇ ವಿಚಾರದಲ್ಲಿ ಜಜ್ `ಮೆಂಟಲ್’ ಆಗಿರಬಾರದು ಅನ್ನುತ್ತದೆ ಗಣೇಶ ಸೂತ್ರ.

ದೃಷ್ಟಿ ಸೂಕ್ಷ್ಮವಾಗಿರಲಿ
ಗಣಪತಿಯ ಕಣ್ಣು ಸಣ್ಣದು ಎನ್ನುತ್ತೇವೆ. ಆದರೆ, ನಿಜವಾಗಿ ಏನನ್ನೋ ಫೋಕಸ್ಡ್ ಆಗಿ ನೋಡುವಾಗ ನಾವು ಕೂಡಾ ಕಣ್ಣನ್ನು ಸಣ್ಣ ಮಾಡುತ್ತೇವಲ್ಲ. ಹಾಗೆಯೇ ಒಂದು ನಿರ್ದಿಷ್ಟ ಗುರಿಯ ಕಡೆಗೆ ದೃಷ್ಟಿ ಇಟ್ಟಿರಬೇಕು ಮತ್ತು ಅದನ್ನು ಸೂಕ್ಷ್ಮದರ್ಶಕದಂತೆ ಆಳವಾಗಿ ಗ್ರಹಿಸಬೇಕು ಎನ್ನುವುದು ಗಣೇಶನ ಕಣ್ಣು ಹೇಳುವ ಪಾಠ.

ಒಳ್ಳೆಯ ಕೇಳುಗನಾಗಿ
ಗಣೇಶನ ಮೊರದಗಲದ ಕಿವಿ ಒಬ್ಬ ಒಳ್ಳೆಯ ಕೇಳುಗನ ಸಂಕೇತ. ಲೀಡರ್ ಆದವನು ಮಾತನಾಡುವಷ್ಟೇ ಕೇಳಿಸಿಕೊಳ್ಳುವ ತಾಳ್ಮೆಯನ್ನೂ ಹೊಂದಿರಬೇಕು. ಸಾಮಾನ್ಯವಾಗಿ ನಾಯಕ ಎಂದ ಕೂಡಲೇ ಭಾಷಣ ಮಾಡಬೇಕು ಎಂದೇ ತಿಳಿಯುತ್ತಾರೆ. ಆದರೆ, ಒಳ್ಳೆಯ ನಾಯಕ ಮಾತುಗಾರನಾಗಿರಲೇಬೇಕು ಎಂದೇನಿಲ್ಲ. ಇನ್ನೊಬ್ಬ ಹೇಳುವುದರ ಸೂಕ್ಷ್ಮಗಳನ್ನು ಗ್ರಹಿಸುವ ಶಕ್ತಿ ಇದ್ದರೂ ಸಾಕಾಗುತ್ತದೆ. ತನ್ನ ತಂಡದ ಸದಸ್ಯರು, ಸಹೋದ್ಯೋಗಿಗಳೆಲ್ಲ ಹೇಳುವ ಮಾತುಗಳನ್ನು ಕೇಳಿಸಿಕೊಳ್ಳುವ ಶಕ್ತಿ ಇದ್ದರೆ ಅರ್ಧ ಗೆದ್ದಂತೆ.

ಜಾಗರೂಕವಾಗಿರಿ!
ಆನೆಯ ಸೊಂಡಿಲು ಎನ್ನುವುದು ಜಾಗರೂಕತೆಯ ಸಂಕೇತ. ಏನೇ ಅಪಾಯ ಬಂದರೂ ಮೊದಲು ಎದುರಾಗುವುದು ಸೊಂಡಿಲು. ಸುತ್ತ ನಡೆಯುವ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಲೇ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕಲೆಗಾರಿಕೆ ಒಬ್ಬ ನಾಯಕನಿಗೆ ಇರಬೇಕು. ಅದಕ್ಕಿಂತಲೂ ಹೆಚ್ಚಾಗಿ ಸೊಂಡಿಲು ಎನ್ನುವುದು ಸೂಕ್ಷ್ಮ ಗ್ರಹಣದ ಸಂಕೇತ. ನಾಐಕನಾದವನಿಗೆ ತನ್ನ ಸುತ್ತ ಏನಾಗುತ್ತಿದೆ ಎಂದು ತಿಳಿಯುವ ಶಕ್ತಿ ಇರಬೇಕಾಗುತ್ತದೆ. ಅಂದರೆ ವರ್ತಮಾನದಲ್ಲಿ ಬದುಕಬೇಕು.

ಎಲ್ಲವನ್ನೂ ಜೀರ್ಣಿಸಿಕೊಳ್ಳೋದು
ಒಬ್ಬ ನಾಯಕನಿಗೆ ನೂರಾರು ತೊಂದರೆ ತಾಪತ್ರಯಗಳು ಎದುರಾಗುತ್ತವೆ. ಅವೆಲ್ಲನ್ನೂ ಜೀರ್ಣಿಸಿಕೊಂಡು ಮುಂದೆ ಹೋಗುವ ಶಕ್ತಿ ಇರಬೇಕು ಎನ್ನುವುದು ದೊಡ್ಡ ಹೊಟ್ಟೆಯ ಸಂಕೇತ. ಒಂದು ತಂಡ ಎಂದಾಗ ಒಳ್ಳೆಯದೂ ಇರ್ತದೆ, ಕೆಟ್ಟದೂ ಇರ್ತದೆ. ನೋವು-ನಲಿವು ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಯಶಸ್ಸನ್ನು ಹುಡುಕುವ ಶಕ್ತಿ ಇರಬೇಕು.

ಒಂದಿಷ್ಟು ತ್ಯಾಗವೂ ಬೇಕು
ವ್ಯಾಸರು ಮಹಾಭಾರತ ಹೇಳುವಾಗ ಗಣಪ ಬರೆದುಕೊಳ್ಳುತ್ತಿದ್ದ. ಬರೆಯುತ್ತಿದ್ದ ಪೆನ್ನು ಮುರಿದಾಗ ಪಕ್ಕನೆ ಕೈಗೆ ಏನೂ ಸಿಗಲಿಲ್ಲ. ಕೂಡಲೇ ಗಣಪ ತನ್ನ ದಂತವನ್ನೇ ಮುರಿದು ಶಾಯಿಯಲ್ಲಿ ಅದ್ದಿ ಬರೆಯತೊಡಗಿದ. ನಾಯಕನಾದವನೂ ಆ ಕ್ಷಣಕ್ಕೆ ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗುತ್ತದೆ ಎನ್ನುವುದು ಇದರ ಸ್ಥೂಲಾರ್ಥ. ಭಾವನೆಗಳನ್ನು ಮೀರಬೇಕು, ಸ್ವಾರ್ಥವನ್ನು ಮೀರಬೇಕು, ತನ್ನ ಹಿತಾಸಕ್ತಿಗಳನ್ನೂ ಅವನು ಮೀರಬೇಕು.

ಸ್ಮಾರ್ಟ್ ವರ್ಕ್ ಗಣೇಶ
ಈಶ್ವರ-ಪಾರ್ವತಿಯರು ಗಣೇಶ ಮತ್ತು ಸುಬ್ರಹ್ಮಣ್ಯರನ್ನು ಕರೆದು ಭೂಮಂಡಲ ಸುತ್ತಿ ಬನ್ನಿ ಎಂದರಂತೆ. ಆಗ ಸುಬ್ರಹ್ಮಣ್ಯ ಪಾಪ ಇಡೀ ಭೂಮಿಯನ್ನು ಸುತ್ತಲು ಹೊರಟನಂತೆ. ಗಣೇಶ ಮಾತ್ರ ನಿಮಗಿಂತ ದೊಡ್ಡ ಪ್ರಪಂಚ ಯಾವುದಿದೆ ಎಂದು ತಂದೆ-ತಾಯಿಗೆ ಸುತ್ತುಬಂದು ಕುಳಿತನಂತೆ. ಅಂದರೆ, ನಾವು ಹೊಸ ಯುಗದಲ್ಲಿ ಹಾರ್ಡ್ ವರ್ಕ್‍ಗಿಂತಲು ಸ್ಮಾರ್ಟ್ ವರ್ಕ್‍ಗೆ ಹೆಚ್ಚು ಒತ್ತು ಕೊಡಬೇಕು ಎನ್ನುವುದೇ ಗಣೇಶ ಕಲಿಸಿದ ಪಾಠ.

ಗಣೇಶನ ವಾಹನವಾಗಿರುವ ಮೂಷಿಕನೂ ಒಂದು ರೀತಿಯಲ್ಲಿ ಸ್ಮಾರ್ಟೇ. ನಮ್ಮ ಅಹಂಕಾರ, ಆಸೆಗಳನ್ನು ಹತ್ತಿಕ್ಕಿ ಅದರ ಮೇಲೆ ನಾವು ಸವಾರಿ ಮಾಡಬೇಕು, ಚಂಚಲ ಮನಸನ್ನು ನಿಯಂತ್ರಿಸಬೇಕು ಎನ್ನುವುದು ಮೂಷಿಕ ತತ್ವವೇ ಆದರೂ ಸದಾ ಚಲನಶೀಲವಾದ ಗುಣವನ್ನು ನಾವು ಅರಿತುಕೊಳ್ಳಬೇಕು. ಯಾವತ್ತೂ ಆಕ್ಟಿವ್ ಆಗಿರುವ ಇಲಿಯೂ ನಮಗೆ ಒಂದು ಶಕ್ತಿಯೇ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ವ್ಯಕ್ತಿತ್ವ ವಿಕಸನದ ಮಹಾಗುರು ಗಣಪತಿ, ಒಂದೇ ಬದುಕಲ್ಲಿ ನೂರಾರು ಸಂದೇಶಗಳು!

Exit mobile version