Site icon Vistara News

ರಾಜ ಮಾರ್ಗ ಅಂಕಣ : ಇಂದು ನಾಗರ ಪಂಚಮಿ; ಹಾವಿಗೆ ಹಾಲೆರೆಯುವ ಜತೆಗೆ ತಿಳಿದುಕೊಳ್ಳಬೇಕಾದ 4 ಸಂಗತಿಗಳು

Nagara panchami special

‘ನಾಗರ ಪಂಚಮಿ (Nagara Panchami) ನಾಡಿಗೆ ದೊಡ್ಡದು’ ಎಂದರು ನಮ್ಮ ಹಿರಿಯರು. ಈ ಹಬ್ಬ ಶ್ರಾವಣ ಮಾಸದ ಮೊದಲ ಹಬ್ಬ. ಶ್ರಾವಣ ಶುಕ್ಲ ಪಂಚಮಿ ತಿಥಿಯಂದು ಬರುವ ಈ ಹಬ್ಬವು ಹಿಂದೂಗಳಿಗೆ ಚೈತನ್ಯವನ್ನು (Festival gives motivation) ನೀಡುವ ಹಬ್ಬ. ಇದರ ಹಲವು ಆಯಾಮಗಳನ್ನು ಇಂದು ವಿಸ್ತಾರವಾಗಿ ಬರೆಯುತ್ತಿದ್ದೇನೆ (ರಾಜ ಮಾರ್ಗ ಅಂಕಣ).

1. ಪೌರಾಣಿಕ ಹಿನ್ನೆಲೆಯ ಆಯಾಮ

ಬಾಲಕೃಷ್ಣನು ಯಮುನಾ ನದಿಯ ದಡದಲ್ಲಿ ಕಾಳಿಂಗ ಸರ್ಪದ ಹೆಡೆಯಲ್ಲಿ ನಿಂತು ಕಾಳಿಂಗ ಮರ್ದನ ಮಾಡಿದ ಕಥೆಯು ನಮಗೆಲ್ಲ ತಿಳಿದಿದೆ. ಅದು ನಡೆದದ್ದು ಇದೇ ಪಂಚಮಿಯಂದು. ಅದೇ ರೀತಿ ಮಹಾಭಾರತದ ಉತ್ತರಾರ್ಧದಲ್ಲಿ ಅಭಿಮನ್ಯುವಿನ ಮಗನಾದ ಪರೀಕ್ಷಿತನು ತಾನು ಮಾಡಿದ ಆಕೃತ್ಯದಿಂದ ತಕ್ಷಕ ಎಂಬ ಸರ್ಪ ಕಚ್ಚುವುದರಿಂದ ಸಾವನ್ನು ಅಪ್ಪುತ್ತಾನೆ. ಆಗ ಅವನ ಮಗನಾದ ಜನಮೇಜಯನು ಸರ್ಪಗಳ ಬಗ್ಗೆ ಸೇಡಿನ ಭಾವನೆಯಿಂದ ಸರ್ಪಯಜ್ಞವನ್ನು ಮಾಡುತ್ತಾನೆ. ಆಗ ಇಡೀ ಜಗತ್ತಿನ ಮೂಲೆ ಮೂಲೆಗಳಿಂದ ಸರ್ಪಗಳು ಆಕಾಶದಲ್ಲಿ ಬಂದು ಯಜ್ಞಕ್ಕೆ ಆಹುತಿ ಆಗುತ್ತವೆ. ಆಗ ಆಸ್ತಿಕ ಎಂಬ ವಟುವು ಅರಸನನ್ನು ಎಚ್ಚರಿಸಿ ಸರ್ಪಯಜ್ಞವನ್ನು ನಿಲ್ಲಿಸುತ್ತಾನೆ. ಆಗ ಬದುಕುಳಿದ ತಕ್ಷಕನು ಮುಂದೆ ನಾಗಸಂತತಿಯ ಮೂಲ ಪುರುಷ ಆಗುತ್ತಾನೆ. ಆ ಸರ್ಪಯಜ್ಞವನ್ನು ಜನಮೇಜಯ ಮಹಾರಾಜನು ನಿಲ್ಲಿಸಿದ ದಿನವೇ ನಾಗರ ಪಂಚಮಿ. ಆ ಸರ್ಪ ಯಜ್ಞವನ್ನು ಮಾಡಿದ ಕಾರಣಕ್ಕೆ ಜನಮೇಜಯ ಅರಸನಿಗೆ ಮುಂದೆ ಕುಷ್ಠ ರೋಗ ಬಂದಿತು ಎನ್ನುವುದು ಪುರಾಣದಲ್ಲಿ ಉಲ್ಲೇಖಿತ ಆಗಿದೆ.

Nagara panchami gururaj Sanil

2. ನಂಬಿಕೆಗಳ ಆಯಾಮ

ಪರಶುರಾಮನು ಕೊಡಲಿಯನ್ನು ಬಿಸುಟು ತುಳುನಾಡನ್ನು ಸೃಷ್ಟಿಸುವ ಮೊದಲು ಈ ಸಮಸ್ತವಾದ ಭೂಮಿ ‘ನಾಗರ ಖಂಡ’ ಆಗಿತ್ತು ಎನ್ನುವುದು ನಂಬಿಕೆ. ಆ ನಾಗಗಳು ಭೂಮಿಯನ್ನು ಬಿಟ್ಟು ಕೊಟ್ಟು ಪಾತಾಳ ಲೋಕವನ್ನು ಸೇರಿದ ನಂತರ ಮಾನವರು ಕೃತಜ್ಞತೆಯ ಪ್ರತೀಕವಾಗಿ ನಾಗಾರಾಧನೆ ಆರಂಭ ಮಾಡಿದರು ಅನ್ನುವುದು ನಂಬಿಕೆ. ಒಟ್ಟು 1000 ನಾಗ ಸಂತತಿಗಳು ಈಗ ಉಳಿದಿವೆ ಎನ್ನುವುದು ಕೂಡ ನಂಬಿಕೆ. ಅವುಗಳಲ್ಲಿ ಎಂಟು ಕುಲಗಳು ಈಗ ಪ್ರಮುಖವಾಗಿ ಉಳಿದಿವೆ. ಅನಂತ, ವಾಸುಕಿ, ತಕ್ಷಕ, ಕಾರ್ಕೋಟಕ, ಪದ್ಮ, ಮಹಾ ಪದ್ಮ, ಕುಲಿಕ ಮತ್ತು ಶಂಖ ಆ ಎಂಟು ಕುಲಗಳು. ಅವುಗಳಲ್ಲಿ ಅನಂತನು ಎಲ್ಲರಿಗಿಂತ ಹಿರಿಯ ನಾಗ ಆಗಿದ್ದಾನೆ. ಅವನೇ ಮಹಾ ಶೇಷನಾಗಿ ಭೂಮಿಯನ್ನು ತನ್ನ ಸಾವಿರ ಹೆಡೆಯ ಮೇಲೆ ಹೊತ್ತು ನಿಂತಿದ್ದಾನೆ ಅನ್ನುವುದು ಭಾರತೀಯ ನಂಬಿಕೆ.

Nagara panchami gururaj Sanil

ನಾಗಾರಾಧನೆಯಿಂದ ಸಂತಾನ ಪ್ರಾಪ್ತಿ ಆಗುತ್ತದೆ, ಚರ್ಮ ರೋಗಗಳು ವಾಸಿ ಆಗುತ್ತವೆ ಮತ್ತು ಮನುಕುಲಕ್ಕೆ ಒಳಿತಾಗುತ್ತದೆ ಎಂಬುದು ಭಾರತೀಯರ ಸುಪ್ತ ಮನಸ್ಸಿನ ಒಳಗೆ ಹೂತು ಹೋಗಿರುವ ನಂಬಿಕೆ. ನಾಗಾರಾಧನೆ ಎಂದರೆ ನಮ್ಮ ಒಳಗಿನ ಕುಂಡಲಿನಿ ಶಕ್ತಿಯ ಆವಾಹನೆ ಎನ್ನುವುದು ಇನ್ನೂ ಹೆಚ್ಚಿನ ತೂಕದ ನಂಬಿಕೆ.

3. ಆರಾಧನಾ ಪದ್ಧತಿಯ ಆಯಾಮ

ನಾಗದೇವರ ಆರಾಧನೆಯು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ಆಗುತ್ತದೆ. ಇಡೀ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡ ನಾಗಾರಾಧನೆಯು ನಡೆಯುತ್ತದೆ.

ಮಹಾರಾಷ್ಟ್ರದ ಸಿಂಹಾಸನ ಬತ್ತೀಸಿ ಎಂಬಲ್ಲಿ ಜೀವಂತವಾದ ನಾಗದೇವರ ಆರಾಧನೆಯು ನಡೆಯುವುದು ವಿಶೇಷ. ತುಳುನಾಡಿನ ಹಲವು ಭಾಗಗಳಲ್ಲಿ ನಾಗ ದೇವರಿಗೆ ತಂಬಿಲ ಪೂಜೆಯು ನಡೆಯುತ್ತದೆ. ಹುತ್ತ ಪೂಜೆ ಕೂಡ ಶ್ರೇಷ್ಠವಾದ ಆರಾಧನೆ ಆಗಿದೆ. ಆದರೆ ಕರಾವಳಿ ಕರ್ನಾಟಕದ ಹಲವು ಭಾಗಗಳಲ್ಲಿ ವೈದಿಕರಿಂದ ಪ್ರತಿಷ್ಠೆ ಆಗಿರುವ ಶಾಸ್ತ್ರೋಕ್ತವಾದ ನಾಗನ ಶಿಲೆಗಳಿಗೆ ಪೂಜೆ ನಡೆಯುತ್ತದೆ. ಇಲ್ಲಿ ಹಲವು ನಾಗ ದೇವರ ದೇವಸ್ಥಾನಗಳು ಇರುವ ಕಾರಣ ಅಲ್ಲೆಲ್ಲ ನಾಗನ ಕಟ್ಟೆಗಳಲ್ಲಿ ಇರುವ ನಾಗನ ಶಿಲ್ಪಗಳಿಗೆ ಅಭಿಷೇಕ ಮಾಡಲಾಗುತ್ತದೆ. ಇದಕ್ಕೆ ತನು ಹಾಕುವುದು ಎಂದು ಕರೆಯುತ್ತಾರೆ. ನಾಗರ ಪಂಚಮಿಯ ದಿನ ಮೂಲ ನಾಗನ ಕಲ್ಲುಗಳನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆಯು ತುಂಬಾ ದೊಡ್ಡದು.

ನಾಗರಪಂಚಮಿ ದಿನ ಮಹಿಳೆಯರು ಮೂಲಕ ಸ್ಥಾನಕ್ಕೆ ಹೋಗಿ ಪೂಜೆ ಮಾಡುವುದು ವಿಶೇಷ

ಹಾಗೆಯೇ ಆಶ್ಲೇಷಾ ಬಲಿ ಕೂಡ ನಾಗದೇವರ ವಿಶೇಷವಾದ ಆರಾಧನೆ. ಅಲ್ಲಿ ವರ್ಣಮಯವಾದ ಮಂಡಲಗಳನ್ನು ಬರೆದು ಅದರೊಳಗೆ ನಾಗದೇವರನ್ನು ಆವಾಹನೆ ಮಾಡಿ ಪೂಜೆ ಸಾಗುತ್ತದೆ. ಇನ್ನೂ ಸ್ವಲ್ಪ ದೊಡ್ಡ ಮಟ್ಟಕ್ಕೆ ಹೋದರೆ ನಾಗಮಂಡಲ ಭಾರಿ ದೊಡ್ಡ ಆರಾಧನೆ. ಅದರಲ್ಲಿ ಕೂಡ ನಾಲ್ಕು ಗಂಟಿನ (ಚತುಷ್‌ ಪವಿತ್ರ) ಮತ್ತು ಎಂಟು ಗಂಟಿನ (ಅಷ್ಟಪವಿತ್ರ) ನಾಗಮಂಡಲಗಳು ಭಾರೀ ಸಂಭ್ರಮದಿಂದ ನಡೆಯುತ್ತವೆ. ಅಲ್ಲೆಲ್ಲ ಅನ್ನ ಸಂತರ್ಪಣೆಯು ಭೂರಿಯಾಗಿ ನಡೆಯುತ್ತದೆ. ಇನ್ನೂ ಕೆಲವೆಡೆ ಢಕ್ಕೆ ಬಲಿ ಸೇವೆ ಕೂಡ ತುಂಬಾ ವಿಶೇಷವಾಗಿದ್ದು ಅಲ್ಲಿ ಸಾವಿರಾರು ಜನರು ಶ್ರದ್ಧಾ ಭಕ್ತಿಗಳಿಂದ ಭಾಗವಹಿಸುತ್ತಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಡಾ. ಪ್ರೇಮಾ ಧನರಾಜ್: ಪೂರ್ತಿ ಸುಟ್ಟೇ ಹೋಗಿದ್ದ ಆಕೆ ನಿಜಕ್ಕೂ ಬೆಂಕಿಯಲ್ಲಿ ಅರಳಿದ ಹೂವು!

4. ನಾಗಾರಾಧನೆಯ ಪ್ರಾಕೃತಿಕ ಆಯಾಮ

ಕರಾವಳಿಯ ಖ್ಯಾತ ಉರಗ ತಜ್ಞರಾದ ಗುರುರಾಜ್ ಸನಿಲ್ ಅವರು ಬರೆದ ಹಲವಾರು ಪುಸ್ತಕಗಳು ನಾಗಾರಾಧನೆಯ ವೈಜ್ಞಾನಿಕ ಮುಖಗಳನ್ನು ಪರಿಚಯ ಮಾಡುತ್ತವೆ.

Nagara panchami gururaj Sanil

ದೇವರ ಕಾಡು, ಪ್ರಾಕೃತಿಕ ನಾಗಬನ ಇವುಗಳೆಲ್ಲವೂ ನಮ್ಮ ಹಿರಿಯರ ಪ್ರಕೃತಿ ಪ್ರೇಮದ ಪ್ರತೀಕಗಳು. ಪ್ರಾಕೃತಿಕ ನಾಗಬನ ಅನ್ನುವುದು ಕೂಡ ಅತ್ಯಂತ ಶ್ರೇಷ್ಠವಾದ ಗಿಡ ಮತ್ತು ಮರಗಳಿಂದ ಕೂಡಿದ ನಾಗಾರಾಧನೆಯ ತಾಣ. ಅಲ್ಲಿ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಹಸಿರು ಸಸ್ಯಗಳನ್ನು ಬೆಳೆಸುತ್ತಾ ಹೋದರೆ ಅದು ಪ್ರಾಕೃತಿಕ ನಾಗಬನ ಆಗುತ್ತದೆ. ಅಲ್ಲಿಯೇ ನಾಗದೇವರ ಪೂಜೆ ನಡೆದರೆ ಅದು ಹೆಚ್ಚು ಪರಿಣಾಮಕಾರಿ ಆಗುತ್ತದೆ ಎನ್ನುತ್ತಾರೆ ಗುರುರಾಜ್ ಸನಿಲ್ ಅವರು. ಹಾವುಗಳ ಬಗ್ಗೆ ಅಪಾರ ಸಂಶೋಧನೆ ನಡೆಸಿ ಗುರುರಾಜ್ ಸನಿಲ್ ಅವರು ಬರೆದಿರುವ
‘ನಾಗ ಬೀದಿಯೊಳಗಿಂದ’, ‘ದೇವರ ಹಾವು- ನಂಬಿಕೆ ಮತ್ತು ವಾಸ್ತವ ‘ ಮೊದಲಾದ ಪುಸ್ತಕಗಳು ನಮಗೆ ಅಪಾರವಾದ ಜ್ಞಾನವನ್ನು ಕೊಡುತ್ತವೆ.

‘ಹಾವುಗಳನ್ನು ಭಯದಿಂದ ಅಲ್ಲ, ಪ್ರೀತಿಯಿಂದ ನೋಡಿ ‘ ಅನ್ನುವ ಅವರ ಅಭಿಪ್ರಾಯವು ನಮಗೆ ಆಪ್ತವಾಗುತ್ತದೆ. ಎಲ್ಲರಿಗೂ ನಾಗದೇವರ ಕೃಪೆಯು ಇರಲಿ.

Exit mobile version