Site icon Vistara News

ರಾತ್ರೋರಾತ್ರಿ 500ಟನ್‌ ಸ್ಟೀಲ್‌ಬ್ರಿಡ್ಜ್‌ ದರೋಡೆ

ರಾಬಾರಿ

ಬಿಹಾರ್:‌ ಸರಗಳ್ಳರು, ಜೇಬುಗಳ್ಳರು, ಮನೆಗೆ ಕನ್ನ ಹಾಕಿ ಚಿನ್ನಾಭರಣ ದರೋಡೆ (Robbery) ಮಾಡಿದ ದೊಡ್ಡಕಳ್ಳರನ್ನೂ ನೋಡಿರಬಹುದು. ಆದರೆ ಇಲ್ಲೊಂದಿಷ್ಟು ಜನ ಮಹಾ ಕಳ್ಳರು ಒಂದಲ್ಲ ಎರಡಲ್ಲ ಬರೊಬ್ಬರಿ 500 ಟನ್‌ ತೂಗುವ ಕಬ್ಬಿಣದ ಸೇತುವೆಯನ್ನೇ (Steel Bridge) ಕದ್ದೊಯ್ದಿದ್ದಾರೆ.

ಬಿಹಾರದ ಸಸಾರಾಮ್‌ ಪ್ರದೇಶದಲ್ಲಿ ದರೋಡೆಕೋರರ ಗುಂಪೊಂದು 60 ಅಡಿ ಉದ್ದದ ಸ್ಟೀಲ್‌ ಬ್ರಿಡ್ಜನ್ನು ರಾತ್ರೋರಾತ್ರಿ ದರೋಡೆ ಮಾಡಿದೆ. ರೊತಾಸ್‌ ಜಿಲ್ಲೆಯ ಅರ-ಸೊನ್‌ ಕಾಲುವೆಯ ಮೇಲ್ಭಾಗದಲ್ಲಿ 45 ವರ್ಷಗಳ ಹಿಂದೆ ಈ ಸೇತುವೆ ನಿರ್ಮಿಸಲಾಗಿತ್ತು. ಸುಮಾರು 500 ಟನ್‌ ತೂಕವಿರುವ ಈ ಬ್ರಿಡ್ಜ್‌ನ್ನು ಒಂದೇ ರಾತ್ರಿಯಲ್ಲಿ ದರೋಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು, ಸಸಾರಾಮ್‌ನಿಂದ ಸುಮಾರು 40ಕಿಮಿ ದೂರದಲ್ಲಿರುವ ಅಮಿಯವಾರ್‌ ಎಂಬ ಗ್ರಾಮದಲ್ಲಿ ಬ್ರಿಡ್ಜ್‌ ನಿರ್ಮಿಸಲಾಗಿತ್ತು. ಆದರೆ, ಹಳೆಯದಾಗಿದ್ದರಿಂದಾಗಿ ಈ ಬ್ರಿಡ್ಜ್‌ ಮೇಲೆ ಯಾರೂ ಸಂಚಾರ ಮಾಡದಂತೆ ಸೂಚನೆ ನೀಡಿದ್ದು, ಕಳೆದ 5 ವರ್ಷಗಳಿಂದ ಪರ್ಯಾಯ ಸಂಚಾರ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ಈ ದಿನಗಳಲ್ಲಿ ಸೇತುವೆಯ ಕೆಲ ಭಾಗಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದರು. ಆದರೆ ಈ ರೀತಿ 500ಟನ್‌ ಸೇತುವೆಯನ್ನೇ ದರೋಡೆ ನಡೆಯಬಹುದು ಎಂಬ ಯಾವ ಸುಳಿವೂ ಇರಲಿಲ್ಲ ಎಂದು ಸ್ಥಳೀಯರು ಆಶ್ಚರ್ಯಪಟ್ಟಿದ್ದಾರೆ.

ಈ ಘಟನೆಯ ಕುರಿತು ಮಾತನಾಡಿದ ಪೊಲೀಸ್‌ ಅಧಿಕಾರಿ ಸುಭಾಷ್‌ ಕುಮಾರ್‌, ದರೋಡೆಕೋರರು ಸ್ಥಳಕ್ಕೆ ಬುಲ್‌ಡೊಜರ್‌ ಹಾಗೂ ಗ್ಯಾಸ್‌ ಟಾರ್ಚ್‌ಗಳೊಂದಿಗೆ ಆಗಮಿಸಿ ಬ್ರಿಡ್ಜ್‌ನ್ನು ಸಣ್ಣ ಸಣ್ಣ ಭಾಗಗಳಾಗಿ ಕೊರೆದು ನಂತರ ಲೂಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಈ ಪ್ರದೇಶದಲ್ಲಿ ಸುಮಾರು ₹200ಕೊಟಿ ಮೌಲ್ಯದ ಮರಳನ್ನು ಲೂಟಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಹಾಗೂ, ಕಳ್ಳರನ್ನು ಸೆರೆಹಿಡಿಯಲಾಗಿತ್ತು ಎಂದು ಪೊಲೀಸ್‌ ಅಧಿಕಾರಿ ಸುಭಾಷ್‌ ಕುಮಾರ್ ತಿಳಿಸಿದ್ದಾರೆ.

ಈ ಹಿಂದೆಯೂ ಬ್ರಿಡ್ಜ್‌ ದರೋಡೆ ನಡೆದ ಹಲವು ಪ್ರಕರಣಗಳು ದಾಖಲಾಗಿವೆ. 2012ರಲ್ಲಿ ಝೆಸ್ಕ್‌ ರಿಪಬ್ಲಿಕ್‌ನಲ್ಲಿ ಲೂಟಿಕೋರರು ಬ್ರಿಡ್ಜ್‌ನ್ನು ಹಾಡುಹಗಲೇ ಮಾರುವೇಶದಲ್ಲಿ ದರೋಡೆ ಮಾಡಿದ್ದರು. ಆ ಮುನ್ನ ಅಮೆರಿಕಾದ ಪೆನ್ಸಿಲ್ವೆನಿಯಾದಲ್ಲಿ ಸುಮಾರು $100,000 ಮೌಲ್ಯದ ಸ್ಟೀಲನ್ನು ಬ್ರಿಡ್ಜ್‌ನಿಂದ ದೋಚಿದ್ದ ಪ್ರಕರಣ ದಾಖಲಾಗಿತ್ತು. 2004ರಲ್ಲಿ ಉಕ್ರೇನ್‌ನಲ್ಲಿ ಸುಮಾರು 36 ಅಡಿ ಉದ್ದದ ಸ್ಟೀಲ್‌ ಬ್ರಿಡ್ಜ್‌ನ್ನು ಲೂಟಿ ಮಾಡಿ ಸ್ಕ್ರಾಪ್‌ ಲೋಹಕ್ಕೆ ಬಳಸಲಾಗಿತ್ತು.

Exit mobile version