Site icon Vistara News

ಮಹಾರಾಣಿಯ ನೋಟಕ್ಕಾಗಿ ಕಾತರಿಸುತ್ತಿದ್ದ ಜನ | ಭಾರತಕ್ಕೆ 3 ಬಾರಿ ಭೇಟಿ

queen elizabeth 2

ತಮ್ಮ 96ನೇ ವಯಸ್ಸಿನಲ್ಲಿ ಮೃತಪಟ್ಟಿರುವ ಬ್ರಿಟನ್‌ನ ರಾಣಿ ಎಲಿಜಬೆತ್‌ 2, ತಮ್ಮ ಅಧಿಕಾರಾವಧಿಯಲ್ಲಿ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. 1952ರಲ್ಲಿ ಸಿಂಹಾಸನ ಏರಿದ್ದ ಅವರು, ಭಾರತದಲ್ಲಿ ತಾವು ಪಡೆದ ಆತಿಥ್ಯ, ಆದರಗಳಿಗೆ ಮನಸೋತಿದ್ದರು.

ʼʼಭಾರತೀಯರ ಆತಿಥ್ಯ, ಆದರ ಭಾವ, ಈ ದೇಶದ ವೈವಿಧ್ಯ ಹಾಗೂ ಶ್ರೀಮಂತಿಕೆ ನಮಗೆಲ್ಲರಿಗೂ ಸ್ಫೂರ್ತಿಯಾಗುವಂತಿದೆʼʼ ಎಂದು ಅವರು ತಮ್ಮ ಒಂದು ಭಾರತ ಭೇಟಿಯ ವೇಳೆ ಹೇಳಿದ್ದರು.

ಮೊದಲ ಭಾರತ ಭೇಟಿಯಲ್ಲಿ ಪ್ರಧಾನಿ ನೆಹರೂ ಜತೆ

ಎಲಿಜಬೆತ್‌ ಅವರ ಮೊದಲ ಭಾರತ ಭೇಟಿ 1961ರಲ್ಲಿ ಆಗಿತ್ತು. ಅವರ ಪತಿ ಪ್ರಿನ್ಸ್‌ ಫಿಲಿಪ್‌ ಜತೆಗಿದ್ದರು. ಅವರು ಆಗಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್‌ ಅವರ ಆಹ್ವಾನದ ಮೇರೆಗೆ ಗಣರಾಜ್ಯ ದಿನದ ಪರೇಡ್‌ನಲ್ಲಿ ಭಾಗವಹಿಸಲು ಆಗಮಿಸಿದ್ದರು. ತಮ್ಮ ಎಂದಿನ ಉಣ್ಣೆಯ ಕೋಟು ಹಾಗೂ ಹ್ಯಾಟು ಧರಿಸಿದ್ದ ರಾಣಿ, ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿದ್ದರು. ಗಣರಾಜ್ಯ ಪರೇಡ್‌ನಲ್ಲಿ ಆಗಿನ ಪ್ರಧಾನಿ ನೆಹರೂ ಅವರ ಪಕ್ಕದಲ್ಲಿ ಕುಳಿತು ಪರೇಡ್‌ ನೋಟವನ್ನು ಹಂಚಿಕೊಂಡಿದ್ದರು.

ಬೆಂಗಳೂರು, ಮುಂಬಯಿ, ಕೋಲ್ಕೊತಾ, ಚೆನ್ನೈ, ಉದಯಪುರ, ಜೈಪುರ ಹಾಗೂ ಆಗ್ರಾದ ತಾಜ್‌ಮಹಲ್‌ಗಳಿಗೆ ಭೇಟಿ ನೀಡಿದ್ದರು. ನವ ದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ್ದರು. ದಿಲ್ಲಿಯ ಏಮ್ಸ್‌ ಕಟ್ಟಡವನ್ನು ಉದ್ಘಾಟಿಸಿದ್ದರು. ವಾರಣಾಸಿಯಲ್ಲಿ ಬನಾರಸ್‌ ಮಹಾರಾಜರ ಆತಿಥ್ಯ ಸವಿದು ಅಲ್ಲಿನ ಆನೆ ಸವಾರಿ ಮಾಡಿದ್ದರು. ಬೆಂಗಳೂರಿಗೆ ಭೇಟಿ ನೀಡಿದಾಗ ಇಲ್ಲಿನ ಪ್ರಥಮ ಗವರ್ನರ್‌ ಜಯಚಾಮರಾಜೇಂದ್ರ ಒಡೆಯರ್‌ ಅವರ ಜತೆ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದರು. ಲಕ್ಷಾಂತರ ಜನ ಸೇರಿದ್ದರು.

ಬೆಂಗಳೂರಿನಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಜತೆಗೆ

ರಾಣಿ ಭೇಟಿ ನೀಡಿದಲ್ಲೆಲ್ಲ ʼಮಹಾರಾಣಿʼಯ ಒಂದು ನೋಟಕ್ಕಾಗಿ ಜನ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಸೇರುತ್ತಿದ್ದರು. ಇನ್ನೂ ವಸಾಹತುಶಾಹಿಯ ಗುಂಗು ಪೂರ್ತಿಯಾಗಿ ತೊರೆದು ಹೋಗಿರದ ಆಗಿನ ಭಾರತದಲ್ಲಿ, ಸ್ಥಳೀಯ ರಾಜರುಗಳು ಆಕೆಗೆ ಆತಿಥ್ಯ ನೀಡಲುಯ ಟೊಂಕ ಕಟ್ಟುತ್ತಿದ್ದರು. ಉದಯಪುರ, ಜೈಪುರದ ಮಹಾರಾಜರು ಈಕೆ ಆನೆಯ ಮೇಲೇರಿ ಹುಲಿ ಬೇಟೆಯಾಡಲೂ ಅವಕಾಶ ಒದಗಿಸಿದ್ದರು. 1911ರಲ್ಲಿ ಈಕೆಯ ತಂದೆ, ಆಗಿನ ಮಹಾರಾಜನಾಗಿದ್ದ ಕಿಂಗ್‌ ಐದನೇ ಜಾರ್ಜ್‌ ಅವರೇ ಭಾರತಕ್ಕೆ ರಾಣಿಗಿಂತ ಮೊದಲು ಭೇಟಿ ನೀಡಿದವರಾಗಿದ್ದರು. ಈ ಭೇಟಿಯಿಂದ ಮರಳುವಾಗ ರಾಣಿಗೆ ಕುತುಬ್‌ ಮಿನಾರ್‌ನ ಪ್ರತಿಕೃತಿ, ಬೆಳ್ಳಿಯ ಕ್ಯಾಂಡಲ್‌ಸ್ತಂಭ ನೀಡಲಾಗಿತ್ತು.

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

ಎರಡನೇ ಭೇಟಿಯಲ್ಲಿ ಇಂದಿರಾ ಗಾಂಧಿ ಜತೆಗೆ

1983ರಲ್ಲಿ ರಾಣಿ ನೀಡಿದ ಎರಡನೇ ಭೇಟಿಯ ಸಂದರ್ಭ ಗ್ಯಾನಿ ಜೈಲ್‌ ಸಿಂಗ್‌ ಅವರು ರಾಷ್ಟ್ರಪತಿಯಾಗಿದ್ದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದರು. ಈ ಭೇಟಿಯಲ್ಲಿ ಅವರು ಕೋಲ್ಕತ್ತಾದಲ್ಲಿ ಮದರ್‌ ಥೆರೆಸಾ ಅವರನ್ನು ಭೇಟಿ ಮಾಡಿ, ತೆರೆಸಾಗೆ ಬ್ರಿಟನ್‌ ರಾಜಪ್ರಭುತ್ವದ ಗೌರವ ಪುರಸ್ಕಾರ ನೀಡಿದ್ದರು.

ರಾಣಿಯ ಮೂರನೇ ಭೇಟಿ ಹೆಚ್ಚು ಮಹತ್ವದ್ದಾಗಿತ್ತು. 1997ರಲ್ಲಿ ಅವರು ಭೇಟಿ ನೀಡಿದಾಗ ಭಾರತ ತನ್ನ ಸ್ವಾತಂತ್ರ್ಯದ 50ನೇ ವರ್ಷ ಆಚರಿಸಿಕೊಳ್ಳುತ್ತಿತ್ತು. ಆಗ ಕೆ.ಆರ್.ನಾರಾಯಣನ್‌ ರಾಷ್ಟ್ರಪತಿಯಾಗಿದ್ದು, ಐ.ಕೆ.ಗುಜ್ರಾಲ್‌ ಪ್ರಧಾನಿಯಾಗಿದ್ದರು. ಈ ವೇಳೆ ಅವರು ಮೊದಲ ಬಾರಿಗೆ ʼವಸಾಹತು ಆಡಳಿತದ ಸಂಕಷ್ಟಮಯʼ ದಿನಗಳ ನೆನಪು ಮಾಡಿಕೊಂಡದ್ದಲ್ಲದೆ, ಜಲಿಯನ್‌ವಾಲಾಬಾಗ್‌ ದುರಂತವನ್ನೂ ನೆನಪಿಸಿಕೊಂಡಿದ್ದರು. ʼʼನಮ್ಮ ಭೂತಕಾಲದಲ್ಲಿ ಕೆಲವು ಸಂಕಷ್ಟಮಯ ದಿನಗಳಿವೆ ಎಂಬುದು ರಹಸ್ಯವೇನಲ್ಲ. ಜಲಿಯನ್‌ವಾಲಾಬಾಗ್‌ ಅಂಥದೊಂದು ವಿಷಾದಕರ ಉದಾಹರಣೆʼʼ ಎಂದಿದ್ದರು. ನಂತರ ಪತಿ ಸಮೇತ ಅಲ್ಲಿನ ಸ್ಮಾರಕಕ್ಕೂ ಭೇಟಿ ಕೊಟ್ಟಿದ್ದರು.

ರಾಣಿಯ ಮೂರನೇ ಭಾರತ ಭೇಟಿ

ಭಾರತದ ಮೂವರು ರಾಷ್ಟ್ರಪತಿಗಳಿಗೂ ರಾಣಿ ಎಲಿಜಬೆತ್‌ ಆತಿಥ್ಯ ನೀಡಿದ್ದಾರೆ- ಡಾ.ರಾಧಾಕೃಷ್ಣನ್‌ (1963ರಲ್ಲಿ), ಆರ್.ವೆಂಕಟರಾಮನ್‌ (1990ರಲ್ಲಿ) ಹಾಗೂ ಪ್ರತಿಭಾ ಪಾಟೀಲ್‌ (2009ರಲ್ಲಿ).

ಬಕಿಂಗ್‌ಹ್ಯಾಂ ಅರಮನೆಯಲ್ಲಿ ಪ್ರತಿಭಾ ಪಾಟೀಲ್‌ ಅವರನ್ನು ಸ್ವಾಗತಿಸುತ್ತ ಅವರು ʼʼಬ್ರಿಟನ್‌ ಹಾಗೂ ಭಾರತಗಳು ಇತಿಹಾಸವನ್ನು ಹಂಚಿಕೊಂಡಿವೆ. ಅದು ಇಂದು ನಮ್ಮಿಬ್ಬರ ನೂತನ ಶತಮಾನದ ಬಾಂಧವ್ಯಕ್ಕೆ ಭದ್ರ ತಳಹದಿಯಾಗಿದೆ. ನಮ್ಮ 20 ಲಕ್ಷಕ್ಕೂ ಅಧಿಕ ಪ್ರಜೆಗಳು ಭಾರತದಲ್ಲಿ ಜನಿಸಿದ್ದು, ಅಲ್ಲಿನೊಂದಿಗೆ ಕುಟುಂಬ ಸಂಬಂಧವನ್ನು ಹೊಂದಿದ್ದಾರೆ. ಅವರು ಯುನೈಟೆಡ್‌ ಕಿಂಗ್‌ಡಂನ ವೈವಿಧ್ಯಮಯ ಹಾಗೂ ಯಶಸ್ವಿ ಸಮುದಾಯಗಳಲ್ಲಿ ಒಂದೆನಿಸಿದ್ದಾರೆ. ನಮ್ಮ ಬಾಂಧವ್ಯ ಗಟ್ಟಿ ಮತ್ತು ಆಳವಾದ ಬುನಾದಿಯಿಂದ ಕೂಡಿದೆʼʼ ಎಂದು ಹೇಳಿದ್ದರು.

ಇದನ್ನೂ ಓದಿ | Queen Elizabeth II | ಸುದೀರ್ಘ ಆಡಳಿತ ಇತಿಹಾಸದ ಬ್ರಿಟನ್‌ ರಾಣಿ ಎಲಿಜಬೆತ್‌ ಇನ್ನಿಲ್ಲ

Exit mobile version