ನವ ದೆಹಲಿ: 5 ಜಿ ಸಂಪರ್ಕದೊಂದಿಗೆ, ದೇಶದಲ್ಲಿ ಆಧುನಿಕತೆಯ ಹೊಸ ಯುಗವೊಂದು ಆರಂಭವಾಗಲಿದೆ. ಯುವಜನತೆಗೆ ನೂತನ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದರು.
ನವ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನಲ್ಲಿ ಅವರು ದೇಶದಲ್ಲಿ 5G ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು. ಶಕ್ತಿದೇವತೆಯನ್ನು ಪೂಜಿಸುವ ನವರಾತ್ರಿಯ ಶುಭಪರ್ವದ ಸಂದರ್ಭದಲ್ಲಿ ಶಕ್ತಿಯ ಇನ್ನೊಂದು ಮಾಧ್ಯಮವೆನಿಸಿದ 5G ದೇಶದ ೧೨೫ ಕೋಟಿ ಜನತೆಗೆ ಅರ್ಪಿಸುವುದಕ್ಕೆ ನನಗೆ ಆನಂದವೆನಿಸುತ್ತದೆ. ಇದೊಂದು ಐತಿಹಾಸಿಕ ದಿನ, ಕ್ಷಣ. ಭಾರತದ ಇದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ಜಗತ್ತಿಗೇ ಮಾದರಿಯನ್ನು ಕಲ್ಪಿಸಲಿದೆ ಎಂದು ಅವರು ನುಡಿದರು.
ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್ ಒದಗಿಸಿದಂತೆ ವಿದ್ಯುತ್ ಅವಲಂಬಿಸಿ ಮಾಡಬಹುದಾದ ಕೆಲಸಗಳು ಹಾಗೂ ಉಪಕರಣಗಳ ಮಾರುಕಟ್ಟೆಯೂ ವರ್ಧಿಸಿತು. ಹಾಗೆಯೇ 5G ಅವಂಬಿಸಿಯೂ ಜೀವನಶೈಲಿಯಲ್ಲಿ ದೊಡ್ಡ ಮಾರ್ಪಾಡು ಆಗಲಿದೆ. 5G ಎಂದರೆ ಕೇವಲ ಮನರಂಜನೆಯ ಹೆಚ್ಚಳ ಮಾತ್ರ ಆಗುವುದಿಲ್ಲ. ಅದು ಬಡವರೂ ಸೇರಿದಂತೆ ಎಲ್ಲ ವಲಯದ ಜೀವನವನ್ನು ಸುಧಾರಿಸಲಿದೆ. ನಾವು ನೇರ ಪಾವತಿ ಕಾರ್ಯಕ್ರಮವನ್ನು ಆರಂಭಿಸಿದಾಗ ತುಂಬಾ ಮಂದಿ ಅದರ ಪರಿಣಾಮಕಾರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜಗತ್ತಿನ ಬೇರೆ ಬೇರೆ ಮುಂದುವರಿದ ದೇಶಗಳು ಕೂಡ ಇದನ್ನು ಒದಗಿಸುವಲ್ಲಿ ಸೋತಿದ್ದವು. ಆದರೆ ಭಾರತ ಅದನ್ನು ಒಂದೇ ಕ್ಲಿಕ್‌ನಲ್ಲಿ ಸಾಧಿಸಬಹುದು ಎಂಬುದನ್ನು ತೋರಿಸಿತು. 5G ವಿಷಯದಲ್ಲೂ ಹೀಗೇ ಆಗಲಿದೆ ಎಂದರು.
ಇದೇ ೨ ಜಿಗೂ ೫ ಜಿಗೂ ಇರುವ ವ್ಯತ್ಯಾಸ!
ಇಂದು ನಾವು ಆತ್ಮನಿರ್ಭರ ಭಾರತ, ಡಿಜಿಟಲ್ ಭಾರತ ಆಗಿದ್ದೇವೆ. ಸರ್ಕಾರ ಸರಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು ಎಂದು ತೋರಿಸಿದ್ದೇವೆ. ಇದೇ 2G ನಿಯತ್ತಿಗೂ 5G ನಿಯತ್ತಿಗೂ ಇರುವ ವ್ಯತ್ಯಾಸ ಎಂದು ಪ್ರಧಾನಿ ಯುಪಿಎ ಸರ್ಕಾರದ ʻ2G ಹಗರಣʼಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನವರಾತ್ರಿಯ ಹಬ್ಬದಲ್ಲಿ ಈ ಐತಿಹಾಸಿಕ ದಿವಸ ದಾಖಲಾಗಲಿದೆ. ಇದೊಂದು ರೋಮಾಂಚಿತಗೊಳಿಸುವ ಅನುಭವ. ಇದರಲ್ಲಿ ನಮ್ಮೊಂದಿಗೆ ದೊಡ್ಡ ದೊಡ್ಡ ತಂತ್ರಜ್ಞಾನದ ಉದ್ಯಮಿಗಳೊಂದಿಗೆ ಗ್ರಾಮಿಣ ಶಾಲೆಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೆಲಸಗಾರರು ಸಹ ಸಹಭಾಗಿಗಳಾಗಿದ್ದಾರೆ. ಇದು ನವ ಭಾರತದ ಸಂಕಲ್ಪದ ದಿನ. ನಾವು ಇಂದು ಟೆಕ್ನಾಲಜಿಯ ಗ್ರಾಹಕರಾಗಿರುವುದು ಮಾತ್ರವಲ್ಲ, ಭವಿಷ್ಯದ ವೈರ್‌ಲೆಸ್ ತಂತ್ರಜ್ಞಾನ ರೂಪಿಸುವಲ್ಲಿಯೂ ಭಾರತದ ಭೂಮಿಕೆಯಿದೆ. 5G ಅಳವಡಿಕೆಯಲ್ಲಿ ನಾವು ಜಾಗತಿಕ ಮಾನದಂಡವನ್ನು ಸರಿಗಟ್ಟಿದ್ದೇವೆ ಎಂದರು.
ಆತ್ಮ ನಿರ್ಭರ ಭಾರತ
2G, 3G, 4Gಯ ಸಮಯದಲ್ಲಿ ನಮಗೆ ಅನ್ಯ ದೇಶಗಳ ಅವಲಂಬನೆ ಇತ್ತು. ಆದರೆ 5Gಯ ವೇಳೆಗೆ ಸಮಯದಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ನಾನು ಆತ್ಮನಿರ್ಭರ ಭಾರತದ ಕುರಿತು ಮಾತಾಡಿದ್ದಾಗ ಕೆಲವರು ತಮಾಷೆ ಮಾಡಿದರು. ಆದರೆ 2014ರಲ್ಲಿ ನಮ್ಮ ದೇಶದಲ್ಲಿ ಎರಡೇ ಮೊಬೈಲ್ ತಯಾರಿ ಯುನಿಟ್‌ಗಳಿದ್ದವು. ಈಗ ಅವುಗಳ ಸಂಖ್ಯೆ 200ಕ್ಕೂ ಹೆಚ್ಚಿದೆ. ನಾವು ಉದ್ಯಮಕ್ಕೆ ಭತ್ಯೆ ಕೊಟ್ಟೆವು, ಖಾಸಗಿ ವಲಯವನ್ನು ಪ್ರೋತ್ಸಾಹಿಸಿದೆವು. ಈಗ ಕೋಟ್ಯಂತರ ಮೊಬೈಲ್‌ಗಳನ್ನು ರಫ್ತು ಮಾಡುವಷ್ಟು ಬೆಳೆದು ನಿಂತಿದ್ದೇವೆ. 2014ರಲ್ಲಿ, 6 ಕೋಟಿ ಬ್ರಾಂಡ್‌ಬ್ಯಾಂಡ್ ಬಳಕೆದಾರರನ್ನು ಹೊಂದಿದ್ದೆವು, ಈಗ ನಾವು ಸುಮಾರು 80 ಕೋಟಿ ಬಳಕೆದಾರರನ್ನು ಹೊಂದಿದ್ದೇವೆ. 2014ರಲ್ಲಿ ನಾವು 25 ಕೋಟಿ ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿದ್ದೆವು, ಈಗ ನಾವು ಸುಮಾರು 85 ಕೋಟಿ ಸಂಪರ್ಕಗಳನ್ನು ಹೊಂದಿದ್ದೇವೆ. 5G ಮೂಲಕ ಭಾರತದ ಯುವಜನತೆಗೆ ಇನ್ನಷ್ಟು ದೊಡ್ಡ ಅವಕಾಶಗಳು ದೊರೆಯಲಿವೆ ಎಂದರು.
ಇದನ್ನೂ ಓದಿ | 5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್ ಕ್ರಾಂತಿ? ಏನಿದರ ಅನುಕೂಲ?
ನಮ್ಮ ಡಿಜಿಟಲ್ ಇಂಡಿಯಾ ಯೋಜನೆ ಸಫಲತೆ ಕಂಡಿದೆ. ಮೊದಲಿಗೆ ಬಹಳ ಮಂದಿ ಇದೊಂದು ಕೇವಲ ಸರ್ಕಾರಿ ಯೋಜನೆ ಎಂದು ಭಾವಿಸಿದ್ದರು. ಆದರೆ ಅದು ದೇಶದ ವಿಕಾಸದ ದೂರದೃಷ್ಟಿಯಾಗಿತ್ತು. ಇಂದು ಸಣ್ಣಪುಟ್ಟ ವ್ಯಾಪಾರಿಯ ಬಳಿಯೂ ಯುಪಿಐ ಪಾವತಿ ಮಾಡುತ್ತಾನೆ. ಇಂದು ಭಿಕ್ಷುಕನೂ ಡಿಜಿಟಲ್ ಪಾವತಿ ಅಪೇಕ್ಷಿಸುತ್ತಾನೆ. ಪಾರದರ್ಶಕತೆ ಗಮನಿಸಿ. ನಾವು ಜನರಿಗಾಗಿ, ಜನರ ಜತೆ ಕೈಜೋಡಿಸಿ ಕೆಲಸ ಮಾಡಬೇಕು.
ಅಂದು ೧ ಜಿಬಿಗೆ ೩೦೦ ರೂ, ಇಂದು ೧೦ ರೂ.
ಡಿಜಿಟಲ್ ಭಾರತದ ಆಧಾರಸ್ತಂಭಗಳು ನಾಲ್ಕು. ಒಂದು ಮೊಬೈಲ್ ಸಾಧನದ ಬೆಲೆ. ಇಂದು ಕಡಿಮೆ ದರದಲ್ಲಿ ಹೆಚ್ಚಿನ ಪೀಚರ್‌ಗಳಿರುವ ಸಾಧನಗಳು ಲಭ್ಯವಿವೆ. ಎರಡನೆಯದು ಕನೆಕ್ಟಿವಿಟಿ. ದೇಶದ ಮೂಲೆ ಮೂಲೆಗೂ ಇಂದು ಅಂತರ್ಜಾಲ ಹಾಗೂ ಆಪ್ಟಿಕಲ್ ಫೈಬರ್ ತಲುಪಿದ್ದು, 5G ಮೂಲಕ ಅದು ಇನ್ನೊಂದು ಹಂತಕ್ಕೆ ತಲುಪಲಿದೆ. ಮೂರನೆಯದು ಡೇಟಾ ಬೆಲೆ. 5Gಯೊಂದಿಗೆ ಡೇಟಾ ಬೆಲೆಯೂ ಇಳಿಯುತ್ತದೆ. 2014ರಲ್ಲಿ ಡೇಟಾದ ಬೆಲೆ 1 ಜಿಬಿಗೆ 300 ರೂ.ಗಳಷ್ಟಿತ್ತು. ಇಂದು ಅದು 10 ರೂ.ಗೆ ಇಳಿದಿದೆ. ಮುಂದೆ 5G ಸಂಪರ್ಕ ಹೆಚ್ಚಳದೊಂದಿಗೆ ಅದು ಇನ್ನೂ ಇಳಿಯಲಿದೆ. ನಾಲ್ಕನೆಯದು ಡಿಜಿಟಲ್ ಫಸ್ಟ್ ಎಂಬ ಚಿಂತನೆ ಎಲ್ಲರಲ್ಲಿ ಮೂಡಬೇಕು. ಅದು ಈಗಾಗಲೇ ದೇಶದಲ್ಲಿ ಬೇರೂರಿದೆ. ʼಎಲ್ಲರಿಗೂ ಇಂಟರ್‌ನೆಟ್ʼ ಎಂಬುದು ನಮ್ಮ ದೂರದೃಷ್ಟಿ. ಡೇಟಾ ಕ್ರಾಂತಿಗೆ ಇಂದು ಜನ್ಮ ನೀಡಲಾಗಿದೆ. ಕಡು ಬಡವರೂ ಡಿಜಿಟಲ್ ಬಳಕೆ ಮಾಡುವ ದಿನಗಳು ದೂರವಿಲ್ಲ ಎಂದರು.
ಇದನ್ನೂ ಓದಿ | 5G Services Launch | ಇಂಟರ್‌ನೆಟ್ ಮಹಾ ಕ್ರಾಂತಿ: ಭಾರತದಲ್ಲಿ 5G ಸೇವೆಗೆ ಪಿಎಂ ಮೋದಿ ಚಾಲನೆ