Site icon Vistara News

ಮಾಜಿ ಪತ್ರಕರ್ತ ಸೇರಿ ಇಬ್ಬರು ಭಯೋತ್ಪಾದಕರ ಹತ್ಯೆ

ಶ್ರೀನಗರ: ಗುಪ್ತಚರ ಖಚಿತ ಮಾಹಿತಿ ಮೇರೆಗೆ ಜಮ್ಮು ಕಾಶ್ಮೀರದ ಶ್ರೀನಗರದ ಬಳಿ ಕೇಂದ್ರ ಮೀಸಲು ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಬುಧವಾರ ಬೆಳಗಿನ ಜಾವ ನಡೆಸಿದ ದಾಳಿಯಲ್ಲಿ ಒಬ್ಬ ಮಾಜಿ ಪತ್ರಕರ್ತ ಸೇರಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದವರನ್ನು ಮಾಜಿ ಪತ್ರಕರ್ತ ರಯೀಸ್‌ ಅಹಮದ್‌ ಭಟ್‌ ಹಾಗೂ ಹಿಲಾಲ್‌ ಅಹಮದ್‌ ರಾಹ್‌ ಎಂದು ಗುರುತಿಸಲಾಗಿದೆ.

ಮೃತರಿಬ್ಬರೂ ಭಯೋತ್ಪಾದಕರ ಪಟ್ಟಿಯಲ್ಲಿದ್ದರು ಹಾಗೂ ಶ್ರೀನಗರದಿಂದ ಸುಮಾರು ಆರು ಕಿಲೋಮೀಟರ್‌ ದೂರದಲ್ಲಿರುವ ರೈನ್‌ವಾರಿ ಎಂಬಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಬುಧವಾರ ಬೆಳಗಿನ ಜಾವ 1 ಗಂಟೆ ವೇಳೆಗೆ ಸಿಆರ್‌ಪಿಎಫ್‌ ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಭಯೋತ್ಪಾದಕರ ಕಡೆಯಿಂದಲೂ ಗುಂಡಿನ ದಾಳಿ ನಡೆದಿದ್ದು, ಸುಮಾರು ಒಂದು ಗಂಟೆ ಕಾರ್ಯಾಚರಣೆ ನಂತರ ಇಬ್ಬರನ್ನೂ ಹತ್ಯೆ ಮಾಡಿದ ಭದ್ರತಾ ಸಿಬ್ಬಂದಿ, ಸ್ಥಳದಿಂದ ಶಸ್ತ್ರಾಸ್ತ್ರಗಳು ಹಾಗೂ ಅನೇಕ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಪತ್ರಕರ್ತರ ಗುರುತಿನ ಚೀಟಿ

ರಯೀಸ್‌ ಅಹಮದ್‌ ಭಟ್‌ ಬಳಿ ಪತ್ರಕರ್ತರ ಗುರುತಿನ ಚೀಟಿ ಲಭಿಸಿದೆ. ಶಹಾಬಾದ್‌ ಬಿಜಬೆಹೇರಾ ಪ್ರದೇಶದವನಾದ ಈತ ಅನಂತನಾಗ್‌ ಕೇಂದ್ರವಾಗಿಸಿಕೊಂಡು 2016ರಿಂದ ವ್ಯಾಲಿ ನ್ಯೂಸ್‌ ಸರ್ವೀಸ್‌ ಎನ್ನುವ ವೆಬ್‌ಸೈಟ್‌ ನ್ಯೂಸ್‌ ಸಂಸ್ಥೆಯನ್ನು ನಡೆಸುತ್ತಿದ್ದ. ವೆಬ್‌ಸೈಟ್‌ನಲ್ಲಿ ತನ್ನ ಹೆಸರನ್ನು ರಯೀಸ್‌ ವೀರಿ ಎಂದು ಬರೆದುಕೊಂಡಿದ್ದು, ಅನೇಕ ಸಿಬ್ಬಂದಿಯೂ ಇದ್ದರು. “2021ರ ಆಗಸ್ಟ್‌ನಿಂದ ಭಯೋತ್ಪಾದಕ ಸಂಘಟನೆ ಲಷ್ಕರ್‌ ಎ ತಯ್ಯಬಾದಲ್ಲಿ ಗುರುತಿಸಿಕೊಂಡಿದ್ದ ರಯೀಸ್‌ ವಿರುದ್ಧ, ಭಯೋತ್ಪಾದಚಾ ಚಟುವಟಿಕೆ ಸಂಬಂಧ ಎರಡು ಎಫ್‌ಐಆರ್‌ ದಾಖಲಾಗಿದ್ದವು” ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಭಯೋತ್ಪಾದಕ ಹಿಲಾಲ್‌ ಅಹಮದ್‌ ರಾಹ್‌ ಅನಂತನಾಗ್‌ ಸಮೀಪದ ಕುಥೀಪುರ ವಾಘಾಮಾದವನು, ಇಬ್ಬರೂ ಎಲ್‌ಇಟಿ ಭಯೋತ್ಪದನಾ ಸಂಘಟನೆಗೆ ಸೇರಿದವರು.

ಕಾರ್ಯಾಚರಣೆಯಲ್ಲಿ ಹತ್ಯೆಯಾದ ಒಬ್ಬ ಭಯೋತ್ಪಾದಕರ ರಯೀಸ್‌ ಬಳಿಯಲ್ಲಿ ಪತ್ರಕರ್ತರ ಗುರುತಿನ ಚೀಟಿ ಲಭಿಸಿರುವುದನ್ನು ನೋಡಿದರೆ, ಇದು ಮಾಧ್ಯಮ ಗುರುತಿನ ದುರುಪಯೋಗದ ಸ್ಪಷ್ಟ ಉದಾಹರಣೆ ಎಂದು ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶದ ವಿಜಯ್‌ ಕುಮಾರ್‌ ಹೇಳಿದ್ದಾರೆ.

Exit mobile version