ಫ್ಲೋರಿಡಾ: ಫ್ಲೋರಿಡಾದಲ್ಲಿ ನಡೆಯುತ್ತಿರುವ ಒಂದು ವಿದ್ಯಮಾನ ಅಚ್ಚರಿಯನ್ನೂ ಜತೆಗೆ ಆತಂಕವನ್ನೂ ಸೃಷ್ಟಿ ಮಾಡಿದೆ. ಫ್ಲೋರಿಡಾದ ಕಡಲ ತೀರದಲ್ಲಿ ಮೊಟ್ಟೆಯೊಡೆದು ಹೊರಬರುತ್ತಿರುವ ಕಡಲಾಮೆಗಳ ಪೈಕಿ ೯೯% ಹೆಣ್ಣಾಮೆಗಳಾಗಿರುವುದು ಈ ಅಚ್ಚರಿ. ಆತಂಕ ಯಾಕೆಂದರೆ, ಈ ರೀತಿ ಒಂದು ಲಿಂಗದ ಮರಿಗಳು ಜನ್ಮಿಸಿದರೆ ಮುಂದೆ ಕಡಲಾಮೆಗಳ ಸಂತತಿಯೇ ನಾಶವಾಗುವ ಅಪಾಯವೂ ಇದೆ!
ಯಾಕೆ ಹೀಗಾಗುತ್ತಿದೆ ಎಂದು ಕೇಳಿದರೆ ವಿಜ್ಞಾನಿಗಳು ತೋರಿಸುವುದು ತಾಪಮಾನದ ಎಫೆಕ್ಟನ್ನು. ಕಡಲಾಮೆಗಳ ಮೇಲೆ ಈ ತಾಪಮಾನ ಬದಲಾವಣೆಯ ಪರಿಣಾಮ ಇಷ್ಟು ಗಾಢವಾಗಿದೆಯಾ ಎಂದು ನೀವು ಕೇಳಿದರೆ ಅದಕ್ಕಿಂತ ಮೊದಲು ನೀವು ಈ ಜೀವಿಗಳ ಜೀವನ ಚಕ್ರವನ್ನೊಮ್ಮೆ ನೋಡಬೇಕು. ಅವುಗಳದು ನಮ್ಮಂತಲ್ಲ. ಸ್ವಲ್ಪ ಭಿನ್ನ.
ಸದಾ ನೀರಲ್ಲೇ ಜೀವನ ಕಳೆಯುವ ಕಡಲಾಮೆಗಳು ಮೊಟ್ಟೆ ಇಡುವುದಕ್ಕೆ ದಡಕ್ಕೆ ಬರುತ್ತವೆ. ಮರಳಿನ ಆಳದಲ್ಲಿ ಮೊಟ್ಟೆ ಇಟ್ಟು ಮತ್ತೆ ನೀರಿಗೆ ಹಿಂದಿರುಗುತ್ತವೆ. ಈ ಭ್ರೂಣದ ಲಿಂಗವನ್ನು, ಉಳಿದ ಬಹುಪಾಲು ಜೀವಿಗಳಲ್ಲಿ ಇರುವಂತೆ, ಕ್ರೋಮೋಸೋಮುಗಳು ನಿರ್ಧರಿಸುವುದಿಲ್ಲ. ಬದಲಿಗೆ, ಮರಳಿನ ಶಾಖವೆಷ್ಟು ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ರಾಷ್ಟ್ರೀಯ ಸಾಗರ ಸೇವಾ ಸಂಸ್ಥೆಯ ಪ್ರಕಾರ, ಮರಳಿನ ತಾಪಮಾನ ೨೭ ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಅಥವಾ ಆಜುಬಾಜು ಇದ್ದರೆ ಹುಟ್ಟುವ ಭ್ರೂಣ ಗಂಡಾಗುತ್ತದೆ. ಮರಳಿನ ಶಾಖ ೩೦ ಡಿಗ್ರಿ ಸೆಂಟಿಗ್ರೇಡ್ ಅಥವಾ ಹೆಚ್ಚಿದ್ದರೆ ಹೆಣ್ಣು ಮರಿ ಮೊಟ್ಟೆಯೊಡೆದು ಬರುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಫ್ಲೋರಿಡಾದಲ್ಲೂ ಬಿಸಿಗಾಳಿಯ ಹೊಡೆತ ಜೋರಾಗಿದ್ದು, ಕಡಲಾಮೆಗಳ ಲಿಂಗಾನುಪಾತದಲ್ಲಿ ದೊಡ್ಡಮಟ್ಟದಲ್ಲಿ ಏರುಪೇರು ದಾಖಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಫ್ಲೋರಿಡಾದಲ್ಲಿ ದಾಖಲೆಯ ಪ್ರಮಾಣದಲ್ಲಿ ಉಷ್ಣತೆ ಏರಿದೆ. ಮಿಯಾಮಿ ಹೆರಾಲ್ಡ್ ಪತ್ರಿಕೆಯಲ್ಲಿ ಎರಡು ವರ್ಷಗಳ ಹಿಂದೆಯೇ ಪ್ರಕಟವಾಗಿದ್ದ ವರದಿಯಲ್ಲಿ, ಹೆಣ್ಣು ಕಡಲಾಮೆಗಳು ಸಿಕ್ಕಾಪಟ್ಟೆ ಹೆಚ್ಚುತ್ತಿರುವ ಬಗ್ಗೆ ಜೀವ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿರುವುದು ದಾಖಲಾಗಿದೆ.
ಆಸ್ಟ್ರೇಲಿಯಾದಲ್ಲೂ ಹೀಗೇ ಆಗಿದೆ
ಫ್ಲೋರಿಡಾ ಮಾತ್ರವಲ್ಲದೆ ವಿಶ್ವದ ಹಲವೆಡೆ ಇಂಥದ್ದೇ ವಿದ್ಯಮಾನ ವರದಿಯಾಗಿದೆ. ಆಸ್ಟ್ರೇಲಿಯದ ಗ್ರೇಟ್ ಬ್ಯಾರಿಯರ್ ರೀಫ್‌ನ ಬೆಚ್ಚಗಿನ ಅಥವಾ ಬಿಸಿಯಾದ ದಂಡೆಗಳಲ್ಲಿ, ಕಡಲಾಮೆಗಳ ಶೇ. ೯೦ರಷ್ಟು ಮೊಟ್ಟೆಗಳಿಂದ ಹೆಣ್ಣು ಮರಿಗಳು ಹೊರಬರುತ್ತಿವೆ. ಹಿತಕರ ಅಥವಾ ತಂಪಾದ ವಾತಾವರಣವಿರುವ ದಂಡೆಗಳಲ್ಲಿ ಶೇ. ೬೫ರಷ್ಟು ಮೊಟ್ಟೆಗಳಿಂದ ಹೆಣ್ಣು ಮರಿಗಳು ಹೊರಬರುತ್ತಿವೆ. ಕಡಲಾಮೆಗಳ ಸಂತತಿ ಉಳಿಯಲು ಲಿಂಗ ಸಮತೋಲನ ಅಗತ್ಯವಾಗಿರುವ ಹಿನ್ನೆಲೆಯಲ್ಲಿ, ಭೂಮಿ ಬಿಸಿಯಾಗುವ ಪ್ರಕ್ರಿಯೆ ಇನ್ನಷ್ಟು ವರ್ಷಗಳ ಕಾಲ ಹೀಗೆಯೇ ಮುಂದುವರಿಯುವ ಭೀತಿಯೂ ಉಂಟಾಗಿದೆ.
ಈ ಸಮಸ್ಯೆ ಇನ್ನೂ ಕೆಲವು ಸರೀಸೃಪಗಳಲ್ಲಿ ವರದಿಯಾಗಿದೆ. ಮೊಸಳೆಗಳಲ್ಲಿಯೂ ಮೊಟ್ಟೆಯೊಳಗಿರುವ ಭ್ರೂಣದ ಲಿಂಗ ನಿರ್ಧಾರವಾಗುವುದು ವಾತಾವರಣದ ಉಷ್ಣತೆಯ ಮೇಲೆ. ಇದಲ್ಲದೆ, ನಾನಾ ರೀತಿಯಲ್ಲಿ ಹವಾಮಾನ ಬದಲಾವಣೆಗೆ ಈ ಜೀವಿಗಳು ತುತ್ತಾಗುತ್ತಿವೆ. ಸಮುದ್ರ ಮಟ್ಟ ಏರುತ್ತಿದ್ದು, ಚಂಡಮಾರುತಗಳ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ, ಈ ಸರೀಸೃಪಗಳ ಪ್ರಜನನ ಪ್ರದೇಶಗಳು ಕ್ಷೀಣಿಸುತ್ತಿರುವುದು ಜೀವವಿಜ್ಞಾನಿಗಳ ವ್ಯಾಕುಲತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಬೇಕು ನೀವು| ಜಾಗತಿಕ ತಾಪಮಾನ | ಭೂಮಿ ಬಿಸಿಯಾಗುತ್ತಿದೆ, ಮಕ್ಕಳ ದೈಹಿಕ ಸಾಮರ್ಥ್ಯ ಕುಸಿಯುತ್ತಿದೆ