ನವದೆಹಲಿ: ಭಾರತದ ಗ್ರೇಟರ್ ನೊಯ್ಡಾದಲ್ಲಿರುವ ಪ್ರಿಯತಮನನ್ನು ಅರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ (Seema Haider) ಅವರು ಇಲ್ಲಿಯೇ ಇರಲು ಬಯಸಿದ್ದು, ನಾನೀಗ ಭಾರತೀಯಳು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತದ ಪೌರತ್ವ ಪಡೆಯಲು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪೌರತ್ವದ ಉದಾಹರಣೆ ಕೊಟ್ಟಿದ್ದಾರೆ.
“ನಾನು ಪ್ರೀತಿ ಅರಸಿ ಭಾರತಕ್ಕೆ ಬಂದಿದ್ದೇನೆ ಹಾಗೂ ಭಾರತದಲ್ಲಿಯೇ ಇರಲು ಇಚ್ಛಿಸುತ್ತೇನೆ. ದೇಶದ ಜನರಲ್ಲಿ ಬೆರೆತು ನಾನೀಗ ಭಾರತೀಯಳೇ ಆಗಿದ್ದೇನೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೆನಡಾ ಪೌರತ್ವ ಪಡೆದಿದ್ದಾರೆ. ಆದರೆ, ಅವರು ಭಾರತದಲ್ಲಿ ನೆಲೆಸಿದ್ದಾರೆ. ಹಾಗಾಗಿ, ನಾನು ಕೂಡ ಭಾರತದಲ್ಲಿ ಇರಲು ಹಾಗೂ ಇಲ್ಲಿನ ಪ್ರಜೆಯಾಗಿಯೇ ಇರಲು ಅವಕಾಶ ಮಾಡಿಕೊಡಬೇಕು” ಎಂದು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
“ನಾನು ಸಚಿನ್ ಮೀನಾ ಅವರನ್ನು ತುಂಬ ಪ್ರೀತಿಸುತ್ತೇನೆ ಹಾಗೂ ಅದಕ್ಕಾಗಿಯೇ ಭಾರತಕ್ಕೆ ಬಂದಿದ್ದೇನೆ. ನಮ್ಮದು ಭವಿಷ್ಯದಲ್ಲಿ ಲೈಲಾ-ಮಜ್ನು, ಹೀರ್-ರಾಂಝಾ ಅವರ ರೀತಿಯ ಪ್ರೀತಿಯಾಗಿರುತ್ತದೆ. ಹಾಗಾಗಿ, ದಯಮಾಡಿ ನನಗೆ ಭಾರತದ ಪೌರತ್ವ ನೀಡಿ, ಇಲ್ಲಿಯೇ ವಾಸಿಸಲು ಅನುಮತಿ ನೀಡಬೇಕು” ಎಂದು ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Seema Haider: ಸೀಮಾ ಹೈದರ್ ಪಾಕ್‌ಗೆ ಹಿಂತಿರುಗದಿದ್ದರೆ ಮುಂಬೈ ಮಾದರಿ ದಾಳಿ; ಪೊಲೀಸರಿಗೇ ಬೆದರಿಕೆ
2020ರಲ್ಲಿ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪಬ್ಜಿ ಆನ್‌ಲೈನ್ ಗೇಮ್ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್, ಆಕೆಯ ನಾಲ್ಕು ಮಕ್ಕಳು, ಸಚಿನ್ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್ ವಿಚಾರಣೆ ಕೂಡ ನಡೆಸಿದೆ.