Site icon Vistara News

Elon Musk: ಜಿಮೇಲ್ ಸ್ಥಗಿತ ವದಂತಿ ಮಧ್ಯೆಯೇ ಶೀಘ್ರ ‘ಎಕ್ಸ್‌ಮೇಲ್’ ಲಾಂಚ್!

Amid rumor of Gmail shutdown, soon Xmail launch Says Elon Musk

ನವದೆಹಲಿ: ಚಾಟ್‌ಜಿಪಿಟಿಗೆ (ChatGPT) ಪ್ರತಿಯಾಗಿ ತನ್ನದೇ ಆದ ಎಐ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಎಕ್ಸ್‌ಮೇಲ್ (Xmail) ಸೇವೆ ಆರಂಭಿಸುವುದನ್ನು ಖಚಿತಪಡಿಸಿದ್ದಾರೆ. ಎಕ್ಸ್‌ಮೇಲ್, ಗೂಗಲ್‌ನ (Google) ಜನಪ್ರಿಯ ಜಿಮೇಲ್‌ಗೆ (Gmail) ಪೈಪೋಟಿ ನೀಡಲಿದೆ. ಈ ಮಧ್ಯೆ, ಗೂಗಲ್‌ ತನ್ನ ಜಿಮೇಲ್ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಗೂಗಲ್, ಜಿಮೇಲ್ ಸ್ಥಗಿತವಾಗುತ್ತಿಲ್ಲ. ಈ ಹಿಂದೆ ಎಚ್‌ಟಿಎಂಎಲ್ ಆಗಿದ್ದ ಡಿಫಾಲ್ಟ್ ಜಿಮೇಲ್ ಇಂಟರ್‌ಫೇಸ್‌ ಅನ್ನು ಮತ್ತಷ್ಟು ವರ್ಣರಂಜಿತಗೊಳಿಸಲಿದೆ. ಈ ಬದಲಾವಣೆ ಜನವರಿ 24ರಿಂದಲೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ.

ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಸಂಭಾಷಣೆಯೊಂದರಲ್ಲಿ ಮಸ್ಕ್ ಅವರು ‘ಎಕ್ಸ್‌ಮೇಲ್’ ಎಂದು ಕರೆಯಲ್ಪಡುವ ಉತ್ಪನ್ನವು ‘ಬರುತ್ತಿದೆ’ ಎಂದು ಹೇಳಿದ್ದಾರೆ. ಗೂಗಲ್‌ ಜಿಮೇಲ್ ಸ್ಥಗಿತವಾಗಲಿದೆ ಎಂಬ ನಕಲಿ ದಾಖಲೆಯು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವಾಗಲೇ ಎಕ್ಸ್‌ಮೇಲ್ ಆರಂಭದ ಕುರಿತು ಮಸ್ಕ್ ಹೇಳಿಕೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇಷ್ಟಾಗಿಯೂ ಎಕ್ಸ್‌ಮೇಲ್ ಆರಂಭದ ಕುರಿತು ಹೆಚ್ಚೇನೂ ಅವರು ಮಾಹಿತಿಯನ್ನು ನೀಡಿಲ್ಲ. ಈ ಸೇವೆ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ. ಎಕ್ಸ್‌ನ ಸೆಕ್ಯುರಿಟಿ ಇಂಜಿನಿಯರಿಂಗ್ ತಂಡದ ಹಿರಿಯ ಸದಸ್ಯರಾದ ನಾಥನ್ ಮೆಕ್‌ಗ್ರಾಡಿ ಅವರು ಎಕ್ಸ್‌ಮೇಲ್ ಲಾಂಚ್ ದಿನಾಂಕದ ಬಗ್ಗೆ ಪ್ರಶ್ನಿಸಿದ ನಂತರ ಈ ದೃಢೀಕರಣವು ಬಂದಿದೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, ಎಕ್ಸ್ ಮೇಲ್ ಶೀಘ್ರವೇ ಚಾಲ್ತಿಗೆ ಬರಲಿದೆ ಎಂದು ದೃಢಿಕರಿಸಿದರು.

ಜಿ ಮೇಲ್ ಸ್ಥಗಿತದ ವದಂತಿ ಹೆಚ್ಚಿಸಿದ ಆತಂಕ

ಜಿಮೇಲ್ ಅನ್ನು ಮುಚ್ಚಲಾಗುವುದು ಎಂಬ ಎಕ್ಸ್‌ ಪೋಸ್ಟ್ ಭಾರೀ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಯಿತು. ಈ ವೈರಲ್ ಪೋಸ್ಟ್‌ನಲ್ಲಿ ‘ಗೂಗಲ್ ಈಸ್ ಸನ್‌ಸೆಟಿಂಗ್ ಜಿಮೇಲ್’ ಎಂಬ ವಿಷಯದೊಂದಿಗೆ ಗೂಗಲ್ ಇಮೇಲ್‌ನ ಸ್ಕ್ರೀನ್‌ಶಾಟ್ ಇದೆ.

ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಉತ್ತೇಜಿಸುವ ವರ್ಷಗಳ ನಂತರ ಜಿಮೇಲ್ ಪ್ರಯಾಣವನ್ನು ಅಂತ್ಯಗೊಳಿಸುತ್ತಿದೆ. ಆಗಸ್ಟ್ 1, 2024 ರಿಂದ ಜಿಮೇಲ್ ಅಧಿಕೃತವಾಗಿ ಸ್ಥಗಿತವಾಗಲಿದೆ ಎಂದು ವೈರಲ್ ಆದ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆಗಸ್ಟ್ 1ರ ಬಳಿಕ ಇಮೇಲ್‌ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಬೆಂಬಲಿಸುವುದಿಲ್ಲ ಜಿಮೇಲ್ ಬೆಂಬಲಿಸುವುದಿಲ್ಲ. ಜಿಮೇಲ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ವಿಕಸನಗೊಳ್ಳುತ್ತಿರುವ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಮತ್ತು ಉನ್ನತ-ಗುಣಮಟ್ಟದ, ನವೀನ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಎಚ್ಚರಿಕೆಯಿಂದ ಪರಿಗಣಿಸಿ ಮಾಡಲಾಗಿದೆ. ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವದಂತೆಯನ್ನು ತಳ್ಳಿ ಹಾಕಿರುವ ಗೂಗಲ್, ಜಿಮೇಲ್ ಇನ್ನಷ್ಟು ವರ್ಣ ರಂಜಿತವಾಗಿ ಬರಲಿದೆ ಎಂದು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: Elon Musk: ಮೆದುಳಿಗೆ ಚಿಪ್‌ ಅಳವಡಿಸಿದ ವ್ಯಕ್ತಿ ಯೋಚನೆಯ ಮೂಲಕವೇ ಮೌಸ್‌ ಅಲ್ಲಾಡಿಸಿದ! ಏನಿದು ಎಲಾನ್‌ ಮಸ್ಕ್‌ ಪ್ರಯೋಗ?

Exit mobile version