Site icon Vistara News

Indian Student Dead: ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು, 2 ವಾರದಲ್ಲಿ ಇದು 3ನೇ ಕೊಲೆ!

another Indian Student Dead in Ohia, US

ನವದೆಹಲಿ: ಅಮೆರಿಕದ (America) ಓಹಿಯೋ (Ohio) ರಾಜ್ಯದ ಸಿನ್ಸಿನಾಟಿಯಲ್ಲಿ ಗುರುವಾರ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ(Indian Student Dead). ವಿದ್ಯಾರ್ಥಿಯ ಸಾವಿಗೆ ಕಾರಣ ತಿಳಿದಿಲ್ಲ. ಆದರೆ ಒಂದು ವಾರದೊಳಗೆ ಅಂತಹ ಮೂರನೇ ಸಾವು ಇದಾಗಿದೆ. ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಜನವರಿಯಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿಯನ್ನು ನಿರ್ಗತಿಕ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದ. ಆರೋಪಿಯನ್ನು ಘಟನಾ ಸ್ಥಳದಿಂದಲೇ ಪೊಲೀಸರು ಅರೆಸ್ಟ್ ಮಾಡಿದ್ದರು. ಕೊಲೆಯಾದ ಸೈನಿ, ಆರೋಪಿಗೆ ಹಲವಾರು ದಿನಗಳ ಕಾಲ ಸೌಕರ್ಯಗಳನ್ನು ಒದಗಿಸಿದ್ದರು. ಆದರೆ, ಮತ್ತೆ ಹೆಚ್ಚಿನ ಸೌಲಭ್ಯ ಒದಗಿಸಲು ನಿರಾಕರಿಸಿದಾಗ, ಮಾದಕ ವ್ಯಸನಿಯಾದ ನಿರ್ಗತಿಕ ವ್ಯಕ್ತಿ ಸೈನಿಯ ಮುಖ ಮತ್ತು ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದು ಹಾಕಿದ್ದ. ಈ ಘಟನೆಯು ಅಮೆರಿಕಾದ ಜಾರ್ಜಿಯಾದ ಲಿಥೋನಿಯಾ ರಾಜ್ಯದ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ನಡೆದಿತ್ತು. ಈ ಸ್ಟೋರ್‌ನಲ್ಲಿ ಸೈನಿ ಅರೆಕಾಲಿಕ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಅವರು ಅಮೆರಿಕಾದಲ್ಲಿ ಎಂಬಿಎ ಮುಗಿಸಿದ್ದರು.

ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಕಾಣೆಯಾದ ಒಂದು ದಿನದ ನಂತರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನೀಲ್ ಆಚಾರ್ಯ ಸಾವಿಗೆ ಕಾರಣ ಏನು ಎಂದು ಇದುವರೆಗೂ ತಿಳಿದು ಬಂದಿಲ್ಲ. ಅಮೆರಿಕದ ರಾಜ್ಯವಾದ ಇಂಡಿಯಾನಾದ ವೆಸ್ಟ್ ಲಫಯೆಟ್ಟೆಯಲ್ಲಿನ ಪೊಲೀಸ್ ಅಧಿಕಾರಿಗಳು ಈ ಕೊಲೆ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಆದರೆ, ಈ ವಿಷಯದಲ್ಲಿ ಇನ್ನೂ ಯಾವುದೇ ಪ್ರಗತಿಯಾಗಿಲ್ಲ.

ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಓದುತ್ತಾರೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಕೆಲವು ಪ್ರಕರಣಗಳು ಕೊಲೆಯಲ್ಲಿ ಅಂತ್ಯವಾಗುತ್ತಿವೆ. ಅಮೆರಿಕ ಮಾತ್ರವಲ್ಲದೇ, ಆಸ್ಟ್ರೇಲಿಯಾ ಸೇರಿದಂತೆ ಇನ್ನಿತರ ಕೆಲವು ರಾಷ್ಟ್ರಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಈ ಸುದ್ದಿಯನ್ನೂ ಓದಿ: Indian student in US: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು; ನಾಪತ್ತೆಯಾಗಿದ್ದವನು ಶವವಾಗಿ ಪತ್ತೆ

Exit mobile version