ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ (Special Status) ಕಲ್ಪಿಸುವ ಆರ್ಟಿಕಲ್ 370 (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಆರ್ಟಿಕಲ್ 370 ತಾತ್ಕಾಲಿಕವಾಗಿದ್ದು, ಆ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಇದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ವಿಚಾರದಲ್ಲಿ ಐತಿಹಾಸಿಕ ಜಯ ದೊರೆತಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ನೇತೃತ್ವದ ಸಾಂವಿಧಾನಿಕ ಪೀಠವು ನಡೆಸಿದ ಸುದೀರ್ಘ ಅವಧಿಯ ವಿಚಾರಣೆಯನ್ನು ಅಂತಿಮಗೊಳಿಸಿ, ಈ ಬಗ್ಗೆ ತೀರ್ಪು ನೀಡಿದೆ. ಸೆಪ್ಟೆಂಬರ್ 5ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 16 ದಿನಗಳ ಕಾಲ ಸಮಗ್ರ ವಿಚಾರಣೆ ನಡೆದಿತ್ತು. ಅರ್ಜಿದಾರರು ಮತ್ತು ಸರ್ಕಾರ ಇಬ್ಬರೂ ತಮ್ಮ ವಾದಗಳನ್ನು ಮಂಡಿಸಿದ್ದರು. ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಬಳಸಿದ ಕಾರ್ಯವಿಧಾನದ ಸಾಂವಿಧಾನಿಕತೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಹಾಗೂ ನಂತರದ ರದ್ದತಿಯನ್ನು ವಿಚಾರಣೆಯಲ್ಲಿ ಪರಿಶೀಲಿಸಲಾಗಿತ್ತು.
ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ದೂರಗಾಮಿ ಪರಿಣಾಮಗಳನ್ನು ಬೀರು ಮತ್ತು ಹೆಗ್ಗುರಾತಾಗಬಹುದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಿದೆ.
ಸಂವಿಧಾನ ಪೀಠದ ಪರಿಶೀಲನೆ
ಆರ್ಟಿಲ್ 370 ರದ್ಧತಿಯ ಕುರಿತಾದ ಎಲ್ಲ ಆಯಾಮಗಳನ್ನು, ಸಾಂವಿಧಾನಿಕ ನಿಲುವುಗಳನ್ನು ಪೀಠ ಪರಿಶೀಲಿಸಿದೆ. ಅಂದರೆ, ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಡಳಿತ, ಸಂಸತ್ತಿನ ಒಪ್ಪಿಗೆ, ರಾಜ್ಯ ಮರು ಸಂಘಟನೆಯಂಥ ಘಟನೆಗಳನ್ನು ಸಂವಿಧಾನ ಪೀಠವು ಪರಿಶೀಲಿಸಿದೆ. ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣ್ಯಂ, ದುಶ್ಯಂತ್ ದವೆ ಮತ್ತು ರಾಜೀವ್ ಧವನ್ ಸೇರಿದಂತೆ 18 ವಕೀಲರು ಕೇಂದ್ರದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿ ವಾದ ಮಂಡಿಸಿದರೆ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಇತರ ಕಾನೂನು ತಜ್ಞರು ಕೇಂದ್ರವನ್ನು ಪ್ರತಿನಿಧಿಸಿ, ಕೇಂದ್ರದ ನಿರ್ಧಾರವು ಸಂಪೂರ್ಣವಾಗಿ ತಾರ್ಕಿಕ ಮತ್ತು ಸೂಕ್ತವಾಗಿದೆ ಎಂದು ವಾದ ಮಂಡಿಸಿದ್ದರು.
ತೀರ್ಪಿನ ಕುರಿತ ಇನ್ನಷ್ಟು ವಿವರಗಳು ಇಲ್ಲಿ ಪ್ರಕಟವಾಗಲಿವೆ.