ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು (Special status Jammu And Kashmir) ನೀಡಿದ 370ನೇ ವಿಧಿಯನ್ನು (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಮತ್ತು ರೀತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರ ಪರವಾಗಿ ವಾದ ಮಾಡಿರುವ ಹಿರಿಯ ವಕೀಲ ಕಪಿಲ್ ಸಿಬಾಲ್ (Senior Advocate Kapil sibal) ಅವರು ಕೆಲವೊಂದು ಯುದ್ಧಗಳನ್ನು ಸೋಲಲೆಂದೇ ಮಾಡಬೇಕಾಗುತ್ತದೆ ಎಂದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿಗೆ (Supreme Court Judgement) ಮುನ್ನವೇ ಟ್ವೀಟ್ ಮಾಡಿದ ಅವರು ಸೋಲನ್ನು ಮೊದಲೇ ಒಪ್ಪಿಕೊಂಡಿದ್ದರು. ಆದರೆ, ಸೋಲೋ ಗೆಲುವೋ ಕೆಲವು ವಿಚಾರಗಳನ್ನು ಪ್ರಶ್ನೆ ಮಾಡುವುದು ಅಗತ್ಯವಾಗಿರುತ್ತದೆ ಎಂದಿದ್ದಾರೆ.
ಕೆಲವೊಂದು ಯುದ್ಧಗಳಲ್ಲಿ ನಾವು ಸೋಲುವುದಕ್ಕಾಗಿಯೇ ಸೆಣಸಬೇಕಾಗುತ್ತದೆ. ಸಾಂಸ್ಥಿಕ ನಿರ್ಣಯಗಳ ಸರಿ-ತಪ್ಪುಗಳ ಬಗ್ಗೆ ಮುಂದಿನ ವರ್ಷಗಳಲ್ಲಿ ಚರ್ಚೆ ನಡೆಯುತ್ತದೆ. ಅದಕ್ಕೆ ನಾವು ಮಾಡಿರುವ ಪ್ರಶ್ನೆಗಳೇ ಆಧಾರವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಆದೇಶದ ಮೂಲಕ 370ನೇ ವಿಧಿಯನ್ನು ರದ್ದುಪಡಿಸಿತ್ತು. ಅದಕ್ಕಿಂತ ಮೊದಲು ಅದು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಹಿಂಪಡೆದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿತ್ತು. ಅರ್ಜಿದಾರರ ಪರವಾಗಿ ಕಪಿಲ್ ಸಿಬಾಲ್ ವಾದ ಮಂಡಿಸಿದ್ದರು.
ಇದನ್ನೂ ಓದಿ: Article 370 : ಕಾಶ್ಮೀರದಲ್ಲಿ 2024ರ ಸೆ. 30ರೊಳಗೆ ಚುನಾವಣೆ; ಸುಪ್ರೀಂ ಆರ್ಡರ್
ಕಪಿಲ್ ಸಿಬಾಲ್ ವಾದ ಏನಾಗಿತ್ತು?
- ಭಾರತದ ಇತಿಹಾಸದಲ್ಲಿ ಹಿಂದೆಂದೂ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆ ಮಾಡಿರಲಿಲ್ಲ.
- ನೀವು ಒಂದು ರಾಜ್ಯದ ಗಡಿ ರೇಖೆಗಳನ್ನು ಬದಲಿಸಬಹುದು, ದೊಡ್ಡ ರಾಜ್ಯವಾಗಿದ್ದರೆ ಸಣ್ಣ ರಾಜ್ಯಗಳಾಗಿ ವಿಭಜಿಸಬಹುದು. ಆದರೆ, ಒಂದು ರಾಜ್ಯದ ಅಸ್ತಿತ್ವವನ್ನೇ ನಾಶ ಮಾಡಿರಲಿಲ್ಲ.
- ನೀವು ಮಧ್ಯ ಪ್ರದೇಶ ರಾಜ್ಯವನ್ನು ದೊಡ್ಡದಿದೆ ಎಂಬ ಕಾರಣಕ್ಕೆ ವಿಭಜನೆ ಮಾಡಬಹುದು. ಆದರೆ, ಒಂದು ದಿನ ನೇರವಾಗಿ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಲಾಗದು.
- ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆಯಲು 370ನೇ ವಿಧಿಯನ್ನು ರದ್ದು ಮಾಡಿದ್ದು ಸಾಂವಿಧಾನಿಕ ನಡೆಯಲ್ಲ, ರಾಜಕೀಯ ಪ್ರೇರಿತ ಕ್ರಮ.
370ನೇ ವಿಧಿ ತಾತ್ಕಾಲಿಕ, ರದ್ದತಿ ಸರಿ ಎಂದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ (Special Status) ಕಲ್ಪಿಸುವ ಆರ್ಟಿಕಲ್ 370 (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಆರ್ಟಿಕಲ್ 370 ತಾತ್ಕಾಲಿಕವಾಗಿದ್ದು, ಆ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಇದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ವಿಚಾರದಲ್ಲಿ ಐತಿಹಾಸಿಕ ಜಯ ದೊರೆತಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ನೇತೃತ್ವದ ಸಾಂವಿಧಾನಿಕ ಪೀಠವು ನಡೆಸಿದ ಸುದೀರ್ಘ ಅವಧಿಯ ವಿಚಾರಣೆಯನ್ನು ಅಂತಿಮಗೊಳಿಸಿ, ಈ ಬಗ್ಗೆ ತೀರ್ಪು ನೀಡಿದೆ. ಸೆಪ್ಟೆಂಬರ್ 5ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 16 ದಿನಗಳ ಕಾಲ ಸಮಗ್ರ ವಿಚಾರಣೆ ನಡೆದಿತ್ತು. ಅರ್ಜಿದಾರರು ಮತ್ತು ಸರ್ಕಾರ ಇಬ್ಬರೂ ತಮ್ಮ ವಾದಗಳನ್ನು ಮಂಡಿಸಿದ್ದರು. ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಬಳಸಿದ ಕಾರ್ಯವಿಧಾನದ ಸಾಂವಿಧಾನಿಕತೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಹಾಗೂ ನಂತರದ ರದ್ದತಿಯನ್ನು ವಿಚಾರಣೆಯಲ್ಲಿ ಪರಿಶೀಲಿಸಲಾಗಿತ್ತು.
ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ದೂರಗಾಮಿ ಪರಿಣಾಮಗಳನ್ನು ಬೀರು ಮತ್ತು ಹೆಗ್ಗುರಾತಾಗಬಹುದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಿದೆ.