ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ, ರಾಜಸ್ಥಾನದಲ್ಲಿ ಎಂದಿನಂತೆ ತಮ್ಮ ಸರ್ಕಾರದ ವಿರುದ್ಧವೇ ಸಚಿನ್ ಪೈಲಟ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಅದರಲ್ಲೂ, ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಪರಿಸ್ಥಿತಿಯೇ ಡಿಕೆಶಿ ಅವರಿಗೂ ಆಗಲಿದೆ ಎನ್ನಲಾಗುತ್ತಿದೆ. ಹಾಗಾದರೆ, ರಾಜಸ್ಥಾನದಲ್ಲಿ ಗೆಹ್ಲೋಟ್ ಹಾಗೂ ಪೈಲಟ್ ಮಧ್ಯೆ ಸಂಘರ್ಷ ಶುರುವಾಗಿದ್ದು ಹೇಗೆ? ಇಬ್ಬರ ಪರ ಇರುವ ಶಾಸಕರ ಸಂಖ್ಯೆ ಎಷ್ಟು? ಸಚಿನ್ ಪೈಲಟ್ ಅವರ ಪರಿಸ್ಥಿತಿಯೇ ಡಿಕೆಶಿ ಅವರಿಗೂ ಆಗಲಿದೆಯೇ? ಇದೆಲ್ಲದರ ಕುರಿತ ಸಂಕ್ಷಿಪ್ತ ಮಾಹಿತಿ (ವಿಸ್ತಾರ Explainer) ಹೀಗಿದೆ.
ಗೆಹ್ಲೋಟ್ VS ಪೈಲಟ್; ಸಂಘರ್ಷ ಎಲ್ಲಿಂದ ಆರಂಭ?
ರಾಜಸ್ಥಾನದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಗಿಯುವತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಅಶೋಕ್ ಗೆಹ್ಲೋಟ್ ಅವರೇ ಸಿಎಂ ಆಗುವುದು ಎಂಬುದು ನಿಶ್ಚಿತವಾಯಿತೋ, ಆಗ ಸಚಿನ್ ಪೈಲಟ್ ಸಿಡಿದೆದ್ದರು. ರಾಜಸ್ಥಾನದಲ್ಲಿ ಚುನಾವಣೆ ನಡೆದಾಗ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಚಿನ್ ಪೈಲಟ್ ಅಧ್ಯಕ್ಷರಾಗಿದ್ದರು. ಅದರಲ್ಲೂ, 2013ರಲ್ಲಿ 21 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಬಲಪಡಿಸಿದ್ದೇ ನಾನು, ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಪಕ್ಷ ಗೆದ್ದಿದೆ. ಹಾಗಾಗಿ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಪೈಲಟ್ ಪಟ್ಟು ಹಿಡಿದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ, ಹಿರಿಯರು ಹಾಗೂ ಅನುಭವಿಯಾದ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿತು. ಸಚಿನ್ ಪೈಲಟ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆರ್‌ಪಿಸಿಸಿ ಅಧ್ಯಕ್ಷ ಸ್ಥಾನವೂ ಪೈಲಟ್ ಬಳಿಯೇ ಉಳಿಯಿತು. ಆದರೆ, ಪೈಲಟ್ ಅಸಮಾಧಾನ ಮಾತ್ರ ಶಮನವಾಗಿರಲಿಲ್ಲ.
2020ರಲ್ಲಿ ಬಂಡಾಯವೆದ್ದ ಪೈಲಟ್
ಅಶೋಕ್ ಗೆಹ್ಲೋಟ್ ಅವರು ಸಿಎಂ ಆದಾಗಿನಿಂದಲೂ ಪೈಲಟ್ ಅವರಿಗೆ ಸಮಾಧಾನ ಇರಲಿಲ್ಲ. ಹಾಗಾಗಿ, 2020ರಲ್ಲಿ ಅವರು ಗೆಹ್ಲೋಟ್ ವಿರುದ್ಧ ಬಂಡಾಯವೆದ್ದರು. ತಮ್ಮ ಆಪ್ತ ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿ ಆಡಳಿತದ ಹರಿಯಾಣದ ಹೋಟೆಲ್‌ನಲ್ಲಿ ಬೀಡುಬಿಟ್ಟರು. ನನ್ನ ಪರ 30 ಶಾಸಕರಿದ್ದಾರೆ ಎಂದೆಲ್ಲ ಹೇಳಿ ಸರ್ಕಾರವನ್ನು ಆತಂಕಕ್ಕೆ ದೂಡಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಮಾಡಿದ ಷಡ್ಯಂತ್ರ ಇದು ಎಂಬ ಮಾತುಗಳು ಕೂಡ ಕೇಳಿಬಂದವು. ಆದರೆ, ಗೆಹ್ಲೋಟ್ ಅವರು 15 ಶಾಸಕರನ್ನು ಕೂಡ ಸೆಳೆಯುವಲ್ಲಿ ವಿಫಲರಾದರು. ಕೊನೆಗೆ, ಪಕ್ಷವು ಪೈಲಟ್ ಅವರಿಂದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೂ ಕಸಿದುಕೊಂಡಿತು.
ಕಾಂಗ್ರೆಸ್ ಬಲಾಬಲ ಎಷ್ಟು? ಇಬ್ಬರ ಪರ ಇರುವ ಶಾಸಕರೆಷ್ಟು?
ರಾಜಸ್ಥಾನದಲ್ಲಿ ಸದ್ಯ ಕಾಂಗ್ರೆಸ್‌ನ 108 ಶಾಸಕರಿದ್ದಾರೆ. ಕಾಂಗ್ರೆಸ್‌ಗೆ 13 ಪಕ್ಷೇತರ ಶಾಸಕರು ಬೆಂಬಲ ಸೂಚಿಸಿದ್ದಾರೆ. ಇನ್ನು ಬಿಜೆಪಿಯು 71 ಶಾಸಕರನ್ನು ಹೊಂದಿದೆ. ಇತರೆ 8 ಶಾಸಕರು ಕೂಡ ಇದ್ದಾರೆ. ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ ಪರ 85 ಶಾಸಕರಿದ್ದರೆ, ಸಚಿನ್ ಪೈಲಟ್ ಪರ 19ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಚಿನ್ ಪೈಲಟ್ ಅವರು 30 ಶಾಸಕರು ನನ್ನ ಪರ ಇದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, 2022ರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ, ಅಶೋಕ್ ಗೆಹ್ಲೋಟ್ ಅವರು ಕೂಡ ರೇಸ್‌ನಲ್ಲಿದ್ದರು. ಆಗ, ರಾಜಸ್ಥಾನದಲ್ಲಿ 90 ಕಾಂಗ್ರೆಸ್ ಶಾಸಕರು ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಸ್ಥಾನದಿಂದ ಇಳಿಸಬಾರದು ಎಂದು ರಾಜೀನಾಮೆ ನೀಡಿದ್ದರು. ಇದು ಗೆಹ್ಲೋಟ್ ಮುನ್ನಡೆಗೆ ಕಾರಣವಾಗಿತ್ತು. ಕೊನೆಗೆ ಎಐಸಿಸಿ ಚುನಾವಣೆಗೇ ಗೆಹ್ಲೋಟ್ ಸ್ಪರ್ಧಿಸಲಿಲ್ಲ.
50:50 ಅಧಿಕಾರ ಹಂಚಿಕೆಗೆ ಒಪ್ಪಿದ್ದರೇ ಪೈಲಟ್?
ಕರ್ನಾಟಕದಲ್ಲಿ ಎರಡೂವರೆ ವರ್ಷ ಸಿದ್ದರಾಮಯ್ಯ, ಉಳಿದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಧಿಕಾರ ಹಂಚಿಕೆಗೆ ಒಪ್ಪಿದ್ದೇನೆ ಎಂದು ಈಗಾಗಲೇ ಡಿಕೆಶಿ ಕೂಡ ಹೇಳಿದ್ದಾರೆ. ಆದರೆ, ರಾಜಸ್ಥಾನದಲ್ಲಿ 2018ರಲ್ಲಿ ಗೆಹ್ಲೋಟ್ ಹಾಗೂ ಪೈಲಟ್ ಮಧ್ಯೆ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿತ್ತು ಎಂಬುದು ದೃಢಪಟ್ಟಿಲ್ಲ. ಮೂಲಗಳ ಪ್ರಕಾರ, ಇಬ್ಬರ ಮಧ್ಯೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿತ್ತು. ಆದರೆ, ಗೆಹ್ಲೋಟ್ ಪರ ಹೆಚ್ಚು ಶಾಸಕರು ಇರುವುದರಿಂದ ಪೈಲಟ್ ಅವರನ್ನು ಸಿಎಂ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಕುರಿತು ಪೈಲಟ್ ಎಲ್ಲೂ ಮಾಹಿತಿ ನೀಡಿಲ್ಲ.
ಕರ್ನಾಟಕದಲ್ಲೂ ಹೀಗೆಯೇ ಆಗುವುದೇ?
ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರು ಸಿಎಂ ರೇಸ್‌ನಲ್ಲಿ ಸ್ಪರ್ಧೆಯೊಡ್ಡಿ, ಕೊನೆಗೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅಧಿಕಾರ ಹಂಚಿಕೆ ಆಗಿದೆ ಎಂದು ಹೇಳುತ್ತಿದ್ದರೂ, ಯಾರೂ ಇದನ್ನು ಸ್ಪಷ್ಟಪಡಿಸಿಲ್ಲ. ಹಾಗೆಯೇ, ರಾಜಸ್ಥಾನದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಪರ ಹೆಚ್ಚು ಶಾಸಕರಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆದರೆ, ಡಿಕೆಶಿ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪೈಲಟ್ ಈಗ ಬಂಡಾಯದ ಬಾವುಟ ಬೀಸಿದ್ದೇಕೆ?
ಅಶೋಕ್ ಗೆಹ್ಲೋಟ್ ಅವರಿಗೆ ಈಗ 72 ವರ್ಷ. ಸಚಿನ್ ಪೈಲಟ್ ಅವರಿಗೆ 45 ವರ್ಷ ವಯಸ್ಸು. ಮುಂದಿನ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಗೆಹ್ಲೋಟ್ ಅವರೇ ಸಿಎಂ ಆಗುವ ಸಾಧ್ಯತೆ ಇದೆ. ಕಳೆದ ನಾಲ್ಕೂವರೆ ವರ್ಷದಿಂದ ಬಂಡಾಯದಲ್ಲೇ ಕಾಲ ಕಳೆದಿರುವ ಪೈಲಟ್ ಈಗ ಶತಾಯಗತಾಯ ಸಿಎಂ ಆಗುವ ಉಮೇದಿಯಲ್ಲಿದ್ದಾರೆ. ಹಾಗಾಗಿಯೇ, ಅವರು ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಜನರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ಹೈಕಮಾಂಡ್ ಮೇಲೆ ಒತ್ತಡ ಹೇರುವ ಹಾಗೂ ಗೆಹ್ಲೋಟ್ ವಿರುದ್ಧ ಅಲೆ ಸೃಷ್ಟಿಸುವ ಯತ್ನದಲ್ಲಿದ್ದಾರೆ.
ಇದನ್ನೂ ಓದಿ: Gehlot VS Pilot: ಕರ್ನಾಟಕ ಚುನಾವಣೆ ಫಲಿತಾಂಶ ಉದಾಹರಣೆ ನೀಡಿ ಗೆಹ್ಲೋಟ್‌ಗೆ ಟಾಂಗ್ ಕೊಟ್ಟ ಪೈಲಟ್
ನಾಯಕರ ಬಿಕ್ಕಟ್ಟಿಗೆ ಬೆಲೆ ತೆತ್ತಿರುವ ಕಾಂಗ್ರೆಸ್
ಕೆಲವು ರಾಜ್ಯಗಳಲ್ಲಿ ಪಕ್ಷದ ಪ್ರಬಲ ನಾಯಕರ ಆಂತರಿಕ ಕಿತ್ತಾಟದಿಂದಾಗಿ ಕಾಂಗ್ರೆಸ್ ಭಾರಿ ಬೆಲೆ ತೆತ್ತಿದೆ. ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಕಮಲ್‌ನಾಥ್ ಹಾಗೂ ಆಗ ಬಿಜೆಪಿ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯೆ ಬಿಕ್ಕಟ್ಟು ಉಂಟಾಗಿ, ಕೊನೆಗೆ ಸಿಂಧಿಯಾ ಅವರು ಬಿಜೆಪಿ ಸೇರಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಪತನವಾಗಿ, ಬಿಜೆಪಿ ಗದ್ದುಗೆಗೇರಿತು. ಇನ್ನು, ಪಂಜಾಬ್‌ನಲ್ಲೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವಿನ ಜಗಳವು ರಾಜ್ಯದಲ್ಲಿ ಕಾಂಗ್ರೆಸ್ ಅಧಃಪತನಕ್ಕೆ ಕಾರಣವಾಗಿದೆ. ಹಾಗಾಗಿ, ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ಸಂಘರ್ಷವು ಎಲ್ಲಿಗೆ ತಲುಪಲಿದೆ ಎಂಬ ಭೀತಿ ಹೈಕಮಾಂಡ್‌ಗಂತೂ ಇದ್ದೇ ಇದೆ.