EXPLAINER
ವಿಸ್ತಾರ Explainer : ಗೆಹ್ಲೋಟ್ VS ಪೈಲಟ್ ಸಂಘರ್ಷ ಆರಂಭವಾಗಿದ್ದು ಹೇಗೆ? ಸಿದ್ದು, ಡಿಕೆಶಿ ಶೀತಲ ಸಮರಕ್ಕೇಕೆ ಇದು ಹೋಲಿಕೆ?
ವಿಸ್ತಾರ Explainer: ರಾಜಸ್ಥಾನದಲ್ಲಿ ಮತ್ತೆ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದರ ಮಧ್ಯೆಯೇ, ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರಿಗೆ ಉಂಟಾದ ಪರಿಸ್ಥಿತಿಯೇ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಆಗಲಿದೆ ಎನ್ನಲಾಗುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ, ರಾಜಸ್ಥಾನದಲ್ಲಿ ಎಂದಿನಂತೆ ತಮ್ಮ ಸರ್ಕಾರದ ವಿರುದ್ಧವೇ ಸಚಿನ್ ಪೈಲಟ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಅದರಲ್ಲೂ, ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಪರಿಸ್ಥಿತಿಯೇ ಡಿಕೆಶಿ ಅವರಿಗೂ ಆಗಲಿದೆ ಎನ್ನಲಾಗುತ್ತಿದೆ. ಹಾಗಾದರೆ, ರಾಜಸ್ಥಾನದಲ್ಲಿ ಗೆಹ್ಲೋಟ್ ಹಾಗೂ ಪೈಲಟ್ ಮಧ್ಯೆ ಸಂಘರ್ಷ ಶುರುವಾಗಿದ್ದು ಹೇಗೆ? ಇಬ್ಬರ ಪರ ಇರುವ ಶಾಸಕರ ಸಂಖ್ಯೆ ಎಷ್ಟು? ಸಚಿನ್ ಪೈಲಟ್ ಅವರ ಪರಿಸ್ಥಿತಿಯೇ ಡಿಕೆಶಿ ಅವರಿಗೂ ಆಗಲಿದೆಯೇ? ಇದೆಲ್ಲದರ ಕುರಿತ ಸಂಕ್ಷಿಪ್ತ ಮಾಹಿತಿ (ವಿಸ್ತಾರ Explainer) ಹೀಗಿದೆ.
ಗೆಹ್ಲೋಟ್ VS ಪೈಲಟ್; ಸಂಘರ್ಷ ಎಲ್ಲಿಂದ ಆರಂಭ?
ರಾಜಸ್ಥಾನದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಗಿಯುವತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಅಶೋಕ್ ಗೆಹ್ಲೋಟ್ ಅವರೇ ಸಿಎಂ ಆಗುವುದು ಎಂಬುದು ನಿಶ್ಚಿತವಾಯಿತೋ, ಆಗ ಸಚಿನ್ ಪೈಲಟ್ ಸಿಡಿದೆದ್ದರು. ರಾಜಸ್ಥಾನದಲ್ಲಿ ಚುನಾವಣೆ ನಡೆದಾಗ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಚಿನ್ ಪೈಲಟ್ ಅಧ್ಯಕ್ಷರಾಗಿದ್ದರು. ಅದರಲ್ಲೂ, 2013ರಲ್ಲಿ 21 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಬಲಪಡಿಸಿದ್ದೇ ನಾನು, ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಪಕ್ಷ ಗೆದ್ದಿದೆ. ಹಾಗಾಗಿ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಪೈಲಟ್ ಪಟ್ಟು ಹಿಡಿದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ, ಹಿರಿಯರು ಹಾಗೂ ಅನುಭವಿಯಾದ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿತು. ಸಚಿನ್ ಪೈಲಟ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆರ್‌ಪಿಸಿಸಿ ಅಧ್ಯಕ್ಷ ಸ್ಥಾನವೂ ಪೈಲಟ್ ಬಳಿಯೇ ಉಳಿಯಿತು. ಆದರೆ, ಪೈಲಟ್ ಅಸಮಾಧಾನ ಮಾತ್ರ ಶಮನವಾಗಿರಲಿಲ್ಲ.
2020ರಲ್ಲಿ ಬಂಡಾಯವೆದ್ದ ಪೈಲಟ್
ಅಶೋಕ್ ಗೆಹ್ಲೋಟ್ ಅವರು ಸಿಎಂ ಆದಾಗಿನಿಂದಲೂ ಪೈಲಟ್ ಅವರಿಗೆ ಸಮಾಧಾನ ಇರಲಿಲ್ಲ. ಹಾಗಾಗಿ, 2020ರಲ್ಲಿ ಅವರು ಗೆಹ್ಲೋಟ್ ವಿರುದ್ಧ ಬಂಡಾಯವೆದ್ದರು. ತಮ್ಮ ಆಪ್ತ ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿ ಆಡಳಿತದ ಹರಿಯಾಣದ ಹೋಟೆಲ್‌ನಲ್ಲಿ ಬೀಡುಬಿಟ್ಟರು. ನನ್ನ ಪರ 30 ಶಾಸಕರಿದ್ದಾರೆ ಎಂದೆಲ್ಲ ಹೇಳಿ ಸರ್ಕಾರವನ್ನು ಆತಂಕಕ್ಕೆ ದೂಡಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಮಾಡಿದ ಷಡ್ಯಂತ್ರ ಇದು ಎಂಬ ಮಾತುಗಳು ಕೂಡ ಕೇಳಿಬಂದವು. ಆದರೆ, ಗೆಹ್ಲೋಟ್ ಅವರು 15 ಶಾಸಕರನ್ನು ಕೂಡ ಸೆಳೆಯುವಲ್ಲಿ ವಿಫಲರಾದರು. ಕೊನೆಗೆ, ಪಕ್ಷವು ಪೈಲಟ್ ಅವರಿಂದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೂ ಕಸಿದುಕೊಂಡಿತು.
ಕಾಂಗ್ರೆಸ್ ಬಲಾಬಲ ಎಷ್ಟು? ಇಬ್ಬರ ಪರ ಇರುವ ಶಾಸಕರೆಷ್ಟು?
ರಾಜಸ್ಥಾನದಲ್ಲಿ ಸದ್ಯ ಕಾಂಗ್ರೆಸ್‌ನ 108 ಶಾಸಕರಿದ್ದಾರೆ. ಕಾಂಗ್ರೆಸ್‌ಗೆ 13 ಪಕ್ಷೇತರ ಶಾಸಕರು ಬೆಂಬಲ ಸೂಚಿಸಿದ್ದಾರೆ. ಇನ್ನು ಬಿಜೆಪಿಯು 71 ಶಾಸಕರನ್ನು ಹೊಂದಿದೆ. ಇತರೆ 8 ಶಾಸಕರು ಕೂಡ ಇದ್ದಾರೆ. ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ ಪರ 85 ಶಾಸಕರಿದ್ದರೆ, ಸಚಿನ್ ಪೈಲಟ್ ಪರ 19ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಚಿನ್ ಪೈಲಟ್ ಅವರು 30 ಶಾಸಕರು ನನ್ನ ಪರ ಇದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, 2022ರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ, ಅಶೋಕ್ ಗೆಹ್ಲೋಟ್ ಅವರು ಕೂಡ ರೇಸ್‌ನಲ್ಲಿದ್ದರು. ಆಗ, ರಾಜಸ್ಥಾನದಲ್ಲಿ 90 ಕಾಂಗ್ರೆಸ್ ಶಾಸಕರು ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಸ್ಥಾನದಿಂದ ಇಳಿಸಬಾರದು ಎಂದು ರಾಜೀನಾಮೆ ನೀಡಿದ್ದರು. ಇದು ಗೆಹ್ಲೋಟ್ ಮುನ್ನಡೆಗೆ ಕಾರಣವಾಗಿತ್ತು. ಕೊನೆಗೆ ಎಐಸಿಸಿ ಚುನಾವಣೆಗೇ ಗೆಹ್ಲೋಟ್ ಸ್ಪರ್ಧಿಸಲಿಲ್ಲ.
50:50 ಅಧಿಕಾರ ಹಂಚಿಕೆಗೆ ಒಪ್ಪಿದ್ದರೇ ಪೈಲಟ್?
ಕರ್ನಾಟಕದಲ್ಲಿ ಎರಡೂವರೆ ವರ್ಷ ಸಿದ್ದರಾಮಯ್ಯ, ಉಳಿದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಧಿಕಾರ ಹಂಚಿಕೆಗೆ ಒಪ್ಪಿದ್ದೇನೆ ಎಂದು ಈಗಾಗಲೇ ಡಿಕೆಶಿ ಕೂಡ ಹೇಳಿದ್ದಾರೆ. ಆದರೆ, ರಾಜಸ್ಥಾನದಲ್ಲಿ 2018ರಲ್ಲಿ ಗೆಹ್ಲೋಟ್ ಹಾಗೂ ಪೈಲಟ್ ಮಧ್ಯೆ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿತ್ತು ಎಂಬುದು ದೃಢಪಟ್ಟಿಲ್ಲ. ಮೂಲಗಳ ಪ್ರಕಾರ, ಇಬ್ಬರ ಮಧ್ಯೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿತ್ತು. ಆದರೆ, ಗೆಹ್ಲೋಟ್ ಪರ ಹೆಚ್ಚು ಶಾಸಕರು ಇರುವುದರಿಂದ ಪೈಲಟ್ ಅವರನ್ನು ಸಿಎಂ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಕುರಿತು ಪೈಲಟ್ ಎಲ್ಲೂ ಮಾಹಿತಿ ನೀಡಿಲ್ಲ.
ಕರ್ನಾಟಕದಲ್ಲೂ ಹೀಗೆಯೇ ಆಗುವುದೇ?
ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರು ಸಿಎಂ ರೇಸ್‌ನಲ್ಲಿ ಸ್ಪರ್ಧೆಯೊಡ್ಡಿ, ಕೊನೆಗೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅಧಿಕಾರ ಹಂಚಿಕೆ ಆಗಿದೆ ಎಂದು ಹೇಳುತ್ತಿದ್ದರೂ, ಯಾರೂ ಇದನ್ನು ಸ್ಪಷ್ಟಪಡಿಸಿಲ್ಲ. ಹಾಗೆಯೇ, ರಾಜಸ್ಥಾನದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಪರ ಹೆಚ್ಚು ಶಾಸಕರಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆದರೆ, ಡಿಕೆಶಿ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪೈಲಟ್ ಈಗ ಬಂಡಾಯದ ಬಾವುಟ ಬೀಸಿದ್ದೇಕೆ?
ಅಶೋಕ್ ಗೆಹ್ಲೋಟ್ ಅವರಿಗೆ ಈಗ 72 ವರ್ಷ. ಸಚಿನ್ ಪೈಲಟ್ ಅವರಿಗೆ 45 ವರ್ಷ ವಯಸ್ಸು. ಮುಂದಿನ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಗೆಹ್ಲೋಟ್ ಅವರೇ ಸಿಎಂ ಆಗುವ ಸಾಧ್ಯತೆ ಇದೆ. ಕಳೆದ ನಾಲ್ಕೂವರೆ ವರ್ಷದಿಂದ ಬಂಡಾಯದಲ್ಲೇ ಕಾಲ ಕಳೆದಿರುವ ಪೈಲಟ್ ಈಗ ಶತಾಯಗತಾಯ ಸಿಎಂ ಆಗುವ ಉಮೇದಿಯಲ್ಲಿದ್ದಾರೆ. ಹಾಗಾಗಿಯೇ, ಅವರು ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಜನರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ಹೈಕಮಾಂಡ್ ಮೇಲೆ ಒತ್ತಡ ಹೇರುವ ಹಾಗೂ ಗೆಹ್ಲೋಟ್ ವಿರುದ್ಧ ಅಲೆ ಸೃಷ್ಟಿಸುವ ಯತ್ನದಲ್ಲಿದ್ದಾರೆ.
ಇದನ್ನೂ ಓದಿ: Gehlot VS Pilot: ಕರ್ನಾಟಕ ಚುನಾವಣೆ ಫಲಿತಾಂಶ ಉದಾಹರಣೆ ನೀಡಿ ಗೆಹ್ಲೋಟ್‌ಗೆ ಟಾಂಗ್ ಕೊಟ್ಟ ಪೈಲಟ್
ನಾಯಕರ ಬಿಕ್ಕಟ್ಟಿಗೆ ಬೆಲೆ ತೆತ್ತಿರುವ ಕಾಂಗ್ರೆಸ್
ಕೆಲವು ರಾಜ್ಯಗಳಲ್ಲಿ ಪಕ್ಷದ ಪ್ರಬಲ ನಾಯಕರ ಆಂತರಿಕ ಕಿತ್ತಾಟದಿಂದಾಗಿ ಕಾಂಗ್ರೆಸ್ ಭಾರಿ ಬೆಲೆ ತೆತ್ತಿದೆ. ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಕಮಲ್‌ನಾಥ್ ಹಾಗೂ ಆಗ ಬಿಜೆಪಿ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯೆ ಬಿಕ್ಕಟ್ಟು ಉಂಟಾಗಿ, ಕೊನೆಗೆ ಸಿಂಧಿಯಾ ಅವರು ಬಿಜೆಪಿ ಸೇರಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಪತನವಾಗಿ, ಬಿಜೆಪಿ ಗದ್ದುಗೆಗೇರಿತು. ಇನ್ನು, ಪಂಜಾಬ್‌ನಲ್ಲೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವಿನ ಜಗಳವು ರಾಜ್ಯದಲ್ಲಿ ಕಾಂಗ್ರೆಸ್ ಅಧಃಪತನಕ್ಕೆ ಕಾರಣವಾಗಿದೆ. ಹಾಗಾಗಿ, ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ಸಂಘರ್ಷವು ಎಲ್ಲಿಗೆ ತಲುಪಲಿದೆ ಎಂಬ ಭೀತಿ ಹೈಕಮಾಂಡ್‌ಗಂತೂ ಇದ್ದೇ ಇದೆ.
EXPLAINER
ವಿಸ್ತಾರ Explainer: ಬ್ಯಾಂಕ್ ಪಾಲಾದ 2,000 ರೂ. ನೋಟುಗಳೆಷ್ಟು, ಡೆಪಾಸಿಟ್ ಬಡ್ಡಿ ದರ ಇಳಿಕೆ?
ವಿಸ್ತಾರ Explainer: ಬ್ಯಾಂಕ್‌ಗಳಲ್ಲಿ ಮೇ 23ರ ಬಳಿಕ 2,000 ರೂ. ವಿನಿಮಯ ಆಗುತ್ತಿದೆ. ಜಮೆಯಾದ ನೋಟುಗಳ ವಿವರ, ಪರಿಣಾಮದ ಬಗ್ಗೆ ಇಲ್ಲಿದೆ ವಿವರ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve bank of India) 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ, 2023ರ ಮೇ 23ರಿಂದ 80,000 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ 2,00 ರೂ. ನೋಟುಗಳು ಬ್ಯಾಂಕ್‌ಗಳಲ್ಲಿ ವಿನಿಮಯವಾಗಿದೆ. (Rs 2,000 notes withdrawal) ಮುಂದಿನ ನಾಲ್ಕು ತಿಂಗಳಿನಲ್ಲಿ ಎಲ್ಲ 3.6 ಕೋಟಿ ರೂ. ಮೌಲ್ಯದ 2,000 ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಂತಾಗುವ ನಿರೀಕ್ಷೆ ಇದೆ. 2016ರಲ್ಲೂ ಬ್ಯಾಂಕ್‌ಗಳಲ್ಲಿ ನಗದು ಹೆಚ್ಚಳವಾದಾಗ ಡೆಪಾಸಿಟ್ ಬಡ್ಡಿ ದರಗಳು ಇಳಿಕೆಯಾಗಿತ್ತು.
ಆರ್‌ಬಿಐ ಪ್ರಕಾರ ಚಲಾವಣೆಯಲ್ಲಿರುವ ಕರೆನ್ಸಿಗಳ ಮೌಲ್ಯದಲ್ಲಿ (currency in circulation) ಮೇ 26ರ ವೇಳೆಗೆ 36,492 ಕೋಟಿ ರೂ. ಇಳಿಕೆಯಾಗಿದ್ದು, 34.41 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ತಗ್ಗಲಿದೆ. ಚಲಾವಣೆಯಲ್ಲಿರುವ ನೋಟುಗಳೆಂದರೆ ಸಾರ್ವಜನಿಕರ ಕೈಯಲ್ಲಿ ಬಳಕೆಯಲ್ಲಿರುವ ನೋಟುಗಳು.
ಬ್ಯಾಂಕ್‌ಗಳಲ್ಲಿ ಸ್ಥಿತಿಗತಿ ಏನು? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೇರ್ಮನ್ ದಿನೇಶ್ ಖರ ಪ್ರಕಾರ, ಬ್ಯಾಂಕ್ ಖಾತೆಗಳಿಗೆ 2,000 ರೂ.ಗಳ 14,000 ಕೋಟಿ ರೂ. ಮೌಲ್ಯದ ಕರೆನ್ಸಿಗಳು ಜಮೆಯಾಗಿದೆ. 3,000 ಕೋಟಿ ರೂ. ವಿನಿಮಯವಾಗಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ 3,100 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಬಂದಿವೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ಒಟ್ಟು 80,000 ಕೋಟಿ ರೂ. ಮೌಲ್ಯದ 2,000 ರೂ. ಕರೆನ್ಸಿ ನೋಟುಗಳು ಜಮೆಯಾಗಿವೆ. ನೋಟುಗಳ ವಿನಿಮಯಕ್ಕು ಇನ್ನೂ 2023 ಸೆಪ್ಟೆಂಬರ್ 30 ತನಕ ಅವಕಾಶ ಇದೆ. ಹೀಗಾಗಿ ಅಷ್ಟರೊಳಗೆ ಇಡೀ 3.6 ಲಕ್ಷ ಕೋಟಿ ರೂ. ಮೌಲ್ಯದ 2000 ರೂ. ನೋಟುಗಳು ಬ್ಯಾಂಕಿಂಗ್‌ಗೆ ಮರಳುವ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರೂಪ್ ಚೀಫ್ ಎಕನಾಮಿಕ್ ಅಡ್ವೈಸರ್ ಸೌಮ್ಯ ಕಾಂತಿ ಘೋಷ್.
2000 ರೂ. ನೋಟು ವಿತ್ ಡ್ರಾವಲ್ಸ್ ಪರಿಣಾಮ ಬ್ಯಾಂಕಿಂಗ್ ವ್ಯವಸ್ಥೆಗೆ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ 1.8 ಲಕ್ಷ ಕೋಟಿ ರೂ. ನಗದು ಲಭ್ಯತೆ ನಿರೀಕ್ಷಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಲಿಕ್ವಿಡಿಟಿಗೆ ಪೂರಕವಾದ ಸನ್ನಿವೇಶ ಸೃಷ್ಟಿಯಾದಾಗ ಅಲ್ಪಾವಧಿಗೆ ಠೇವಣಿ ಬಡ್ಡಿ ದರ ಇಳಿಯುವ ನಿರೀಕ್ಷೆ ಇದೆ ಎಂದು ಕೇರ್ ರೇಟಿಂಗ್ ವರದಿ ತಿಳಿಸಿದೆ. (care ratings report)
ಬಾಂಡ್‌ಗಳ ಉತ್ಪತ್ತಿ ಮೇಲೆ ಪರಿಣಾಮ ಏನು? ಹಣದುಬ್ಬರ ಕೂಡ ಮಂದಗತಿಯಲ್ಲಿದ್ದರೆ ಈ ವರ್ಷ ಬಾಂಡ್‌ಗಳ ಉತ್ತತ್ತಿ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಣ್ಣ ಉಳಿತಾಯಗಾರರು, ಪಿಂಚಣಿದಾರರು ಠೇವಣಿ ದರ ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳದಿದ್ದರೆ ಒಳಿತು ಎನ್ನುತ್ತಾರೆ ಹಣಕಾಸು ತಜ್ಞರು.
ಸರ್ಕಾರ 2016ರ ನವೆಂಬರ್ 8ರಂದು 500 ರೂ. ಮತ್ತು 1000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಇಲ್ಲಿಯವರೆಗಿನ ಅವಧಿಯಲ್ಲಿ ಸಾರ್ವಜನಿಕರಲ್ಲಿ ನಗದು ಲಭ್ಯತೆ ಹೊಸ ಎತ್ತರಕ್ಕೇರಿದೆ. ಈಗಲೂ ನಗದು ಬಳಕೆ ಪ್ರಾಬಲ್ಯದಲ್ಲಿದೆ. ಕಳೆದ 2016 ರಿಂದ ಇಲ್ಲಿಯವರೆಗಿನ 7 ವರ್ಷಗಲ್ಲಿ ನಗದು ಚಲಾವಣೆ ಹೇಗೆ ಏರಿತ್ತು ಎಂಬುದನ್ನು ಕೆಳಗಿನ ಟೇಬಲ್‌ನಲ್ಲಿ ನೋಡಿ.
ಚಲಾವಣೆಯಲ್ಲಿರುವ ನೋಟುಗಳು 2016-2023
2016 ನವೆಂಬರ್ 25ರಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ | 2023ರ ಮೇ 19ಕ್ಕೆ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ |
9.11 ಲಕ್ಷ ಕೋಟಿ ರೂ. | 33.71 ಲಕ್ಷ ಕೋಟಿ ರೂ. |
ಹೀಗೆ ಆರ್‌ಬಿಐ ಅಂಕಿ ಅಂಶಗಳ ಪ್ರಕಾರ 2016-2023ರಲ್ಲಿ ಚಲಾವಣೆಯಲ್ಲಿ ನಗದು 87.6% ಹೆಚ್ಚಳವಾಗಿದೆ. ಸಾಲಗಳಿಗೆ ಬೇಡಿಕೆ ಸೃಷ್ಟಿಯಾದಾಗ ಅದನ್ನು ವಿತರಿಸಲು ಬೇಕಾದ ಫಂಡ್ ಅಥವಾ ನಿಧಿಯನ್ನು ಸಂಗ್ರಹಿಸುವ ಸವಾಲು ಬ್ಯಾಂಕ್‌ಗಳಿಗೆ ಸಹಜವಾಗಿಯೇ ಎದುರಾಗುತ್ತದೆ. ಹೀಗಾಗಿ ಎಫ್‌ಡಿ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಏರಿಸುತ್ತವೆ. ಅಧಿಕ ಬಡ್ಡಿ ದರದ ಆಸೆಯಿಂದ ಜನತೆ ಬ್ಯಾಂಕ್ ಗಳಲ್ಲಿ ದುಡ್ಡನ್ನು ಠೇವಣಿ ಇಡುತ್ತಾರೆ. ಆದರೆ ಆರ್‌ಬಿಐ 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಜನರು ಆ ನೋಟನ್ನು ಬ್ಯಾಂಕ್‌ಗಳಿಗೆ ಜಮೆ ಮಾಡುತ್ತಿದ್ದಾರೆ. ಇದರ ಪರಿಣಾಮ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹವೂ ಏರಿಕೆಯಾಗುತ್ತದೆ. ಬ್ಯಾಂಕ್‌ಗಳಲ್ಲಿ ತಾತ್ಕಾಲಿಕವಾಗಿ ನಗದು ಲಭ್ಯತೆ ಹೆಚ್ಚುತ್ತದೆ. ಆಗ ಎಫ್‌ಡಿ ಬಡ್ಡಿ ದರ ಏರಿಸುವ ಅಗತ್ಯ ಬರುವುದಿಲ್ಲ. ಹೀಗಾಗಿ ಎಫ್‌ಡಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.
2000 rupees notes will be out of circulation after September 23. There are millions of NRIs who keep their Jwellary and some amount in cash in lockers. Mostly in 2000 rupees notes. When they come to india for some wedding or other occasion then they use it. Now they will have to…
— Pravesh Jain (@PRAVESHPARAS) May 20, 2023
ಎರಡನೆಯದಾಗಿ ರಿಟೇಲ್ ಹಣದುಬ್ಬರ ಕಳೆದ ಎರಡು ತಿಂಗಳಿನಿಂದ 6%ಕ್ಕಿಂತ ಕೆಳಮಟ್ಟದಲ್ಲಿದೆ. ಇದು ಮಾರ್ಚ್‌ನಲ್ಲಿ 5.66% ಹಾಗೂ ಏಪ್ರಿಲ್‌ನಲ್ಲಿ 6% ಇತ್ತು. ಹೀಗಾಗಿ ಇದು ಕೂಡ ಎಫ್‌ಡಿ ದರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಫ್‌ಡಿ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಯದ್ದಕ್ಕೆ 0.20-0.30% ಇಳಿಕೆ ನಿರೀಕ್ಷಿಸಲಾಗಿದೆ. ಭಾರತದಲ್ಲಿ ಮಧ್ಯಮ ವರ್ಗದ ಜನತೆ ಸಾಮಾನ್ಯವಾಗಿ ಉಳಿತಾಯ ಪ್ರವೃತ್ತಿ ಹೊಂದಿದವರು. ಅದರಲ್ಲೂ ಇಳಿಗಾಲದ ಹಣಕಾಸು ಭದ್ರತೆಗೆ ಬ್ಯಾಂಕ್ ಎಫ್‌ಡಿ ಬಡ್ಡಿ ದರವನ್ನು ಅನೇಕ ಮಂದಿ ಅವಲಂಬಿಸುತ್ತಾರೆ. ಹೀಗಾಗಿ ಈ ಸಂದರ್ಭ ಅಂದರೆ ಬಡ್ಡಿ ದರ ಉನ್ನತ ಮಟ್ಟದಲ್ಲಿ ಇದ್ದಾಗ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: 2000 Notes Withdrawan : 2,000 ರೂ. ನೋಟು ಚಲಾವಣೆಯಿಂದ ಹಿಂತೆಗೆತ: ಆರ್‌ಬಿಐ ಘೋಷಣೆ
EXPLAINER
US Debt Ceiling Crisis : ಸಾಲದ ಸುಳಿಯಲ್ಲಿ ಅಮೆರಿಕ, ಡಿಫಾಲ್ಟ್ ತಪ್ಪಿಸಲು ಬೈಡೆನ್ ಶತಪ್ರಯತ್ನ
US Debt Ceiling Crisis ಅಮೆರಿಕ ಸಾಲದ ಸುಳಿಗೆ ಸಿಲುಕಿದ್ದು ಡಿಫಾಲ್ಟ್ ಆಗುವುದನ್ನು ತಪ್ಪಿಸಲು ಸರ್ಕಾರದ ಸಾಲದ ಮಿತಿಯನ್ನು ಏರಿಸಲು ಅಧ್ಯಕ್ಷ ಬೈಡೆನ್ ಕಸರತ್ತು ನಡೆಸಿದ್ದಾರೆ. ವಿವರ ಇಲ್ಲಿದೆ.
ವಾಷಿಂಗ್ಟನ್: ಅಮೆರಿಕದ ಸಾಲದ ಬಿಕ್ಕಟ್ಟು ಅಕ್ಷರಶಃ ಅದರ ನಿಯಂತ್ರಣ ತಪ್ಪಿದೆ. ಜಗತ್ತಿನ ದೊಡ್ಡಣ್ಣನಂತಿದ್ದ ಅಮೆರಿಕ 31 ಟ್ರಿಲಿಯನ್ ಡಾಲರ್ (ಅಂದಾಜು 2,542 ಲಕ್ಷ ಕೋಟಿ ರೂ.) ರಾಕೆಟ್‌ನಂತೆ ಸಾಲದ ಹೊರೆ ಏರುತ್ತಿದ್ದು, ಬೈಡೆನ್ ಸರ್ಕಾರಕ್ಕೆ ಭಾರಿ ತಲೆನೋವಾಗಿದೆ. 1990ಕ್ಕೆ ಹೋಲಿಸಿದರೆ ಅಮೆರಿಕದ ಸಾಲದ ಪ್ರಮಾಣ ಹತ್ತು ಪಟ್ಟು ಏರಿದೆ. 2000ಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 600 ಶತಕೋಟಿ ಡಾಲರ್ ಕೇವಲ ಬಡ್ಡಿಯಾಗಿ ಕಟ್ಟಬೇಕಾಗುತ್ತದೆ. ಸದ್ಯಕ್ಕೆ ಡಿಫಾಲ್ಟ್ ಹಾಗೂ ಭವಿಷ್ಯದಲ್ಲಿ ದಿವಾಳಿ ಆಗುವುದನ್ನು ತಪ್ಪಿಸಲು ಅಧ್ಯಕ್ಷ ಜೋ ಬೈಡೆನ್ ಶತಪ್ರಯತ್ನ ನಡೆಸುತ್ತಿದ್ದಾರೆ.
ಅಮೆರಿಕದಲ್ಲಿ ಆಗಿದ್ದೇನು?
ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಸಿತ್ತು. ಇದರ ಪರಿಣಾಮ ಸಾಲದ ಬೆಟ್ಟವೂ ಬೆಳೆದಿದೆ. ಹೊಸ ಸಾಲ ತೆಗೆಯಲು ಕಾನೂನಿನ ಅಡಚಣೆಗಳನ್ನು ನಿವಾರಿಸಬೇಕಾಗಿದೆ. ಈ ಕಸರತ್ತನ್ನು ಬೈಡೆನ್ ಸರ್ಕಾರ ನಡೆಸುತ್ತಿದೆ. ಆದರೆ ಇದರ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಅಮೆರಿಕದ ಡಾಲರ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರಿಸರ್ವ್ ಕರೆನ್ಸಿಯಾಗಿ ಪ್ರಾಬಲ್ಯ ಮೆರೆಯುತ್ತಿದೆ. ಆದರೆ ಈ ಪಟ್ಟವನ್ನು ಸಾಲದ ಬಿಕ್ಕಟ್ಟಿನ ಪರಿಣಾಮ ಬಿಟ್ಟುಕೊಡಲಿದೆಯೇ ಎಂಬ ಪ್ರಶ್ನೆ ಉಂಟಾಗಿದೆ. ಮುಖ್ಯವಾಗಿ ಅಮೆರಿಕದ ಆರ್ಥಿಕ ಬಿಕ್ಕಟ್ಟು ಭಾರತದ ಷೇರು ಮಾರುಕಟ್ಟೆ, ಹಣಕಾಸು ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕಲಿದೆಯೇ ಎಂಬ ಆತಂಕವೂ ಸೃಷ್ಟಿಯಾಗಿದೆ.
ಸಾಲದ ಮಿತಿ ಹೆಚ್ಚಿಸಲು ಅಮೆರಿಕ ನಿರ್ಧಾರ:
ಅಮೆರಿಕ ಸರ್ಕಾರ ತೆಗೆದುಕೊಳ್ಳಬಹುದಾದ ಗರಿಷ್ಠ ಸಾಲದ ಮಿತಿಯನ್ನು ಡೆಟ್ ಸೈಲಿಂಗ್ ಲಿಮಿಟ್ (Debt ceiling limit) ಎನ್ನುತ್ತಾರೆ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಸಾಲ ಪಡೆಯಲು ಒಂದು ಮಿತಿ ಇರುತ್ತದೆಯಲ್ಲವೇ? ಅದೇ ರೀತಿ ಅಮೆರಿಕ ಸರ್ಕಾರಕ್ಕೂ ಇದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚಿನ ಸಾಲ ಪಡೆಯಲು ಏನು ಮಾಡಬಹುದು? ಕ್ರೆಡಿಟ್ ಲಿಮಿಟ್ ಅನ್ನು ಹೆಚ್ಚಿಸುವಂತೆ ಬ್ಯಾಂಕಿಗೆ ಮನವಿ ಮಾಡಬಹುದು, ಅಲ್ಲವೇ ಅದೇ ರೀತಿ ಅಮೆರಿಕ ಸರ್ಕಾರ ಇದೀಗ ತನ್ನ ಸಾಲದ ಮಿತಿಯನ್ನು ಹೆಚ್ಚಿಸಿ ಡಿಫಾಲ್ಟ್ ಅಥವಾ ಭವಿಷ್ಯದಲ್ಲಿ ದಿವಾಳಿಯಾಗುವುದನ್ನು ತಪ್ಪಿಸಲು ಉದ್ದೇಶಿಸಿದೆ. ಈಗ 31.40 ಟ್ರಿಲಿಯನ್ ಡಾಲರ್‌ನ ಮಿತಿ ಇದೆ. ಈಗಾಗಲೇ ಅಮೆರಿಕ 31.48 ಟ್ರಿಲಿಯನ್ ಡಾಲರ್ ಸಾಲವನ್ನು ಅಮೆರಿಕ ಹೊಂದಿದೆ. 2023ರ ಜನವರಿ 19ರಂದು ಅಮೆರಿಕ ಸರ್ಕಾರ ಸಾಲದ ಗರಿಷ್ಠ ಮಿತಿಯನ್ನು ಮುಟ್ಟಿತ್ತು. ಹೀಗಾಗಿ ಹೊಸ ಸಾಲ ಹುಟ್ಟುತ್ತಿಲ್ಲ. ಹೊಸ ಸಾಲ ಬೇಕಿದ್ದರೆ ಕ್ರೆಡಿಟ್ ಲಿಮಿಟ್ ಅನ್ನು 2023ರ ಜೂನ್ 5ರೊಳಗೆ ವಿಸ್ತರಿಸಲೇಬೇಕು.
ಅಮೆರಿಕಕ್ಕೆ ಹೊಸ ಸಾಲ ಏಕೆ ಬೇಕು?
ಅಮೆರಿಕ ಮತ್ತಷ್ಟು ಸಾಲವನ್ನು ಪಡೆಯದಿದ್ದರೆ ಜೂನ್ 1ಕ್ಕೆ ಭಾರಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ಜೂನ್ 5ರ ಬಳಿಕ ಸಾಲ ತೀರಿಸಲು ಆಗದೆ ಡಿಫಾಲ್ಟ್ ಆಗಬಹುದು. (ಸುಸ್ತಿ ಸಾಲಗಾರ) ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಕೊಡಲು, ಮಿಲಿಟರಿ ವೆಚ್ಚ ಭರಿಸಲು, ಸಬ್ಸಿಡಿ ವೆಚ್ಚ ನೀಡಲು, ಈಗಾಗಲೇ ಪಡೆದಿರುವ ಸಾಲದ ಬಡ್ಡಿ ದರ ಪಾವತಿಸಲು ಸಾಧ್ಯವಾಗದು. ಆಗ ಅಮೆರಿಕದ ಕ್ರೆಡಿಟ್ ರೇಟಿಂಗ್ ಇಳಿಯಲಿದೆ. ಇದರ ಪರಿಣಾ ವಿಶ್ವವ್ಯಾಪಿಯಾಗುವ ಆತಂಕ ಇದೆ. ಈ ಹಿಂದೆಯೂ ಅಮೆರಿಕ ಇಂಥ ಬಿಕ್ಕಟ್ಟಿಗೆ ಸಿಲುಕಿತ್ತು. ಆಗ ಸಾಲದ ಮಿತಿಯನ್ನು ವಿಸ್ತರಿಸಲಾಗಿತ್ತು. ಈಗ ಮತ್ತೆ ಅಂಥದ್ದೇ ಸ್ಥಿತಿ ಎದುರಾಗಿದೆ.
ಸಾಲದ ಬೆಟ್ಟ ಏರುತ್ತಲೇ ಇದ್ದರೆ ಅದೂ ಸಮಸ್ಯೆಯೇ. ಹೆಚ್ಚು ಹಣದುಬ್ಬರ, ಹೆಚ್ಚು ತೆರಿಗೆಗೆ ಅಮೆರಿಕ ಸಾಕ್ಷಿಯಾಗಬಹುದು. ಇದರ ಪರಿಣಾಮ ಜಿಡಿಪಿ ಕುಸಿದು ಆರ್ಥಿಕ ಹಿಂಜರಿತ ಸಂಭವಿಸಿದರೆ ಲಕ್ಷಾಂತರ ಉದ್ಯೋಗಗಳು ನಷ್ಟವಾಗಲಿದೆ. ಅಮೆರಿಕದ ಆದಾಯದ 7%ನಷ್ಟು ಈಗಾಗಲೇ ಸಾಲದ ಬಡ್ಡಿ ತೀರಿಸಲು ಬಳಕೆಯಾಗುತ್ತದೆ. ಅಂದರೆ ಅಮೆರಿಕದ ರಕ್ಷಣಾ ಬಜೆಟ್‌ಗೆ ಸಮವಾಗುವಷ್ಟು ಮೊತ್ತ. ಹೀಗಾಗಿ ಪ್ರತಿಪಕ್ಷಗಳ ಬೆಂಬಲ ಪಡೆದು ಸರ್ಕಾರದ ಸಾಲದ ಲಿಮಿಟ್ ಅನ್ನು ಹೆಚ್ಚಿಸಲು ಅಧ್ಯಕ್ಷ ಜೋ ಬೈಡೆನ್ ಕಸರತ್ತು ನಡೆಸಿದ್ದಾರೆ. ಆದರೆ ಪ್ರತಿಪಕ್ಷಗಳು ವೆಚ್ಚ ನಿಯಂತ್ರಣಕ್ಕೆ ಒತ್ತಾಯಿಸುತ್ತಿವೆ. ಆದರೆ ಯಾವುದೇ ಷರತ್ತಿಲ್ಲದೆ ಸಾಲದ ಮಿತಿ ಹೆಚ್ಚಿಸಲು ಬೈಡೆನ್ ಯತ್ನಿಸುತ್ತಿದ್ದಾರೆ.
ಅಮೆರಿಕದ ಸಾಲದ ಹೊರೆ
1930 : 16 ಶತಕೋಟಿ ಡಾಲರ್
1990: 3.2 ಟ್ರಿಲಿಯನ್ ಡಾಲರ್
2010: 5.6 ಟ್ರಿಲಿಯನ್ ಡಾಲರ್
2020 : 27.7 ಟ್ರಿಲೊಯನ್ ಡಾಲರ್
2023: 31.8 ಟ್ರಿಲಿಯನ್ ಡಾಲರ್
ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ?
ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಬಗೆಹರಿಯದಿದ್ದರೆ ಭಾರತದ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಅಮೆರಿಕದಲ್ಲಿ ಬಾಂಡ್‌ಗಳ ಬಡ್ಡಿ ದರ ಹೆಚ್ಚಿದರೆ ಹೂಡಿಕೆದಾರರು ಡಾಲರ್‌ನಲ್ಲಿ ಹೂಡಿಕೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಆಗ ಷೇರು ಮಾರುಕಟ್ಟೆಯಿಂದ ಹೂಡಿಕೆಯ ಹೊರ ಹರಿವು ಹೆಚ್ಚಬಹುದು.
ಸಾಲದ ಮಿತಿ ಹೆಚ್ಚಿಸಲು ಕೊನೆಗೂ ಒಪ್ಪಂದ:
ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡೆನ್ ಹಾಗೂ ರಿಪಬ್ಲಿಕನ್ ನಾಯಕ ಕೆವಿನ್ ಮೆಕಾರ್ತಿ ಕಳೆದ ಶನಿವಾರ ಸರ್ಕಾರದ ಸಾಲದ ಮಿತಿ ಹೆಚ್ಚಿಸಲು ಒಪ್ಪಂದ ಅಂತಿಮವಾಗಿದೆ ಎಂದು ಘೋಷಿಸಿದ್ದಾರೆ. ಮುಂದಿನ 2 ವರ್ಷಗಳಿಗೆ ಇದು ಅನ್ವಯವಾಗಲಿದೆ. ಮೇ 31ಕ್ಕೆ ಈ ಬಗ್ಗೆ ಅಮೆರಿಕದ ಸಂಸತ್ತಿನಲ್ಲಿ ಮತದಾನ ನಡೆಯಲಿದೆ. ಅಂದಹಾಗೆ ಅಮೆರಿಕ ಈ ರೀತಿ ಸಾಲದ ಮಿತಿಯನ್ನು ಹೆಚ್ಚಿಸುತ್ತಾ ಹೋಗುವುದು ಇದು ಹೊಸತಲ್ಲ. ಈ ಹಿಂದೆ 2013ರಲ್ಲಿಯೂ ವಿಸ್ತರಿಸಿತ್ತು. ಇತ್ತೀಚೆಗೆ ಅಂದರೆ 2021ರ ಡಿಸೆಂಬರ್‌ನಲ್ಲೂ ವಿಸ್ತರಿಸಲಾಗಿತ್ತು.
ಇದನ್ನೂ ಓದಿ :Good News | ಇಳಿಯಲಿದೆ ಚಿನ್ನದ ದರ! ಡಾಲರ್, ಅಮೆರಿಕದ ಎಕಾನಮಿ, ತೈಲ ದರ ನಿರ್ಣಾಯಕ
EXPLAINER
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?
ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಇಂದು ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ಮೋದಿ (PM Modi)ಯವರು ಉದ್ಘಾಟನೆ ಮಾಡಿದ್ದಾರೆ. ಹಾಗೇ, ಹೊಸದಾಗಿ ನಿರ್ಮಾಣವಾದ ಸಂಸತ್ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್)ವನ್ನು ಪ್ರತಿಷ್ಠಾಪಿಸಿದ್ದಾರೆ. ಸ್ಪೀಕರ್ ಕುರ್ಚಿಯ ಪಕ್ಕವೇ ರಾಜದಂಡವೂ ನಿಂತಿದೆ.
ʼ‘ಸೆಂಗೋಲ್ ಅಂದರೆ ರಾಜದಂಡ ಎಂಬುದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಇದು ಎಲ್ಲಿತ್ತು?
ʼ‘ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗುತ್ತಿದ್ದಂತೆ, ಅದನ್ನು ಹೊಸ ಸಂಸತ್ ಭವನದಲ್ಲಿ ಇಡಲು ತೀರ್ಮಾನಿಸಿದ್ದಾರೆ. ಸೆಂಗೋಲ್ ಎಂದರೆ ತಮಿಳಿನ ಭಾಷೆಯಲ್ಲಿ ಸಮೃದ್ಧ ಸಂಪತ್ತು ಎಂದರ್ಥ’ʼ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಇದನ್ನೂ ಓದಿ: Photo Gallery | ಆಕರ್ಷಕ ಹೊಸ ಸಂಸತ್ ಭವನ! ಗಮನ ಸೆಳೆಯುತ್ತಿವೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಚಿತ್ರಗಳು
ಏನೀ ಸೆಂಗೋಲ್‌ನ ಇತಿಹಾಸ?
ತಮಿಳುನಾಡು ಮೂಲದ ಚೋಳ ರಾಜವಂಶ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಸಾಧಾರಣ ಕೊಡುಗೆ ನೀಡಿತ್ತು. ಚೋಳರ ಕಾಲದಲ್ಲಿ ಸೆಂಗೋಲ್ ಎಂಬುದು ರಾಜರ ಪಟ್ಟಾಭಿಷೇಕದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿತ್ತು. ಇದೊಂದು ಧಾರ್ಮಿಕ ಮಹತ್ವ ಹೊಂದಿರುವ ರಾಜದಂಡ. ಚಂದದ ಕೆತ್ತನೆಗಳು, ಸಂಕೀರ್ಣವಾದ ಅಲಂಕಾರಿಕ ಅಂಶಗಳು ಇದರ ವೈಶಿಷ್ಟ್ಯ. ರಾಜಪರಂಪರೆಯ ಪಾಲಿಗೆ ಇದು ಪವಿತ್ರ ಲಾಂಛನ. ಒಬ್ಬ ಆಡಳಿತಗಾರನಿಂದ ಮುಂದಿನವರಿಗೆ ಅಧಿಕಾರದ ವರ್ಗಾವಣೆಯನ್ನು ಇದು ಪ್ರತಿನಿಧಿಸುತ್ತಿತ್ತು.
ಬ್ರಿಟಿಷರು ಭಾರತೀಯರ ಕೈಗೆ ಅಧಿಕಾರ ಹಸ್ತಾಂತರಿಸಲಿದ್ದ ಸಂದರ್ಭದಲ್ಲಿ, ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಪಂಡಿತ್ ಜವಾಹರಲಾಲ್ ಮುಂದೆ ಒಂದು ಪ್ರಶ್ನೆಯನ್ನು ಇಟ್ಟರು. ಈ ಮಹತ್ವದ ಘಟನೆಯನ್ನು ಸೂಚಿಸಲು ಸೂಕ್ತವಾದ ಸಮಾರಂಭ ಹೇಗೆ ಮಾಡಬಹುದು ಎಂದು ವಿಚಾರಿಸಿದರು. ನೆಹರೂ ಅವರು ಈ ಪ್ರಶ್ನೆಯನ್ನು ಆ ಕಾಲದ ದೊಡ್ಡ ಮುತ್ಸದ್ಧಿ ಸಿ.ರಾಜಗೋಪಾಲಾಚಾರಿ (ರಾಜಾಜಿ) ಯವರ ಮುಂದಿಟ್ಟರು.
ರಾಜಾಜಿಯವರು ಚೋಳ ರಾಜವಂಶದ ʼರಾಜದಂಡʼದ ಕ್ರಮದಿಂದ ಸ್ಫೂರ್ತಿ ಪಡೆಯುವಂತೆ ನೆಹರೂಗೆ ಸಲಹೆ ನೀಡಿದರು. ರಾಜಾಜಿಯವರ ಪ್ರಕಾರ ಚೋಳ ಮಾದರಿಯ ಅಧಿಕಾರ ಹಸ್ತಾಂತರ ʼಸೆಂಗೋಲ್ʼನ ಸಾಂಕೇತಿಕ ಹಸ್ತಾಂತರವನ್ನು ಒಳಗೊಂಡಿತ್ತು. ಒಬ್ಬ ರಾಜ ತನ್ನ ಉತ್ತರಾಧಿಕಾರಿಗೆ ಅಧಿಕಾರ ಮತ್ತು ಶಕ್ತಿಯ ಸಂಕೇತವಾದ ಸೆಂಗೋಲ್ ಹಸ್ತಾಂತರಿಸುತ್ತಿದ್ದ. ಇದು ʼಧರ್ಮʼವನ್ನು ಪ್ರತಿನಿಧಿಸುತ್ತಿತ್ತು. ಧರ್ಮ ಹಾಗೂ ನ್ಯಾಯಯುತವಾಗಿ ಅಧಿಕಾರವನ್ನು ನಡೆಸುವ ವಚನವನ್ನು ಈ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು.
ಸೆಂಗೋಲ್ ಅನ್ನು ಪಡೆಯಲು ರಾಜಾಜಿಯವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ʼತಿರುವವಾಡುತುರೈ ಅಧೀನಂʼ ಎಂಬ ಧಾರ್ವಿುಕ ಮಠವನ್ನು ಸಂಪರ್ಕಿಸಿದರು. ಇದು ಶಿವನ ಬೋಧನೆ ಮತ್ತು ಸಂಪ್ರದಾಯ ಅನುಸರಿಸುವ ಬ್ರಾಹ್ಮಣೇತರ ಸನ್ಯಾಸಿಗಳ ಸಂಸ್ಥೆ. 500ಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸೆಂಗೋಲ್ ತಯಾರಿಕೆಯಲ್ಲಿ ಇವರ ನೆರವನ್ನು ರಾಜಾಜಿ ಬಯಸಿದರು.
ತಿರುವವಾಡುತುರೈ ಅಧೀನಂ ಮುಖ್ಯಸ್ಥರು ಸೆಂಗೋಲ್ ಅನ್ನು ರಚಿಸುವ ಹೊಣೆ ಹೊತ್ತರು. ಆಗಿನ ಕಾಲದ ಹೆಸರಾಂತ ಆಭರಣ ತಯಾರಕ ಹಾಗೂ ವ್ಯಾಪಾರಿಗಳಾದ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಎಂಬವರಿಗೆ ಇದನ್ನು ತಯಾರಿಸುವ ಕೆಲಸವನ್ನು ವಹಿಸಲಾಯಿತು. ವುಮ್ಮಿಡಿ ಕುಟುಂಬವು ಸೆಂಗೋಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಅಂದು ಸೆಂಗೋಲ್ ತಯಾರಿಯಲ್ಲಿ ಭಾಗವಹಿಸಿದ್ದ ಇಬ್ಬರು ಕುಶಲಕರ್ಮಿಗಳು ಇಂದಿಗೂ ಜೀವಂತವಿದ್ದಾರೆ. ಅವರೇ ವುಮ್ಮಿಡಿ ಎತ್ತಿರಾಜುಲು (96) ಮತ್ತು ವುಮ್ಮಿಡಿ ಸುಧಾಕರ್ (88).
ನೋಡಲು ಸುಂದರವಾಗಿರುವ ಈ ಸೆಂಗೋಲ್ ಸುಮಾರು ಐದು ಅಡಿ ಉದ್ದವಿದೆ. ನ್ಯಾಯ ಹಾಗೂ ಪರಿಶ್ರಮದ ಸಂಕೇತವಾದ ನಂದಿಯ ಪ್ರತಿಕೃತಿ ಸೆಂಗೋಲ್‌ನ ತುದಿಯಲ್ಲಿದೆ.
ಇದರ ತಯಾರಿಯ ಬಳಿಕ ಇದನ್ನು ತೆಗೆದುಕೊಂಡು, ಐತಿಹಾಸಿಕ ದಿನವಾದ 1947ರ ಆಗಸ್ಟ್ 14ರಂದು ಅಧಿಕಾರ ಹಸ್ತಾಂತರದಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಮೂವರು ದಿಲ್ಲಿಗೆ ತೆರಳಿದರು. ತಿರುವವಾಡುತುರೈ ಅಧೀನಂನ ಪ್ರಧಾನ ಅರ್ಚಕರು, ನಾದಸ್ವರಂ ವಾದಕ ರಾಜರತ್ನಂ ಪಿಳ್ಳೈ ಮತ್ತು ಓದುವರ್ (ಗಾಯಕ) ತಂಡದಲ್ಲಿದ್ದರು. ಪ್ರಧಾನ ಅರ್ಚಕರು ಸೆಂಗೋಲ್ ಅನ್ನು ಲಾರ್ಡ್ ಮೌಂಟ್ ಬ್ಯಾಟನ್‌ಗೆ ಅರ್ಪಿಸಿದರು. ನಂತರ ವೈಸರಾಯ್ ಕಡೆಯಿಂದ ಅದನ್ನು ಪಡೆದು, ಅದನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ, ಪಂಡಿತ್ ಜವಾಹರಲಾಲ್ ನೆಹರು ಅವರ ನಿವಾಸಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಅಲ್ಲಿ ಅದನ್ನು ನೆಹರೂ ಅವರಿಗೆ ಹಸ್ತಾಂತರಿಸಲಾಯಿತು.
ಹೀಗೆ ದೇಶದ ಇತಿಹಾಸದ ಮಹತ್ವದ ಮೈಲಿಗಲ್ಲೊಂದನ್ನು ಪ್ರತಿನಿಧಿಸಿದ, ಸ್ವತಂತ್ರ ರಾಷ್ಟ್ರವಾಗಿ ತನ್ನ ಪ್ರಯಾಣವನ್ನು ದೇಶ ಆರಂಭಿಸಿದ ಇತಿಹಾಸಕ್ಕ ಸಾಕ್ಷಿಯಾದ ಸೆಂಗೋಲ್ ಇನ್ನು ಮುಂದೆ ಸಂಸತ್ತಿನಲ್ಲಿಯೇ ಇರಲಿದೆ.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿದ ಟಿಎಂಸಿ, ಆಪ್; ಕೊಟ್ಟ ಕಾರಣ ಹೀಗಿದೆ
EXPLAINER
ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್ ಭವನ? ಇಲ್ಲಿದೆ ನೋಡಿ ವಿಡಿಯೊ
ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಭವ್ಯವಾದ ಹೊಸ ಸಂಸತ್ ಕಟ್ಟಡವನ್ನು (New Parliament Building) ಉದ್ಘಾಟಿಸಲಿದ್ದಾರೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ದೇಗುಲವೆನಿಸಲಿದೆ ಈ ಭವ್ಯ ಭವನ. ಈ ಮಹತ್ವದ ಭವನದ ವಿಶೇಷತೆಗಳು ಇಲ್ಲಿವೆ.
ನಮ್ಮ ದೇಶದ ವೃತ್ತಾಕಾರದ ಸಂಸತ್ ಭವನ ಸ್ವಾತಂತ್ರ್ಯೋತ್ತರ ಕಾಲದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹಲವು ಅಧಿಕಾರ ಹಸ್ತಾಂತರಗಳು, ಹಲವು ಚಾರಿತ್ರಿಕ ಕಲಾಪಗಳು, ಹಲವು ಜಾಗತಿಕ ಖ್ಯಾತಿಯ ಮುತ್ಸದ್ಧಿಗಳು ಹಾಗೂ ಚರ್ಚೆಗಳು…ಇತ್ಯಾದಿ. ಇಷ್ಟರಲ್ಲಿಯೇ ಈ ಸಂಸತ್ ಭವನ ಇತಿಹಾಸ ಸೇರಲಿದೆ. ಹೊಸ, ಭವ್ಯ ಸಂಸತ್ ಭವನ (New Parliament Building) ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ.
ಮೂಲ ಸಂಸತ್ ಭವನ ಕಟ್ಟಡ ರಚನೆಯಾದುದು 1927ರಲ್ಲಿ. ಹತ್ತಿರ ಹತ್ತಿರ ಒಂದು ಶತಮಾನ ಇದಕ್ಕೆ ಪೂರ್ಣಗೊಂಡಿದೆ. ಶತಮಾನ ಹಳೆಯದಾದ ಈ ರಚನೆ ಇಂದಿನ ಹಾಗೂ ಮುಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗದು. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ ಮತ್ತು ರಾಜ್ಯಸಭೆ ಸಂಸತ್ತಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಣಯಗಳನ್ನು ಅಂಗೀಕರಿಸಿದವು. ಡಿಸೆಂಬರ್ 10, 2020ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭವನಕ್ಕೆ ಶಂಕುಸ್ಥಾಪನೆ ಮಾಡಿದರು.
ಎಷ್ಟು ದೊಡ್ಡದು?
ಈ ಕಟ್ಟಡವನ್ನು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೆಂಟ್ರಲ್ ವಿಸ್ಟಾ ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾದ ಹೊಸ ಸಂಸತ್ತು ತ್ರಿಕೋನಾಕೃತಿಯಲ್ಲಿದೆ. ಇದು ಲೋಕಸಭೆ, ರಾಜ್ಯಸಭೆ, ಸೆಂಟ್ರಲ್ ಲಾಂಜ್ ಮತ್ತು ಸಾಂವಿಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಹೊಸ ಲೋಕಸಭೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರಾಜ್ಯಸಭೆಯು ರಾಷ್ಟ್ರೀಯ ಪುಷ್ಪವಾದ ಕಮಲದ ಹೋಲಿಕೆಯನ್ನು ಹೊಂದಿದೆ. ರಾಷ್ಟ್ರಪತಿ ಭವನದಂತಹ ಭಾರತದ ಪ್ರಮುಖ ಪಾರಂಪರಿಕ ಕಟ್ಟಡಗಳಿಂದಲೂ ವಿವಿಧ ವಾಸ್ತುಶಿಲ್ಪದ ಪ್ರಭಾವಗಳನ್ನು ಪಡೆದಿದೆ.
ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಹೊಸ ಸಂಸತ್ ಕಟ್ಟಡ ಲೋಕಸಭೆಯಲ್ಲಿ 888 ಸದಸ್ಯರು ಮತ್ತು 384 ಸದಸ್ಯರಿಗೆ ಸ್ಥಳಾವಕಾಶವನ್ನು ಹೊಂದಿದೆ. ಕೇಂದ್ರ ಪ್ರಾಂಗಣದಲ್ಲಿ ಎರಡೂ ಸದನಗಳ ಸದಸ್ಯರು ಮುಕ್ತವಾಗಿ ಸಭೆ ಸೇರಲು ಸ್ಥಳವಿದೆ. ಜಂಟಿ ಅಧಿವೇಶನ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಪುನರಾಭಿವೃದ್ಧಿಯಾದ ಶ್ರಮ ಶಕ್ತಿ ಭವನದಲ್ಲಿ ಸಂಸದರಿಗಾಗಿ ಸುಮಾರು 800 ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.
ನೂತನ ಕಟ್ಟಡವು ಆರು ಸಮಿತಿ ಕೊಠಡಿಗಳನ್ನು ಹೊಂದಿರುತ್ತದೆ. ಪ್ರಸ್ತುತ ಕಟ್ಟಡದಲ್ಲಿ ಅಂತಹ ಮೂರು ಕೊಠಡಿಗಳಷ್ಟೇ ಇವೆ. ಮಂತ್ರಿಮಂಡಲದ ಬಳಕೆಗೆ 92 ಕೊಠಡಿಗಳು ಇರುತ್ತವೆ. ಹೊಸ ಕಟ್ಟಡದಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರತಿ ಬೆಂಚ್‌ನಲ್ಲಿ ಇಬ್ಬರು ಸದಸ್ಯರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಆಸನದಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಟಚ್ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ.
ಹಳೆಯ ಸಂಸತ್ ಕಟ್ಟಡದ ಬಳಕೆ ಮುಂದುವರಿಯಲಿದೆ. ಎರಡು ಕಟ್ಟಡಗಳು ಒಂದಕ್ಕೊಂದು ಪೂರಕವಾಗಿರುವಂತೆ ಇವೆ. ಇವುಗಳ ಮೂಲ ವಾಸ್ತುಶಿಲ್ಪದ ತಂತ್ರವೇ ಹಾಗಿದೆ. ಹಳೆಯ ಕಟ್ಟಡದ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಸಂಸತ್ತಿನ ಸಂಕೀರ್ಣದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಸಹ ಪುನಃಸ್ಥಾಪಿಸಲಾಗುತ್ತದೆ. ಉನ್ನತ ಮಟ್ಟದ ಭದ್ರತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.
ಹೊಸ ಕಟ್ಟಡದಲ್ಲಿ ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಂವಿಧಾನ ಭವನ ಇರಲಿದೆ. ಲಕ್ಷಾಂತರ ಮುದ್ರಿತ ಹಾಗೂ ಡಿಜಿಟಲ್ ಬುಕ್‌ಗಳನ್ನು ಹೊಂದಿರುವ ಗ್ರಂಥಾಲಯವಿರುತ್ತದೆ. ಊಟದ ಕೋಣೆ ಮತ್ತು ಸದಸ್ಯರಿಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಸೇರಿವೆ. ಹೊಸ ಕಟ್ಟಡವು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ವ್ಯವಸ್ಥೆಯನ್ನು ಹೊಂದಿದೆ. ಕಟ್ಟಡದಾದ್ಯಂತ 100% ಯುಪಿಎಸ್ ಪವರ್ ಬ್ಯಾಕಪ್ ಒದಗಿಸಲಾಗಿದೆ.
ಹೊಸ ಕಟ್ಟಡದ ವಿನ್ಯಾಸವನ್ನು ಅಹಮದಾಬಾದ್ ಮೂಲದ HCP ಡಿಸೈನ್ ಮತ್ತು ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಡಿದೆ. ಕೇಂದ್ರದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಳ ಭಾಗವಾದ ಹೊಸ ಸಂಸತ್ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಪಡೆದಿದ್ದು, ಇದನ್ನು ನಿರ್ಮಿಸಿದೆ.
ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್
ಹೊಸ ಸಂಸತ್ ಭವನದ ಇನ್ನೊಂದು ಆಕರ್ಷಣೆ ಎಂದರೆ, ಪುರಾತನ ಭಾರತದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಬಳಸುತ್ತಿದ್ದ ಸೆಂಗೋಲ್ ಅಥವಾ ರಾಜದಂಡ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿತ್ತು. ಸೆಂಗೋಲ್ ಸದ್ಯ ಅಲಹಾಬಾದ್ ಮ್ಯೂಸಿಯಂನಲ್ಲಿದೆ. ಅದನ್ನು ತಮಿಳಿನ ಹಿರಿಯರು ಪ್ರಧಾನಿಗೆ ನೀಡಲಿದ್ದು, ಅದನ್ನು ಲೋಕಸಭೆಯ ಸ್ಪೀಕರ್ ಕುರ್ಚಿಯ ಸಮೀಪ ಪ್ರಧಾನಿ ಇಡಲಿದ್ದಾರೆ. ಚಿನ್ನದಿಂದ ಮಾಡಿದ ಈ ದಂಡವನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಾಜಿಯವರು ತಮಿಳುನಾಡಿನ ಚಿನ್ನಾಭರಣ ತಯಾರಕರಿಂದ ಮಾಡಿಸಿ ತರಿಸಿ ನೆಹರೂ ಅವರಿಗೆ ನೀಡಿದ್ದರು. ನಂತರ ಇದು ಮ್ಯೂಸಿಯಂ ಸೇರಿತ್ತು.
ಬೃಹತ್ ರಾಷ್ಟ್ರ ಲಾಂಛನ
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನವಾದ ನಾಲ್ಕು ಸಿಂಹಗಳನ್ನು ಅನಾವರಣಗೊಳಿಸಿದ್ದಾರೆ. 6.5 ಮೀಟರ್ ಎತ್ತರವಾಗಿರುವ ಈ ಲಾಂಛನ 9,500 ಕೆಜಿ ತೂಕ ಹೊಂದಿದ್ದು ಕಂಚಿನಿಂದ ಮಾಡಲ್ಪಟ್ಟಿದೆ.
ಈ ಕಟ್ಟಡದ ನಿರ್ಮಾಣಕ್ಕೆಂದು ತೆಗೆದಿರಿಸಲಾದ ಹಣದ 2600 ಕೋಟಿ ರೂ. ಇದುವರೆಗೆ ಇದರ ನಿರ್ಮಾಣದಲ್ಲಿ ಸುಮಾರು 23,04,095 ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದೆ. 26,045 ಟನ್ ಸ್ಟೀಲ್ ಬಳಸಲಾಗಿದೆ. 63,807 ಟನ್ ಸಿಮೆಂಟ್ ಹಾಗೂ 9,689 ಘನ ಮೀಟರ್ ಹಾರುಬೂದಿ ಬಳಸಲಾಗಿದೆ.
ಇದನ್ನೂ ಓದಿ: New Parliament Building: ಹೊಸ ಸಂಸತ್ ಭವನ ಉದ್ಘಾಟನೆಗೆ 20 ಪ್ರತಿಪಕ್ಷಗಳ ಬಹಿಷ್ಕಾರ, 17 ಪಕ್ಷಗಳ ಬೆಂಬಲ
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!