Site icon Vistara News

Badlapur Horror: ಶಾಲೆಗಳೇ ಸುರಕ್ಷಿತ ಸ್ಥಳವಲ್ಲದಿದ್ದ ಮೇಲೆ ಶಿಕ್ಷಣದ ಹಕ್ಕಿಗೆ ಅರ್ಥವೇನಿದೆ? ಬಾಂಬೆ ಹೈಕೋರ್ಟ್‌ ಗರಂ

sexual abuse

ಮುಂಬೈ: ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಕಳೆದ ವಾರ ಇಬ್ಬರು ನರ್ಸರಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ(Badlapur Horror) ಪ್ರಕರಣ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್(Bombay High court) ಗುರುವಾರ ತೀವ್ರ ಅವಲೋಕನ ನಡೆಸಿದೆ. ಶಾಲೆಗಳೇ ಸುರಕ್ಷಿತ ಸ್ಥಳವಲ್ಲದಿದ್ದರೆ ಶಿಕ್ಷಣದ ಹಕ್ಕು ಬಗ್ಗೆ ಮಾತನಾಡುವುದರಲ್ಲಿ ಅರ್ಥವೇನಿದೆ?” ಎಂದು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೆರೆ ಮತ್ತು ಪೃಥ್ವಿರಾಜ್‌ ಚೌಹಾಣ್‌ ಇದ್ದ ನ್ಯಾಯಪೀಠ ವಿಚಾರಣೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ವಿಳಂಬಗೊಂಡಿರುವ ಬಗ್ಗೆ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಇದೇ ವೇಳೆ ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸುವಲ್ಲಿ ನಡೆದ ವಿಳಂಬ ಬಗ್ಗೆ ಕೋರ್ಟ್‌ ಪ್ರಸ್ತಾಪಿಸಿದೆ.

“ಇದು ಎಂತಹ ದುಸ್ಥಿತಿ? ಇದು ನಿಜಕ್ಕೂ ಅತ್ಯಂತ ಆಘಾತಕಾರಿಯಾಗಿದೆ ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥಿವರಾಜ್ ಚವಾಣ್ ಅವರ ಪೀಠವು ಹೇಳಿದೆ. ಇದೇ ಪೊಲೀಸರು ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್‌, ಸಂತ್ರಸ್ತ ಮಕ್ಕಳು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆಯೇ? ಅಲ್ಲದೇ ಮಕ್ಕಳನ್ನು ನಿರ್ಲಕ್ಷಿಸಿರುವ ಶಾಲಾಡಳಿತ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದೀರೆ ಎಂದು ಪ್ರಶ್ನಿಸಿದೆ.

ಎಸ್‌ಐಟಿ ರಚನೆಯಾಗಿದೆ… ಶಾಲಾಡಳಿತದ ವಿರುದ್ಧ ತನಿಖೆ ನಡೆಯಲಿದೆ ಎಂದು ರಾಜ್ಯದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಪ್ರತಿಕ್ರಿಯಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯವು ಶಾಲೆಯ ವಿರುದ್ಧ ಪ್ರಕರಣವನ್ನು ಇಷ್ಟು ಹೊತ್ತಿಗೆ ದಾಖಲಿಸಬೇಕಾಗಿತ್ತು. ಎಫ್‌ಐಆರ್‌ ದಾಖಲಿಸಲಾಗಿದ್ದು, ನೀವು ಶಾಲೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದು ಹೇಳಿದೆ.

“ಇದೊಂದು ಗಂಭೀರ ಅಪರಾಧ. ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ… ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೇಗೆ? ಶಾಲಾ ವಿದ್ಯಾರ್ಥಿನಿಯರ ಸುರಕ್ಷತೆಗೆ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ನಾವು ತಿಳಿಯಬೇಕಾಗಿದೆ. ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಘಟನೆಯು ಆಗಸ್ಟ್ 12-13, 2024 ರಂದು ನಡೆದಿದ್ದು, ಬದ್ಲಾಪುರದ ಶಾಲೆಯ ನರ್ಸರಿ ತರಗತಿಗಳಲ್ಲಿ ಓದುತ್ತಿರುವ ಇಬ್ಬರು ನಾಲ್ಕು ವರ್ಷದ ಬಾಲಕಿಯರ ಮೇಲೆ 23 ವರ್ಷದ ಸ್ವಚ್ಛತಾ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಹುಡುಗಿಯರ ಶೌಚಾಲಯದ ಒಳಗೆ ತೆರಳಿದಾಗ ಕಿಡಿಗೇಡಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಬೆಳಗ್ಗೆ ತರಗತಿಯ ವೇಳೆ ಬಾಲಕಿಯರು ವಾಶ್‌ರೂಮ್‌ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಆರೋಪಿ, ಅಕ್ಷಯ್ ಶಿಂಧೆಯನ್ನು ಆಗಸ್ಟ್ 1, 2024 ರಂದು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತು. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಬಾಲಕಿಯರ ಶೌಚಾಲಯವನ್ನು ಸ್ವಚ್ಛಗೊಳಿಸುವ ಹೊಣೆಗಾರಿಕೆಯನ್ನು ಆತನಿಗೆ ನೀಡಲಾಗಿತ್ತು. ಶುಕ್ರವಾರ ರಾತ್ರಿ ಇಬ್ಬರು ಬಾಲಕಿಯರ ಪೋಷಕರು ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ಖಂಡಿಸಿ ಮಂಗಳವಾರ ಬದ್ಲಾಪುರ ರೈಲು ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾಕಾರರು ಹಳಿಗಳಿಗೆ ಇಳಿದು ಪ್ರತಿಭಟನೆ ನಡೆಸಿದ ಕಾರಣ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಕೊನೆಗೆ ಈ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡು ಉದ್ರಿಕ್ತ ಪ್ರತಿಭಟನಾಕಾರರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಇದನ್ನೂ ಓದಿ: Sexual Abuse: ಕಾಶ್ಮೀರದಲ್ಲಿ ಹಿಂದೂ ಬಾಲಕಿ ಮೇಲೆ ಅತ್ಯಾಚಾರ; ಬೃಹತ್‌ ಪ್ರತಿಭಟನೆ

Exit mobile version