Site icon Vistara News

ವೈಟ್‌ಹೌಸ್‌ನಲ್ಲಿ ಅತಿ ದೊಡ್ಡ ದೀಪಾವಳಿ ಆಚರಣೆ, ಅಧ್ಯಕ್ಷ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಭಾಗಿ

diwali

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಪ್ರಥಮ ಲೇಡಿ ಡಾ.ಜಿಲ್‌ ಬೈಡೆನ್‌ ಅವರು ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಆಚರಿಸಿದರು. ಜಾರ್ಜ್‌ ಬುಷ್‌ ಅವರು ಅಧ್ಯಕ್ಷರಾಗಿದ್ದಾಗ ಆರಂಭಿಸಿದ ವೈಟ್‌ಹೌಸ್‌ನ ದೀಪಾವಳಿ ಆಚರಣೆಯಲ್ಲಿ ಈ ಬಾರಿಯದು ಅತಿ ದೊಡ್ಡ ಕಾರ್ಯಕ್ರಮವೆನಿಸಿದೆ.

ಸ್ವತಃ ಅಧ್ಯಕ್ಷರು ಹಾಗೂ ಅವರ ಪತ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗಿದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೂ ಹಾಜರಿದ್ದರು.

ʻʻಇದು ಶ್ವೇತಭವನದಲ್ಲಿ ಆಚರಿಸಲಾಗುತ್ತಿರುವ ಇದುವರೆಗಿನ ಅತಿ ದೊಡ್ಡ ದೀಪಾವಳಿ ಹಬ್ಬ. ದಕ್ಷಿಣ ಏಷ್ಯಾದ ಈ ವಿಶಿಷ್ಟ ಸಮುದಾಯವು, ಪ್ರತಿಯೊಬ್ಬರಿಗೂ ಪ್ರಯೋಜನದಾಯಕವಾದ ನಮ್ಮ ಈ ಆರ್ಥಿಕತೆಯನ್ನು ಕಟ್ಟುವಲ್ಲಿ ದೊಡ್ಡ ದೇಣಿಗೆ ನೀಡಿದೆ. ಕೊರೊನಾ ಸಾಂಕ್ರಾಮಿಕದಿಂದ ಪಾರಾಗುವಲ್ಲಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ, ವೃದ್ಧರನ್ನು ಆರೈಕೆ ಮಾಡುವಲ್ಲಿ, ಹವಾಮಾನ ವೈಪರೀತ್ಯ ತಡೆ ಉಪಕ್ರಮ ಕೈಗೊಳ್ಳುವಲ್ಲಿ, ವಲಸೆ ಸಮಸ್ಯೆಯನ್ನು ತಡೆಗಟ್ಟುವಲ್ಲಿ, ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸುವಲ್ಲಿ, ಹೆಚ್ಚು ನ್ಯಾಯಪರವಾದ ದೇಶವನ್ನು ಕಟ್ಟುವಲ್ಲಿ, ದೇಶ ಹಾಗೂ ಸಮುದಾಯಗಳನ್ನು ಸಂರಕ್ಷಿಸುವಲ್ಲಿ ನೆರವಾಗುತ್ತಾ ಸದಾ ಸ್ಫೂರ್ತಿಯಾಗುತ್ತಾ ಬಂದಿದೆʼʼ ಎಂದು ಬೈಡೆನ್‌ ತಮ್ಮ ಭಾಷಣದಲ್ಲಿ ನುಡಿದರು.

ಸುಮಾರು 200ಕ್ಕೂ ಅಧಿಕ ಅನಿವಾಸಿ ಭಾರತೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೈಟ್‌ಹೌಸ್‌ನ ಈಸ್ಟ್‌ರೂಮ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿತಾರ್‌ ವಾದಕ ರಿಷಬ್‌ ಶರ್ಮಾ ಅವರ ವಾದನ, ಸಾ ಡ್ಯಾನ್ಸ್‌ ಕಂಪೆನಿಯ ನೃತ್ಯ ನಡೆದವು. ಭಾರತೀಯ ಹಾಗೂ ಅಮೆರಿಕನ್‌ ಅತಿಥಿಗಳು ಸಾಂಪ್ರದಾಯಿಕ ಭಾರತೀಯ ಉಡುಗೆಗಳಾದ ಸೀರೆ, ಧೋತಿ, ಲೆಹೆಂಗಾ, ಶೆರ್ವಾನಿಗಳಲ್ಲಿ ಕಂಗೊಳಿಸಿದರು. ಭಾರತೀಯ ಸಿಹಿತಿಂಡಿಗಳನ್ನು ಸವಿದರು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಕೂಡ ದೀಪಾವಳಿಯ ಪಾರ್ಟಿಯನ್ನು ತಮ್ಮ ಅಧಿಕೃತ ನಿವಾಸದಲ್ಲಿ ಏರ್ಪಡಿಸಿದರು. ನೂರಾರು ಭಾರತೀಯರು ಅದರಲ್ಲಿ ಪಾಲ್ಗೊಂಡಿದ್ದಲ್ಲದೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ʼʼಈಸ್ಟ್‌ ರೂಮ್‌ ಅತಿಥಿಗಳಿಂದ ಭರ್ತಿಯಾಗಿತ್ತು. ಇದು ಭಾರತೀಯ ಸಮುದಾಯ ಅಮೆರಿಕದಲ್ಲಿ ಸಾಧಿಸಿದುದರ ನಿಜವಾದ ಸಂಭ್ರಮಾಚರಣೆ. ದೀಪಾವಳಿ ಸಂದರ್ಭದಲ್ಲಿ ನಮ್ಮನ್ನೆಲ್ಲಾ ಗುರುತಿಸಿರುವುದು ಅಧ್ಯಕ್ಷರ ಶ್ರೇಷ್ಠ ನಡೆಯಾಗಿದೆʼʼ ಎಂದು ಅಮೆರಿಕ- ಇಂಡಿಯಾ ಬ್ಯುಸಿನೆಸ್‌ ಕೌನ್ಸಿಲ್‌ನ ಅಧ್ಯಕ್ಷ ಅತುಲ್‌ ಕೆಶಪ್‌ ಹೇಳಿದ್ದಾರೆ.

ಇದನ್ನೂ ಓದಿ | ವಿಸ್ತಾರ TOP 10 NEWS | ಬ್ರಿಟನ್‌ಗೆ ʼರಿಷಿʼ ಪ್ರಧಾನಿಯಿಂದ ಸೈನಿಕರೊಂದಿಗೆ ಮೋದಿ ದೀಪಾವಳಿವರೆಗಿನ ಪ್ರಮುಖ ಸುದ್ದಿಗಳಿವು

Exit mobile version