ಪಟನಾ: ಇನ್ನು ಮುಂದೆ ಸರ್ಕಾರಿ ಉದ್ಯೋಗಿಗಳು ಎರಡನೇ ಮದುವೆ ಮಾಡಿಕೊಳ್ಳಬೇಕು ಎಂದರೆ ಸರಕಾರದ ಅನುಮತಿ ಪಡೆಯುವುದು ಕಡ್ಡಾಯ.- ಹೀಗೊಂದು ನಿಯಮವನ್ನು ಬಿಹಾರ ಸರಕಾರ ಜಾರಿಗೊಳಿಸಿದೆ.
ಈ ಬಗ್ಗೆ ಅಧಿಸೂಚನೆಯನ್ನೇ ಪ್ರಕಟಿಸಿದ್ದು, ಎಲ್ಲಾ ಸರಕಾರಿ ಅಧಿಕಾರಿಗಳು, ಉದ್ಯೋಗಿಗಳು ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ತಮ್ಮ ತಮ್ಮ ಇಲಾಖೆಗಳಿಗೆ ತಿಳಿಸಬೇಕು ಮತ್ತು ಅಗತ್ಯ ಅನುಮತಿಯನ್ನು ಪಡೆದ ನಂತರವೇ ಅವರು ಎರಡನೇ ಮದುವೆಗೆ ಅರ್ಹತೆ ಪಡೆಯುತ್ತಾರೆ ಎಂದು ತಿಳಿಸಲಾಗಿದೆ.
ಯಾಕೆ ಈ ಹೊಸ ನಿಯಮ ಜಾರಿ?
ಎರಡನೇ ಬಾರಿಗೆ ಮದುವೆಯಾಗಲು ಯೋಚಿಸುವ ಯಾವುದೇ ಉದ್ಯೋಗಿ ಆಗಿದ್ದರು ಮೊದಲು ಅವನ ಅಥವಾ ಅವಳ ಸಂಗಾತಿಯಿಂದ ಕಾನೂನುಬದ್ಧ ವಿಚ್ಚೇದನವನ್ನು ಪಡೆದಿರಬೇಕು ಮತ್ತು ಸಂಬಂಧಿಸಿದ ಇಲಾಖೆಗೆ ಈ ಮಾಹಿತಿಯನ್ನು ನೀಡಬೇಕು. ಒಂದೊಮ್ಮೆ ಉದ್ಯೋಗಿಯ ಮೊದಲ ಪತ್ನಿ ಅಥವಾ ಪತಿ ಮದುವೆಗೆ ವಿರೋಧಿಸಿದರೆ, ಎರಡನೇ ಪತ್ನಿ ಅಥವಾ ಪತಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವುದಿಲ್ಲ ಎಂದು ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಂದುವೇಳೆ ಸರ್ಕಾರಿ ನೌಕರ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಎರಡನೇ ಮದುವೆಯಾಗಿ ಸೇವಾ ಅವಧಿಯಲ್ಲಿ ಮರಣ ಹೊಂದಿದರೆ, ಅವನ ಅಥವಾ ಅವಳ ಎರಡನೇ ಹೆಂಡತಿ / ಪತಿ ಮತ್ತು ಅವರ ಮಕ್ಕಳು ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ರಾಜ್ಯ ಸರ್ಕಾರ ಮೊದಲ ಪತ್ನಿಯ ಮಕ್ಕಳಿಗೆ ಆದ್ಯತೆ ನೀಡುತ್ತದೆ ಎಂದು ಇದರಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ನಿಯಮ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಡಿಜಿಪಿ ಹೋಮ್ ಗಾರ್ಡ್, ಡಿಜಿಪಿ ಕಾರಾಗೃಹ ಮತ್ತು ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಗಳಿಗೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Film on Vajpayee | ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ತೆರೆಯ ಮೇಲೆ ಬರಲು ಸಜ್ಜು