Site icon Vistara News

Bihar Politics: ಆಪರೇಶನ್‌ ಭಯ, ಜಾರ್ಖಂಡ್‌ ಶಾಸಕರಂತೆ ಬಿಹಾರದ ಕಾಂಗ್ರೆಸ್‌ ಶಾಸಕರೂ ತೆಲಂಗಾಣದಲ್ಲಿ!

bihar congress MLAs

ಪಟನಾ: ಒಂದೆಡೆ ಚಂಪೈ ಸೊರೆನ್‌ (Champai Soren) ನೇತೃತ್ವದ ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha) ಹಾಗೂ ಕಾಂಗ್ರೆಸ್‌ ಶಾಸಕರು ಆಪರೇಶನ್‌ ಕಮಲದ (operation Lotus) ಭಯದಿಂದ ತೆಲಂಗಾಣದಲ್ಲಿ (Telangana) ಬೇರು ಬಿಟ್ಟಿದ್ದರೆ, ಅದೇ ಕಾರಣದಿಂದಲೇ ಬಿಹಾರದ ಕಾಂಗ್ರೆಸ್‌ ಶಾಸಕರು (Bihar Politics) ಕೂಡ ತೆಲಂಗಾಣಕ್ಕೆ ಆಗಮಿಸಿ ತಳ ಊರಿದ್ದಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಆಪರೇಶನ್‌ ಕಮಲದ ಭಯದಿಂದಾಗಿ ತೆಲಂಗಾಣಕ್ಕೆ ತರಲಾಗಿತ್ತು. ಇಂದು ಜಾರ್ಕಂಡ್‌ ವಿಧಾನಸಭೆಯಲ್ಲಿ ಚಂಪೈ ಸೊರೇನ್‌ ಅವರು ವಿಶ್ವಾಸಮತ ಸಾಬೀತುಪಡಿಸಬೇಕಿರುವ ಹಿನ್ನೆಲೆಯಲ್ಲಿ ಶಾಸಕರು ಹೈದರಾಬಾದ್‌ನಿಂದ ಹೊರಟಿದ್ದಾರೆ. ಬಿಹಾರದ ಕಾಂಗ್ರೆಸ್ ಶಾಸಕರು ಕೂಡ ಆಪರೇಶನ್‌ ಕಮಲದ ಆತಂಕದಿಂದ ಹೈದರಾಬಾದ್‌ಗೆ ಆಗಮಿಸಿ ಬೇರು ಬಿಟ್ಟಿದ್ದಾರೆ. ಫೆಬ್ರವರಿ 12ರಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ (Nitish Kumar) ಅವರು ವಿಶ್ವಾಸಮತ ಸಾಬೀತುಪಡಿಸಬೇಕಿದೆ.

“ಡಿಸೆಂಬರ್ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ಅಧಿಕಾರ ವಹಿಸಿಕೊಂಡ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಅಭಿನಂದಿಸಲು ಬಿಹಾರ ಕಾಂಗ್ರೆಸ್ ಶಾಸಕರು ಹೈದರಾಬಾದ್‌ಗೆ ಬಂದಿದ್ದಾರೆ” ಎಂದು ಹೇಳಲಾಗಿದೆ.

ʼತೆಲಂಗಾಣ ಮುಖ್ಯಮಂತ್ರಿಗೆ ಶುಭಾಶಯ ಕೋರಲುʼ ಬಂದಿರುವ ಬಿಹಾರದ ಕಾಂಗ್ರೆಸ್ ಶಾಸಕರು ಫೆಬ್ರವರಿ 11ರವರೆಗೆ ಹೈದರಾಬಾದ್‌ನಲ್ಲಿ ಉಳಿಯುವ ಸಾಧ್ಯತೆ ಇದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ, ಬಿಹಾರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಎನ್‌ಡಿಎ ಸರ್ಕಾರ ಫೆ. 12ರಂದು ವಿಶ್ವಾಸ ಮತ ಯಾಚಿಸಲಿದ್ದು, ಯಾವುದೇ ಕಳ್ಳಬೇಟೆಯ ಯತ್ನಗಳನ್ನು ತಡೆಯಲು ಕಾಂಗ್ರೆಸ್‌ ಪಕ್ಷವು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಹೈದರಾಬಾದ್‌ಗೆ ಕಾಂಗ್ರೆಸ್ ಶಾಸಕರ ಆಗಮನವಾಗಿದೆ ಎಂದು ತಿಳಿದು ಬಂದಿದೆ.

ಎಐಸಿಸಿ ಬಿಹಾರದ ಉಸ್ತುವಾರಿ ಮೋಹನ್ ಪ್ರಕಾಶ್ ಅವರು ಈ ಬೆಳವಣಿಗೆಯನ್ನು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಆದರೆ ಕಾಂಗ್ರೆಸ್ ಶಾಸಕರಲ್ಲಿ ಒಡಕಿದೆ ಎಂಬ ವದಂತಿಗಳನ್ನು ನಿರಾಕರಿಸಿದ್ದಾರೆ. “ಸತ್ಯವೆಂದರೆ ಜೆಡಿಯು ಶಾಸಕರು ತಮ್ಮ ವಿರುದ್ಧ ಮತದಾರರ ಕೋಪದಿಂದ ಒತ್ತಡಕ್ಕೆ ಒಳಗಾಗಿದ್ದಾರೆ. ಅವರ ಪಕ್ಷ NDAಗೆ ಶರಣಾಗಿದೆ. ಅವರು (ಜೆಡಿಯು) ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕು” ಎಂದು ಅವರು ಹೇಳಿದರು.

ಬಿಹಾರದ ಕಾಂಗ್ರೆಸ್‌ ಮುಖಂಡರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಇತ್ತೀಚಿನ ಯು ಟರ್ನ್‌ ಕಾಂಗ್ರೆಸ್‌ ಪಕ್ಷದಲ್ಲಿ ಹಾಗೂ ಇಂಡಿಯಾ ಬ್ಲಾಕ್‌ನಲ್ಲಿ ಆಘಾತ ಮೂಡಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 19 ಶಾಸಕರನ್ನು ಹೊಂದಿದ್ದು, ಅವರಲ್ಲಿ 16 ಮಂದಿ ಸಭೆಗೆ ಹಾಜರಾಗಿದ್ದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಎಂಎಲ್‌ಸಿಗಳಾದ ಪ್ರೇಮ್ ಚಂದ್ರ ಮಿಶ್ರಾ ಮತ್ತು ಮದನ್ ಮೋಹನ್ ಝಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಏತನ್ಮಧ್ಯೆ, ಚಂಪೈ ಸೊರೆನ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಹೈದರಾಬಾದ್‌ಗೆ ತೆರಳಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ ಸಮ್ಮಿಶ್ರ ಸರ್ಕಾರದ ಶಾಸಕರು, ಸೋಮವಾರ ನಡೆಯಲಿರುವ ರಾಜ್ಯ ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಗೆ ಭಾನುವಾರ ರಾತ್ರಿ ರಾಂಚಿಗೆ ತೆರಳಿದ್ದಾರೆ.

ಇದನ್ನೂ ಓದಿ: Bihar Politics: ಇಂದು ಬೆಳಗ್ಗೆ 10ಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ? ಬಿಹಾರ ರಾಜಕೀಯ ಬಿರುಸು

Exit mobile version