Site icon Vistara News

Bihar Politics | ಮತ್ತೆ ಒಂದಾಗಲಿದೆಯೇ ಜನತಾ ಪರಿವಾರ? ದೇವೇಗೌಡರಲ್ಲಿ ಹೊಸ ಭರವಸೆ

Threatening people with false cases, HD Deve Gowda files complaint against transfer of 3 inspectors

ಬೆಂಗಳೂರು: ಬಿಹಾರದಲ್ಲಿನ ರಾಜಕೀಯ ಬೆಳವಣಿಗೆ (Bihar Politics) ಜನತಾಪರಿವಾರದ ಪಕ್ಷಗಳಲ್ಲಿ ಹೊಸ ಹುರುಪು ಮೂಡಿಸಿದೆ. ಜನತಾ ಪರಿವಾರದ ಪಕ್ಷಗಳಾದ ನಿತೀಶ್‌ ಕುಮಾರ್‌ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಯು) ಮತ್ತು ಲಾಲೂ ಪ್ರಸಾದ್‌ ಯಾದವ್‌ ನೇತೃತ್ವದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಒಂದಾಗಿ ಸರ್ಕಾರ ರಚಿಸುತ್ತಿರುವುದು ಜನತಾ ಪರಿವಾರ ಮತ್ತೆ ಮುನ್ನೆಲೆಗೆ ಬರಲಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜನತಾಪರಿವಾರದ ಇನ್ನೊಂದು ಪಕ್ಷವಾದ ಜಾತ್ಯತೀತ ಜನತಾದಳದ (ಜೆಡಿಎಸ್‌) ನಾಯಕ, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ಈ ಬೆಳವಣಿಯಿಂದ ಜನತಾ ಪರಿವಾರ ಮತ್ತೆ ಒಂದಾಗಿ, ಮುನ್ನೆಲೆಗೆ ಬರಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

“ಜೆಡಿಯು ಮತ್ತು ಆರ್‌ಜೆಡಿ ಒಂದಾಗಿರುವ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಇದು ಪರಿವಾರದ ಎಲ್ಲ ಪಕ್ಷಗಳು ಒಂದಾಗಿರಬೇಕೆಂದು ಬಯಸುತ್ತಿದ್ದ ದಿನಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ಪಕ್ಷ ದೇಶಕ್ಕೆ ಮೂವರು ಪ್ರಧಾನಿಗಳನ್ನು ನೀಡಿತ್ತು. ನನ್ನ ಕಾಲಾವಧಿ ಮುಗಿಯಿತು. ಪಕ್ಷದ ಯುವ ನಾಯಕರು ಈ ಬಗ್ಗೆ ಯೋಚಿಸಿ ನಿರ್ಧರಿಸಿದರೆ ಈ ಮಹಾನ್‌ ದೇಶಕ್ಕೆ ಪರ್ಯಾಯ ವ್ಯವಸ್ಥೆಯೊಂದನ್ನು ಕಲ್ಪಿಸಬಹುದಾಗಿದೆʼʼ ಎಂದು ದೇವೇಗೌಡರು ಟ್ವೀಟ್‌ ಮಾಡಿದ್ದಾರೆ.

ಜನತಾಪರಿವಾರದಿಂದಾಗಿಯೇ ದೇವೇಗೌಡರು ಕೂಡ ಪ್ರಧಾನಿಯಾಗಿದ್ದರು. ಆ ನಂತರ ಪಕ್ಷ ಸುಮಾರು ಆರು ಭಾಗಗಳಾಗಿದ್ದವು. ಜಾತ್ಯತೀತ ಜನತಾದಳ, ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾದಳ, ಸಮಾಜವಾದಿ ಜನತಾ ಪಾರ್ಟಿ, ಇಂಡಿಯನ್ ನ್ಯಾಷನಲ್ ಲೋಕದಳ, ಸಮಾಜವಾದಿ ಪಾರ್ಟಿ ಹೀಗೆ ಜನತಾಪರಿವಾರ ತುಂಡು ತುಂಡಾಗಿತ್ತು. ಕೆಲವು ಜನತಾ ಪರಿವಾರದ ಪಕ್ಷಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ, ಮತ್ತೆ ಕೆಲವು ಪಕ್ಷಗಳು ಬಿಜೆಪಿಯನ್ನು ವಿರೋಧಿಸಿಕೊಂಡೇ ಬಂದಿವೆ.

ಈ ಎಲ್ಲ ಪಕ್ಷಗಳನ್ನು ವಿಲೀನಗೊಳಿಸಿ ಮತ್ತೆ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪುನರ್‌ ಜನ್ಮ ನೀಡುವ ಪ್ರಯತ್ನ ಹಲವು ಬಾರಿ ನಡೆದಿದೆ. ೨೦೧೪ರಲ್ಲಿಯೇ ಜನತಾ ಪರಿವಾರದ ಪಕ್ಷಗಳನ್ನು ಒಗ್ಗೂಡಿಸಿ, ಮೂರನೇ ರಾಜಕೀಯ ಶಕ್ತಿಗೆ ಜನ್ಮ ನೀಡುವ ಜವಾಬ್ದಾರಿಯನ್ನು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಒಪ್ಪಿಸಲಾಗಿತ್ತು. ಒಂದೆರಡು ಸಭೆ ನಡೆದಿರುವುದು ಬಿಟ್ಟರೆ ಬೇರೆ ಏನೂ ಆಗಿರಲಿಲ್ಲ. ಶರದ್‌ ಯಾದವ್‌ ಕೂಡ ಈ ಪ್ರಯತ್ನ ನಡೆಸಿ ಸೋತಿದ್ದರು.

ಈಗ ಜೆಡಿಯು ಮತ್ತು ಆರ್‌ಜೆಡಿ ಒಂದಾಗಿ ಸರ್ಕಾರ ರಚಿಸುತ್ತಿರುವುದನ್ನು ಸಮಾಜವಾದಿ ಪಕ್ಷ ಕೂಡ ಬೆಂಬಲಿಸಿದೆ. ʼಇದು ಒಳ್ಳೆಯ ಆರಂಭʼ ಎಂದಿರುವ ಎಸ್‌ಪಿಯ ನಾಯಕ ಅಖಿಲೇಶ್‌ ಯಾದವ್‌, ಬೇರೆ ಬೇರೆ ರಾಜ್ಯಗಳಲ್ಲಿಯೂ ಬಿಜೆಪಿಯನ್ನು ದೂರ ಮಾಡುವ ಕಾಲ ಬರಲಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಬಿಹಾರದಲ್ಲಿನ ರಾಜಕೀಯ ಬೆಳವಣಿಗೆ ದೇಶಾದ್ಯಂತ ಹೊಸ ಸಂಚಲನಕ್ಕೂ ಕಾರಣವಾಗಿದೆ.

ಇದನ್ನೂ ಓದಿ| Bihar Politics | ಅಸ್ತಿತ್ವಕ್ಕೆ ಬಂದ ಮಹಾಘಟ್​ ಬಂಧನ್​ ಸರ್ಕಾರ; ನಾಳೆ ಮಧ್ಯಾಹ್ನ 2 ಗಂಟೆಗೆ ಪ್ರಮಾಣ

Exit mobile version