Site icon Vistara News

Bihar politics | ಸೋನಿಯಾ ಭೇಟಿಗೆ ಸಮಯ ಕೇಳಿದ ನಿತೀಶ್‌, ಬೆಂಬಲ ನೀಡಲು ಸಿದ್ಧ ಎಂದ ಆರ್‌ಜೆಡಿ

bihar politics

ನವ ದೆಹಲಿ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು, ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುವ ಲಕ್ಷಣಗಳು ದಟ್ಟವಾಗಿ ಗೋಚರಿಸಿವೆ. ಈ ನಡುವೆ ತನ್ನ ಸರಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವ ನಿತೀಶ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗೆ ಸಮಯ ನಿಗದಿ ಮಾಡಲು ಸೂಚಿಸಿದೆ. ಇದರ ಜತೆಗೇ ಲಾಲೂ ಪ್ರಸಾದ್‌ ನೇತೃತ್ವದ ಆರ್‌ಜೆಡಿಯು ಕೂಡಾ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.

ನಿತೀಶ್‌ ಕುಮಾರ್‌ ಅವರು ಕಳೆದ ಕೆಲವು ತಿಂಗಳುಗಳಿಂದ ಹಲವು ಕಾರಣಗಳಿಗಾಗಿ ಬಿಜೆಪಿ ಮೇಲೆ ತೀವ್ರವಾಗಿ ಮುನಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಕಳೆದ ೨೦ ದಿನಗಳ ಅವಧಿಯಲ್ಲಿ ಕೇಂದ್ರ ಸರಕಾರದ ಆಯೋಜನೆಯಲ್ಲಿ ನಡೆದ ನಾಲ್ಕು ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು. ಜುಲೈ ೧೭ರಂದು ಅಮಿತ್‌ ಶಾ ಅವರು ಕರೆದ ಸಭೆಗೆ ಹೋಗಿರಲಿಲ್ಲ. ಜುಲೈ ೧೯ರಂದು ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ್‌ ಅವರ ಬೀಳ್ಕೊಡುಗೆ ಸಮಾರಂಭಕ್ಕಾಗಲೀ, ಜುಲೈ ೨೨ರಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಲೀ ಅವರು ಹೋಗಿರಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಆಗಸ್ಟ್‌ ೭ರಂದು ನಡೆದ ನೀತಿ ಆಯೋಗದ ಸಭೆಗೆ ಅವರು ಹೋಗಲೇ ಬೇಕಿತ್ತು. ಅದಕ್ಕೂ ಗೈರು ಹಾಜರಾಗುವ ಮೂಲಕ ಕೇಂದ್ರ ಸರಕಾರ ಮತ್ತು ಬಿಜೆಪಿ ಜತೆಗಿನ ತನ್ನ ಅಸಹಕಾರವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.

ಹೀಗಾಗಿಯೇ ಸೋಮವಾರ ಬೆಳಗ್ಗಿನಿಂದ ಬಿಹಾರ ರಾಜಕೀಯದಲ್ಲಿನ ತಲ್ಲಣಗಳೆಲ್ಲ ಒಂದೊಂದಾಗಿ ಬಯಲಿಗೆ ಬರುತ್ತಿವೆ. ಜೆಡಿಯುವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನುವುದು ಪ್ರಧಾನ ಆರೋಪ. ಇದಕ್ಕೆ ಪೂರಕವಾಗಿ ಹಲವು ವಿದ್ಯಮಾನಗಳು ನಡೆದಿವೆ ಎನ್ನುವುದನ್ನು ಜೆಡಿಯು ಆಗಾಗ ದಾಖಲಿಸಿದೆ.

ಹೊಸ ಸರಕಾರ ರಚನೆ ಯತ್ನ
೨೪೩ ಶಾಸಕರಿರುವ ರಾಜ್ಯ ವಿಧಾನಸಭೆಯಲ್ಲಿ ೧೨೨ ಮ್ಯಾಜಿಕ್‌ ಸಂಖ್ಯೆ. ಪ್ರಸಕ್ತ ಜೆಡಿಯು ೪೩ ಮತ್ತು ಬಿಜೆಪಿ ೭೪ ಶಾಸಕರನ್ನು ಹೊಂದಿದೆ. ಜತೆಗೆ ಪಕ್ಷೇತರರ ಬೆಂಬಲದೊಂದಿಗೆ ಸರಕಾರ ಭದ್ರವಾಗಿದೆ. ಇದೇವೇಳೆ ಯುಪಿಎ ಕೂಟದಲ್ಲಿ ಆರ್‌ಜೆಡಿ ೭೫ ಶಾಸಕರು ಮತ್ತು ಕಾಂಗ್ರೆಸ್‌ ೧೯ ಶಾಸಕರನ್ನು ಹೊಂದಿದೆ.
ಒಂದು ವೇಳೆ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುವುದೇ ನಿಜವಾದರೆ ಪರ್ಯಾಯ ಸರಕಾರ ರಚನೆಗೂ ನಿತೀಶ್‌ ಕುಮಾರ್‌ ಪ್ರಯತ್ನ ನಡೆಸುತ್ತಿದ್ದಾರೆ.

ಒಂದು ಕಡೆ ನಿತೀಶ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಮಾತುಕತೆಗೆ ಮುಂದಾಗಿದ್ದಾರೆ. ಇನ್ನೊಂದು ಕಡೆ ಒಂದು ವೇಳೆ ಜೆಡಿಯು ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡರೆ ಬೆಂಬಲ ನೀಡಲು ಸಿದ್ಧ ಎಂದು ಆರ್‌ಜೆಡಿಯ ತೇಜಸ್ವಿ ಯಾದವ್‌ ಹೇಳಿದ್ದಾರೆ. ಇದು ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿ ಸರಕಾರ ರಚನೆಯಾಗುವ ಸಾಧ್ಯತೆ ಕಡೆಗೆ ಬೆಟ್ಟು ಮಾಡಿದೆ.

ನಾಳೆ ನಿರ್ಣಾಯಕ ಸಭೆ
ಮಂಗಳವಾರ ಜೆಡಿಯು ಶಾಸಕರು, ಸಂಸದರು ಮತ್ತು ಮೇಲ್ಮನೆ ಸದಸ್ಯರ ಮಹತ್ವದ ಸಭೆಯೊಂದನ್ನು ಪಟನಾದಲ್ಲಿ ಆಯೋಜಿಸಲಾಗಿದೆ. ಎಲ್ಲರೂ ಅದಕ್ಕೆ ಬರಬೇಕು ಎಂದು ಸೂಚನೆ ನೀಡಲಾಗಿದೆ. ಈ ಸಭೆಗೆ ಎಲ್ಲ ಶಾಸಕರು ಬರುತ್ತಾರಾ ಅಥವಾ ಕೆಲವರು ಗೈರು ಹಾಜರಾಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದರ ನಡುವೆ ಆರ್‌ಜೆಡಿ ಕೂಡಾ ಮಂಗಳವಾರ ಸಂಜೆ ಪಟನಾದಲ್ಲಿ ತನ್ನ ಶಾಸಕರ ಸಭೆಯನ್ನು ಕರೆದಿದೆ.

ಇದರ ನಡುವೆ ಸಿಕ್ಕಿರುವ ಇನ್ನೊಂದು ಮಾಹಿತಿಯ ಪ್ರಕಾರ, ಜೆಡಿಯು ನಾಯಕ ಉಪೇಂದ್ರ ಕುಶ್ವಾಹ ಅವರು ಜುಲೈ ತಿಂಗಳ ಆರಂಭದಲ್ಲೇ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಂದರೆ ಜೆಡಿಯು ಕಳೆದ ಕೆಲವು ತಿಂಗಳುಗಳಿಂದಲೇ ಮೈತ್ರಿ ಮುರಿದುಕೊಳ್ಳುವ ಚಿಂತನೆ ನಡೆದಿರುವುದು ಸ್ಪಷ್ಟ.

ಇದನ್ನೂ ಓದಿ | ವಿಸ್ತಾರ Explainer | ಬಿಜೆಪಿ ಜತೆಗೆ ನಿತೀಶ್‌ ಕುಮಾರ್‌ ಮುನಿಸಿಗೆ ಕಾರಣಗಳೇನು? ಮುಂದೇನು ಗೇಮ್‌ ಪ್ಲ್ಯಾನ್‌?

Exit mobile version