ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ನಡುವಿನ ಬಿರುಕು ಅಗಲವಾಗುತ್ತಲೇ ಇದ್ದು, ಮಂಗಳವಾರ (ಆ.9) ಎರಡು ಮಹತ್ವದ ಸಭೆಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಉಪ ಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿ ಸಭೆ ನಡೆಸಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದ ಬೆಳವಣಿಗೆಗಳ ಕುರಿತು ಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಬೆಳವಣಿಗೆಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ಈ ನಡುವೆ ಸೋಮವಾರ ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ ಅಮಿತ್ ಶಾ ಕೂಡ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಸೋಮವಾರ ಬೆಳಗ್ಗೆ ಉಪ ಮುಖ್ಯ ಮಂತ್ರಿ ತಾರಕಿಶೋರ್ ನಿತೀಶ್ ಕುಮಾರ್ ಅವರೊಂದಿಗೆ ಈ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ನಿತೀಶ್ ಕುಮಾರ್ ಯಾವುದೇ ಸ್ಪಷ್ಟವಾದ ಸಂದೇಶವನ್ನು ನೀಡಿಲ್ಲ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಬಿಜೆಪಿಯೊಂದಿಗಿನ ಸಂಬಂಧಕ್ಕೆ ಗುಡ್ ಬೈ ಹೇಳಲು ಮುಂದಾಗಿರುವ ನಿತೀಶ್ ಕುಮಾರ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ಪಕ್ಷದ ಸಂಸದರ, ಶಾಸಕರ ಸಭೆ ಕರೆದಿದ್ದಾರೆ. ಬಿಜೆಪಿ ಬಿಟ್ಟು, ಆರ್‌ಜೆಡಿ ಕೈ ಹಿಡಿಯಲು ನಿತೀಶ್ ಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮಂಗಳವಾರ ಜೆಡಿಯು ಸಭೆ ನಡೆಯುವ ಹೊತ್ತಿನಲ್ಲಿಯೇ ಆರ್‌ಜೆಡಿ ಕೂಡ ಪ್ರತ್ಯೇಕವಾಗಿ ಪಕ್ಷದ ನಾಯಕರ ಸಭೆ ಕರೆದಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಆರ್‌ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾವವ್ ಅವರ ಪುತ್ರ ತೇಜಸ್ವಿ ಯಾದವ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈಗಾಗಲೇ ನಿತೀಶ್ ಕುಮಾರ್ ಆರ್‌ಜೆಡಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೊಸ ಸರ್ಕಾರ ರಚಿಸುವ ಕುರಿತು ತೇಜಸ್ವಿ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವರದಿಗಳನ್ನು ಎರಡೂ ಪಕ್ಷಗಳ ನಾಯಕರು ನಿರಾಕರಿಸಿದ್ದಾರೆ.
ಈ ನಡುವೆ ಎಲ್ಲ ಪಕ್ಷಗಳ ಶಾಸಕರು ರಾಜಧಾನಿ ಪಟನಾಗೆ ಆಗಮಿಸಿದ್ದು, ಅವರುಗಳಿಗೆ ಆಗಸ್ಟ್ 10 ರವರೆಗೆ ಇಲ್ಲಿಯೇ ನೆಲೆಸುವಂತೆ ಸೂಚನೆ ನೀಡಲಾಗಿದೆ. ಆರ್‌ಜೆಡಿಯ ಮಿತ್ರ ಪಕ್ಷವಾದ ಕಾಂಗ್ರೆಸ್ ಶಾಸಕರು ಕೂಡ ಪಟನಾಗೆ ಆಗಮಿಸಿದ್ದು, ಪಕ್ಷವು ಹೈಕಮಾಂಡ್‌ನ ತೀರ್ಮಾನದಂತೆ ನಡೆದುಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ಮದನ್ ಮೋಹನ್ ಜಾ ಹೇಳಿದ್ದಾರೆ.
ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಭಾಗವಹಿಸಿರಲಿಲ್ಲ. ಕಳೆದ ಹಲವು ತಿಂಗಳುಗಳಿಂದಲೂ ಜೆಡಿಯು- ಬಿಜೆಪಿ ನಡುವಿನ ಮೌನ ಸಂಘರ್ಷ ನಡೆಯುತ್ತಲೇ ಇದೆ ಎಂಬುದಕ್ಕೆ ಹಲವು ಸೂಚನೆಗಳು ಸಿಕ್ಕಿವೆ. ಜುಲೈ 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿದ್ದ ಮುಖ್ಯಮಂತ್ರಿಗಳ ಸಭೆಗೆ ನಿತೀಶ್ ಗೈರುಹಾಜರಾಗಿದ್ದರು. ತದನಂತರ ಜುಲೈ 19ರಂದು ನಿರ್ಗಮನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ನಡೆಸಿದ ಔತಣಕೂಟಕ್ಕೆ ನಿತೀಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದರು. ಆದರೆ ನಿತೀಶ್ ಅದರಿಂದಲೂ ದೂರು ಉಳಿದಿದ್ದರು.
ಇದನ್ನೂ ಓದಿ | Bihar politics | ಸೋನಿಯಾ ಭೇಟಿಗೆ ಸಮಯ ಕೇಳಿದ ನಿತೀಶ್, ಬೆಂಬಲ ನೀಡಲು ಸಿದ್ಧ ಎಂದ ಆರ್‌ಜೆಡಿ