Site icon Vistara News

Bihar Politics | ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ನಿತೀಶ್‌ ಕುಮಾರ್‌, ಬಿಜೆಪಿ-ಜೆಡಿಯು ಸರಕಾರ ಪತನ ಸನ್ನಿಹಿತ

nithish-Pahgu chouhan

ಪಟನಾ: ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದ್ದು, ಇಂದು ಸಂಜೆಯೊಳಗೇ ಬಿಜೆಪಿ-ಜೆಡಿಯು ಮೈತ್ರಿ ಸರಕಾರ ಪತನಗೊಳ್ಳುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ.

ಕಳೆದ ಕೆಲವು ತಿಂಗಳುಗಳಿಂದ ಒಳಗೊಳಗೆ ಕುದಿಯುತ್ತಿದ್ದ ಜೆಡಿಯು ಮತ್ತು ಬಿಜೆಪಿ ನಡುವಿನ ಸಂಘರ್ಷ ಸೋಮವಾರ ಸ್ಪಷ್ಟವಾಗಿ ಬಯಲಿಗೆ ಬಂದಿತ್ತು. ಇದೀಗ ಮಂಗಳವಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ರಾಜ್ಯಪಾಲ ಫಗು ಚೌಹಾಣ್‌ ಅವರ ಭೇಟಿಗೆ ಅವಕಾಶ ಕೋರುವುದರೊಂದಿಗೆ ಸರಕಾರ ಪತನದ ಅಂಚಿಗೆ ಸರಿದಂತೆ ಕಾಣುತ್ತಿದೆ.

ಸೋಮವಾರ ಜೆಡಿಯು ಪಕ್ಷವು ಬಿಜೆಪಿ ಮೈತ್ರಿ ಕಡಿದುಕೊಳ್ಳುವ ಮೊದಲ ಸೂಚನೆ ಕಂಡುಬರುತ್ತಲೇ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳು ನಿತೀಶ್‌ ಕುಮಾರ್‌ ಅವರಿಗೆ ಬೆಂಬಲ ನೀಡಲು ತಾವೇ ಮುಂದಾಗಿದ್ದವು.

ಸಭೆಗಳ ಮೇಲೆ ಸಭೆ
ಈ ನಡುವೆ ಮಂಗಳವಾರ ಮುಂಜಾನೆ ಎರಡು ಪ್ರಮುಖ ಸಭೆಗಳು ಆರಂಭವಾಗಿವೆ. ಒಂದು ಕಡೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಜೆಡಿಯುನ ಎಲ್ಲ ಶಾಸಕರು, ಸಂಸದರು ಮತ್ತು ಮೇಲ್ಮನೆ ಸದಸ್ಯರ ಸಭೆ ನಡೆಸಿದ್ದರೆ ಇನ್ನೊಂದು ಕಡೆ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಶಾಸಕರ ಜಂಟಿ ಸಭೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ನೇತೃತ್ವದಲ್ಲಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಬೆಳಗ್ಗೆ ೧೧ ಗಂಟೆಗೆ ಆರಂಭಗೊಂಡಿದೆ. ಇದರಲ್ಲಿ ಭಾಗವಹಿಸುವ ಶಾಸಕರು, ನಾಯಕರು ಯಾರೂ ಕೂಡಾ ಸಭೆಯ ವೇಳೆ ಮೊಬೈಲ್‌ ಬಳಸಬಾರದು ಎಂದು ಸೂಚಿಸಲಾಗಿದೆ. ಹೀಗಾಗಿ ಅವರೆಲ್ಲರೂ ಮನೆಯ ಹೊರಗಡೆಯೇ ಮೊಬೈಲ್‌ ಇಟ್ಟು ಹೋಗುತ್ತಿರುವ ಚಿತ್ರಗಳು ಗಮನ ಸೆಳೆದಿವೆ.

ಮಂಗಳವಾರ ನಡೆದ ಎಲ್ಲ ಪಕ್ಷಗಳ ಸಭೆಗಳಿಗೆ ಮೊಬೈಲ್‌ ಕೊಂಡೊಯ್ಯುವಂತಿರಲ್ಲ. ಶಾಸಕರೊಬ್ಬರು ಮೊಬೈಲ್‌ ಕೊಟ್ಟು ಹೋಗುವ ದೃಶ್ಯ.

ಜೆಡಿಯು ಸಭೆಯಲ್ಲಿ ಬಹುತೇಕ ಎಲ್ಲ ನಾಯಕರು, ಶಾಸಕರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಕೆಲವರು ಬಿಜೆಪಿ-ಜೆಡಿಯು ಮೈತ್ರಿಗೆ ಏನೂ ಆಗಿಲ್ಲ. ಸರಕಾರವೂ ಮುಂದುವರಿಯಲಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈಗ ಎರಡೂ ಪಕ್ಷಗಳ ನಡುವಿನ ಸಂಬಂಧ ಸರಿಪಡಿಸಲಾಗದಷ್ಟು ಹಾಳಾಗಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ರಾತ್ರಿ ಬಿಜೆಪಿ ಹಿರಿಯ ನಾಯಕರಾದ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನಿತೀಶ್‌ ಕುಮಾರ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಈ ಮಾಹಿತಿಯನ್ನು ನಿರಾಕರಿಸಿದೆ.

ಪರ್ಯಾಯ ಸರಕಾರದ ಸಾಧ್ಯತೆ
ಒಂದು ವೇಳೆ ಜೆಡಿಯು ಪಕ್ಷವು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರೆ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಕಳೆದ ೨೦೨೦ರ ಚುನಾವಣೆಯಲ್ಲಿ ಬಿಜೆಪಿ ೭೪, ಜೆಡಿಯು ೪೩, ಆರ್‌ಜೆಡಿ ೭೫ ಮತ್ತು ಕಾಂಗ್ರೆಸ್‌ ೧೯ ಸ್ಥಾನಗಳಲ್ಲಿ ಗೆದ್ದಿತ್ತು. ೨೪೩ ಶಾಸಕರ ಸದನದಲ್ಲಿ ಬಹುಮತಕ್ಕೆ ೧೨೨ ಶಾಸಕರು ಬೇಕು. ಈಗ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ ಸೇರಿದರೆ ಬೇಕಾದಷ್ಟು ಬಲ ಬರುತ್ತದೆ.

ಇದನ್ನೂ ಓದಿ| Bihar politics | ಸೋನಿಯಾ ಭೇಟಿಗೆ ಸಮಯ ಕೇಳಿದ ನಿತೀಶ್‌, ಬೆಂಬಲ ನೀಡಲು ಸಿದ್ಧ ಎಂದ ಆರ್‌ಜೆಡಿ

Exit mobile version