Site icon Vistara News

Bilawal Bhutto | ಸಿಂಧ್ ಪ್ರಾಂತದಲ್ಲಿ ನಿರಂತರ ಮಾನವಹಕ್ಕು ಉಲ್ಲಂಘನೆ, ಮಿಸ್ಟರ್ ಭುಟ್ಟೋ ಮೊದ್ಲು ಅದನ್ನು ನಿಲ್ಲಿಸಿ!

Bilawal Bhutto @ Pakistan

ನವದೆಹಲಿ: ಭಾರತವು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ (Bilawal Bhutto) ಅವರು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ವಾಸ್ತವದಲ್ಲಿ ಮಾನವ ಹಕ್ಕುಗಳ ಬಗ್ಗೆ ಭಾರತಕ್ಕೆ ಪಾಠ ಮಾಡುತ್ತಿರುವ ಭುಟ್ಟೋ ಅವರು ಮೊದಲು ತಮ್ಮ ಹಿತ್ತಲು ನೋಡಿಕೊಂಡರೆ ಒಳ್ಳೆಯದು. ಬಿಲಾವಲ್ ಭುಟ್ಟೋ ಅವರೇ ಚೇರ್ಮನ್ನರಾಗಿರುವ ಪಾಕಿಸ್ತಾನದ ಪೀಪಲ್ಸ್ ಪಾರ್ಟಿ(ಪಿಪಿಪಿ) ಆಡಳಿತದ ಸಿಂಧ್ ಪ್ರಾಂತದಲ್ಲಿ ಅಲ್ಪಸಂಖ್ಯಾತರ ಮೇಲೆ ಎಗ್ಗಿಲ್ಲದೇ ದಾಳಿಗಳು ನಡೆಯುತ್ತಿವೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ! ಇಸ್ಲಾಮ್‌ಗೆ ಮತಾಂತರವಾಗಲು ಆಗ್ರಹಿಸಿ ನಿತ್ಯ ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ.

ಸಿಂಧ್ ಪ್ರಾಂತದಲ್ಲಿ ಪಿಪಿಪಿ 15 ವರ್ಷಗಳಿಂದ ಆಡಳಿತದಲ್ಲಿದ್ದೂ, ಅಲ್ಪಸಂಖ್ಯಾತರಾಗಿರುವ ಹಿಂದೂಗಳ ರಕ್ಷಣೆ ಸಾಧ್ಯವಾಗಿಲ್ಲ. ಸಾವಿರಕ್ಕೂ ಹೆಚ್ಚು ಹಿಂದೂ ಹುಡುಗಿಯರನ್ನು ಅಪಹರಿಸಿ, ಒತ್ತಾಯ ಪೂರ್ವಕವಾಗಿ ಅವರನ್ನು ಇಸ್ಲಾಮ್‌ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಈ ಪ್ರಾಂತದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ತಮ್ಮ ಪಕ್ಷ ಆಡಳಿತ ಇರುವ ಪ್ರಾಂತದಲ್ಲೇ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು ಆಗದ ಬಿಲಾವಲ್ ಭುಟ್ಟೋ ಅವರು, ಮಾನವ ಹಕ್ಕಗಳ ರಕ್ಷಣೆ ಸಂಬಂಧ ಭಾರತಕ್ಕೆ ಪಾಠ ಮಾಡುತ್ತಿದ್ದಾರೆ. ಭುಟ್ಟೋ ಅವರ ಅಜ್ಜ ಝುಲ್ಫಿಕರ್ ಅಲಿ ಭುಟ್ಟೋ ಅವರು ನಿರಂಕುಶತ್ವಕ್ಕೆ, ವಿರೋಧಿಗಳನ್ನು ಬೆದರಿಸುವುದಕ್ಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘಿಸುತ್ತಿದ್ದಕ್ಕಾಗಿಯೇ ಪ್ರಸಿದ್ಧರಾಗಿದ್ದರು. ಈ ಸಂಗತಿಯನ್ನು ಬಿಲಾವಲ್ ಭುಟ್ಟೋ ಮರೆತಿರುವಂತಿದೆ.

ಮಾನವ ಹಕ್ಕುಗಳ ಉಲ್ಲಂಘನೆಯ ಹರಿಕಾರರು!
ಇದು ಎಂಥ ವಿಪರ್ಯಾಸ ನೋಡಿ, ಬಿಲಾವಲ್ ಭುಟ್ಟೋ ಅವರು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಮಾನವ ಹಕ್ಕುಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆದರೆ, ಅವರದ್ದೇ ಪಕ್ಷದ ಆಡಳಿತವಿರುವ ಸಿಂಧ್ ಪ್ರಾಂತದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲಾಗುತ್ತಿಲ್ಲ. ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ಸಾಮರ್ಥ್ಯವಿಲ್ಲ. ಸಿಂಧ್‌ನಲ್ಲಿ ಹಿಂದೂ ಹೆಣ್ಣು ಮಕ್ಕಳ ಅಪಹರಣ ಮತ್ತು ಒತ್ತಾಯಪೂರ್ವಕವಾಗಿ ಇಸ್ಲಾಮ್‌ಗೆ ಮತಾಂತರ ಮಾಡುವುದನ್ನು ಅವರಿಂದ ತಡೆಯಲು ಸಾಧ್ಯವಾಗಿಲ್ಲ.

ಪಿಪಿಪಿ ಪಾರ್ಟಿ ಹಾಗೂ ಅದರ ನೇತಾರರ ಮಾನವ ಹಕ್ಕುಗಳ ಉಲ್ಲಂಘನೆಯ ಬಹುದೊಡ್ಡ ಇತಿಹಾಸವನ್ನೇ ಹೊಂದಿದ್ದಾರೆ. ಝುಲ್ಫಿಕರ್ ಅಲಿ ಭುಟ್ಟೋ ಅವರು, ಬಲೂಚಿಗಳ ವಿರುದ್ಧ ಸೇನಾ ಕಾರ್ಯಾಚರಣೆಗೆ ಆದೇಶಿಸಿದ್ದರು. ಅಲ್ಲದೇ ಅವರ ನರಮೇಧವನ್ನು ನಡೆಸಿದ ಆರೋಪವಿದೆ. ಇದರಿಂದಾಗಿ 1973ರಲ್ಲಿ ಸಾವಿರಾರು ನಾಗರಿಕರು ಸಾವಿಗೀಡಾಗಿದ್ದರು. ಅದೇ ರೀತಿ, ಬಿಲಾವಲ್ ಅವರ ತಾಯಿ ಬೆನಜಿರ್ ಭುಟ್ಟೋ ಅವರು 1990 ಮಾಡಿದ ಭಾಷಣದಿಂದ ಪ್ರಭಾವಿತರಾದ ಕಾಶ್ಮೀರದ ಯುವಕರು, ಜನಾಂಗೀಯ ದಾಳಿಯಲ್ಲಿ ತೊಡಗಿಕೊಂಡರು.
ಬಿಲಾವಲ್ ಭುಟ್ಟೋ ಝರ್ದಾರಿ ಮತ್ತು ಅವರ ಕುಟುಂಬದ ಭ್ರಷ್ಟಾಚಾರದ ಆರೋಪಗಳಿವೆ. ಬಿಲಾವಲ್ ಅವರ ತಂದೆ ಆಸೀಫ್ ಅಲಿ ಝರ್ದಾರಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎನ್‌ಎಬಿ ಮತ್ತು ಎಫ್ಐಎ ಸಂಸ್ಥೆಗಳು ವಿಚಾರಣೆಯನ್ನು ನಡೆಸುತ್ತಿವೆ.

ಇಷ್ಟೆಲ್ಲ ಕರ್ಮಕಾಂಡಗಳನ್ನು ಇಟ್ಟುಕೊಂಡು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಅವರು ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಭಾರತಕ್ಕೆ ಪಾಠ ಮಾಡಲು ಹೊರಟಿರುವುದು ದುರದೃಷ್ಟಕರ ಮತ್ತು ಪಾಕಿಸ್ತಾನವು ತನ್ನ ಈ ವರ್ತನೆಯಿಂದಾಗಿ ಮತ್ತಷ್ಟು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಜುಗರವನ್ನು ಎದುರಿಸುವುದು ತಪ್ಪುವುದಿಲ್ಲ.

ಇದನ್ನೂ ಓದಿ | India retaliates to Pak | ಪ್ರಧಾನಿ ಮೋದಿ ಕಟುಕ ಎಂದ ಭುಟ್ಟೋಗೆ 1971 ನರಮೇಧ ನೆನಪಿಸಿ, ತಿರುಗೇಟು ನೀಡಿದ ಭಾರತ!

Exit mobile version