Site icon Vistara News

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Bomb Threat

Bomb Threat

ಗಾಂಧಿನಗರ: ಕೆಲವು ದಿನಗಳ ಹಿಂದೆ ದೆಹಲಿ- ಎನ್‌ಸಿಆರ್ (Delhi NCR) ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ (Schools) ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ (Bomb Threat) ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಸೋಮವಾರ (ಮೇ 6) ಬೆದರಿಕೆ ಇ ಮೇಲ್‌ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸರು ತ್ವರಿತ ತಪಾಸಣೆಗೆ ಮುಂದಾಗಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕಳೆದ ವಾರ ದೆಹಲಿ-ಎನ್‌ಸಿಆರ್‌ನ ಶಾಲೆಗೆ ಬಂದ ಬಾಂಬ್ ಬೆದರಿಕೆಯ ಇ ಮೇಲ್‌ನ ಮೂಲವಾದ ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Detection and Disposal Squad) ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿವೆ. ಸದ್ಯ ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ದೆಹಲಿ ಶಾಲೆಗಳಿಗೆ ಬೆದರಿಕೆ

ಮೇ 1ರಂದು ದೆಹಲಿ- ಎನ್‌ಸಿಆರ್ ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಾಂಬ್ ಬೆದರಿಕೆ ಇ ಮೇಲ್ ಸ್ವೀಕರಿಸಿದ ಶಾಲೆಗಳೆಂದರೆ – ಚಾಣಕ್ಯಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್, ದ್ವಾರಕಾ ಜಿಲ್ಲೆಯ ಡಿಪಿಎಸ್ ಶಾಲೆ, ದಕ್ಷಿಣದ ಬಸಂತ್ ಕುಂಜ್ ಪ್ರದೇಶದಲ್ಲಿರುವ ಡಿಎವಿ ಶಾಲೆ, ಅಮಿಟಿ ಸ್ಕೂಲ್, ಸಾಕೇತ್, ನವದೆಹಲಿಯ ಸಂಸ್ಕೃತಿ ಶಾಲೆ ಮುಂತಾದವು. ಸಂಸ್ಕೃತಿಯು ದೆಹಲಿಯ ಅತ್ಯಂತ ಉನ್ನತ ಮಟ್ಟದ ಶಾಲೆಗಳಲ್ಲಿ ಒಂದು.

ಇದನ್ನೂ ಓದಿ: Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

ಬಾಂಬ್‌ ದಾಳಿ ಕುರಿತ ಬೆದರಿಕೆ ಇ ಮೇಲ್‌ಗಳು ರವಾನೆಯಾಗುತ್ತಲೇ ಪೊಲೀಸರು ಎಚ್ಚೆತ್ತುಕೊಂಡರು. ಕೂಲಂಕಷ ತನಿಖೆ, ಪರಿಶೀಲನೆ ನಡೆಸಿದ ಪೊಲೀಸರು, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಪೋಷಕರು, ಶಾಲೆಗಳ ಆಡಳಿತ ಮಂಡಳಿಯು ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಚೆಂಡೆಂದು ಭಾವಿಸಿ ಬಾಂಬ್‌ ಜತೆ ಮಕ್ಕಳ ಆಟ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಒಂದು ದಿನ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಬಾಂಬ್‌ ಸ್ಫೋಟಗೊಂಡಿದೆ. ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಗುವೊಂದು ಮೃತಪಟ್ಟಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಪಾಂಡುವಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಚ್ಚಾ ಬಾಂಬ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ. ಇನ್ನು ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಚ್ಚಾ ಬಾಂಬ್‌ ಅನ್ನು ಚೆಂಡು ಎಂದು ಭಾವಿಸಿ ಎತ್ತಿಕೊಂಡಿದ್ದಾರೆ. ಆಗ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಪುಟ್ಟ ಕಂದಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಗಾಯಗೊಂಡ ಇಬ್ಬರಲ್ಲಿ ಒಬ್ಬ ತನ್ನ ಬಲಗೈಯನ್ನೇ ಕಳೆದುಕೊಂಡಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಈ ಕಚ್ಚಾ ಬಾಂಬ್‌ ಎಲ್ಲಿಂದ ಬಂತು? ಯಾರು ಎಸೆದರು ಎಂಬುದು ತನಿಖೆಯಲ್ಲಿ ತಿಳಿಯಬೇಕಾಗಿದೆ.

Exit mobile version