ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ (India Pakistan) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಇದೆ. ಭಾರತದ ಮೇಲೆ ಪಾಕ್ ಕೃಪಾಪೋಷಿತ ಉಗ್ರರು ದಾಳಿ ಮಾಡಿದಾಗ, ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಪಂದ್ಯ ನಡೆದಾಗ ಭಾರತೀಯರು ಪಾಕಿಸ್ತಾನವನ್ನು ಬಗ್ಗುಬಡಿಯಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ, ಇಷ್ಟೆಲ್ಲ ಬಿಕ್ಕಟ್ಟಿನ ಮಧ್ಯೆಯೂ ಭಾರತ ಹಾಗೂ ಪಾಕಿಸ್ತಾನ ನಾಗರಿಕರ ಮಧ್ಯೆ ಸಹೋದರತ್ವದ ಭಾವನೆ ಇದೆ. ಭಾರತದಲ್ಲಿ (India) ಜನಿಸಿ, ದೇಶ ಇಬ್ಭಾಗವಾದಾಗ ಪಾಕ್‌ಗೆ ತೆರಳಿದವರು ಈಗಲೂ ಭಾರತದ ನಂಟನ್ನು ನೆನಪಿಸಿಕೊಳ್ಳುತ್ತಾರೆ. ಈ ನಂಟಿಗೆ ನಿದರ್ಶನ ಎಂಬಂತೆ, ಭಾರತದ ʼಹೃದಯʼವೊಂದು (Indian Heart) ಪಾಕಿಸ್ತಾನದ ಯುವತಿಯ (Pakistan Teen) ಪ್ರಾಣವನ್ನು ಉಳಿಸಿದೆ.
ಹೌದು, ಹೃದಯದ ಸಮಸ್ಯೆಯಿಂದಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಆಯೇಷಾ ರೆಶಾನ್ (19) ಎಂಬ ಯುವತಿಗೆ ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆ ವೈದ್ಯರು ಉಚಿತವಾಗಿ ಹೃದಯದ ಕಸಿ ಮಾಡುವ ಮೂಲಕ ನೆರೆ ರಾಷ್ಟ್ರದ ಯುವತಿಯ ಬಾಳಿಗೆ ಬೆಳಕಾಗಿದ್ದಾರೆ. ಭಾರತೀಯರೊಬ್ಬರ ಹೃದಯವನ್ನು ಪಾಕಿಸ್ತಾನದ ಯುವತಿಗೆ ಕಸಿ ಮಾಡುವ ಮೂಲಕ, ಆಕೆ ಮತ್ತೆ ಬದುಕು ಕಟ್ಟಿಕೊಳ್ಳಲು ಅಪೂರ್ವ ಅವಕಾಶ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಇದಕ್ಕಾಗಿ ಆಯೇಷಾ ರೆಶಾನ್ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆಯೇಷಾ ರೆಶಾನ್‌ಗೆ ಏನಾಗಿತ್ತು?
ಕಾಲೇಜು ವಿದ್ಯಾರ್ಥಿನಿಯಾಗಿರುವ ಆಯೇಷಾ ರೆಶಾನ್ ಅವರು ಕಳೆದ 10 ವರ್ಷಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಹಾರ್ಟ್ ಪಂಪ್ ಡಿವೈಸ್ ಅಳವಡಿಸಬೇಕಾಗಿತ್ತು. ಇದಕ್ಕಾಗಿ ಅವರು ತಮಿಳುನಾಡಿಗೆ ಆಗಮಿಸಿದ್ದರು. ಆದರೆ, ಹಾರ್ಟ್ ಪಂಪ್ ಅಳವಡಿಸಿದ ಬಳಿಕ ಶಸ್ತ್ರಚಿಕಿತ್ಸೆಯು ವಿಫಲವಾಗಿತ್ತು. ಇದರಿಂದಾಗಿ ಆಯೇಷಾ ರೆಶಾನ್ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು. ಆಗ, ಆಸ್ಪತ್ರೆಯ ಸರ್ಜನ್‌ಗಳು ದಾನಿಯೊಬ್ಬರ ಹೃದಯವನ್ನು ಆಯೇಷಾ ರೆಷಾನ್ ಅವರಿಗೆ ಅಳವಡಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.
ಹೃದಯದ ಕಸಿ ಮಾಡಲು ಸುಮಾರು 35 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಚೆನ್ನೈನ ಐಶ್ವರ್ಯನ್ ಟ್ರಸ್ಟ್ ಹಾಗೂ ಆಸ್ಪತ್ರೆ ವೈದ್ಯರೇ ಖರ್ಚು ಭರಿಸಿ, ಉಚಿತವಾಗಿ ಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದೆಹಲಿ ಮೂಲದ ದಾನಿಯಿಂದ ಹೃದಯ ಪಡೆದ ವೈದ್ಯರು, ಆಯೇಷಾಗೆ ಅಳವಡಿಸಿದ್ದಾರೆ. “ಹೃದಯ ಕಸಿ ಬಳಿಕ ನಾನೀಗ ಆರೋಗ್ಯದಿಂದ ಇದ್ದೇನೆ. ಚೆನ್ನೈ ವೈದ್ಯರಿಂದಾಗಿ ನಾನು ಉಸಿರಾಡುತ್ತಿದ್ದೇನೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆಗಳು. ಪಾಕಿಸ್ತಾನಕ್ಕೆ ತೆರಳಿ ನಾನು ಪದವಿ ಪಡೆಯುತ್ತೇನೆ” ಎಂಬುದಾಗಿ ಆಯೇಷಾ ಹೇಳಿದ್ದಾರೆ.
ಇದನ್ನೂ ಓದಿ: Humanity : ಗಡಿ ಮೀರಿದ ಮಾನವೀಯತೆ; ನಿರಾಶ್ರಿತರಿಗೆ ಹಣ ಹಂಚಿದ ಆಫ್ಘನ್ ಆಟಗಾರ ಗುರ್ಬಜ್