Site icon Vistara News

Boycott Maldives: ಮಾಲ್ಡೀವ್ಸ್‌ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಪ್ರವಾಸೋದ್ಯಮ ಸಂಘ ಹೇಳಿದ್ದೇನು?

modi in lakshadweep

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಮಾಲ್ಡೀವ್ಸ್ ಸರ್ಕಾರ (Maldives Government) ದ ಸಚಿವರು ಅವಹೇಳನಕಾರಿಯಾಗಿ ಮಾತನಾಡಿದ್ದರ ಗಂಭೀರ ಪರಿಣಾಮವನ್ನು ಆ ದ್ವೀಪ ರಾಷ್ಟ್ರ ಅನುಭವಿಸುತ್ತಿದೆ. ಈಗಾಗಲೇ ಮಾಲ್ಡೀವ್ಸ್‌ಗೆ ಭಾರತೀಯರು ತಿರುಗೇಟು ನೀಡಲು ಆರಂಭಿಸಿದ್ದಾರೆ (Boycott Maldives). ಈ ಮಧ್ಯೆ ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಘ (Maldives Association of Tourism Industry-MATI) ತನ್ನದೇ ದೇಶದ ಸಚಿವರು ಮಾಡಿದ ಅವಹೇಳನಕಾರಿ ಟೀಕೆಗಳನ್ನು ಬಲವಾಗಿ ಖಂಡಿಸಿದೆ.

ಎಂಎಟಿಐ ಹೇಳಿದ್ದೇನು?

ʼʼಮಾಲ್ಡೀವ್ಸ್ ಇತಿಹಾಸವನ್ನು ಪರಿಶೀಲಿಸಿದರೆ ಪ್ರತಿ ಬಾರಿಯೂ ದೇಶ ಬಿಕ್ಕಟ್ಟು ಎದುರಿಸಿದಾಗ ಭಾರತ ಮೊದಲ ಪ್ರತಿಕ್ರಿಯೆ ನೀಡಿದೆʼʼ ಎಂದು ಎಂಎಟಿಐ ಹೇಳಿದೆ. “ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೆಲವು ಸಚಿವರು ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಮಾಲ್ಡೀವ್ಸ್ ಪ್ರವಾಸೋದ್ಯಮ ಉದ್ಯಮದ ಸಂಘ ಬಲವಾಗಿ ಖಂಡಿಸುತ್ತದೆ. ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಭಾರತವೂ ಒಂದು. ನಮ್ಮ ಇತಿಹಾಸದತ್ತ ಕಣ್ಣಾಡಿಸಿದರೆ ವಿವಿಧ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ಭಾರತವು ಯಾವಾಗಲೂ ಮೊದಲಾಗಿ ಸ್ಪಂದಿಸಿರುವುದು ಕಂಡು ಬರುತ್ತದೆ. ಭಾರತ ಸರ್ಕಾರ ಮತ್ತು ಪ್ರಜೆಗಳು ನಮ್ಮೊಂದಿಗೆ ಉಳಿಸಿಕೊಂಡಿರುವ ನಿಕಟ ಸಂಬಂಧಕ್ಕೆ ನಾವು ಕೃತಜ್ಞರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಜತೆಗೆ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರತ ಗಣನೀಯ ಕೊಡುಗೆ ನೀಡಿದೆ ಎನ್ನುವ ಅಂಶವನ್ನೂ ಉಲ್ಲೇಖಿಸಿದೆ. “ಕೊರೋನಾ ಬಳಿಕ ಗಡಿಗಳನ್ನು ಮತ್ತೆ ತೆರೆದ ನಂತರ ನಮ್ಮ ಚೇತರಿಕೆ ಪ್ರಯತ್ನಗಳಿಗೆ ಭಾರತ ಹೆಚ್ಚಿನ ಸಹಾಯ ಮಾಡಿದೆ. ಅಂದಿನಿಂದ ಭಾರತವು ಮಾಲ್ಡೀವ್ಸ್‌ನ ಉನ್ನತ ಮಾರುಕಟ್ಟೆಗಳಲ್ಲಿ ಒಂದಾಗಿದೆ” ಎಂದು ಎಂಎಟಿಐ ಅಭಿಪ್ರಾಯ ಪಟ್ಟಿದೆ.

“ಈ ಎರಡು ರಾಷ್ಟ್ರಗಳ ನಡುವಿನ ನಿಕಟ ಸಂಬಂಧವು ಮುಂದಿನ ತಲೆಮಾರುಗಳವರೆಗೆ ಉಳಿಯಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ನಮ್ಮ ಉತ್ತಮ ಸಂಬಂಧದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವ ಅಂಶಗಳು ಅಥವಾ ಮಾತುಗಳಿಂದ ನಾವು ದೂರವಿರುತ್ತೇವೆ” ಎಂದು ಹೇಳಿದೆ. ರಾಜತಾಂತ್ರಿಕ ವಿವಾದದ ಮಧ್ಯೆ ಭಾರತದ ಅತಿದೊಡ್ಡ ಆನ್‌ಲೈನ್‌ ಟ್ರಾವೆಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಈಜಿ ಮೈ ಟ್ರಿಪ್‌ (EaseMyTrip) ಮಾಲ್ಡೀವ್ಸ್‌ ವಿಮಾನ ಬುಕ್ಕಿಂಗ್‌ ಅನ್ನು ಸ್ಥಗಿತಗೊಳಿಸಿದ ನಂತರ ಈ ಹೇಳಿಕೆ ಬಂದಿದೆ.

ಮತ್ತೊಂದು ಟ್ರಾವೆಲ್ ಬುಕ್ಕಿಂಗ್‌ ಪ್ಲಾಟ್‌ಫಾರ್ಮ್‌ ಮೇಕ್‌ ಮೈ ಟ್ರಿಪ್‌ (MakeMyTrip), ʼʼಪ್ರಧಾನಿ ಲಕ್ಷ ದ್ವೀಪಕ್ಕೆ ಭೇಟಿ ನೀಡಿದ ಬಳಿಕ ಬೇಡಿಕೆ ಹೆಚ್ಚಾಗಿದೆ. ಲಕ್ಷದ್ವೀಪಕ್ಕಾಗಿ ಆನ್-ಪ್ಲಾಟ್‌ಫಾರ್ಮ್‌ನಲ್ಲಿ ಹುಡುಕಾಟ ಶೇ. 3,400ರಷ್ಟು ಏರಿಕೆ ಕಂಡಿದೆ. ಸ್ಥಳೀಯ ಪ್ರಯಾಣಿಕರಿಗಾಗಿ ʼಬೀಚ್ಸ್ ಆಫ್ ಇಂಡಿಯಾʼ ಅಭಿಯಾನವನ್ನೂ ಪ್ರಾರಂಭಿಸಲಿದ್ದೇವೆʼʼ ಎಂದು ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾಲ್ಡೀವ್ಸ್‌ನಲ್ಲಿ ಹೊಸ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರಕ್ಕೆ ಬಂದಾಗಿನಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಏತನ್ಮಧ್ಯೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of All India Traders-CAIT) ಸೋಮವಾರ ದೇಶೀಯ ವ್ಯಾಪಾರಿಗಳು ಮತ್ತು ರಫ್ತುದಾರರಿಗೆ ಮಾಲ್ಡೀವ್ಸ್‌ನೊಂದಿಗೆ ವ್ಯವಹಾರ ನಡೆಸದಂತೆ ಕರೆ ನೀಡಿದೆ.

ಇದನ್ನೂ ಓದಿ: Boycott Maldives: ಬೋರಾ ಬೋರಾ ಫೋಟೋ ಷೇರ್ ಮಾಡಿದ ಮಾಲ್ಡೀವ್ಸ್‌ ರಾಜಕಾರಣಿ!

ಸಚಿವರು ಅಮಾನತು

ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರವು ಈಗಾಗಲೇ ಅಮಾನತು ಮಾಡಿದೆ. ಡೆಪ್ಯುಟಿ ಮಿನಿಸ್ಟರ್ ಮರಿಯಮ್ ಶಿಯುನಾ, ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರ ವಿರುದ್ಧ ಮಾಲ್ಡೀವ್ಸ್ ಸರ್ಕಾರ ಕ್ರಮ ಕೈಗೊಂಡಿದೆ. 

Exit mobile version