Site icon Vistara News

Budget 2024: ಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು, ತಗಾದೆ ತೆಗೆದ ಮಾಲ್ಡೀವ್ಸ್‌ಗೆ ಗುದ್ದು

Vistara Editorial, Balanced budget by Central Government

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep Tourism) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಈಗ ಬಜೆಟ್‌ನಲ್ಲಿ (Budget 2024) ಭಾರತ (India Maldives Row) ತಿರುಗೇಟು ನೀಡಿದೆ. “ಲಕ್ಷದ್ವೀಪ ಸೇರಿ ದೇಶದ ಎಲ್ಲೆಡೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಲಕ್ಷದ್ವೀಪದಲ್ಲಿ ಭಾರಿ ಪ್ರಮಾಣದ ಹೂಡಿಕೆಯಾಗಲಿದೆ” ಎಂದು ಬಜೆಟ್‌ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸ್ತಾಪಿಸಿದರು.

“ದೇಶದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲ ಸೌಕರ್ಯಗಳ ಅಭಿವೃದ್ಧಿ, ಲಕ್ಷದ್ವೀಪ ಸೇರಿ ದೇಶದ ಎಲ್ಲ ದ್ವೀಪಗಳನ್ನು ಅಭಿವೃದ್ಧಿಗೊಳಿಸಲಾಗುವುದು” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಭಾರತದ ಆಂತರಿಕ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿದ್ದ ಮಾಲ್ಡೀವ್ಸ್‌ಗೆ ಇದರಿಂದ ಭಾರಿ ಹಿನ್ನಡೆಯಾಗಲಿದೆ. ಈಗಾಗಲೇ ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾದ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಅಗ್ರ ರಾಷ್ಟ್ರಗಳಲ್ಲಿ ಭಾರತವು ಅಗ್ರ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದೇ ಹೇಳಲಾಗುತ್ತಿದೆ.

ಜನವರಿ 28ರವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದವರು

ದೇಶಭೇಟಿ ನೀಡಿದವರುಮಾರುಕಟ್ಟೆಗೆ ಕೊಡುಗೆ
ರಷ್ಯಾ 18,561 10.6%
ಇಟಲಿ 18,111 10.4%
ಚೀನಾ 16,529 9.5%
ಬ್ರಿಟನ್‌ 14,588 8.4%
ಭಾರತ 13,989 8.0%

ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್‌ ಎದುರಿಸುತ್ತಿದೆ.

ಇದನ್ನೂ ಓದಿ: Budget 2024: ಗರ್ಭಕಂಠ ಕ್ಯಾನ್ಸರ್‌ ತಡೆಗೆ ಬಾಲಕಿಯರಿಗೆ ಉಚಿತ ಲಸಿಕೆ; ‘ಆರೋಗ್ಯ’ಕ್ಕೆ ಸಿಕ್ಕಿದ್ದೇನು?

ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version